ಚೌಡನಹಳ್ಳಿಯಲ್ಲಿ 38 ಮೂಕ ಪ್ರಾಣಿಗಳ ಮಾರಣ ಹೋಮ…

ಬೇಲೂರು: ತಾಲ್ಲೂಕಿನ ಕುಶಾವರ ಗ್ರಾಮ ಪಂಚಾಯಿತಿಯ ಚೌಡನಹಳ್ಳಿಯಲ್ಲಿ 38 ಮಂಗಗಳ ಮೃತದೇಹಗಳು ಕಂಡು ಬಂದಿವೆ. ಸ್ಥಳೀಯರು ಮೂಟೆಯನ್ನು ಬಿಚ್ಚಿದ್ದಾಗ ಜೀವಂತವಿದ್ದ 15 ಮಂಗಗಳು ಒದ್ದಾಡುತ್ತಿದ್ದ ದೃಶ್ಯ ಕಂಡು ಬಂದವು.

ಜನರು ಮೂಕ ಪ್ರಾಣಿಗಳ ಸಾಮೂಹಿಕ ಹತ್ಯೆ ಕಂಡು ಬೆಚ್ಚಿಬಿದ್ದಿದ್ದರು. ರಾತ್ತೋ ರಾತ್ರಿ ಮಂಗಳಗಳು ದಾರಿಯಲ್ಲಿ ಉಸಿರು ಬಿಟ್ಟಿದ್ದವು. ಕೆಲವು ನೀರಿಗಾಗಿ ಬಾಯಿ ಬಾಯಿ ಬಿಡುತ್ತಿದ್ದರೆ, ಮತ್ತೆ ಕೆಲವು ಜೀವ ಉಳಿಸಿಕೊಳ್ಳಲಿ ವಿಲ ವಿಲ ಒದ್ದಾಡುತ್ತಿದ್ದವು. ಜನರು ಮಂಗಗಳ ಮಾರಣ ಹೋಮ ಮಾಡಿದವರ ವಿರುದ್ದ ಆಕ್ರೋಶವೂ ವ್ಯಕ್ತವಾಗಿತ್ತು.

ನಡು ರಸ್ತೆಯಲ್ಲಿ ಮೂಕ ಪ್ರಾಣಿಗಳ ನರಳಾಟ, ಪ್ರಾಣ ಉಳಿಸಿಕೊಳ್ಳಲು ವಿಲ ವಿಲ ಒದ್ದಾಟದಿಂದ ವಿಲಕ್ಷಣ ಸನ್ನಿವೇಶ ಎದುರಾಗಿದ್ದವು. ಅಹಾರ ಅರಸಿ ಬಂದು ವಿಷ ತಿಂದು ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ.

ಚೌಡನಹಳ್ಳೀ ಗ್ರಾಮದ ಜನರು ತಮ್ಮೂರಿಗೆ ಹೋಗುವ ದಾರಿಯಲ್ಲಿ ರಾತ್ರಿ 10 ಗಂಟೆ ಸುಮಾರಿಗೆ ದೊಡ್ಡದಾದ ಚೀಲವೊಂದು ಬಿದ್ದಿರೋದನ್ನು ಗಮನಿಸಿ ಹತ್ತಿರ ಹೋಗಿ ನೋಡಿದರೆ. ಒಳಗೆ ಪ್ರಾಣಿಗಳ ಚೀರಾಟ ಕೇಳಿಸಿದೆ. ಚೀಲ ಬಿಚ್ಚಿ ನೋಡಿದರೆ, 60ಕ್ಕೂ ಹೆಚ್ಚು ಮಂಗಳು ಅದರೊಳಗೆ ಬಂದಿಯಾಗಿದ್ದವು. ಅದರಲ್ಲಿ 38 ಮಂಗಗಳು ಬಲಿಯಾಗಿದ್ದರೆ, ಇನ್ನು 15ಕ್ಕೂ ಹೆಚ್ಚು ಮಂಗಗಳು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದವು.

ಸರಿ ರಾತ್ರಿಯಲ್ಲೇ ಅರಣ್ಯ ಇಲಾಖೆ ಪೊಲೀಸ್ ಹಾಗು ಪಶು ವೈದ್ಯರಿಗೆ ಕರೆ ಮಾಡಿದ ಊರ ಜನರು ನಿತ್ರಾಣಗೊಂಡಿದ್ದ ಕೋತಿಗಳಿಗೆ ನೀರು ಅಹಾರ ನೀಡಿ ಬದುಕಿಸುವ ಯತ್ನ ಮಾಡಿದರು. ಸುತ್ತಮುತ್ತಲ ಗ್ರಾಮಗಳಲ್ಲಿ ಎಲ್ಲಿಯೂ ಕೋತಿಗಳಿಲ್ಲ. ಆದರೆ, ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಕೋತಿಗಳನ್ನ ಕೊಂದು ತಂದು ಹಾಕಿದ್ದು ಯಾರು, ಯಾಕಾಗಿ ಹತ್ಯೆ ಮಾಡಲಾಗಿದೆ ಎಂಬ ಪ್ರಶ್ನೆ ಎದುರಾಗಿದೆ.

ಮೇಲ್ನೋಟಕ್ಕೆ ಕೋತಿಗಳ ಅಹಾರಕ್ಕೆ ವಿಷ ಹಾಕಿ ಕೊಂದು ಬಳಿಕ ಅವುಗಳಿಗೆ ಹಲ್ಲೆಯನ್ನೂ ಮಾಡಿ ಚೀಲದಲ್ಲಿ ತುಂಬಿ ತಂದು ಬಿಸಾಡಿದ್ದಾರೆ. ಅತ್ಯಂತ ಘೋರ ಅಮಾನವೀಯವಾಗಿ ಮೂಕ ಪ್ರಾಣಿಗಳನ್ನು ಕೊಲ್ಲಲಾಗಿದೆ ಎಂದು ಆಕ್ರೋಶಗೊಂಡ ಸ್ಥಳೀಯರು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಲಿ ಎಂದು ಆಗ್ರಹಿಸಿದ್ದಾರೆ..

ಕಾರಿನಲ್ಲಿ ಬಂದ ದುಷ್ಕರ್ಮಿಗಳು ಮಂಗಗಳನ್ನು ಇಲ್ಲಿ ಎಸೆದು ಹೋಗಿದ್ದಾರೆ. ಮೃತಪಟ್ಟಿರೋ ಕೋತಿಗಳ ಮೃತದೇಹ ಹಸಿರುಬಣ್ಣಕ್ಕೆ ತಿರುಗಿದ್ದು ವಿಷ ಪ್ರಾಷಾನ ಮಾಡಿರುವುದು ದೃಢವಾಗಿದೆ. ಸ್ಥಳಕ್ಕೆ ಬಂದ ಬೇಲೂರು ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಕೇಸ್ ದಾಖಲಿಸಿಕೊಂಡು ಮೃತ ಮಂಗಗಳ ಮರಣೋತ್ತರ ಪರೀಕ್ಷೆ ನಡೆಸಿ ಆರೋಪಿಗಳ ಪತ್ತೆಯ ಜೊತೆಗೆ ಮಂಗಗಳ ಸಾವಿನ ಕಾರಣ ತಿಳಿಯಲು ಮುಂದಾಗಿದ್ದಾರೆ.

ಊರಿನ ಜನರು ಮೃತ ಮಂಗಗಳಿಗೆ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿದರು ಮತ್ತು ಅಧಿಕಾರಿಗಳ ಸಮ್ಮುಖದಲ್ಲಿ ಅಂತಿಮ ವಿಧಿ ವಿಧಾನವನ್ನೂ ನೆರವೇರಿಸಿದರು. ಮರಣೋತ್ತರ ಪರೀಕ್ಷೆ ನಡೆಸಿದ ಪಶುಪಾಲನ ಇಲಾಖೆಯ ಸಹಾಯಕ ನಿರ್ದೇಶಕ ಗಂಗಾಧರ್ ಇಂತಹ ಘಟನೆಯನ್ನು ನಮ್ಮ ಜೀವನದಲ್ಲೇ ನೋಡಿಲ್ಲ, ಇಷ್ಟೊಂದು ಅಮಾನುಷವಾಗಿ ಮೂಕ ಪ್ರಾಣಿಗಳನ್ನು ಕೊಲ್ಲಲಾಗಿದೆ. ಮೇಲ್ನೋಟಕ್ಕೆ ಇದು ವಿಷ ಪ್ರಾಷಾನದಿಂದ ಆಗಿರುವ ಸಾವು ಎನಿಸುತ್ತಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಸತ್ಯ ತಿಳಿಯಲಿದೆ ಎಂದು ಹೇಳಿದ್ದಾರೆ

ಅಹಾರಕ್ಕಾಗಿ ಊರಿಂದ ಊರು, ತೋಟದಿಂದ ತೋಟ ಅಲೆಯುತ್ತಾ ಬದುಕಿಗಾಗಿ ಹೋರಾಟ ನಡೆಸೋ ಮೂಕ ಪ್ರಾಣಿಗಳು ಬೆಳೆ ಹಾಳು ಮಾಡುತ್ತವೆ ಎನ್ನೋ ಕಾರಣದಿಂದಲೇ ಈ ಹತ್ಯೆ ನಡೆದಿರಬಹುದೆಂದು ಎಂಬ ಶಂಕೆವ್ಯಕ್ತವಾಗಿದೆ. ಜಿಲ್ಲೆಯಲ್ಲಿ ಎಂದೂ ನಡೆಯದಂತಾ ಅಮಾನುಷ ಹತ್ಯೆ ಕಂಡು ಜನರು ಬೆಚ್ಚಿಬಿದ್ದಿದ್ದಾರೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಅರಣ್ಯ ಇಲಾಖೆ ಅಧಿಕಾರಿಗಳು ತನಿಖೆಗೆ ಮುಂದಾಗಿದ್ದು, ಆರೋಪಿಗಳ ಪತ್ತೆ ಬಳಿಕವೇ ಮಂಗಗಳ ಸಾವಿನ ರಹಸ್ಯ ಬಯಲಾಗಲಿದೆ.

ವರದಿ:  ಪೃಥ್ವಿ ಎಂ ಜಿ

Donate Janashakthi Media

Leave a Reply

Your email address will not be published. Required fields are marked *