ಬೆಂಗಳೂರು: ಲಾಕ್ಡೌನ್ನಿಂದ ಸಾಮಾನ್ಯ ಜನರು ಕೆಲಸವಿಲ್ಲದೆ ಒಂದು ಹೊತ್ತು ಊಟಕ್ಕೂ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯ ಸರ್ಕಾರ ಯಾವಾಗ ಅನ್ಲಾಕ್ ಘೋಷಿಸುತ್ತದೆ ಎಂದು ಕಾದು ಕೂತಿದ್ದಾರೆ. ಈ ನಡುವೆ ಬಿಎಂಟಿಸಿ ಪ್ರಯಾಣಿಕರ ಜೇಬಿಗೆ ಕತ್ತರಿ ಬೀಳುವ ಸಾಧ್ಯತೆಯಿದೆ. ಲಾಕ್ಡೌನ್ ತೆರವುಗೊಂಡ ಬಳಿಕ ಬಿಎಂಟಿಸಿ ಟಿಕೆಟ್ ದರ ಶೇಕಡಾ 20ರಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ : ಕರ್ನಾಟಕದಲ್ಲೂ ಶತಕ ಬಾರಿಸಿದ ಪೆಟ್ರೋಲ್
ಕಳೆದ ಬಾರಿ ಬಜೆಟ್ ಸಂದರ್ಭದಲ್ಲಿ ದರ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಸರ್ಕಾರ ಬಿಎಂಟಿಸಿ ಪ್ರಸ್ತಾವನೆಯನ್ನು ತಿರಸ್ಕರಿಸಿತ್ತು. ಈಗ ಡೀಸೆಲ್ ದರ ಬಾರಿ ಹೆಚ್ಚಳವಾಗಿರುವ ಹಿನ್ನೆಲೆ ಮತ್ತೊಮ್ಮೆ ಟಿಕೆಟ್ ದರ ಹೆಚ್ಚಳಕ್ಕೆ ಬಿಎಂಟಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಶೇ.18ರಿಂದ 20ರಷ್ಟು ದರ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದ್ದು, ಬಿಎಂಟಿಸಿ ಸಲ್ಲಿಕೆಯನ್ನು ಸರ್ಕಾರ ಒಪ್ಪುವ ಸಾಧ್ಯತೆ ಹೆಚ್ಚಿದೆ.
ಕಳೆದ ವರ್ಷ ಜೂನ್ನಲ್ಲಿ 65.85 ರೂಪಾಯಿ ಇದ್ದ ಡಿಸೇಲ್ ಬೆಲೆ, ಈ ವರ್ಷ ಜೂನ್ನಲ್ಲಿ 91.18 ರೂಪಾಯಿ ಹೆಚ್ಚಳವಾಗಿದೆ. ಒಂದು ವರ್ಷದಲ್ಲಿ ಡಿಸೇಲ್ ಬೆಲೆಯಲ್ಲಿ 25 ರೂಪಾಯಿ ಹೆಚ್ಚಳವಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಇನ್ನಷ್ಟು ಡಿಸೇಲ್ ಬೆಲೆ ಏರಿಕೆಯಾಗುತ್ತಲೆ ಇದೆ. ಜೊತೆಗೆ ಕೊರೊನಾ ಎಫೆಕ್ಟ್ ಹಾಗೂ ಮುಷ್ಕರದಿಂದಾಗಿ ಬಿಎಂಟಿಸಿ ನಿಗಮ ಆರ್ಥಿಕ ನಷ್ಟದಲ್ಲಿದೆ. ಕೊರೊನಾದಿಂದಾಗಿ ಬಿಎಂಟಿಸಿ ಬಸ್ ಸಂಚಾರ ಸಂಪೂರ್ಣ ಸ್ತಬ್ಧವಾಗಿದೆ. ಹೀಗಾಗಿ ಟಿಕೆಟ್ ದರ ಹೆಚ್ಚಳಕ್ಕೆ ಮತ್ತೊಮ್ಮೆ ಬಿಎಂಟಿಸಿ ಪ್ರಸ್ತಾವನೆ ಇಟ್ಟಿದೆ.