ಹೊಸಪೇಟೆ (ವಿಜಯನಗರ): ರೈತರ ಹಾಗೂ ಬಡವರ ಬದುಕನ್ನು ಸುಧಾರಿಸಲು, 40% ಕಮಿಷನ್ ಸರ್ಕಾರವನ್ನು ಕಿತ್ತುಹಾಕಿ, 2023ರ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಪೂರ್ಣ ಪ್ರಮಾಣದ ಸ್ವತಂತ್ರ ಅಧಿಕಾರ ಕೊಡಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮನವಿ ಮಾಡಿದ್ದಾರೆ.
ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿಯಲ್ಲಿ ಜನತಾ ಜಲಧಾರೆ ಕಾರ್ಯಕ್ರಮ ಉದ್ಘಾಟಿಸಿದ ಎಚ್ ಡಿ ಕುಮಾರಸ್ವಾಮಿ ರಾಜ್ಯದ 15 ಪ್ರಮುಖ ನದಿಗಳ ನೀರನ್ನು 15 ಕಳಸದಲ್ಲಿ ಸಂಗ್ರಹಿಸಿ ವಾಹನದಲ್ಲಿಟ್ಟು ಜನತೆಯಲ್ಲಿ ಜಾಗೃತಿ ಮಾಡುವ ಕಾರ್ಯಕ್ರಮವೇ ಜನತಾ ಜಲಧಾರೆ ಕಾರ್ಯಕ್ರಮ ಎಂದರು.
ಮುಂದುವರೆದು ಮಾತನಾಡಿದ ಅವರು, ರಾಜ್ಯದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್, ಬಿಜೆಪಿ ಸರ್ಕಾರಗಳು ರೈತರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಿಲ್ಲ. ನೀರಿನ ಹಂಚಿಕೆ ವಿಚಾರದಲ್ಲಿ ಸಮಸ್ಯೆಗಳಿವೆ. ಈ ಸರ್ಕಾರಗಳ ನಡವಳಿಕೆ ನೋಡಿದರೆ, ಇನ್ನೂ 100 ವರ್ಷವಾದರೂ ಸಮಸ್ಯೆ ಬಗೆಹರೆಯಲ್ಲ ಎಂದು ಟೀಕಿಸಿದರು.
ನೀರಾವರಿ ಯೋಜನೆಗಳು ವಿಳಂಬ
ತುಂಗಭದ್ರಾ ಜಲಾಶಯದ ಹೂಳನ್ನು ತೆಗೆಸುವ ಕೆಲಸ ಮಾಡಿಲ್ಲ. ಕೃಷ್ಣಾ ಮೇಲ್ದಂಡೆ, ಮಹಾದಾಯಿ ಯೋಜನೆಗಳು ಹಾಗೆಯೇ ಉಳಿದುಕೊಂಡಿವೆ. ನಿಮ್ಮ ಬದುಕು, ಮಕ್ಕಳ ಭವಿಷ್ಯದ ದೃಷ್ಟಿಯಿಂದ ಜೆಡಿಎಸ್ ಗೆಲ್ಲಿಸಿ. ಪ್ರತಿ ರೈತರ ಜಮೀನಿಗೆ ನೀರು ಕೊಡ್ತೀನಿ. ಇಲ್ಲವಾದಲ್ಲಿ ನಾನು ಪಕ್ಷವನ್ನು ವಿಸರ್ಜನೆ ಮಾಡ್ತೀನಿ ಎಂದು ಎಚ್ ಡಿ ಕುಮಾರಸ್ವಾಮಿ ಘೋಷಿಸಿದರು.
ಈಗ ಆಡಳಿತ ನಡೆಸ್ತಿರೋ ಬಿಜೆಪಿ ಸರಕಾರಕ್ಕೆ, 40 ಪರ್ಸೆಂಟ್ ಸರಕಾರ ಅಂತಾರೆ, ಹಗರಣದ ಸರಕಾರ ಅಂತಾರೆ. ಇಂತಹ ಸರಕಾರ ತೊಲಗಿಸಿ ಜೆಡಿಎಸ್ ಪಕ್ಷಕ್ಕೆ ಅಧಿಕಾರ ಕೊಟ್ರೆ ಪಂಚರತ್ನ ಯೋಜನೆ ಮನೆಮನೆಗೂ ತಲುಪಿಸ್ತೀನಿ. ಒಂದು ಪೈಸೆ ಖರ್ಚಿಲ್ಲದೆ ಉಚಿತ ಶಿಕ್ಷಣ, ಪ್ರತಿ ಪಂಚಾಯತಿ ಮಟ್ಟದಲ್ಲಿ 30 ಹಾಸಿಗೆ ಆಸ್ಪತ್ರೆ, ರೈತರ ಯುವಕರ ಬದುಕು ಕಟ್ಟೋಕೆ ಯೋಜನೆ, ಪ್ರತಿ ಕುಟುಂಬಕ್ಕೆ ಮನೆಯನ್ನು ಕೊಡ್ತೇನೆ ಎಂದರು.
ಹಿಂದೂ ಮುಸಲ್ಮಾನ ಬಂಧುಗಳು ನಡುವೆ ಬಿಜೆಪಿ ಯಾವ ರೀತಿ ನಡೆದುಕೊಳ್ತಿದೆ ಅಂತ ನಿಮಗೇ ಗೊತ್ತು. 2023ರ ಚುನಾವಣೆ ನಿಮ್ಮ ಬದುಕನ್ನು ಸರಿಪಡಿಸೋಕೆ ಪರ್ಸೆಂಟೇಜ್ ಸರಕಾರ ತೆಗೆಯೋಕೆ ಅವಕಾಶ ಮಾಡಿಕೊಡಿ. ಮುಂದೆ ಇಲ್ಲಿಗೆ ಬಂದು ದೊಡ್ಡ ಕಾರ್ಯಕ್ರಮ ಮಾಡ್ತೀನಿ ಎಂದು ಎಚ್‌ಡಿ ಕುಮಾರಸ್ವಾಮಿ ಹೇಳಿದರು.