“‘ಮಹಾಡ್” ಭಾರತದ ಚರಿತ್ರೆಯಲ್ಲಿ ಪ್ರಮುಖ ಮೈಲಿಗಲ್ಲಾದ ಎರಡು ಮಹತ್ವದ ಘಟನೆಗಳನ್ನು ನೆನಪಿಸುತ್ತದೆ. ಒಂದು ದಲಿತರು ಅಸ್ಪೃಶ್ಯತೆಯ ನಿರ್ಬಂಧಗಳನ್ನು ಮುರಿದು ಮಹಾಡ್ ಕೆರೆಯ ನೀರು ಕುಡಿದದ್ದು. ಎರಡನೆಯದು ಮನುಸ್ಮೃತಿಯ ದಲಿತ-ವಿರೋಧಿ ಭಾಗಗಳನ್ನು ಸುಟ್ಟದ್ದು. ಈ ಎರಡೂ ಚಾರಿತ್ರಿಕ ಘಟನೆಗಳು, ಇವು ಮಹಾಡ್‌ನಲ್ಲಿ 1927ರಲ್ಲಿ ಅಸ್ಪೃಶ್ಯತೆಯ ಸಿದ್ಧಾಂತ ಮತ್ತು ಆಚರಣೆಗಳ ವಿರುದ್ಧ ಸಮರ ಸಾರಿದ ಎರಡು ಸಮ್ಮೇಳನಗಳ ಫಲಿತವಾಗಿದ್ದವು. ಡಾ.ಅಂಬೇಡ್ಕರ್ ಅವರ ನಾಯಕತ್ವದಲ್ಲಿ ಮಹಾರಾಷ್ಟ್ರದ ಸಾವಿರಾರು ದಲಿತರು ಭಾಗವಹಿಸಿ, ಮಹಾರಾಷ್ಟ್ರದ ಕೊಂಕಣ ಪ್ರದೇಶದಲ್ಲಿರುವ ಮಹಾಡ್ ಪಟ್ಟಣದಲ್ಲಿ ನಡೆದರೂ, ಮಹಾರಾಷ್ಟ್ರ ಮಾತ್ರವಲ್ಲ ಇಡೀ ದೇಶದ ಗಮನ ಸೆಳೆದಿತ್ತು. ಭಾರತದ ಸ್ವಾತಂತ್ರ್ಯ ಮತ್ತು ಸಾಮಾಜಿಕ-ರಾಜಕೀಯ ಚಳುವಳಿಗಳ ಭವಿಷ್ಯದ ದಿಕ್ಕು ದೆಸೆಗಳ ಮೇಲೆ ಗಮನಾರ್ಹ ಪರಿಣಾಮ ಬೀರಿತ್ತು. ಆದರೂ ಶಾಲಾಶಿಕ್ಷಣದ ಚರಿತ್ರೆಯ ಪಾಠದಲ್ಲಿ ಇದರ ಪ್ರಸ್ತಾಪವೇ ಇಲ್ಲ. ಮಾತ್ರವಲ್ಲ ಇದರ ಹಿನ್ನೆಲೆ, ಪರಿಣಾಮ ಇತ್ಯಾದಿಗಳನ್ನು ವಿವರವಾಗಿ ತಿಳಿಸುವ ಆಳವಾಗಿ ವಿಶ್ಲೇ಼ಷಿಸುವ ಗಂಭೀರ ಸಾಹಿತ್ಯದ ಕೊರತೆ ಸಹ ಇದೆ. ಸಾಮೂಹಿಕವಾಗಿ ಕೆರೆಯ ನೀರು ಕುಡಿದದ್ದು ಮತ್ತು ಮನುಸ್ಮೃತಿ ಸುಟ್ಟದ್ದು ಎಂಬ ಪ್ರತೀಕಗಳನ್ನು ಬಿಟ್ಟರೆ, ಸ್ಥೂಲ ಕಥನ ಬಿಟ್ಟರೆ ಹೆಚ್ಚೇನೂ ತಿಳಿಸುವ ಪುಸ್ತಕಗಳಿಲ್ಲ. ಇದ್ದ ಕೆಲವು ಪುಸ್ತಕಗಳು ಮರಾಠಿಯಲ್ಲಿ ಮಾತ್ರ ಲಭ್ಯ ಇವೆ.
ಈ ಕೊರತೆಯನ್ನು ನೀಗಿಸಿದ್ದು ಆನಂದ ತೇಲ್‌ತುಂಬ್ಡೆ ಅವರ 2016ರಲ್ಲಿ ಪ್ರಕಟವಾದ ‘ಮಹಾಡ್ – ಮೇಕಿಂಗ್ ಆಫ್ ದಿ ಫಸ್ಟ್ ದಲಿತ್ ರಿವೋಲ್ಟ್’. ಈ ಪುಸ್ತಕ ಕರ್ನಾಟಕದಲ್ಲೂ ಸುದ್ದಿ ಮಾಡಿತ್ತು. ‘ಪ್ರಜಾವಾಣಿ’ ಮತ್ತು ‘ಸಂವಾದ’ ಪತ್ರಿಕೆಗಳಲ್ಲಿ ಅದರ ವಿಮರ್ಶಾ ಲೇಖನಗಳು ಪ್ರಕಟವಾಗಿದ್ದವು. “ಸಮ್ಮೇಳನದ ಪ್ರಧಾನ ಸಂಘಟಕರಾಗಿದ್ದ ಕಾ.ಆರ್.ಬಿ. ಮೋರೆಯವರು ಮರಾಠಿಯಲ್ಲಿ ಬರೆದ ಐತಿಹಾಸಿಕ ದಾಖಲೆಯನ್ನು ಇಂಗ್ಲಿಷ್‌ನಲ್ಲಿ ಅನುವಾದಿಸಲಾಯಿತು. ಅದಕ್ಕೆ ಒಂದು ಸಮಗ್ರವಾದ ಪ್ರಸ್ತಾವನೆಯನ್ನು ಬರೆಯುವ ಪ್ರಕ್ರಿಯೆಯು ಉದ್ದವಾಗಿ ಬೆಳೆದು ಈ ಪುಸ್ತಕದ ರೂಪವನ್ನು ತಾಳಿತು.” ಎಂದು ತೇಲ್ತುಂಬ್ಡೆ ಅವರು ಹೇಳಿದ್ದಾರೆ. ಮಹಾಡ್ ಚಳುವಳಿಯ ಕುರಿತು ಮೊದಲ ಬಾರಿಗೆ ಸಮಗ್ರ ಚಿತ್ರಣ ಮತ್ತು ವಿಶ್ಲೇಷಣೆ ನೀಡುವ ಈ ಕೃತಿಯನ್ನು ಪ್ರೊ. ಅಬ್ದುಲ್ ರೆಹಮಾನ್ ಪಾಷಾ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಮಹತ್ವದ ಕೃತಿಯನ್ನು ಕ್ರಿಯಾ ಮಾಧ್ಯಮ ಪ್ರಕಟಿಸಿದೆ.
ಮೂಲ ಇಂಗ್ಲಿಷ್ ಪುಸ್ತಕ ಸುಮಾರು 400 ಪುಟಗಳಾದ್ದರಿಂದ, ಪುಸ್ತಕದ ಗಾತ್ರ ಮತ್ತು ಬೆಲೆ ಓದುಗರಿಗೆ ನಿಲುಕದಷ್ಟು ಹೆಚ್ಚಾಗದಂತೆ ವಸ್ತುವಿನ ಸಮಗ್ರತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು, ಪ್ರತಿ ಪುಸ್ತಕದ ಸಮಗ್ರತೆಗೆ ಭಂಗ ಬಾರದಂತೆ ಮತ್ತು ಮೂಲ ಪುಸ್ತಕದ ಮೌಲಿಕ ವಿವರಗಳು ಕಳೆದುಹೋಗದಂತೆ ಕನ್ನಡ ಅನುವಾದವನ್ನು ‘ಮಹಾಡ್ ಕೆರೆ ಸತ್ಯಾಗ್ರಹ – ದಲಿತ ಚಳುವಳಿಗಳ ಒರೆಗಲ್ಲು’ ಮತ್ತು ‘ಮಹಾಡ್ – ಮೊದಲ ದಲಿತ ಬಂಡಾಯ’– ಎಂಬ ಶೀರ್ಷಿಕೆಗಳಲ್ಲಿ ಎರಡು ಪುಸ್ತಕಗಳಾಗಿ ಪ್ರಕಟಿಸಲಾಗಿದೆ ಎಂದು ಪ್ರಕಾಶಕರು ತಿಳಿಸಿದ್ದಾರೆ.
ಈ ಪುಸ್ತಕವನ್ನು ಡಿಸೆಂಬರ್ 19, 2020 (ಶನಿವಾರ) ರಂದು ಸಂಜೆ 5 ರಿಂದ ನಡೆಯುವ ಆನ್ ಲೈನ್ ಸಭೆಯಲ್ಲಿ ದೇವನೂರ ಮಹಾದೇವ ಅವರು ಬಿಡುಗಡೆ ಮಾಡಲಿದ್ದಾರೆ. ಪುಸ್ತಕಗಳ ಪರಿಚಯವನ್ನು ಡಾ. ಬಂಜಗೆರೆ ಜಯಪ್ರಕಾಶ್ ಅವರು ಮಾಡಿಕೊಡಲಿದ್ದಾರೆ. ಅನುವಾದಕ ಪ್ರೊ. ಅಬ್ದುಲ್ ರೆಹಮಾನ್ ಪಾಷಾ ಅವರು ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ.
ಬಿಡುಗಡೆ ಸಮಾರಂಭದಲ್ಲಿ ನಡೆಯಲಿರುವ “’ಮಹಾಡ್’ ಅರಿವು ಮತ್ತು ಜಾತಿ–ಅಸ್ಪೃಶ್ಯತೆ ವಿನಾಶಕ್ಕಾಗಿ ಚಳುವಳಿ” ಕುರಿತು ವಿಚಾರ ಸಂಕಿರಣದಲ್ಲಿ ಎರಡು ಸಂವಾದಗಳು ನಡೆಯಲಿವೆ. “‘ಮಹಾಡ್’ನಿಂದ ದಲಿತ ಚಳುವಳಿ ಏನು ಕಲಿಯಬಹುದು?” ಎಂಬ ಒಂದು ಸಂವಾದದಲ್ಲಿ ಡಾ. ಡಿ.ಜಿ.ಸಾಗರ್, ಲಕ್ಷ್ಮೀನಾರಾಯಣ ನಾಗವಾರ, ಮೋಹನರಾಜ್, ಗುರುಪ್ರಸಾದ ಕೆರಗೋಡು ಭಾಗವಹಿಸುತ್ತಾರೆ. “ದಲಿತ–ಎಡ ಚಳುವಳಿಗಳ ಐಕ್ಯತೆಗೆ ‘ಮಹಾಡ್’ನ ಪಾಠಗಳು” ಎಂಬ ಇನ್ನೊಂದು ಸಂವಾದದಲ್ಲಿ ಡಾ.ರತಿ ರಾವ್, ಮಾವಳ್ಳಿ ಶಂಕರ್, ಗೋಪಾಲಕೃಷ್ಣ ಅರಳಹಳ್ಳಿ ಭಾಗವಹಿಸುತ್ತಾರೆ.
ಬಿಡುಗಡೆ ಸಮಾರಂಭದ ವಿವರವಾದ ಕಾರ್ಯಕ್ರಮದ ಆಹ್ವಾನ ಪತ್ರಿಕೆ, ಪುಸ್ತಕಗಳ ಮುಖಪುಟ ಇಲ್ಲಿವೆ. ಆನ್ ಲೈನ್ ಸಭೆಯ ಝೂಮ್ ಮತ್ತು ಫೇಸ್ ಬುಕ್ ಲಿಂಕ್ ನ್ನು ಸಹ ಆಹ್ವಾನ ಪತ್ರಿಕೆಯಲ್ಲಿ ಕೊಡಲಾಗಿದೆ.