ಬೆಳಗಾವಿ: ಇಂದು ಬೆಳಗಿನ ಜಾವ ಇನ್ಸ್ಪೆಕ್ಟರ್ ಓರ್ವವರು ತಮ್ಮ ತಂದೆಯ ಸಾವಿಗೆ ನ್ಯಾಯಕೊಡಬೇಕು ಎಂದು ಆಗ್ರಹಿಸಿ ಅವರ ಶವವನ್ನು ಪೊಲೀಸ್ ಠಾಣೆಯ ಎದುರಿಟ್ಟು ಪ್ರತಿಭಟಿಸಿದ ಘಟನೆ ಜಿಲ್ಲೆಯ ರಾಯಭಾಗ ತಾಲೂಕಿನ ಹಾರೂಗೇರಿಯಲ್ಲಿ ನಡೆದಿದೆ.
ಹಾರೂಗೇರಿ ಪೊಲೀಸ್ ಠಾಣೆ ಬಳಿ ವಿಜಯಪುರ ಜಿಲ್ಲೆಯ ದೇವದುರ್ಗ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಅಶೋಕ್ ಸದಲಗಿ ಎಂಬುವವರು ಪ್ರತಿಭಟನೆ ಮಾಡಿದ್ದು, ಠಾಣೆಯ ಪಿಎಸ್ಐ ಮಾಳಪ್ಪ ಪೂಜಾರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಧರಣಿ ನಡೆಸಿದ್ದಾರೆ.
ಕಳೆದ ತಿಂಗಳು ಜ.10ರಂದು ಅಶೋಕ ಸದಲಗಿ ತಂದೆ ಅಣ್ಣಪ್ಪ ಜಮೀನಿಗೆ ಬಾಬು ನಡೋಣಿ, ಪ್ರತಾಪ್ ಹರೋಲಿ, ವಸಂತ ಚೌಗಲಾ ಎಂಬುವವರು ಅಕ್ರಮವಾಗಿ ಪ್ರವೇಶಿದ್ದರು. ಇದನ್ನು ಪ್ರಶ್ನಿಸಿದ್ದಕ್ಕೆ ಆ ಗ್ಯಾಂಗ್ ಅಣ್ಣಪ್ಪ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪವಿದೆ.
ಇದನ್ನೂ ಓದಿ: ಪುಸ್ತಕ ವಿಮರ್ಶೆ | ಆರ್ ಬಿ ಮೋರೆ ಪುಸ್ತಕ ಮಥನಕ್ಕೆ ಅನವು ಮಾಡಿಕೊಡುತ್ತದೆ
ಈ ಕುರಿತು ಅಣ್ಣಪ್ಪ 112ಗೆ ಕರೆ ಮಾಡಿ ಪೊಲೀಸರನ್ನು ಸ್ಥಳಕ್ಕೆ ಕರೆಸಿದ್ದರು. ನಂತರದಲ್ಲಿ ಅಣ್ಣಪ್ಪ ಸೇರಿ ಹಲ್ಲೆ ಮಾಡಿದ್ದವರನ್ನು ಪೊಲೀಸರು ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ಮಾಡಿದ್ದಾರೆ. ಆದರೆ ದೂರನ್ನು ದಾಖಲಿಸಿಕೊಳ್ಳಲಿಲ್ಲ. ಅಣ್ಣಪ್ಪರನ್ನು ಇಡೀ ದಿನ ಠಾಣೆಯಲ್ಲಿ ಇರಿಸಿಕೊಂಡು ಕಿರುಕುಳ ನೀಡಿದ್ದಾರೆ. ಸಾಯಂಕಾಲ ಆಗುತ್ತಿದ್ದಂತೆ ಅವರಿಗೆ ಶುಗರ್ ಕಡಿಮೆಯಾಗಿ, ಬಿಪಿ ಹೆಚ್ಚಾಗಿ ಅಣ್ಣಪ್ಪ ತೀವ್ರ ಅಸ್ವಸ್ಥರಾಗಿದ್ದರು ಎಂದು ಅಶೋಕ್ ಸದಲಗಿ ಆರೋಪಿಸಿದ್ದಾರೆ.
ಇನ್ನು ಅಣ್ಣಪ್ಪರ ಇನ್ನೊಬ್ಬ ಪುತ್ರ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಿಸದೇ ಇಂದು ಅಪ್ಪಣ್ಣ ಮೃತಪಟ್ಟಿದ್ದಾರೆ. ಠಾಣೆಯಲ್ಲಿ ಕಿರುಕುಳ ನೀಡಿದ್ದಕ್ಕೆ ತಮ್ಮ ತಂದೆಯ ಸಾವಾಗಿದೆ. ಅಲ್ಲದೇ ಸಹೋದರನ ವಿರುದ್ಧ ಸುಳ್ಳು ಕೇಸ್ ದಾಖಲಿಸಿದ್ದಾರೆ ಎಂದು ಮೃತ ಅಪ್ಪಣ್ಣ ಪುತ್ರ ಇನ್ಸ್ಪೆಕ್ಟರ್ ಅಶೋಕ್ ಠಾಣೆ ಎದುರು ನ್ಯಾಯಕ್ಕಾಗಿ ಒತ್ತಾಯಿಸಿ ಪ್ರತಿಭಟನೆ ಮಾಡಿದ್ದಾರೆ.
ಇದನ್ನೂ ನೋಡಿ: ‘ಉಪ್ಪಿಟ್ಟು ಬೇಡ.. ಬಿರಿಯಾನಿ, ಚಿಕನ್ ಫ್ರೈ ಬೇಕು’ ಅಂಗನವಾಡಿ ಬಾಲಕನ ಬೇಡಿಕೆಗೆ ಸ್ಪಂದಿಸಿದ ಎಡರಂಗ ಸರ್ಕಾರ