ಬೆಂಗಳೂರು: ನಗರದ ಚಾಮರಾಜಪೇಟೆ ಈದ್ಗಾ ಮೈದಾನ ವಿವಾದವನ್ನು ಮತ್ತೆ ಕೆದಕಲಾಗಿದ್ದು, ಈ ಸಂಬಂಧ ಇಂದು ಸಭೆ ಸೇರಿ ಚಾಮರಾಜಪೇಟೆ ಈದ್ಗಾ ಮೈದಾನ ಬಿಟ್ಟುಕೊಡುವುದಿಲ್ಲ ಎಂದು ನಾಗರಿಕರ ಒಕ್ಕೂಟ ಹೇಳಿದೆ.
ರಕ್ತ ಬೇಕಾದರೂ ಕೊಡುತ್ತೇವೆ. ಆದರೆ ಮೈದಾನ ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ ಎಂದು ಶಾಸಕರಿಗೆ ಸವಾಲು ಹಾಕಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಚಾಮರಾಜಪೇಟೆ ಈದ್ಗಾ ಮೈದಾನದ ವಿಚಾರದಲ್ಲಿ ಅನಗತ್ಯ ಗೊಂದಲ ಉಂಟು ಮಾಡುತ್ತಿದೆ ಎಂದಿರುವ ಒಕ್ಕೂಟವು, ಮೈದಾನ ಬಿಬಿಎಂಪಿ ಸ್ವತ್ತು, ಎಲ್ಲರೂ ಒಗ್ಗೂಡಿ ಆಟದ ಮೈದಾನ ಉಳಿಸಿಕೊಳ್ಳಬೇಕು ಎಂದು ಕರೆ ನೀಡಿದೆ. ಚಾಮರಾಜಪೇಟೆ ನಾಗರಿಕರ ಒಕ್ಕೂಟದ ಸಭೆಯಲ್ಲಿ ಸ್ಥಳೀಯ ಶಾಸಕ ಜಮೀರ್ ಅಹಮದ್ ಖಾನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಗಿದೆ. ಜುಲೈ 12ರಂದು ಚಾಮರಾಜಪೇಟೆ ಬಂದ್‌ಗೆ ಕರೆ ನೀಡಲಾಗಿದೆ.
ಜುಲೈ 12ರಂದು ಅಂಗಡಿ ಮುಂಗಟ್ಟು ಮುಚ್ಚಿ ಬಂದ್‌ಗೆ ಬೆಂಬಲ ನೀಡುವಂತೆ ಮನವಿ ಮಾಡಿದ್ದಾರೆ. ಚಾಮರಾಜಪೇಟೆಯಲ್ಲಿ ಅಂದು ಶಾಂತಿಯುತ ಮೆರವಣಿಗೆ ಮಾಡಲು ನಿರ್ಧರಿಸಿದ್ದು, ಆಗಸ್ಟ್ 15ರಂದು ಮೈದಾನದಲ್ಲಿ ಧ್ವಜಾರೋಹಣ ಮಾಡುವುದಾಗಿ ತಿಳಿಸಿದ್ದಾರೆ.
ಸಭೆಯಲ್ಲಿ ಗಲಾಟೆ
ಮೈದಾನ ವಿವಾದಕ್ಕೆ ಸಂಬಂಧಿಸಿ ಇಂದು ಸ್ಥಳೀಯರು ಸಭೆ ನಡೆಸಿದ ವೇಳೆ ಸಭೆಗೆ ಶಾಸಕ ಜಮೀರ್ ಅಹಮದ್ ಖಾನ್ ಆಹ್ವಾನಿಸಿದ ವಿಚಾರವಾಗಿ ಗಲಾಟೆಯೂ ನಡೆದಿದೆ. ಜಮೀರ್ ಸಭೆಗೆ ಬರಬಾರದು ಎಂದು ಕೆಲವರು ಆಕ್ರೋಶ ಹೊರಹಾಕಿದರು. ಜಮೀರ್ ಬಂದರೆ ನಾವೆಲ್ಲರೂ ಎದ್ದು ಹೋಗುತ್ತೇವೆ. ಶಾಸಕರಿಂದಲೇ ವಿವಾದ ಆಗುತ್ತಿದೆ. ಅವರನ್ನೇಕೆ ಆಹ್ವಾನ ನೀಡಿದ್ದೀರಿ ಎಂದು ಗಲಾಟೆ ಮಾಡಿದ್ದಾರೆ.