ವಸಾಹತುಗಳಿಗಾಗಿ ಬಂಡವಾಳಶಾಹಿಯ ಧಾವಂತ

ಪ್ರೊ. ಪ್ರಭಾತ್ ಪಟ್ನಾಯಕ್
  ಅನು:ಕೆ.ಎಂ.ನಾಗರಾಜ್
ಟ್ರಂಪ್‍ರನ್ನು ಏಕಮೇವ ಖಳನಾಯಕ ಎಂದು ಪ್ರತ್ಯೇಕಿಸುವುದು ಇಡೀ ಬಂಡವಾಳಶಾಹಿ ವ್ಯವಸ್ಥೆಯ ದೋಷಗಳ ಬಗ್ಗೆ ಕಣ್ಣು ಮುಚ್ಚಿಕೊಳ್ಳುವ ಕ್ರಮವಾಗುತ್ತದೆ.  ಹೌದು, ಟ್ರಂಪ್ ನಡವಳಿಕೆಯು ಬಂಡವಾಳಶಾಹಿಯು ಅಂತಾರಾಷ್ಟ್ರೀಯ ಸಹಕಾರದ ಮೂಲಕ ಒಂದು ಶಾಂತಿಯುತ ರೀತಿಯಲ್ಲಿ ಕಾರ್ಯನಿರ್ವಹಿಸಬಲ್ಲದು ಎಂಬ ಚಿತ್ರಣಕ್ಕಿಂತ ಭಿನ್ನವಾಗಿದೆ. ಅದು ಆತ ಒಬ್ಬ ಹೊಲಸು ವ್ಯಕ್ತಿ ಎಂಬುದರಿಂದಲ್ಲ, ಬದಲಾಗಿ, ಈ ಚಿತ್ರಣವೇ ಅಸಮರ್ಥನೀಯವಾಗಿದೆ ಮತ್ತು ಟ್ರಂಪ್ ಹೊಲಸುತನ ಬಂಡವಾಳಶಾಹಿಯ ಸಮಕಾಲೀನ ಅವಶ್ಯಕತೆಗಳಿಗೆ ಹೊಂದಿಕೊಳ್ಳುತ್ತದೆಯಾದ್ದರಿಂದ. ಮಾನವಕೋಟಿಯನ್ನು ಒಂದು ಅಸಾಧಾರಣ ಮಟ್ಟದ ಅಪಾಯಕಾರಿ ಪರಿಸ್ಥಿತಿಗೆ ತಳ್ಳುತ್ತಿರುವುದು ಡೊನಾಲ್ಡ್ ಟ್ರಂಪ್ ಅಲ್ಲ, ಸ್ವತಃ ಬಂಡವಾಳಶಾಹಿಯೇ, ಬಂಡವಾಳಶಾಹಿಯ ಆಕ್ರಮಣಕೋರ ಪ್ರಯತ್ನಗಳೇ ಸಮಾಜವಾದದ ಅಗತ್ಯವನ್ನು ಮತ್ತೊಮ್ಮೆ ಒತ್ತಿಹೇಳುತ್ತವೆ. ಮಾನವಕುಲವು ಸಮಾಜವಾದ ಮತ್ತು ಅನಾಗರಿಕತೆಯ ನಡುವೆ ಒಂದು ಸ್ಪಷ್ಟವಾದ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ ಎಂಬ ರೋಸಾ ಲಕ್ಸೆಂಬರ್ಗ್ ದೃಢ ಹೇಳಿಕೆಯನ್ನು ಇಂದು ಸಾಮ್ರಾಜ್ಯಶಾಹಿಯನ್ನು ಮುಳುಗದಂತೆ ಉಳಿಸುವ ಡೊನಾಲ್ಡ್ ಟ್ರಂಪ್ ಅವರ ಹತಾಶ ಹುಚ್ಚಾಟಗಳು ಮತ್ತೊಮ್ಮೆ ಸಾಬೀತುಪಡಿಸುತ್ತಿವೆ. ವಸಾಹತುಗಳಿಗಾಗಿ
                                                                                                                                                                                                                                     

ಯುದ್ಧಾನಂತರದ ಸಾಮ್ರಾಜ್ಯಶಾಹಿಯ ಬುನಾದಿ ಒಂದು ಮೂಲಭೂತ ವೈರುಧ್ಯದ ಮೇಲೆ ನಿಂತಿತ್ತು ಎಂಬುದು ಅದನ್ನು ನಾವು ಮೊದಲನೆಯ ಮಹಾ ಯುದ್ಧದ ಹಿಂದಿದ್ದ ಪರಿಸ್ಥಿತಿಯೊಂದಿಗೆ ಹೋಲಿಸಿದಾಗ ಸ್ಪಷ್ಟವಾಗುತ್ತದೆ. ಯಾವುದೇ ಒಂದು ಅವಧಿಯಲ್ಲಿ ಸಾಮ್ರಾಜ್ಯಶಾಹಿ ಜಗತ್ತಿನ ನಾಯಕ ದೇಶವು ಸಾಮಾನ್ಯವಾಗಿ ತನ್ನ ಪಾವತಿ ಶೇಷದ ಒಟ್ಟಾರೆ ಕೊರತೆಯನ್ನು ಬಂಡವಾಳಶಾಹಿಯು ಹಬ್ಬುತ್ತಿರುವ ಇತರ ಪ್ರಮುಖ ದೇಶಗಳಿಗೆ ಎದುರಾಗಿ ಹೆಚ್ಚಿಸಿಕೊಳ್ಳುವ ಮೂಲಕ ತನ್ನ ನಾಯಕ ಪಾತ್ರವನ್ನು ಕಾಪಾಡಿಕೊಳ್ಳುತ್ತದೆ. ಹಲವಾರು ಕಾರಣಗಳಿಂದಾಗಿ ಈ ಪರಿಸ್ಥಿತಿ ಉದ್ಭವಿಸುತ್ತದೆ: ಬಂಡವಾಳಶಾಹಿಯ ವ್ಯಾಪ್ತಿಯನ್ನು ಹಬ್ಬಿಸುವುದಕ್ಕಾಗಿ ಜಾಗತಿಕ ಬಂಡವಾಳಶಾಹಿ ನಾಯಕ ದೇಶವು ಬಂಡವಾಳವನ್ನು ರಫ್ತು ಮಾಡಬೇಕಾಗುತ್ತದೆ; ಬಂಡವಾಳಶಾಹಿ ಹರಡುತ್ತಿರುವ ಮತ್ತು ಹೊಸದಾಗಿ ಕೈಗಾರಿಕೀಕರಣಗೊಳ್ಳುತ್ತಿರುವ ದೇಶಗಳು ಉತ್ಪಾದಿಸುವ ಸರಕುಗಳಿಗೆ ಅದು ತನ್ನ ಮಾರುಕಟ್ಟೆಗಳನ್ನು ತೆರೆದಿಟ್ಟುಕೊಳ್ಳಬೇಕಾಗುತ್ತದೆ; ತನ್ನ ಜಾಗತಿಕ ಪ್ರಾಬಲ್ಯವನ್ನು ಕಾಪಾಡಿಕೊಳ್ಳುವುದಕ್ಕಾಗಿ ಅದು ಹೆಚ್ಚು ಹೆಚ್ಚು ಮಿಲಿಟರಿ ವೆಚ್ಚಗಳನ್ನು ಕೈಗೊಳ್ಳಬೇಕಾಗುತ್ತದೆ; ಅದು ಆಗಾಗ ನಿಜಕ್ಕೂ ಯುದ್ಧಗಳನ್ನು ಮಾಡಬೇಕಾಗುತ್ತದೆ. ಈ ಎಲ್ಲ ಕಾರಣಗಳಿಂದಾಗಿ ನಾಯಕ ದೇಶವು ಪಾವತಿ ಶೇಷದ ಕೊರತೆಯನ್ನು ಮಾಡಿಕೊಳ್ಳುವ ಕ್ರಮವು ಬಹುಮಟ್ಟಿಗೆ ಬಂಡವಾಳಶಾಹಿಯ ಒಂದು ನಿಷ್ಠುರ ನಿಯಮವೇ ಎಂಬಂತಾಗಿದೆ. ಅಂತೆಯೇ, ಎರಡನೇ ಮಹಾಯುದ್ಧಕ್ಕೂ ಮುಂಚಿನ ಬಂಡವಾಳಶಾಹಿಯ ಜಾಗತಿಕ ನಾಯಕ ದೇಶವಾದ ಬ್ರಿಟನ್, ಆ ಸಮಯದ ಇತರ ಉದಯೋನ್ಮುಖ ಬಂಡವಾಳಶಾಹಿ ದೇಶಗಳಾಗಿದ್ದÀ ಯುರೋಪ್ ಖಂಡ, ಯುಎಸ್‌ಎ, ಕೆನಡಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾಗಳಿಗೆ ಹೋಲಿಸಿದರೆ, ಅದರ ಚಾಲ್ತಿ ಮತ್ತು ಬಂಡವಾಳ ಖಾತೆಗಳನ್ನು ಒಟ್ಟಿಗೆ ತೆಗೆದುಕೊಂಡರೆ, ಒಟ್ಟಾರೆಯಾಗಿ ಪಾವತಿಶೇಷದ ಕೊರತೆಯನ್ನು ಹೊಂದಿತ್ತು. ಈ ಕೊರತೆಯ ಹೊರತಾಗಿಯೂ ಯಾವುದೇ ಬಾಹ್ಯ ಸಾಲವನ್ನು ಬ್ರಿಟನ್ ಹೊಂದಿರಲಿಲ್ಲ. ತದ್ವಿರುದ್ಧವಾಗಿ ಅದು ಇಡೀ ವಿಶ್ವದ ನಿವ್ವಳ ಸಾಲದಾತನಾಗಿತ್ತು.

ಬ್ರಿಟನ್ ವಿಶ್ವದ ನಿವ್ವಳ ಸಾಲದಾತನಾದದ್ದು ಅದು ವಶಪಡಿಸಿಕೊಂಡ ಉಷ್ಣವಲಯದ ವಸಾಹತುಗಳಿಂದಾಗಿ (ಅದು ನೆಲೆನಿಂತ ಸಮಶೀತೋಷ್ಣ ವಲಯದ ವಸಾಹತುಗಳಲ್ಲಿನ ಸ್ಥಿತಿ ಇದಕ್ಕಿಂತ ಭಿನ್ನವಾಗಿತ್ತು). ಈ ವಿದ್ಯಮಾನವು ಎರಡು ರೀತಿಗಳಲ್ಲಿ ಸಂಭವಿಸಿತು: ಮೊದಲನೆಯದು, ಹೊಸದಾಗಿ ಕೈಗಾರಿಕೀಕರಣಗೊಳ್ಳುತ್ತಿದ್ದ ದೇಶಗಳ ಬಂಡವಾಳಶಾಹಿ ಉತ್ಪಾದಕರ ಸ್ಪರ್ಧೆಯಿಂದಾಗಿ ಬ್ರಿಟನ್ನಿನ ಉತ್ಪನ್ನಗಳು ಆ ದೇಶಗಳ ಮಾರುಕಟ್ಟೆಗಳಿಂದ ಮತ್ತು ಬ್ರಿಟನ್ನಿನ ಆಂತರಿಕ ಮಾರುಕಟ್ಟೆಯಿಂದಲೂ ಹೊರದಬ್ಬಲ್ಪಡುತ್ತಿದ್ದರೂ, ಆ ಸರಕುಗಳನ್ನು ಅದು ತನ್ನ ವಶದಲ್ಲಿದ್ದ ವಸಾಹತುಗಳ ಮಾರುಕಟ್ಟೆಗಳಲ್ಲಿ ಮಾರಾಟ ಮಾಡುವುದು ಸಾಧ್ಯವಾಯಿತು.

ಎರಡನೆಯದು, ಹೊಸದಾಗಿ ಕೈಗಾರಿಕೀಕರಣಗೊಳ್ಳುತ್ತಿದ್ದ ದೇಶಗಳಿಗೆ ಈ ವಸಾಹತುಗಳಿಂದ ಮಾಡಿದ ರಫ್ತುಗಳ ಮಿಗುತಾಯದ ನಿವ್ವಳ ವಿದೇಶಿ ವಿನಿಮಯ ಗಳಿಕೆಯನ್ನು ಬ್ರಿಟನ್ ಸಂಪೂರ್ಣವಾಗಿ ಯಾವ ಪ್ರತಿಫಲವನ್ನೂ ಕೊಡದೆ ಸ್ವಾಹಾ ಮಾಡಿಕೊಂಡಿತು.(ಈ ವಿದ್ಯಮಾನವನ್ನು ಭಾರತದ ವಸಾಹತುಶಾಹಿ-ವಿರೋಧಿ ಬರಹಗಾರರು “ಸಂಪತ್ತನ್ನು ಬರಿದು”(drain) ಮಾಡುವ ನಡೆ ಎಂದು ಕರೆದರು ಮತ್ತು ಇದರ ಬಗ್ಗೆ ಮಾರ್ಕ್ಸ್ 1881ರಲ್ಲಿ ರಷ್ಯಾದ ನರೋಡ್ನಿಕ್ ಅರ್ಥಶಾಸ್ತ್ರಜ್ಞ ಎನ್.ಎಫ್. ಡೇನಿಯಲ್ಸನ್‌ಗೆ ಬರೆದ ಪತ್ರದಲ್ಲಿ ಟಿಪ್ಪಣಿ ಮಾಡಿದ್ದರು).

ಈ ರೀತಿಯಲ್ಲಿ ಬ್ರಿಟನ್ ಯಾವ ತೊಂದರೆಯನ್ನೂ ಎದುರಿಸದೆ ಬಂಡವಾಳಶಾಹಿ ಜಗತ್ತಿನ ನಾಯಕ ಪಾತ್ರವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಏಕೆಂದರೆ ಅದು ತನ್ನ ವಸಾಹತುಶಾಹಿ ಸಾಮ್ರಾಜ್ಯದ ಸಂಪನ್ಮೂಲಗಳನ್ನು ಬಳಸಿಕೊಳ್ಳುವ ಮೂಲಕ ಆ ಪಾತ್ರವನ್ನು ನಿರ್ವಹಿಸುವುದು ಸಾಧ್ಯವಾಗಿತ್ತು. ಉದಾಹರಣೆಗೆ, 1910ರಲ್ಲಿ ಯುಎಸ್ ಮತ್ತು ಯುರೋಪ್ ಖಂಡದ ದೇಶಗಳೊಂದಿಗೆ ಬ್ರಿಟನ್ ಹೊಂದಿದ್ದ ಪಾವತಿ ಶೇಷದ ಕೊರತೆಯು (ಚಾಲ್ತಿ ಖಾತೆ+ಬಂಡವಾಳ ಖಾತೆಯ ಕೊರತೆ) 95 ಮಿಲಿಯನ್ ಪೌಂಡ್‌ಗಳಷ್ಟಿತ್ತು ಮತ್ತು ಎಲ್ಲ ದೇಶಗಳೊಂದಿಗೆ ಅದು ಹೊಂದಿದ ಒಟ್ಟು ಕೊರತೆಯು 145 ಮಿಲಿಯನ್ ಪೌಂಡ್‌ಗಳಷ್ಟಿತ್ತು. ಈ ಕೊರತೆಯನ್ನು ಸರಿದೂಗಿಸಿಕೊಳ್ಳುವ ಹಣವನ್ನು ಅದು ಭಾರತ, ವೆಸ್ಟ್ ಇಂಡೀಸ್, ಮಲಯ ಮುಂತಾದ ತನ್ನ ವಸಾಹತುಗಳಿಂದ ಕಿತ್ತುಕೊಂಡಿತ್ತು. ಮತ್ತು ಅದರಲ್ಲಿ 60 ಮಿಲಿಯನ್ ಪೌಂಡ್‌ಗಳಷ್ಟನ್ನು ಕೇವಲ ಭಾರತವೊಂದರಿಂದಲೇ ಕಿತ್ತುಕೊಂಡಿತ್ತು.

ಆದರೆ, ಯುದ್ಧಾನಂತರದ ಬಂಡವಾಳಶಾಹಿಯ ಒಂದು ಮೂಲಭೂತ ವೈರುಧ್ಯವೆಂದರೆ, ಈ ಅವಧಿಯ ಬಂಡವಾಳಶಾಹಿ ಜಗತ್ತಿನ ನಾಯಕ ದೇಶವಾದ ಯುಎಸ್ ಅಂತಹ ಯಾವುದೇ ವಸಾಹತುಗಳನ್ನು ಹೊಂದಿರಲಿಲ್ಲ. ಎಸ್.ಬಿ. ಸೌಲ್ ಬ್ರಿಟಿಷ್ ಸಾಗರೋತ್ತರ ವ್ಯಾಪಾರ ಕುರಿತಂತೆ markets on tap (S.B.Saul, Studies in British Overseas Trade) ಅಂದರೆ ಯಾವಾಗ ಬೇಕಾದರೂ ಬಳಸಿಕೊಳ್ಳಬಹುದಾದ ಸಿದ್ಧ ಮಾರುಕಟ್ಟೆ ಅಮೆರಿಕನ್ ಬಂಡವಾಳಶಾಹಿಗೆ ಇರಲಿಲ್ಲ, ಯಾವುದೇ ವಸಾಹತುವನ್ನು ಲೂಟಿಯ ಮೂಲವಾಗಿ ಬಳಸುವುದೂ ಸಾಧ್ಯವಿರಲಿಲ್ಲ. ಬ್ರಿಟಿಷ್ ಹೊಂದಿದ್ದ ರೀತಿಯ ಯಾವುದೇ ವಸಾಹತು ಸಾಮ್ರಾಜ್ಯವೂ ತನಗೆ ಇಲ್ಲದಿರುವ ಪರಿಸ್ಥಿತಿಯಲ್ಲಿ ನಾಯಕತ್ವದ ಪಾತ್ರವನ್ನು ನಿರ್ವಹಿಸುವಲ್ಲಿ ಅದು ಹೆಚ್ಚು ಹೆಚ್ಚು ಸಾಲದ ಬಲೆಗೆ ಸಿಲುಕಬೇಕಾಯಿತು. ಹೀಗೆ ವಿಶ್ವದ ನಾಯಕ ಬಂಡವಾಳಶಾಹಿ ದೇಶವೂ ಸಹ ಕಾಲ ಕ್ರಮೇಣ ವಿಶ್ವದ ಅತ್ಯಂತ ಸಾಲಗಾರ ದೇಶವಾದ ವಿಲಕ್ಷಣ ಪರಿಸ್ಥಿತಿಯನ್ನು ನಾವೀಗ ಕಾಣುತ್ತಿದ್ದೇವೆ.

ಡಾಲರ್ ಪಾರಮ್ಯ ಮತ್ತು ವಸಾಹತುಗಳು

ಆದರೆ ಆಗ ಇದೇನೂ ಮುಖ್ಯವಾಗಲಿಲ್ಲ. ಏಕೆಂದರೆ ವಿಶ್ವದ ಉಳಿದ ಭಾಗವು ಯುಎಸ್‌ನಿಂದ ಹೇರಳವಾಗಿ ಹರಿದುಬರುತ್ತಿದ್ದ ಸಾಲಪತ್ರಗಳನ್ನು, ಅಂದರೆ ಅಮೇರಿಕನ್ ಡಾಲರ್‌ಗಳನ್ನು ಅಥವಾ ಡಾಲರ್-ಮೌಲ್ಯದ ಸ್ವತ್ತುಗಳನ್ನು ಹಿಡಿದಿಟ್ಟುಕೊಳ್ಳಲು ಸಂಪೂರ್ಣವಾಗಿ ಸಿದ್ಧವಿತ್ತು. ಡಾಲರನ್ನು “ಚಿನ್ನಕ್ಕೆ ಸಮ” ಎಂದು ಆಗ ಪರಿಗಣಿಸಲಾಗಿತ್ತು. 1970ರ ದಶಕದ ಆರಂಭದಲ್ಲಿ ಚಿನ್ನಕ್ಕಾಗಿ ಡಾಲರ್‌ಗಳನ್ನು ವಿನಿಮಯ ಮಾಡಿಕೊಳ್ಳುವ ಆತುರ ಉಂಟಾದಾಗ ಈ ನಂಬಿಕೆಗೆ ತುಸು ಹಿನ್ನಡೆಯಾಯಿತು: ಬ್ರೆಟನ್‌ವುಡ್ಸ್ ವ್ಯವಸ್ಥೆಯಡಿಯಲ್ಲಿ ಡಾಲರನ್ನು ಪ್ರತಿ ಔನ್ಸ್ ಚಿನ್ನವನ್ನು $35 ದರದಲ್ಲಿ ವಿನಿಮಯ ಮಾಡಿಕೊಳ್ಳಬಹುದಿತ್ತು ಮತ್ತು ಇದು ವಿಶ್ವಾದ್ಯಂತವೂ ಹಣದುಬ್ಬರದಲ್ಲಿ ಏರಿಕೆಯಾದಾಗ ಜನರು ಡಾಲರ್‌ನಿಂದ ದೂರ ಸರಿದು ಚಿನ್ನ ಪಡೆಯುವ ಅವಕಾಶವನ್ನು ಒದಗಿಸಿತು. ಆದರೆ ಡಾಲರನ್ನು ಚಿನ್ನವಾಗಿ ಪರಿವರ್ತಿಸುವ ಕ್ರಮವು ಅಧಿಕೃತವಾಗಿ ಕೊನೆಗೊಂಡ ನಂತರ ಮತ್ತು ಈ ಕಾರಣದಿಂದಾಗಿ ಬ್ರೆಟನ್‌ವುಡ್ಸ್ ವ್ಯವಸ್ಥೆಯನ್ನು ಕೈಬಿಟ್ಟ ನಂತರ, ಡಾಲರ್ ಮೇಲಿನ ವಿಶ್ವಾಸ ಕ್ರಮೇಣ ಹಿಂತಿರುಗಿತು ಮತ್ತು ಸಂಪತ್ತು ಹೊಂದಿರುವವರು ಮತ್ತೊಮ್ಮೆ ಯಾವ ತಕರಾರೂ ಇಲ್ಲದೆ ಅಮೆರಿಕನ್ ಡಾಲರ್‌ಗಳನ್ನು ಹಿಡಿದಿಟ್ಟುಕೊಳ್ಳುವುದನ್ನು ಮುಂದುವರೆಸಿದರು. ಹೀಗೆ ಬ್ರೆಟನ್‌ವುಡ್ಸ್ ವ್ಯವಸ್ಥೆಯ ಅಂತ್ಯದ ನಂತರವೂ ಬಂಡವಾಳಶಾಹಿ ಅಮೆರಿಕದ ಜಾಗತಿಕ ನಾಯಕತ್ವವು ಕುಂದಿಲ್ಲದೇ ಉಳಿಯಿತು.

ಡಾಲರ್ ಪಾರಮ್ಯವು ವಸಾಹತುಗಳಿಲ್ಲದ ಒಂದು ಮೂಲಭೂತ ವೈರುಧ್ಯದಿಂದ ಉಂಟಾಗುವ ಯಾವುದೇ ಬಿಕ್ಕಟ್ಟನ್ನು ತಪ್ಪಿಸುತ್ತದೆ ಎಂಬ ಅರ್ಥವನ್ನು ಇದು ಕೊಡುತ್ತದೆಯಾದರೂ, ಸ್ವತಃ ಈ ವೈರುಧ್ಯವೇ ಮುಂದುವರೆದ ಕಾರಣದಿಂದಾಗಿ ಭವಿಷ್ಯದಲ್ಲಿ ಬಿಕ್ಕಟ್ಟು ಉಂಟಾಗುವ ಸಾಧ್ಯತೆಯಂತೂ ಇದ್ದೇ ಇತ್ತು. ಡಾಲರ್ ಮೇಲೆ ಸಂಪತ್ತು ಹೊಂದಿರುವವರ ವಿಶ್ವಾಸವು ಹುಟ್ಟಿಕೊಂಡಿರುವುದು ಅಮೆರಿಕದೊಳಗಿನ ಹಣದುಬ್ಬರ ದರವು ಡಾಲರ್‌ನಿಂದ ಬೇರೆ ಯಾವುದೇ ಸರಕುಗಳಿಗೆ ಹೊರಳುವಷ್ಟು ಮಟ್ಟದಲ್ಲಿ ಏರಿಕೆಯಾಗುವುದಿಲ್ಲ ಎಂಬ ನಂಬಿಕೆಯಿದೆ; ಮತ್ತು ಈ ನಂಬಿಕೆಯು ಹುಟ್ಟಿಕೊಂಡಿರುವುದು, ನಿರುದ್ಯೋಗದ ಅಸ್ತಿತ್ವದಿಂದಾಗಿ ಶ್ರಮ ಶಕ್ತಿಯ ಡಾಲರ್ ಬೆಲೆ ಸದಾ ಮಿತಿಗಳೊಳಗೇ ಇರುತ್ತದೆ, ಮತ್ತು ತೈಲ ಉತ್ಪಾದಿಸುವವರ ಮೇಲೆ ಯುಎಸ್ ಆಧಿಪತ್ಯವನ್ನು ಹೇರುವ ಮೂಲಕ ತೈಲದ ಬೆಲೆ ಹತೋಟಿಯಲ್ಲಿರುತ್ತದೆ ಎಂಬ ಮನವರಿಕೆಯಲ್ಲಿ. ಆದರೆ, ಈ ಪರಿಸ್ಥಿತಿಗಳು ದುರ್ಬಲಗೊಳ್ಳುವ ಸಾಧ್ಯತೆಯಂತೂ ಇದ್ದೇ ಇದೆ.

ಬಿಕ್ಕಟ್ಟಿನ ಮುನ್ಸೂಚನೆ

ಇರಾನ್, ರಷ್ಯಾ ಮತ್ತು ವೆನೆಜುವೆಲಾದಂತಹ ಹಲವಾರು ತೈಲ ಉತ್ಪಾದಕರ ಮತ್ತು ಅಮೆರಿಕದ ನಡುವಿನ ಸಂಬಂಧಗಳು ವಿಷಮಗೊಂಡದ್ದರಿಂದ ಮತ್ತು ಅವುಗಳ ಮೇಲೆ ನಿರ್ಬಂಧಗಳನ್ನು ಹೇರಿದ ಕಾರಣದಿಂದ ತೈಲ ಉತ್ಪಾದಕ ಜಗತ್ತಿನ ಮೇಲೆ ಅಮೆರಿಕದ ಆಧಿಪತ್ಯಕ್ಕೆ ಬೆದರಿಕೆ ಉಂಟಾಯಿತು. ನಿರ್ಬಂಧಗಳ ಕಾರಣದಿಂದಾಗಿ ಈ ದೇಶಗಳು ಡಾಲರ್ ಹೊರತುಪಡಿಸಿ ಇತರ ಕರೆನ್ಸಿಗಳಲ್ಲಿ ತಮ್ಮ ತೈಲವನ್ನು ಮಾರಲು ಇತರ ದೇಶಗಳೊಂದಿಗೆ ಒಪ್ಪಂದಗಳನ್ನು ಮಾಡಿಕೊಳ್ಳಲು ಪ್ರಾರಂಭಿಸಿದವು. ಇದು ಡಾಲರ್‌ನ ಪ್ರಾಬಲ್ಯವನ್ನು ತಗ್ಗಿಸಲಾರಂಭಿಸಿತು ಮತ್ತು ಭವಿಷ್ಯದಲ್ಲಿ ಸಂಭವಿಸಬಹುದಾದ ಒಂದು ಬಿಕ್ಕಟ್ಟಿನ ಮುನ್ಸೂಚನೆಯನ್ನೂ ಕೊಟ್ಟಿತು.

ಇದಲ್ಲದೆ, ತಾನು ಹೊಂದಿರುವ ಸಾಲವನ್ನು ಸುಲಭವಾಗಿ ತಡೆದುಕೊಳ್ಳಬಹುದಾಗಿದ್ದರೂ ಸಹ, ಹೆಚ್ಚು ಹೆಚ್ಚು ಸಾಲದಲ್ಲಿ ಸಿಲುಕಿಕೊಳ್ಳಬಹುದೆಂಬ ಸಂಗತಿಯನ್ನು ಅಮೆರಿಕ ಇಷ್ಟಪಡುವುದಿಲ್ಲ. ಆದ್ದರಿಂದ ತನ್ನ ಈಗಿನ ಪರಿಸ್ಥಿತಿಯ ಬಗ್ಗೆ ಅಮೆರಿಕಕ್ಕೆ ಅಸಮಾಧಾನ ಹೆಚ್ಚುತ್ತಿತ್ತು. ಟ್ರಂಪ್ ಆಡಳಿತವು ಅಂತಿಮವಾಗಿ ಅಮೆರಿಕದ ಪಾವತಿ ಶೇಷದ ಕೊರತೆಯನ್ನು ಸಂಪೂರ್ಣವಾಗಿ ಇಲ್ಲದಂತೆ ಮಾಡಿಕೊಳ್ಳಲು ನಿರ್ಧರಿಸಿತು.

ವಿಶ್ವದ ಉಳಿದ ಭಾಗಗಳಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಟ್ರಂಪ್ ವಿಧಿಸುವ ಸುಂಕಗಳು, ಅಮೆರಿಕ ಬಾಕಿ ಉಳಿಸಿಕೊಂಡಿರುವ ಪಾವತಿಗಳನ್ನು ಕಡಿಮೆ ಮಾಡಿಕೊಳ್ಳುವ ಬಯಕೆಯ ಒಂದು ಅಭಿವ್ಯಕ್ತಿಯಾಗಿದೆ; ಹಿಂದೆ ಅಮೆರಿಕದೊಳಗೆ ಸಂಗ್ರಹಿಸಿಕೊಳ್ಳುತ್ತಿದ್ದ ಅಮೇರಿಕನ್ ಇಂಧನವನ್ನು ಮಾರಾಟ ಮಾಡುವ ನಿರ್ಧಾರವು ಇದರ ಮತ್ತೊಂದು ಅಭಿವ್ಯಕ್ತಿಯಾಗಿದೆ; ಮತ್ತು, ಸಂಪನ್ಮೂಲಗಳ ಲೂಟಿಯ ಮೂಲಕ (ಹಿಂದೆ ಉಷ್ಣವಲಯದ ವಸಾಹತುಗಳಿಂದ “ಬರಿದು” ಮಾಡುವ ಮೂಲಕ ದೋಚಿಕೊಂಡಂತೆ) ಅಮೆರಿಕದ ಪಾವತಿ ಶೇಷದ ಕೊರತೆಯನ್ನು ನೀಗಿಸಿಕೊಳ್ಳುವ ಉದ್ದೇಶದಿಂದ ಶ್ರೀಮಂತ ಖನಿಜ ಸಂಪನ್ಮೂಲಗಳನ್ನು ಹೊಂದಿರುವ ವಸಾಹತುಗಳನ್ನು ಸ್ವಾಧೀನಪಡಿಸಿಕೊಳ್ಳುವ ಧಾವಂತ ಮತ್ತೊಂದು ಅಭಿವ್ಯಕ್ತಿಯಾಗಿದೆ. ಈ ಪ್ರತಿಯೊಂದು ನಿರ್ಧಾರಗಳಿಗೂ ಬೇರೆ ಉದ್ದೇಶಗಳು ಆಧಾರವಾಗಿಲ್ಲ ಎಂದಲ್ಲ. ಈ ಎಲ್ಲ ಅಂಶಗಳೂ ಕೇವಲ ಒಂದು ಪ್ರಮುಖ ಸಮಾನ ಉದ್ದೇಶವನ್ನು ಎತ್ತಿ ತೋರಿಸುತ್ತವೆಯಷ್ಟೇ.

ಟ್ರಂಪ್ ಸಾಕ್ಷಾತ್ಕಾರ

ಉದಾರವಾದಿ ಅಭಿಪ್ರಾಯವು ಅಮೆರಿಕದ ಪ್ರಸ್ತುತ ಅತ್ಯಂತ ಆಕ್ರಮಣಕಾರಿ ನಿಲುವಿಗೆ ಡೊನಾಲ್ಡ್ ಟ್ರಂಪ್ ಅವರನ್ನು ದೂಷಿಸುತ್ತದೆ. ಟ್ರಂಪ್ ಮತ್ತು ಇತರ ಅಧ್ಯಕ್ಷರ ನಡುವೆ ಖಂಡಿತವಾಗಿಯೂ ವ್ಯತ್ಯಾಸವಿದೆ. ಟ್ರಂಪ್ ಒಬ್ಬ ನವ-ಫ್ಯಾಸಿಸ್ಟ್. ಉಳಿದವರು ಹೆಚ್ಚೆಂದರೆ ಪಕ್ಕಾ-ಸಂಪ್ರದಾಯವಾದಿಗಳು. ಆದರೆ, ಟ್ರಂಪ್‌ರನ್ನು ಏಕಮೇವ ಖಳನಾಯಕ ಎಂದು ಪ್ರತ್ಯೇಕಿಸುವುದು ಇಡೀ ವ್ಯವಸ್ಥೆಯ ದೋಷಗಳ ಬಗ್ಗೆ ಕಣ್ಣು ಮುಚ್ಚಿಕೊಳ್ಳುವ ಕ್ರಮವಾಗುತ್ತದೆ. ವೆನೆಜುವೆಲಾ ವಿರುದ್ಧ ಟ್ರಂಪ್ ಕೈಗೊಂಡಿರುವ ಕ್ರಮವು, ಕೇವಲ ಆತನ ಆಕ್ರಮಣಕಾರಿ ಉದ್ದೇಶವನ್ನು ಮಾತ್ರವಲ್ಲದೆ, ಬಂಡವಾಳಶಾಹಿಯು ವಸಾಹತುಗಳಿಂದ ನೇರವಾಗಿ ಪೋಷಿಸಲ್ಪಟ್ಟಾಗ ಮಾತ್ರ ಸರಿಯಾಗಿ ಕೆಲಸಮಾಡುತ್ತದೆ ಎಂಬ ಅಂಶವನ್ನೂ ಸಹ ತೋರಿಸುತ್ತದೆ. ಮತ್ತು ಈ ಅಂಶವನ್ನು ಸಾಕ್ಷಾತ್ಕಾರದ ರೀತಿಯಲ್ಲಿ ಟ್ರಂಪ್ ಅರ್ಥಮಾಡಿಕೊಂಡಿದ್ದಾರೆ. ಮುಂದುವರೆದ ದೇಶಗಳು ಇಲ್ಲಿಯವರೆಗೂ ಬಳಸುತ್ತಿದ್ದ ನವ-ಉದಾರವಾದ ಮತ್ತು ವಿಶ್ವದ ಸಂಪನ್ಮೂಲಗಳನ್ನು ನಿಯಂತ್ರಿಸುವ ಇತರ ವಿಧಾನಗಳು ನೇರ ವಸಾಹತುಶಾಹಿ ಆಳ್ವಿಕೆಯ ಅರ್ಧದಷ್ಟೂ ಪರಿಣಾಮಕಾರಿಯಾಗಿಲ್ಲ.

ನಿಜಕ್ಕೂ ಇದು ಉದಾರವಾದದ ನಂಬಿಕೆಗೆ ತದ್ವಿರುದ್ಧವಾಗಿದೆ. ಅಂದರೆ, ಈ ಹಿಂದೆ ವಸಾಹತುಶಾಹಿ ದಬ್ಬಾಳಿಕೆಯ ಮೂಲಕ ಜನರನ್ನು ಅಧೀನಗೊಳಿಸಿದ್ದಿರಬಹುದು. ಆದರೆ, ಅದು ಬಂಡವಾಳಶಾಹಿಯ ಸಹಜ ಸ್ವಭಾವವಲ್ಲ. ಮುಂದುವರೆದ ದೇಶಗಳಲ್ಲಿ ವರ್ಗ ಸಹಕಾರ ಮತ್ತು ಕಲ್ಯಾಣ ಪ್ರಭುತ್ವವನ್ನು ಕಾಪಾಡಿಕೊಳ್ಳುತ್ತಿರುವ ರೀತಿಯಲ್ಲಿಯೇ ಬಂಡವಾಳಶಾಹಿಯು ಅಂತಾರಾಷ್ಟ್ರೀಯ ಸಹಕಾರದ ಮೂಲಕ ಒಂದು ಶಾಂತಿಯುತ ರೀತಿಯಲ್ಲಿ ಕಾರ್ಯನಿರ್ವಹಿಸಬಲ್ಲದು ಎಂದು ನಂಬಲಾಗಿತ್ತು. ಟ್ರಂಪ್ ನಡವಳಿಕೆಯು ಬಂಡವಾಳಶಾಹಿಯ ಈ ಆದರ್ಶೀಕೃತ ಚಿತ್ರಣಕ್ಕಿಂತ ಭಿನ್ನವಾಗಿದೆ. ಅದು ಆತ ಒಬ್ಬ ಹೊಲಸು ವ್ಯಕ್ತಿ ಎಂಬುದರಿಂದಲ್ಲ, ಎಲ್ಲಕ್ಕಿಂತಲೂ ಮಿಗಿಲಾಗಿ, ಸ್ವತಃ ಈ ಆದರ್ಶೀಕೃತ ಚಿತ್ರಣವೇ ಅಸಮರ್ಥನೀಯವಾಗಿದೆ ಮತ್ತು ಟ್ರಂಪ್ ಅವರ ಹೊಲಸುತನ ಬಂಡವಾಳಶಾಹಿಯ ಸಮಕಾಲೀನ ಅವಶ್ಯಕತೆಗಳಿಗೆ ಹೊಂದಿಕೊಳ್ಳುತ್ತದೆಯಾದ್ದರಿಂದ.

ಇದು, ಮಾನವಕೋಟಿಯನ್ನು ಒಂದು ಅಸಾಧಾರಣ ಮಟ್ಟದ ಅಪಾಯಕಾರಿ ಪರಿಸ್ಥಿತಿಗೆ ತಳ್ಳುತ್ತಿರುವುದು ಡೊನಾಲ್ಡ್ ಟ್ರಂಪ್ ಅಲ್ಲ, ಬಂಡವಾಳಶಾಹಿಯೇ ಎಂಬುದನ್ನು ಸೂಚಿಸುತ್ತದೆ. ಸಮಾಜವಾದಿ ಸವಾಲಿನಿಂದಾಗಿ ವ್ಯವಸ್ಥೆ ದುರ್ಬಲವಾಗಿದ್ದ ಸಮಯದಲ್ಲಿ ದುಡಿಯುವ ಜನರ ಹೋರಾಟಗಳ ಮೂಲಕ ಸಾಧಿಸಲಾದ ಪ್ರಜಾಪ್ರಭುತ್ವ, ನಿರ್ವಸಾಹತೀಕರಣ ಮತ್ತು ಕಲ್ಯಾಣ ಪ್ರಭುತ್ವದಂತಹ ಐತಿಹಾಸಿಕ ಪ್ರಗತಿಗಳನ್ನು, ಈ ಸವಾಲು ಈಗ ತಗ್ಗಿದಂತೆ ತೋರುತ್ತಿರುವುದರಿಂದ, ಹಿಂದಕ್ಕೆ ತಳ್ಳಲು ಪ್ರಯತ್ನಿಸಲಾಗುತ್ತಿದೆ. ಆದರೆ ಜನರು ಸಾಧಿಸಿದ ಐತಿಹಾಸಿಕ ಪ್ರಗತಿಯ ಪ್ರಯತ್ನಗಳನ್ನು ಹೀಗೆ ಹಿಂದಕ್ಕೆ ತಳ್ಳುವ ಬಂಡವಾಳಶಾಹಿಯ ಈ ಆಕ್ರಮಣಕೋರ ಪ್ರಯತ್ನಗಳೇ ಸಮಾಜವಾದದ ಅಗತ್ಯವನ್ನು ಒತ್ತಿಹೇಳುತ್ತವೆ.

ಮಾನವಕುಲವು ಸಮಾಜವಾದ ಮತ್ತು ಅನಾಗರಿಕತೆಯ ನಡುವೆ ಒಂದು ಸ್ಪಷ್ಟವಾದ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ ಎಂಬುದನ್ನು ರೋಸಾ ಲಕ್ಸೆಂಬರ್ಗ್ ದೃಢವಾಗಿ ಹೇಳಿದ್ದರು. ಅವರ ಈ ಹೇಳಿಕೆಯನ್ನು ಇಂದು ಸಾಮ್ರಾಜ್ಯಶಾಹಿಯನ್ನು ಮುಳುಗದಂತೆ ಉಳಿಸುವ ಡೊನಾಲ್ಡ್ ಟ್ರಂಪ್ ಅವರ ಹತಾಶ ಹುಚ್ಚಾಟಗಳು ವಿಪುಲವಾಗಿ ಸಾಬೀತುಪಡಿಸುತ್ತವೆ.

 

Donate Janashakthi Media

Leave a Reply

Your email address will not be published. Required fields are marked *