ದಾವಣಗೆರೆ: ‘ನಾನು ಚಡ್ಡಿ ಹಾಕುವಾಗ 30 ಕ್ವಿಂಟಾಲ್ ಗೋಧಿ ಹಾಗೂ ಜೋಳ ಸಿಗ್ತಿತ್ತು. ಐವತ್ತು ಪೈಸೆ ಕೊಟ್ಟರೆ ಕೂಲಿ ಕೆಲಸಕ್ಕೆ ಜನರು ಬರುತ್ತಿದ್ದರು. ಐವತ್ತು ಪೈಸೆಗೆ ಒಂದು ಲೀಟರ್ ಪೆಟ್ರೋಲ್ ಕೂಡ ಸಿಗುತ್ತಿತ್ತು’ ಎಂದು ದಾವಣಗೆರೆ ಬಿಜೆಪಿ ಸಂಸದ ಜಿ ಎಂ ಸಿದ್ದೇಶ್ವರ್ ಹೇಳಿದ್ದಾರೆ.
ಜನಸಾಮಾನ್ಯರ ಅಗತ್ಯ ವಸ್ತುಗಳ ಬೆಲೆ ಏರಿಕೆ ಹಾಗೂ ಕೇಂದ್ರದ ನರೇಂದ್ರ ಮೋದಿ ಸರ್ಕಾರ ಜಾರಿಗೆ ತರಲು ಹೊರಟಿರುವ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೇಶಾದ್ಯಂತ ಇಂದು ಭಾರತ್ ಬಂದ್ ಆಚರಿಸುತ್ತಿದೆ. ದಾವಣಗೆರೆಯಲ್ಲಿ ಸುದ್ದಿಗಾರರು ಬೆಲೆಯೇರಿಕೆ ವಿರೋಧಿಸಿ ನಡೆದಿರುವ ಭಾರತ್ ಬಂದ್ ಬಗ್ಗೆ ಕೇಳಿದಾಗ ಬಿಜೆಪಿ ಸಂಸದ ಸಿದ್ದೇಶ್ವರ್ ಬಂದ್ ಬಗ್ಗೆ ಮೇಲಿನಂತೆ ಹೇಳಿಕೆಯನ್ನು ನೀಡಿದರು. ಅದೇ ರೀತಿ ಬೆಲೆ ಏರಿಕೆ ಬಗ್ಗೆಯೂ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ.
‘ಕಾಲ ಬದಲಾದಂತೆ ವಸ್ತುಗಳ ಬೆಲೆ ಸಹ ಬದಲಾಗುತ್ತದೆ. ರೈತರ ಕಲ್ಯಾಣಕ್ಕೆ ಹತ್ತಾರು ಯೋಜನೆ ರೂಪಿಸಿದ್ದೇವೆ. ರೈತರು ಬಂದ್ ಮಾಡುವುದು ಸೂಕ್ತವಲ್ಲ’ ಎಂದರು. ಅಲ್ಲದೇ, ನಿರ್ದಿಷ್ಟ ಪೆಟ್ರೋಲ್ ಬೆಲೆ ಏರಿಕೆ ಬಗ್ಗೆ ಕೇಳುತ್ತಿದ್ದಂತೆಯೇ ಪ್ರತಿಕ್ರಿಯೆ ನೀಡಲು ನಿರಾಕರಿಸಿ ಅಲ್ಲಿಂದ ಜಾಗ ಖಾಲಿ ಮಾಡಿದರು.