ಬೆಳ್ತಂಗಡಿ : ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್‌ಐಆರ್) ಕಾರ್ಯದಲ್ಲಿ ತೊಡಗಿದ್ದ ಬೂತ್ ಮಟ್ಟದ ಅಧಿಕಾರಿ (ಬಿಎಲ್‌ಒ)ಗೆ ಜಾತಿ ನಿಂದನೆ ಮಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಮಹಿಳೆಯೊಬ್ಬರ ವಿರುದ್ಧ ಬೆಳ್ತಂಗಡಿ ತಾಲೂಕಿನ ವೇಣೂರು ಪೊಲೀಸ್ ಠಾಣೆಯಲ್ಲಿ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಶಿರ್ಲಾಲು ಗ್ರಾಮದ ಬಿಎಲ್‌ಒ ಆಗಿರುವ ದಿನಾಶಿನಿ ಅವರು ನೀಡಿದ ದೂರಿನ ಮೇರೆಗೆ, ಅದೇ ಗ್ರಾಮದ ಯಶೋಧ ಆಚಾರಿ ವಿರುದ್ಧ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ (ದೌರ್ಜನ್ಯ ತಡೆ) ತಿದ್ದುಪಡಿ ಕಾಯ್ದೆ-2015ರ ಸೆಕ್ಷನ್ 3(1)(r) ಹಾಗೂ 3(2)(va) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ದೂರಿನ ಪ್ರಕಾರ, ಜುಲೈ 6ರಂದು ಬೆಳಿಗ್ಗೆ ಸುಮಾರು 11.30ಕ್ಕೆ ಶಿರ್ಲಾಲು ಗ್ರಾಮದಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಕಾರ್ಯದ ಅಂಗವಾಗಿ ಬಿಎಲ್‌ಒ ದಿನಾಶಿನಿ ಅವರು ಎಎಲ್‌ಒ (ಸಹಾಯಕ ಬೂತ್ ಮಟ್ಟದ ಅಧಿಕಾರಿ) ಜತೆ ಮನೆಗಳಿಗೆ ಭೇಟಿ ನೀಡಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದರು. ಈ ವೇಳೆ ಆರೋಪಿತೆ ಯಶೋಧ ಆಚಾರಿ, ಬಿಎಲ್‌ಒ ಅವರ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಜಾತಿ ನಿಂದನೆ ಮಾಡಿ ಅವಮಾನಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಎಸ್‌ಐಆರ್
ಈ ಘಟನೆ ವೇಳೆ ಸ್ಥಳದಲ್ಲಿದ್ದ ಸಾರ್ವಜನಿಕರ ಎದುರೇ ಜಾತಿ ನಿಂದನೆ ಮಾಡಲಾಗಿದ್ದು, ಇದರಿಂದ ತಮಗೆ ಮಾನಸಿಕ ಅವಮಾನ ಹಾಗೂ ನೋವು ಉಂಟಾಗಿದೆ ಎಂದು ದಿನಾಶಿನಿ ದೂರಿನಲ್ಲಿ ತಿಳಿಸಿದ್ದಾರೆ. ಇದರ ಬೆನ್ನಲ್ಲೇ ವೇಣೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 49/2026 ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಇದನ್ನೂ ಓದಿ : ಗ್ರೌಂಡ್ ರಿಪೋರ್ಟ್: ಒಬ್ಬ BLOಗೆ ನೂರಾರು ಮನೆಗಳು; ಮತದಾರರ ಪಟ್ಟಿ ಪರಿಷ್ಕರಣೆಯ ಸವಾಲುಗಳೇನು?

ಇದೇ ಘಟನೆಗೆ ಸಂಬಂಧಿಸಿದಂತೆ, ಬಿಎಲ್‌ಒ ದಿನಾಶಿನಿ ಅವರ ಪರವಾಗಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಬೆಳ್ತಂಗಡಿ ತಾಲ್ಲೂಕು ಶಾಖೆಯು ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದೆ. ಮನವಿಯಲ್ಲಿ, ಚುನಾವಣಾ ಆಯೋಗದ ನಿರ್ದೇಶನದಂತೆ ಸರ್ಕಾರಿ ಕರ್ತವ್ಯ ನಿರ್ವಹಿಸುತ್ತಿದ್ದ ಬಿಎಲ್‌ಒ ಮೇಲೆ ಜಾತಿ ನಿಂದನೆ ಹಾಗೂ ಅವಾಚ್ಯ ಶಬ್ದಗಳಿಂದ ನಿಂದನೆ ನಡೆಸಿರುವುದನ್ನು ಖಂಡಿಸಲಾಗಿದ್ದು, ಸರ್ಕಾರಿ ನೌಕರರ ರಕ್ಷಣೆಗಾಗಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿದೆ.
ಈ ಮಧ್ಯೆ, ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್‌ಐಆರ್) ಕಾರ್ಯದಲ್ಲಿ ಬಿಎಲ್‌ಒಗಳ ಮೇಲೆ ಕೆಲಸದ ಒತ್ತಡ ಹೆಚ್ಚಾಗಿದ್ದು, ಇಂತಹ ಘಟನೆಗಳು ರಾಜ್ಯದ ವಿವಿಧ ಭಾಗಗಳಲ್ಲಿ ವರದಿಯಾಗುತ್ತಿವೆ ಎಂದು ನೌಕರರ ಸಂಘಟನೆಗಳು ಆರೋಪಿಸಿವೆ. ಈಗಾಗಲೇ ರಾಜ್ಯದಲ್ಲಿ ಐವರು ಬಿಎಲ್‌ಒಗಳು ಕೆಲಸದ ಒತ್ತಡದಿಂದ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಸಂಘಟನೆಗಳು ಹೇಳಿವೆ.
ಬಿಎಲ್‌ಒಗಳ ಮೇಲೆ ಹೆಚ್ಚುತ್ತಿರುವ ಕೆಲಸದ ಒತ್ತಡ ಮತ್ತು ಕರ್ತವ್ಯದ ವೇಳೆ ಎದುರಾಗುತ್ತಿರುವ ಅವಮಾನ, ಬೆದರಿಕೆ ಹಾಗೂ ದೌರ್ಜನ್ಯ ಪ್ರಕರಣಗಳ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಬಿಎಲ್‌ಒಗಳ ಸುರಕ್ಷತೆಗೆ ವಿಶೇಷ ಕ್ರಮ ಕೈಗೊಳ್ಳಬೇಕು, ಅಗತ್ಯ ಸಿಬ್ಬಂದಿ ನೇಮಕ ಮಾಡಬೇಕು ಹಾಗೂ ಕೆಲಸದ ಹೊರೆಯನ್ನು ಕಡಿಮೆ ಮಾಡಬೇಕು ಎಂದು ಸಂಘಟನೆಗಳು ಆಗ್ರಹಿಸಿವೆ.
ಇದನ್ನೂ ನೋಡಿ : SIR ಕರ್ನಾಟಕ | ಕೆಲಸದ ಒತ್ತಡ, ಅಪಪ್ರಚಾರ: ಎಸ್‌ಐಆರ್ ಕೆಲಸದ ನೋವು ಬಿಚ್ಚಿಟ್ಟ ಬಿಎಲ್‌ಒ Janashakthi Media
