‘“ಬುಲ್‍ಡೋಜರ್ ನ್ಯಾಯ”ದ  ವಿರುದ್ಧ ತೀರ್ಪು: ಬೃಂದಾ ಕಾರಟ್‍ ಸ್ವಾಗತ

ನವದೆಹಲಿ : ಬುಲ್‍ಡೋಜರ್ ಕ್ರಮಗಳು ಕಾನೂನುಬಾಹಿರ ಮತ್ತು ದುರುದ್ದೇಶಪೂರ್ಣವಾದದ್ದು ಎಂದಿರುವ ಸುಪ್ರಿಂ ಕೋರ್ಟಿನ ತೀರ್ಪನ್ನು ಸ್ವಾಗತಿಸುತ್ತೇನೆ. ಇದು ಈ ಹಿಂದೆಯೇ ಬರಬೇಕಾಗಿತ್ತು, ಬಿಜೆಪಿ ನೇತೃತ್ವದ ರಾಜ್ಯಗಳಲ್ಲಿ ಹಲವಾರು ಮನೆಗಳನ್ನು ಕೆಡವಿ ಹಾಕದಂತೆ ಉಳಿಸಬಹುದಾಗಿತ್ತು” ಎಂದು ಸಿಪಿಐ(ಎಂ)ನ ಹಿರಿಯ ಮುಖಂಡರಾದ ಬೃಂದಾ ಕಾರಟ್‍ ಹೇಳಿದ್ದಾರೆ.

‘ಬುಲ್‍ಡೋಜರ್‍ ನ್ಯಾಯ’ದ ಹೆಸರಲ್ಲಿ ಸರಕಾರ ಯಾವುದೇ ಕಟ್ಟಡವನ್ನು ಧ್ವಂಸ ಮಾಡುವಂತಿಲ್ಲ, ಅದು ಕಾನೂನುಹೀನತೆಯಾಗುತ್ತದೆ. ಸರಕಾರಗಳು ನ್ಯಾಯಾಧೀಶರಾಗಿ ರೂಪಾಂತರಗೊಂಡು, ವಿಚಾರಾಣಾಧೀನ ಆಪಾದಿತ ವ್ಯಕ್ತಿಗಳ ಮನೆಗಳಿಗೆ ಬುಲ್‍ಡೋಜರ್ ಗಳನ್ನು ನುಗ್ಗಿಸುವುದು  ಬೆಳಗು ಹರಿಯುವಷ್ರಲ್ಲಿ ಕುಟುಂಬಗಳನ್ನು ಆಶ್ರಯಹೀನರಾಗಿಸುತ್ತದೆ ಎಂಬ ಬಗ್ಗೆ ಯೋಚನೆಯನ್ನೂ ಮಾಡದ ಭುಜಬಲದ ನಗ್ನ ಪ್ರದರ್ಶನವಾಗುತ್ತದೆ ಎಂದು ದೇಶದ ಸರ್ವೋಚ್ಚ ನ್ಯಾಯಾಲಯ ನವಂಬರ್‍ 13ರಂದು ತನ್ನ ತೀರ್ಪಿನಲ್ಲಿ ಕಟುವಾಗಿ ಹೇಳಿರುವ ಬಗ್ಗೆ ಟಿಪ್ಪಣಿ ಮಾಡುತ್ತ ಅವರು ಹೀಗೆ ಹೇಳಿದ್ದಾರೆ.

ಸರಕಾರಗಳ ‘ಬುಲ್‍ಡೋಜರ್‍ ಸಂಸ್ಕೃತಿ’ಯಿಂದ  ಪರಿಹಾರ ಒದಗಿಸಬೇಕು ಎಂದು ಉತ್ತರಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ದಿಲ್ಲಿಯ ನಾಗರಿಕರು ಸಲ್ಲಿಸಿದ ಅರ್ಜಿಗಳ ವಿಚಾರಣೆ ಮಾಡಿದ ದೇಶದ ಸರ್ವೋಚ್ಚ ನ್ಯಾಯಾಲಯ ಈ ತೀರ್ಪು ನೀಡಿದೆ. ಬೃಂದಾ ಕಾರಟ್‍ ಅವರೂ ಈ ಅರ್ಜಿದಾರಲ್ಲಿ ಒಬ್ಬರು. ಅವರು, ಎರಡೂವರೆ ವರ್ಷಗಳ ಹಿಂದೆ ,ಎಪ್ರಿಲ್‍ 20, 2022 ರಂದು ದಿಲ್ಲಿಯ ಜಹಂಗೀರ್‍ಪುರದಲ್ಲಿ ಅಲ್ಪಸಂಖ್ಯಾತರ  ಮನೆ ಮತ್ತು ಜೀವನಾಧಾರಗಳ ಧ್ವಂಸ ಕಾರ್ಯದಲ್ಲಿ ತೊಡಗಿದ್ದ ಬುಲ್‍ಡೋಜರನ್ನು ಧೈರ್ಯದಿಂದ ಅಡ್ಡಗಟ್ಟಿ ನಿಂತು ಅದು  ನಿಲ್ಲುವಂತೆ ಮಾಡಿದ್ದರು  ಎಂಬುದನ್ನೂ ಇಲ್ಲಿ ನೆನಪಿಸಿಕೊಳ್ಳಬಹುದು.

ಈಗಲಾದರೂ ಈ ತೀರ್ಪು ಬಂದಿದೆ. ಇದು ಬಡವರನ್ನು , ವಿಶೇಷವಾಗಿ ಅಲ್ಪಸಂಖ್ಯಾತ ಸಮುದಾಯಗಳ ಬಡವರನ್ನು ಗುರಿಯಿಟ್ಟು ಬಿಜೆಪಿ ನಡೆಸಿರುವ ಧ್ವಂಸಕಾರ್ಯದಿಂದ  ನರಳುತ್ತಿರುವವರಿಗೆ, ಮತ್ತು ಭವಿಷ್ಯದಲ್ಲಿಯೂ ಇಂತಹ ಕೃತ್ಯಗಳಿಂದ ನರಳಬಹುದಾದವರಿಗೆ  ನ್ಯಾಯ ಒದಗಿಸಿದೆ ಎಂದು ಬೃಂದಾ ಕಾರಟ್‍ ಮುಂದುವರೆದು ಹೇಳಿದ್ದಾರೆ.

ದಿಲ್ಲಿಯಲ್ಲಿ ಬುಲ್‍ಡೋಜರ್‍ ಕ್ರಮಗಳ ವಿರುದ್ಧ  ಬೃಂದಾ ಕಾರಟ್‍ ನೇತೃತ್ವದಲ್ಲಿ ಬಲವಾದ  ಪ್ರತಿರೋಧ ಒಡ್ಡಿರುವ ಸಿಪಿಐ(ಎಂ)ನ ದಿಲ್ಲಿ ರಾಜ್ಯ ಸಮಿತಿ ನ್ಯಾಯ ಮೂರ್ತಿಗಳಾದ ಬಿ.ಆರ್ ಗವಯಿ ಮತ್ತು ಕೆ ವಿ ವಿಶ್ವನಾಥನ್‍ ನ್ಯಾಯಪೀಠದ ಈ ತೀರ್ಪು ‘ಬುಲ್‍ಡೋಜರ್ ರಾಜಕೀಯ’ಕ್ಕೆ  ನೀಡಿರುವ ಕಪಾಳಮೋಕ್ಷ ಎಂದು ಹೇಳಿದೆ.  ನಮ್ಮ ಸಂವಿಧಾನದಲ್ಲಿ ಇಂಹ ಕೃತ್ಯಗಳಿಗೆ ಜಾಗವಿಲ್ಲ, ಆಡಳಿತದ ಇಂತಹ ಅನುಚಿತ ಮತ್ತು ಸ್ವೇಚ್ಛಾಚಾರದ ಕ್ರಮಗಳ ವಿರುದ್ಧ  ಕಾನೂನಿನ ಪ್ರಕಾರ ಕಠಿಣವಾಗಿ ವರ್ತಿಸಲಾಗುವುದು  ಎಂದು ಎಚ್ಚರಿಸಿರುವುದನ್ನು ಅದು ಸ್ವಾಗತಿಸಿದೆ.

ಉತ್ತರಪ್ರದೇಶದ ಮುಖ್ಯಮಂತ್ರಿ . ದಿಲ್ಲಿಯ ಉಪರಾಜ್ಯಪಾಲ, ಹರ್ಯಾಣ ಮತ್ತು ಉತ್ತರಾಖಂಡದಲ್ಲನ ಅಧಿಕಾರಸ್ಥರು ಸೇರಿದಂತೆ  ಈ ಕಾನೂನುಹೀನತೆಯಲ್ಲಿ ತೊಡಗಿರುವವರನ್ನು, ಅವರ ಬಂಟರಾಗಿ ಕೆಲಸ ಮಾಡುತ್ತಿರುವ ಅಧಿಕಾರಶಾಹಿಗಳನ್ನು  ಕಟಕಟೆಯಲ್ಲಿ ನಿಲ್ಲಿಸಬೇಕು ಎಂದಿರುವ ಸಿಪಿಐ(ಎಂ) ದಿಲ್ಲಿ ರಾಜ್ಯಸಮಿತಿ  ಇಂತಹ ಸಂವಿಧಾನ ಬಾಹಿರ ಮತ್ತು ಕಾನೂನುಬಾಹಿರ ಕ್ರಮಗಳು ಉಂಟು ಮಾಡುತ್ತಿರುವ ನಷ್ಟವನ್ನು ರಾಜಕೀಯ ಮುಖಂಡರಿಂದ  ಹಿಡಿದು ಅಧಿಕಾರಶಾಹಿಗಳ ವರೆಗೂ ಎಲ್ಲರೂ ಭರಿಸುವಂತೆ ಮಾಡಬೇಕು ಎಂದು ಆಗ್ರಹಿಸಿದೆ.

Donate Janashakthi Media

Leave a Reply

Your email address will not be published. Required fields are marked *