ತಿರುವನಂತಪುರಂ: ರಾಜ್ಯದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸಿಲ್ವರ್‌ಲೈನ್‌ನಂತಹ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳಿಗೆ ಸಂಬಂಧಿಸಿದಂತೆ ರಾಜ್ಯದ ಅಗತ್ಯಗಳನ್ನು ಕೇಂದ್ರ ಸರ್ಕಾರವು ತನ್ನ ನಿಲುವನ್ನು ಬದಲಿಸಿದ್ದು, ನಿರ್ಲಕ್ಷಿಸುತ್ತಿದೆ ಎಂದು ಕೇರಳ ಎಡರಂಗ ಸರ್ಕಾರದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆರೋಪಿಸಿದ್ದಾರೆ.
ರಾಜ್ಯದ ಅಗತ್ಯಗಳನ್ನು ನಿರ್ಲಕ್ಷಿಸುವ ಕೇಂದ್ರದ ನಿಲುವಿನ ವಿರುದ್ಧದ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪಿಣರಾಯಿ ವಿಜಯನ್ ಅವರು, ಕೇರಳದ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿನ ಸುಧಾರಣೆಯನ್ನು ಜಾರಿಗೊಳಿಸಲು ಯುಡಿಎಫ್ ನೇತೃತ್ವದ ಪ್ರತಿಪಕ್ಷ ಮತ್ತು ಬಿಜೆಪಿ ಬಿಡುತ್ತಿಲ್ಲ ಎಂದು ಇದೇ ಸಂದರ್ಭದಲ್ಲಿ ಹೇಳಿದರು.
ಇದನ್ನು ಓದಿ: ತಿರುವನಂತಪುರ-ಕಾಸರಗೋಡು ನಡುವೆ ಸೆಮಿ ಹೈಸ್ಪೀಡ್ ರೈಲ್ ಮ್ಯಾಪ್ ಸಿದ್ದ
ರಾಜ್ಯದಲ್ಲಿ ಸಿಲ್ವರ್‌ಲೈನ್‌ನಂತಹ ಯೋಜನೆ ಜಾರಿಗೊಳಿಸಲು ಕೇಂದ್ರವು ಆರಂಭದಲ್ಲಿ ಬೆಂಬಲಿಸಿ ಈಗ ನಿರ್ಲಕ್ಷಿಸಲಾಗುತ್ತಿದೆ. ಬಹುಶಃ ಇದಕ್ಕೆ ಕೇರಳ ಬಿಜೆಪಿಯವರ ವಿರೋಧವಿರಬಹುದು ಎಂದರು.
ಸಿಲ್ವರ್‌ಲೈನ್, ತಿರುವನಂತಪುರವನ್ನು ಕಾಸರಗೋಡಿನೊಂದಿಗೆ ಸಂಪರ್ಕಿಸುವ ಸೆಮಿ-ಹೈಸ್ಪೀಡ್ ರೈಲು ಮಾರ್ಗವಾಗಿದೆ. ರಾಜ್ಯದ ಎರಡು ತುದಿಗಳ ನಡುವಿನ ಪ್ರಯಾಣದ ಸಮಯವನ್ನು ನಾಲ್ಕು ಗಂಟೆಗಳವರೆಗೆ ಕಡಿಮೆ ಮಾಡುತ್ತದೆ. ಇದು ಯಾವುದೇ ವನ್ಯಜೀವಿ ಪ್ರದೇಶಗಳ ಮೂಲಕ ಹಾದು ಹೋಗುವುದಿಲ್ಲ ಮತ್ತು ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುತ್ತದೆ. ರಸ್ತೆಯ ಬದಲು ರೈಲಿನ ಮೂಲಕ ಸರಕುಗಳನ್ನು ಸಹ ಸಾಗಿಸಬಹುದು ಎಂದು ಕೇರಳ ಮುಖ್ಯಮಂತ್ರಿ ಹೇಳಿದ್ದಾರೆ.
ಕೇಂದ್ರದ ಬಿಜೆಪಿ ಸರ್ಕಾರವು ವಿವಿಧ ರೀತಿಯ ನೆರವು ನೀಡುವುದರಲ್ಲಿಯೂ ರಾಜ್ಯಗಳಿಗೆ ನಿರ್ಲಕ್ಷಿಸುತ್ತಿದೆ. ಅದರಲ್ಲೂ ಕೇರಳಕ್ಕೆ ಸಾಕಷ್ಟು ವಿಳಂಬ ಮಾಡುತ್ತಿದೆ. ಕೇಂದ್ರದಿಂದ ಆಗುತ್ತಿರುವ ನಿರ್ಲಕ್ಷ್ಯವನ್ನು ಖಂಡಿಸಿ ಈ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದ ಅವರು, ಕೇಂದ್ರ ಸರ್ಕಾರ ತನ್ನ ನಿಲುವನ್ನು ಬದಲಿಸಿಕೊಳ್ಳಬೇಕೆಂದು ಪಿಣರಾಯಿ ವಿಜಯನ್ ಹೇಳಿದರು.