ರಾಜಧಾನಿಯಲ್ಲಿ ಹಲವು ಶಾಲೆಗಳಿಗೆ ಬಾಂಬ್ ಬೆದರಿಕೆ

ಬೆಂಗಳೂರು: ರಾಜಧಾನಿ ಬೆಂಗಳೂರಿನ 15 ಶಾಲೆಗಳ ಆಡಳಿತ ಮಂಡಳಿಯ ಇ-ಮೇಲ್​ಗೆ ಬೆದರಿಕೆ ಸಂದೇಶಗಳು ಬಂದಿವೆ.

ಬಸವೇಶ್ವರ ನಗರದ ನ್ಯಾಷನಲ್, ವಿದ್ಯಾಶಿಲ್ಪ, ಎನ್​​ಪಿಎಸ್, ಕಾರ್ಮೆಲ್, ಹೆಬ್ಬಗೋಡಿಯ ಎಬಿನೈಜರ್ ಸೇರಿದಂತೆ 15 ಶಾಲೆಗಳಿಗೆ ಬೆದರಿಕೆ ಸಂದೇಶ ಕಳುಹಿಸಲಾಗಿದೆ. ಎಂದಿನಂತೆ‌ ಶಾಲೆಗಳು ಆರಂಭವಾಗುತ್ತಿದ್ದಂತೆ, ಶಾಲೆಗಳ ಇಮೇಲ್‌ ಪರಿಶೀಲಿಸಿದ್ದು, ಬೆದರಿಕೆ ಸಂದೇಶ ಬಂದಿದ್ದು ಗೊತ್ತಾಗಿದೆ. ಕೂಡಲೇ ಶಾಲಾ ಆಡಳಿತ ಮಂಡಳಿಗಳು ಮಕ್ಕಳನ್ನು ಶಾಲೆಯಿಂದ ಹೊರ ಕಳುಹಿಸಿದ್ದಾರೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದರು. ಬಾಂಬ್ ನಿಷ್ಕ್ರಿಯ ಸಿಬ್ಬಂದಿಯೂ ಸ್ಥಳಕ್ಕೆ ಆಗಮಿಸಿ ಶೋಧ ಕಾರ್ಯ ನಡೆಸಿದರು. ಇದೊಂದು ಹುಸಿ ಬಾಂಬ್‌ ಬೆದರಿಕೆ ಕರೆ ಎಂದು ಪೊಲೀಸರು ಪ್ರತಿಕ್ರಿಯಿಸಿದ್ದಾರೆ. ಬಾಂಬ್ ಬೆದರಿಕೆ ಸಂದೇಶ ತಿಳಿಯುತ್ತಿದ್ದಂತೆ ಪೋಷಕರು ಆತಂಕ ವ್ಯಕ್ತಪಡಿಸಿ ಸ್ಥಳಕ್ಕೆ ಬಂದು ತಮ್ಮ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದರು. ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಶಾಲೆಗಳಿಗೆ ಭೇಟಿ ನೀಡಿದರು.

“ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಇಂತಹ ಘಟನೆಗಳು ಮರುಕಳಿಸದಂತೆ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಮೂಲ‌ ಪತ್ತೆ ಹಚ್ಚುವವರೆಗೂ ಬಿಡುವುದಿಲ್ಲ. ತುಮಕೂರಿನಿಂದ ಬೆಂಗಳೂರಿಗೆ ವಾಪಸ್ ಆದ ನಂತರ ಇಲಾಖೆಯ ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಪಡೆಯುತ್ತೇನೆ. ಪೋಷಕರು, ಮಕ್ಕಳು ಆತಂಕಪಡುವುದು ಬೇಡ” ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಇದನ್ನೂ ಓದಿ:ಜಾತಿ ಗಣತಿ ವರದಿ ನವೆಂಬರ್‌ನಲ್ಲಿ ಸಲ್ಲಿಸುವ ನಿರೀಕ್ಷೆ: ಸಿಎಂ ಸಿದ್ದರಾಮಯ್ಯ

“ಬಸವೇಶ್ವರ ನಗರದ ವಿದ್ಯಾಶಿಲ್ಪ ಶಾಲೆ ಸೇರಿದಂತೆ 7 ಶಾಲೆಗೂ ಬೆದರಿಕೆ ಮೇಲ್ ಫಾರ್ವರ್ಡ್ ಆಗಿದೆ. ಯಾರೂ ಗಾಬರಿ ಬೀಳುವ ಅಗತ್ಯವಿಲ್ಲ. ಪೊಲೀಸರು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ. ಇಂದು ಬೆಳಿಗ್ಗೆ 6.10ಕ್ಕೆ ಇಮೇಲ್ ಬಂದಿದೆ” ಎಂದು ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

“ಕಾರ್ಮೆಲ್ ಶಾಲೆ ಸೇರಿ ಬಸವೇಶ್ವರ ನಗರದ ಎಲ್ಲ ಇಳು ಶಾಲೆಗಳಿಗೆ ಬಾಂಬ್ ಬೆದರಿಕೆ ಸಂದೇಶ ಬಂದಿದೆ. ಎಲ್ಲೆಡೆ ಆತಂಕ ಉಂಟಾಗಿದೆ. ಯಾರೂ ಆತಂಕಪಡದಂತೆ ನೋಡಿಕೊಳ್ಳುತ್ತಿದ್ದೇವೆ” ಎಂದು ಕಾರ್ಮೆಲ್ ಶಾಲೆಯ ಕಾರ್ಯದರ್ಶಿ ಗಂಗಾಧರ್ ತಿಳಿಸಿದರು.

ಆನೇಕಲ್​ನ ಶಾಲೆಗಳಿಗೂ ಬೆದರಿಕೆ: ಆನೇಕಲ್‌ನ ಶಾಲೆಗಳಿಗೂಬಾಂಬ್ ಬೆದರಿಕೆ ಸಂದೇಶ ಬಂದಿರುವ ಹಿನ್ನೆಲೆಯಲ್ಲಿ ಎಬಿನೈಜರ್ ಶಾಲೆಗೆ ಹೆಬ್ಬಗೋ ಡಿ ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯ ದಳ ಆಗಮಿಸಿ, ಶೋಧ ಕಾರ್ಯ ನಡೆಸಿತು. ‘ಉದ್ದೇಶಪೂರ್ವಕವಾಗಿ ಬೆದರಿಕೆ ಸಂದೇಶ ಕುಳುಹಿಸಿದ್ದಾರೆ, ಮೇಲ್ನೋಟಕ್ಕೆ ಇದು ಹುಸಿ ಬೆದರಿಕೆ ಸಂದೇಶದಂತೆ ತೋರುತ್ತಿದೆ’ ಎಂದು ಹೆಬ್ಬಗೋಡಿ ಪೊಲೀಸರು ತಿಳಿಸಿದರು.

ಹಗುರವಾಗಿ ನೋಡುವ ಪ್ರಶ್ನೆಯೇ ಇಲ್ಲ: ಮಧು ಬಂಗಾರಪ್ಪ

ಬೆಂಗಳೂರಿನ ಶಾಲೆಗಳಿಗೆ ಬಂದಿರುವ ಬಾಂಬ್ ಬೆದರಿಕೆ ಪ್ರಕರಣವನ್ನು ಹಗುರವಾಗಿ ನೋಡುವ ಪ್ರಶ್ನೆಯೇ ಇಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.

ಸಾಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾಂಬ್ ಬೆದರಿಕೆ ಬಗ್ಗೆ ಮಾಧ್ಯಮದಲ್ಲಿ ತೋರಿಸುತ್ತಿದ್ದೀರಿ. ಅದು ಸ್ವಲ್ಪ ಹೋಪ್ಸ್ ತರ ಕಾಣುತ್ತಿದೆ. ಯಾವುದನ್ನು ಹಗುರವಾಗಿ ತೆಗೆದುಕೊಳ್ಳುವ ಹಾಗೆ ಇಲ್ಲ. ಇದು ಮಕ್ಕಳ ವಿಚಾರ. ಶಾಂತಿಯನ್ನು ಕದಡುವ ಕೆಲಸ ಮಾಡಿದ್ದಾರೆ ಎಂದರು.
ಬೆದರಿಕೆ ಬಂದಿರುವ ಶಾಲೆಗಳಿಗೆ ರಕ್ಷಣೆ ಕೊಡುತ್ತೇವೆ. ಈ ಬಗ್ಗೆ ಗೃಹ ಸಚಿವರ ಜೊತೆ, ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಹಗುರವಾಗಿ ನೋಡುವ ಪ್ರಶ್ನೆಯೇ ಇಲ್ಲ. ಪೋಷಕರಿಗೆ ಬಹಳ ಆತಂಕ ಇರುತ್ತದೆ. ಯಾರು ಹೆದರುವುದು ಬೇಡ ಧೈರ್ಯವಾಗಿರಿ ಎಂದು ಸಚಿವರು ತಿಳಿಸಿದ್ದಾರೆ
Donate Janashakthi Media

Leave a Reply

Your email address will not be published. Required fields are marked *