ವಾಷಿಂಗ್ಟನ್: ನ್ಯೂಯಾರ್ಕ್‌ನಿಂದ ದೆಹಲಿಗೆ ಹೋಗುತ್ತಿದ್ದ ಅಮೇರಿಕನ್ ಏರ್‌ಲೈನ್ಸ್ ವಿಮಾನಕ್ಕೆ ಬಾಂಬ್ ಬೆದರಿಕೆ ಬಂದ ಹಿನ್ನಲೆಯಲ್ಲಿ ವಿಮಾನವನ್ನು ಮುಂಜಾಗ್ರತಾ ಕ್ರಮವಾಗಿ ರೋಮ್ ಗೆ ಮಾರ್ಗ ಬದಲಾವಣೆ ಮಾಡಲಾಗಿದ್ದು, ರಕ್ಷಣೆಗೆ 2 ಫೈಟರ್ ಜೆಟ್ ವಿಮಾನಗಳನ್ನು ನಿಯೋಜಿಸಿದ ಘಟನೆ ನಡೆದಿದೆ.
ಭಾನುವಾರ ಮಧ್ಯಾಹ್ನ (ಸ್ಥಳೀಯ ಸಮಯ) “ಬಾಂಬ್ ದಾಳಿ ಬೆದರಿಕೆ”ಯ ನಂತರ ನ್ಯೂಯಾರ್ಕ್‌ನಿಂದ ದೆಹಲಿಗೆ ಹೋಗುತ್ತಿದ್ದ ಅಮೆರಿಕನ್ ಏರ್‌ಲೈನ್ಸ್ ವಿಮಾನವನ್ನು ರೋಮ್‌ಗೆ ತಿರುಗಿಸಲಾಯಿತು. ಈ ವೇಳೆ ಇಟಲಿ ವಾಯುಪಡೆಯ ಎರಡು ಯುರೋ ಫೈಟರ್ ಜೆಟ್‌ಗಳು ವಿಮಾನಕ್ಕೆ ರಕ್ಷಣೆಯಾಗಿ ಹಾರಾಟ ನಡೆಸಿದ ವಿಡಿಯೋ ವೈರಲ್ ಆಗುತ್ತಿದೆ. ಇಟಲಿ ವಾಯುಪಡೆಯು ಬಿಡುಗಡೆ ಮಾಡಿದ ದೃಶ್ಯಗಳು ವಾಣಿಜ್ಯ ವಿಮಾನದ ಎರಡೂ ಬದಿಗಳಲ್ಲಿ ಫೈಟರ್ ಜೆಟ್‌ಗಳು ರೋಮ್‌ನ ಫಿಯುಮಿಸಿನೊ ವಿಮಾನ ನಿಲ್ದಾಣದವರೆಗೂ ಕಾವಲು ಕಾಯುತ್ತಿರುವುದನ್ನು ತೋರಿಸುತ್ತವೆ.
ಇದನ್ನು ಓದಿ: ಬೆಂಗಳೂರು| ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಷಿಗೆ 1 ಲಕ್ಷ ರೂ. ದಂಡ
ಇಟಲಿ ವಾಯುಪಡೆಯು ಸಾಮಾಜಿಕ ಮಾಧ್ಯಮದಲ್ಲಿ ನೀಡಿರುವ ಮಾಹಿತಿಯಂತೆ ಏರೋನಾಟಿಕಾಮಿಲಿಟೇರ್‌ನ ಎರಡು ಯೂರೋಫೈಟರ್ ಜೆಟ್ ಗಳು ದೆಹಲಿಗೆ ಹೋಗುತ್ತಿದ್ದ ವಾಣಿಜ್ಯ ವಿಮಾನವನ್ನು ಗುರುತಿಸಲು ಮತ್ತು ಬೆಂಗಾವಲು ಮಾಡಲು ಜಾಗರೂಕತೆಯಿಂದ ಹೊರಟವು ಎಂದು ಹೇಳಿದೆ. ಅಂತೆಯೇ ವಾಣಿಜ್ಯ ವಿಮಾನದಲ್ಲಿ ಶಂಕಿತ ಸ್ಫೋಟಕ ಸಾಧನ ಇರುವ ಬಗ್ಗೆ ಬೆದರಿಕೆ ಬಂದ ಹಿನ್ನಲೆಯಲ್ಲಿ ವಿಮಾನವನ್ನು ಮುಂಜಾಗ್ರತಾ ಕ್ರಮವಾಗಿ ಫಿಯುಮಿಸಿನೊ ವಿಮಾನ ನಿಲ್ದಾಣ (RM) ಕಡೆಗೆ ಮಾರ್ಗ ಬದಲಾವಣೆ ಮಾಡಲಾಗಿದೆ ಎಂದು ಹೇಳಿದೆ.
ಇನ್ನು ವಿಮಾನದಲ್ಲಿನ ರೋಚಕ ಕ್ಷಣಗಳನ್ನು ವಿವರಿಸಿರುವ ಪ್ರಯಾಣಿಕ ಐಟಿ ಸಲಹೆಗಾರ ಮಹೇಶ್ ಕುಮಾರ್ ಅವರು, ‘ಯುದ್ಧ ವಿಮಾನಗಳು ನಮ್ಮ ವಿಮಾನದ ಬಳಿ ಇರುವಾಗ ಸುತ್ತಲೂ ಓಡಾಡದಂತೆ ಸಿಬ್ಬಂದಿ ನಮ್ಮನ್ನು ಕುಳಿತುಕೊಳ್ಳಲು ಕೇಳಿಕೊಂಡರು” ಎಂದು ಹೇಳಿದ್ದಾರೆ.
ಫ್ಲೈಟ್ ಟ್ರ್ಯಾಕರ್ ಫ್ಲೈಟ್ ಅವೇರ್ ಪ್ರಕಾರ, ಅಮೆರಿಕನ್ ಏರ್ಲೈನ್ಸ್ ವಿಮಾನ AA292 ನ್ಯೂಯಾರ್ಕ್ನ ಜಾನ್ ಎಫ್ ಕೆನಡಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಶನಿವಾರ (ಫೆಬ್ರವರಿ 22) ರಾತ್ರಿ 8.11 ರ ಸುಮಾರಿಗೆ (ಸ್ಥಳೀಯ ಸಮಯ) ಟೇಕ್ ಆಫ್ ಆಗಿತ್ತು. ವಿಮಾನ ಕ್ಯಾಸ್ಪಿಯನ್ ಸಮುದ್ರದ ಮೇಲೆ ಹಾರುವಾಗ ಅದರ ಮಾರ್ಗ ಬದಲಾವಣೆ ಮಾಡಲಾಗಿದೆ. ವಿಮಾನ ದೆಹಲಿಯಲ್ಲಿ ಇಳಿಯುವ ಸುಮಾರು ಮೂರು ಗಂಟೆಗಳ ಮೊದಲು, ಪೈಲಟ್ “ಭದ್ರತಾ ಕಾರಣಗಳಿಂದ” ವಿಮಾನವನ್ನು ರೋಮ್ ಗೆ ತಿರುಗಿಸುವುದಾಗಿ ಘೋಷಿಸಿದರು ಎಂದು ಕುಮಾರ್ ಹೇಳಿದರು.
ಈ ವೇಳೆ ವಿಮಾನದಲ್ಲಿದ್ದ “ಎಲ್ಲರೂ ಭಯಭೀತರಾಗಿದ್ದರು. ಎಲ್ಲರೂ ಮೌನವಾಗಿದ್ದರು ಮತ್ತು ಆದೇಶಗಳನ್ನು ಪಾಲಿಸುತ್ತಿದ್ದರು” ಎಂದು ಕುಮಾರ್ ತಿಳಿಸಿದ್ದಾರೆ.
ಮೂಲಗಳ ಪ್ರಕಾರ ಈ ಅಮೆರಿಕನ್ ವಿಮಾನದಲ್ಲಿ ಮಾರ್ಗದಲ್ಲಿ 199 ಪ್ರಯಾಣಿಕರು ಮತ್ತು ಸಿಬ್ಬಂದಿ ವಿಮಾನದಲ್ಲಿದ್ದರು ಎನ್ನಲಾಗಿದೆ.
ಇದನ್ನು ಓದಿ: ಹಾಸನ| ರೀಲ್ಸ್ ಮಾಡಲೆಂದು ಬೆಟ್ಟದ ತುದಿಯಲ್ಲಿ ನಿಂತು ಪ್ರಪಾತಕ್ಕೆ ಬಿದ್ದ ಯುವಕ