ಬಿಜೆವಿಎಸ್‌ ನಿಂದ ಮಕ್ಕಳ ಸಾಹಿತ್ಯ ಸಾಂಭ್ರಮ

ಹಾಸನ :  ಕಲೆ ಮತ್ತು ಸಾಹಿತ್ಯಕ್ಕೆ ಇರುವ ದೊಡ್ಡ ಶಕ್ತಿ ಏನೆಂದರೆ, ಅದು ಎಲ್ಲವನ್ನು ಒಳಗೊಳ್ಳುವ ಗುಣ ಅದಕ್ಕೆ ಹೆಣ್ಣು ಗಂಡು ಎನ್ನುವ ಭೇದವಿಲ್ಲ ಬಡವ ಶ್ರೀಮಂತ ಎನ್ನುವ ಭೇದವಿಲ್ಲ ದೇಶ ಭಾಷೆಗಳ ಗಡಿಗಳಿಲ್ಲ ಹಾಗಾಗಿ ಕಲೆ ಮತ್ತು ಸಾಹಿತ್ಯ ಮನುಷ್ಯ ಕುಲವನ್ನು ಸೌಹಾರ್ದದ ನೆರಳಿನಲ್ಲಿ ಕಟ್ಟಬಲ್ಲ ಅತಿ ದೊಡ್ಡ ಆಕರಗಳು ಎಂದು ಭಾರತ ಜ್ಞಾನ ವಿಜ್ಞಾನ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಎ ಪ್ರಶಾಂತಬಾಬು ಹೇಳಿದರು.

ಫೆಬ್ರವರಿ – ಮಾರ್ಚ್ ತಿಂಗಳ 20 ದಿನಗಳ ಅವಧಿಯಲ್ಲಿ ಇಡೀ ರಾಜ್ಯದ್ಯಂತ ಕನ್ನಡ ಸಾಹಿತ್ಯದಲ್ಲಿ ಒಂದು ಹೊಸ ಅಧ್ಯಾಯ ರಚಿಸಲಾಯಿತು ಅದೇ ಮಕ್ಕಳ ಸಾಹಿತ್ಯ ಸಂಭ್ರಮ ಎಂದು ಅವರು ಇತ್ತೀಚೆಗೆ ಹಾಸನದ ಭಾರತ ಜ್ಞಾನ ವಿಜ್ಞಾನ ಸಮಿತಿಯು ಎವಿಕೆ ಕಾಲೇಜು ಸಭಾಂಗಣದಲ್ಲಿ ಆಯೋಜಿಸಿದ್ದ ಮಕ್ಕಳ ಸಾಹಿತ್ಯ ಸಂಭ್ರಮ ಯಶಸ್ವಿಗೊಳಿಸಿದ ಸಂಪನ್ಮೂಲ ವ್ಯಕ್ತಿಗಳಿಗೆ ಅಭಿನಂದನೆ ಸಲ್ಲಿಸುವ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಿಗೆ ಅಭಿನಂದನಾ ಪತ್ರ ವಿತರಿಸಿ ಮಾತನಾಡುತ್ತಾ,  ಎಳೆಯ ವಯಸ್ಸಿನ ಮಕ್ಕಳಲ್ಲಿ ಕಲೆ ಬೇರೂರಿಸಿದರೆ ನೆಲಕ್ಕೊಂದು ಸಾಂಸ್ಕೃತಿಕ ಪ್ರತಿಭೆಯನ್ನ ಕೊಟ್ಟಂತಾಗುತ್ತದೆ ಈ ಪರಿಕಲ್ಪನೆಯಲ್ಲಿ ಭಾರತ ಜ್ಞಾನ ವಿಜ್ಞಾನ ಸಮಿತಿ ಆರ್ ಡಿ ಪಿ ಆರ್ ಜೊತೆಗೋಡಿ ಶಿಕ್ಷಣ ಇಲಾಖೆಯ ಸಹಕಾರದೊಂದಿಗೆ ನಡೆಸಿದ ಬೃಹತ್ ಮಕ್ಕಳ ಹಬ್ಬವೇ ಮಕ್ಕಳ ಸಾಹಿತ್ಯ ಸಂಭ್ರಮ ಎಂದು ವಿಶ್ಲೇಷಿಸಿದರು.

ಆರ್ ಡಿ ಪಿ ಆರ್ ಪ್ರತೀ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥಾಲಯಗಳನ್ನು ತೆರೆದಿದೆ, ಅದಕ್ಕೆ ಬೇಕಾಗಿರುವ ಮೂಲಭೂತ ಪರಿಕರಗಳನ್ನು ಕೂಡ ಒದಗಿಸಿದೆ ಆದರೂ ಗ್ರಂಥಾಲಯಗಳಿಗೆ ಮಕ್ಕಳಾಗಲಿ, ಜನರಾಗಲಿ ಬರುತ್ತಿಲ್ಲ ಏಕೆ ಎಂದು ಯೋಚಿಸುವಾಗ ಕಂಡುಕೊಂಡ ಸತ್ಯ ಗ್ರಂಥಾಲಯಗಳಲ್ಲಿ ಮಕ್ಕಳಿಗೆ ಬೇಕಾದ ಪುಸ್ತಕವಿಲ್ಲ ಎಂಬುದು. ಕನ್ನಡ ಸಾಹಿತ್ಯದಲ್ಲಿ ಶ್ರೀಮಂತ ಸಾಹಿತ್ಯವಿದ್ದರೂ ಮಕ್ಕಳ ಸಾಹಿತ್ಯ ಬಹಳ ಕಡಿಮೆ ಇರುವುದು ಕಂಡುಬಂದಿದೆ ಹಾಗಾಗಿ ಮಕ್ಕಳ ಸಾಹಿತ್ಯ ರಚನೆ ಮಕ್ಕಳಿಂದಲೇ ಮಾಡಿಸಬೇಕು ಎಂದು ಮನಗಂಡು ಬಬಿ ಜಿ ವಿ ಎಸ್ ಮಕ್ಕಳಲ್ಲಿಯೇ ಸಾಹಿತ್ಯ ಸೃಷ್ಟಿಸಿ ಪುಸ್ತಕ ಮಾಡಿ ಗ್ರಂಥಾಲಯಗಳಿಗೆ ತುಂಬಬೇಕು ಎಂಬ ಮಹದಾಸೆಯಿಂದ ಮಕ್ಕಳ ಸಾಹಿತ್ಯ ಸಂಭ್ರಮವನ್ನು ಆರ್ ಡಿ ಪಿ ಆರ್ ನೇತೃತ್ವದಲ್ಲಿ ಆಯೋಜಿಸಿತ್ತು; ಕೇವಲ  20 ದಿನಗಳಲ್ಲಿ ರಾಜ್ಯಾದ್ಯಂತ 73 ಗ್ರಾಮ ಪಂಚಾಯಿತಿಗಳಲ್ಲಿ ಸುಮಾರು 8000 ಮಕ್ಕಳು ಒಂದುವರೆ ಸಾವಿರ ಶಿಕ್ಷಕರು ಕೂಡಿಕೊಂಡು 20,000 ಪುಟಗಳ ಮಕ್ಕಳ ಸಾಹಿತ್ಯವನ್ನು ಮಕ್ಕಳು ಒಂದು ಸಾವಿರ ಪುಟಗಳ ಮಕ್ಕಳ ಸಾಹಿತ್ಯವನ್ನು ಶಿಕ್ಷಕರು ರಚಿಸಿರುವುದು ಕನ್ನಡ ಸಾಹಿತ್ಯದ ಒಂದು ಮಹತ್ವ ಘಟ್ಟವೇ ಹೌದು ಎಂದ ಅವರು ಮಕ್ಕಳ ಸಾಹಿತ್ಯ ಸಂಭ್ರಮ ಮಕ್ಕಳಲ್ಲಿ ಮಾತ್ರವಲ್ಲದೆ ಪಂಚಾಯಿತಿ ಅಧಿಕಾರಿಗಳಲ್ಲೂ ಕೂಡ ಸಾಹಿತ್ಯದ ಘಮವನ್ನು ಸೃಷ್ಟಿಸಿದ್ದಂತೂ ಸತ್ಯ ಎಂದರು.

ಮಕ್ಕಳ ಸಾಹಿತ್ಯ ಸಂಭ್ರಮ ಅಭಿನಂದನಾ ಸಮಾರಂಭವನ್ನು ಮಕ್ಕಳೇ ರಚಿಸಿದ ಕವನ ಒಂದನ್ನು ವಾಚಿಸಿ ವಿನೂತನವಾಗಿ ಉದ್ಘಾಟಿಸಿದ ಭಾರತ ಜ್ಞಾನ ವಿಜ್ಞಾನ ಸಮಿತಿಯ ಗೌರವಾಧ್ಯಕ್ಷೆ ಡಾ||ಎ ಸಾವಿತ್ರಿ ಮಾತನಾಡಿ. ವೈಜ್ಞಾನಿಕ ಮನೋವೃತ್ತಿ, ಪರಿಸರ ಕಾಳಜಿ, ಆರೋಗ್ಯದ ಚಿಂತನೆ ಹಾಗೂ ಸಾಂವಿಧಾನಿಕ ಮೌಲ್ಯಗಳು ಮಾನವೀಯ ಅಂತಃಕರಣದ ಮುತ್ತುರತ್ನಗಳು ಇವನ್ನು ಜನತೆಯಲ್ಲಿ ಅಚ್ಚೊತ್ತಿಸಲು ಸಾಹಿತ್ಯ ಪರಿಣಾಮಕಾರಿ ಮಾಧ್ಯಮ ಅದರಲ್ಲೂ ಮಕ್ಕಳಲ್ಲಿ ಸಾಹಿತ್ಯದ ಅಭಿವ್ಯಕ್ತಿಯನ್ನ ಎಳೆಯದರಲ್ಲಿಯೇ ಚಿಗುರಿಸಿದರೇ ಆ ಮಗು ಆದರ್ಶ ನಾಗರಿಕನಾಗುವುದರಲ್ಲಿ ಸಂಶಯವಿಲ್ಲ ಎಂದು ನುಡಿದು ಕೇವಲ ಒಂದು ತಿಂಗಳಲ್ಲಿ ಹಾಸನ ಜಿಲ್ಲೆಯ ಎಂಟು ತಾಲೂಕಿನ ಹಾಗೂ ಸೋಮವಾರಪೇಟೆ ತಾಲೂಕಿನಲ್ಲಿ  ಸುಮಾರು 900 ಮಕ್ಕಳಿಗೆ ಸಾಹಿತ್ಯದ ಬೇರೆ ಬೇರೆ ಮಜಲುಗಳಲ್ಲಿ ಬರೆಯುವ ಕೌಶಲ್ಯ ಮೂಡಿಸಿ ಸಾಹಿತ್ಯ ಸೃಷ್ಟಿಸಲು ಕಾರಣಕರ್ತರಾದ ಎಲ್ಲಾ ಸಂಪನ್ಮೂಲ ವ್ಯಕ್ತಿಗಳಿಗೆ ಅಭಿನಂದನೆ ಸಲ್ಲಿಸಿದರು.

ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಯನ್ನು ನುಡಿದ ಮಕ್ಕಳ ಸಾಹಿತ್ಯ ಸಂಭ್ರಮದ ಜಿಲ್ಲಾ ಸಂಚಾಲಕಿ ಪ್ರಮೀಳಾ ಮಾತನಾಡಿ. ಕಳೆದ ನಾಲ್ಕು ತಿಂಗಳಿಂದ ಹಾಸನ ಜಿಲ್ಲೆಯ ಸುಮಾರು 250 ಕ್ಕೂ ಹೆಚ್ಚು ಸಂಪನ್ಮೂಲ ವ್ಯಕ್ತಿಗಳು ಕಾಲಾನುಕ್ರಮದಲ್ಲಿ ಕಥೆ ಕಟ್ಟೋಣ, ಕವಿತೆ ರಚಿಸೋಣ, ನಾಟಕ ಬರೆದು ಮಾಡೋಣ ಹಾಗೂ ಕ್ಷೇತ್ರ ಸುತ್ತಿ ರಿಪೋರ್ಟ್ ಮಾಡೋಣ ಈ ಭಾಗಗಳಲ್ಲಿ ಸೂಕ್ತ ತರಬೇತಿ ಪಡೆದು ಹಾಸನ ತಾಲೂಕಿನ 8 ಗ್ರಾಮ ಪಂಚಾಯಿತಿಗಳಲ್ಲಿ ಯಾವುದೇ ಪ್ರತಿಫಲಾಕ್ಷದ ನಿರೀಕ್ಷೆಯಿಲ್ಲದೆ ಮಕ್ಕಳ ಒಳಗೆ ಮಕ್ಕಳಾಗಿ ಮಕ್ಕಳನ್ನು ಸಾಹಿತ್ಯದ ಸಾಗರದಲ್ಲಿ ಮುಳುಗಿಸಿ ಸಾಹಿತ್ಯದ ಪಸರನ್ನು ಹೆಚ್ಚಿಸಲು ಜಿಲ್ಲೆಯ ಎಲ್ಲಾ ಸಂಪನ್ಮೂಲ ವ್ಯಕ್ತಿಗಳು ಕಾರಣರಾಗಿದ್ದಾರೆ ಎಂದು ನುಡಿದು ಈ ಸಾಹಿತ್ಯ ಸಂಭ್ರಮದ ಮುಂದುವರಿದ ಭಾಗವಾಗಿ ಎಲ್ಲಾ ತಾಲೂಕುಗಳಲ್ಲಿಯೂ ಮಕ್ಕಳ ಸಾಹಿತ್ಯ ಸಂಭ್ರಮದ ಬೇಸಿಗೆ ಶಿಬಿರವನ್ನು ಹಮ್ಮಿಕೊಳ್ಳಬೇಕು ಎಂದು ಕರೆ ನೀಡಿದರು.

ಆಶಯ ನುಡಿ ನುಡಿದ ಬಿಜಿವಿಎಸ್ ಜಿಲ್ಲಾ ಕಾರ್ಯದರ್ಶಿ ಅಹಮದ್ ಹಗರೆ ಮಕ್ಕಳ ಸಾಹಿತ್ಯ ಸಂಭ್ರಮ ಸಾಹಿತ್ಯವನ್ನು ಮಕ್ಕಳಮುಖಿಯಾಗಿಸಿದೆ, ಆರ್.ಡಿ.ಪಿ.ಆರ್ ಮಕ್ಕಳ ಬಹುಮುಖಿ ಅಭ್ಯುದಯಕ್ಕೆ ಆಧ್ಯತೆ ನೀಡಿ ಈ ಹಬ್ಬವನ್ನು ಮುಖ್ಯಭೂಮಿಕೆಯಲ್ಲಿ ಸಂಚಾಲಿಸಿದೆ, ಬಿಜಿವಿಎಸ್ ಶೈಕ್ಷಣಿಕ ಹಾಗೂ ಸಾಹಿತ್ಯಿಕ ಪರಿಕರ ಸೃಷ್ಟಿ ಮಾಡಿದೆ ಹಾಗೂ ಶಿಕ್ಷಣ ಇಲಾಖೆಯ ಸಹಕಾರದೊಂದಿಗೆ ಸಂಪನ್ಮೂಲ ವ್ಯಕ್ತಿಗಳನ್ನು ಸಿದ್ಧಗೊಳಿಸಿದೆ. ಹಾಸನ ಜಿಲ್ಲೆ ಹಾಗೂ ಸೋಮವಾರಪೇಟೆ ತಾಲ್ಲೂಕಿನಲ್ಲಿ ಸಂಭ್ರಮದ ಯಶಸ್ಸಿನಲ್ಲಿ ಅಗ್ರಪಾತ್ರ ವಹಿಸಿದ ಸಂಪನ್ಮೂಲ ವ್ಯಕ್ತಿಗಳಿಗೆ ಅರ್ಹ ಗೌರವ ಸಮರ್ಪಿಸುವುದು ಬಿಜಿವಿಎಸ್ ನ ಕರ್ತವ್ಯವಾಗಿದೆ ಎಂದು ನುಡಿದು. ಬೇಸಿಗೆ ರಜೆಯಲ್ಲಿ ಸಂಭ್ರಮದ ಮಕ್ಕಳಲ್ಲಿ ಎರಡನೇ ಹಂತದ ಚಟುವಟಿಕೆ ನಡೆಸಲು ಸಂಘಟಿತರಾಗುವ ಆಶಯ ವ್ಯಕ್ತಪಡಿಸಿದರು.

ರಾಜ್ಯ ಸಂಪನ್ಮೂಲ ವ್ಯಕ್ತಿ ತನ್ವೀರ್ ಮಾತನಾಡಿ ಕೇವಲ ಪಿ ಡಿ ಓ ಆಗಿದ್ದ ನನ್ನನ್ನು ಸಂಪನ್ಮೂಲ ವ್ಯಕ್ತಿಯನ್ನಾಗಿ ರೂಪಿಸಿ ನಮ್ಮೊಳಗಿನ ಸಾಹಿತ್ಯದ ಬಿಡಿ ಬಿಡಿ ಅಕ್ಷರಗಳನ್ನು ಒಂದು ಕಾವ್ಯದ ಸಾಲಾಗಿ ಹೇಗೆ ಹರಿಸಬೇಕು ಎಂದು ಹೇಳಿಕೊಟ್ಟಿದ್ದು ಬಿಜಿವಿಎಸ್ ಅದಕ್ಕೆ ಅಭಿನಂದನೆಗಳು ಎಂದರು.

ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ಆಗಮಿಸಿದ್ದ ಸಂಪನ್ಮೂಲ ವ್ಯಕ್ತಿಗಳು ಸಂಭ್ರಮ ವಿಮರ್ಷಿಸಿ ತಮ್ಮ ಅನಿಸಿಕೆ ವ್ಯಕ್ತಪಡಿಸಿ ಈ ಮಕ್ಕಳ ಸಾಹಿತ್ಯ ಸಂಭ್ರಮ ಕೇವಲ 75 ಪಂಚಾಯಿತಿಗೆ ಮಾತ್ರ ಸೀಮಿತವಾಗಬಾರದು. ಮುಂದಿನ ಶೈಕ್ಷಣಿಕ ವರ್ಷದಿಂದ ಎಲ್ಲಾ ಪಂಚಾಯಿತಿಗಳಲ್ಲೂ ನಡೆಸಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿಜಿವಿಎಸ್ ಜಿಲ್ಲಾಧ್ಯಕ್ಷ ಎಚ್‌.ಟಿ ಗುರುರಾಜು ಕಲಿಕೆಯಲ್ಲಿ ಕಲಿಕಾಸಕ್ತಿ ಹೆಚ್ಚಿಸಲು ಸಾಹಿತ್ಯ ಸಂಭ್ರಮ ಸಹಕಾರಿಯಾಗಿದೆ ಎಂದು ಎಲ್ಲಾ ಸಂಪನ್ಮೂಲ ವ್ಯಕ್ತಿಗಳು ಅಭಿಪ್ರಾಯಿಸಿದ್ದು ಕಲಿಕೆಗೆ ಸಾಹಿತ್ಯದ ಲಾಲಿತ್ಯದ ಅಗತ್ಯ ಇದೆ ಎಂದು ಸಾಬೀತು ಪಡಿಸಿದೆ ಅದರ ಫಲಶೃತಿಯೇ ಸುಮಾರು 8000ಮಕ್ಕಳು 20ದಿನಗಳಲ್ಲಿ 20ಸಾವಿರ ಪುಟಗಳ ಸಾಹಿತ್ಯ ರಚಿಸುವಂತೆ ಆಗಿದ್ದು ಎಂಬುದನ್ನು ಮಕ್ಕಳ ಸಾಹಿತ್ಯ ಸಂಭ್ರಮ ಸಾಧಿಸಿ ತೋರಿಸಿದೆ ಈಗ ಸಾಹಿತ್ಯವನ್ನು ಶಿಕ್ಷಣ ಮುಖಿ, ಪರಿಸರಮುಖಿ, ಆರೋಗ್ಯ ಮುಖಿ ಹಾಗೂ ಮಹಿಳಾ ಮುಖಿಯಾಗಿಸಲು ಇದೇ ಮಾದರಿಯ ಸಾಮೂಹಿಕ ಬಹುಮುಖಿ ಸಾಹಿತ್ಯದಾಂದೋಲನ ನಡೆಸುವ ಕಾಲ ಸೃಷ್ಟಿಯಾಗಿದೆ ಎಂದು ನುಡಿದು ಇದರ ಚಾಲಕ ಶಕ್ತಿಯಾಗಿ ಭಾರತ ಜ್ಞಾನ ವಿಜ್ಞಾನ ಸಮಿತಿಯು ಘಟಕಗಳು ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿಯೂ ರಚನೆಯಾಗಬೇಕು ತಮ್ಮ ಚಟುವಟಿಕೆಯ ಮುಂದುವರಿಕೆಯಾಗಿ ನಾವುಗಳೇ ಘಟಕ ರಚಿಸಲು ಮುಂದಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಕಲಾಶಿಕ್ಷಕ ಬಿ.ಎಸ್.ದೇಸಾಯಿ, ಖ್ಯಾತ ಸಾಹಿತಿ ಕಲಾವಿದ ಗ್ಯಾರಂಟಿ ರಾಮಣ್ಣ, ಎವಿಕೆ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ್ ಉಪಸ್ತಿತರಿದ್ದು ಶುಭಾಷಯ ಕೋರಿದರು.

ಬಿಜಿವಿಎಸ್ ಜಿಲ್ಲಾ ಉಪಾಧ್ಯಕ್ಷೆ ಸೌಭಾಗ್ಯ ಕಾರ್ಯಕ್ರಮ. ನಿರೂಪಿಸಿದರು, ಬಿಜಿವಿಎಸ್ ಹಾಸನ ತಾಲ್ಲೂಕು ಕಾರ್ಯದರ್ಶಿ ವನಜಾಕ್ಷಿ ಮೊದಲಿಗೆ ಎಲ್ಲರನ್ನು ಸ್ವಾಗತಿಸಿ ಬಿಜಿವಿಎಸ್ ತಾಲ್ಲೂಕು ಅಧ್ಯಕ್ಷೆ ಆರ್.ರಾಧಾ ಕಡೆಯಲ್ಲಿ ಎಲ್ಲರಿಗೂ ವಂದಿಸಿದರು.

Donate Janashakthi Media

Leave a Reply

Your email address will not be published. Required fields are marked *