- ಆರ್‌ಎಸ್‌ಎಸ್ ಪ್ರಮುಖ ಜೀತೇಂದ್ರ ಪ್ರಖ್ಯಾತ್ ಜೊತೆ ಚರ್ಚೆ
- ಜೀತೇಂದ್ರ ಜೊತೆ ಚರ್ಚಿಸಿದಂತೆ ಕೇಂದ್ರ ಸಚಿವ ಸದಾನಂದಗೌಡ, ಅರವಿಂದ ಬೆಲ್ಲದ, ರಾಮದಾಸ್‌ರಿಂದ ಎಸಿಪಿ ಯತಿರಾಜ್‌ಗೆ ಸೂಚನೆ
ಬೆಂಗಳೂರು: ಶಾಸಕ ಅರವಿಂದ್ ಬೆಲ್ಲದ್ ಫೋನ್ ಕದ್ದಾಲಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿರುವ ಪೊಲೀಸರಿಗೆ ಮಹತ್ವದ ಮಾಹಿತಿಗಳು ಲಭ್ಯವಾಗಿದ್ದು, ಓರ್ವ ಅರ್ಚಕರಿಂದ ಬೆಲ್ಲದ್ ಅವರಿಗೆ ಕಾನ್ಫರೆನ್ಸ್ ಕಾಲ್ ಬಂದಿರುವ ವಿಚಾರ ಬಹಿರಂಗವಾಗಿದೆ.
ಫೋನ್ ಟ್ಯಾಪಿಂಗ್ ಬಗ್ಗೆ ಬೆಲ್ಲದ್ ನೀಡಿದ್ದ ನಂಬರ್ ಬೆನ್ನು ಹತ್ತಿದ ಪೊಲೀಸರಿಗೆ ಅದು ಹೈದರಾಬಾದ್ ನಿಂದ ಬಂದ ಕರೆಯಾಗಿದ್ದು, ಓರ್ವ ಅರ್ಚಕರು ಕಾನ್ಫರೆನ್ಸ್ ಕಾಲ್ ಮೂಲಕ ಕರೆ ಮಾಡಿದ್ದಾರೆ. ಅದು ಕೂಡ ಆರ್ ಎಸ್ ಎಸ್ ಮುಖಂಡರ ನಿವಾಸದಿಂದ ಬಂದ ಕರೆ ಎಂದು ತಿಳಿದು ಬಂದಿದೆ. ಟ್ಯಾಪಿಂಗ್ ದೂರಿನಿಂದ ಈಗ ನಾಯಕತ್ವದ ಬದಲಾವಣೆ ಚರ್ಚೆಯ ಗುಟ್ಟು ರಟ್ಟಾಗಿದೆ.
ಕರ್ನಾಟಕದಲ್ಲಿ ನಾಯಕತ್ವದ ಬದಲಾವಣೆ ರಾದ್ಧಾಂತ ತಣ್ಣಗಾಯಿತು ಅಂದುಕೊಳ್ಳುತ್ತಿರುವಾಗಲೇ ನಾಯಕತ್ವದ ಬದಲಾವಣೆಗೆ ಪಟ್ಟುಹಿಡಿದಿದ್ದ ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ ಅವರ ಟೆಲಿಫೋನ್ ಟ್ಯಾಪಿಂಗ್ ದೂರಿನ ಬೆನ್ನುಹತ್ತಿದ ಬೆಂಗಳೂರು ಪೊಲೀಸರು ಅನೇಕಾನೇಕ ಮಹತ್ವದ ವಿಷಯಗಳನ್ನು ಕಲೆಹಾಕಿದ್ದಾರೆ. ನಾಯಕತ್ವ ಬದಲಾವಣೆ ವಿಚಾರದಲ್ಲಿ ಮುಂಚೂಣಿಯಲ್ಲಿದ್ದ ಶಾಸಕ ಅರವಿಂದ್ ಬೆಲ್ಲದ್ ಇತ್ತೀಚೆಗೆ ಕರ್ನಾಟಕ ಬಿಜೆಪಿ ಉಸ್ತುವಾರಿ ನಾಯಕ ಅರುಣ್ ಸಿಂಗ್ ಬೆಂಗಳೂರಿಗೆ ಬಂದಿದ್ದಾಗ ದೂರವಾಣಿ ಕದ್ದಾಲಿಕೆ ಭೂತವನ್ನು ಹೊರಬಿಟ್ಟಿದ್ದರು. ಅವರು ಕೊಟ್ಟಿದ್ದ ದೂರು ಅನೇಕ ವಿಷಯಗಳನ್ನು ಬಹಿರಂಗ ಮಾಡುತ್ತಿದೆ. ಅಷ್ಟೆ ಅಲ್ಲದೆ ಅದು ಬೆಲ್ಲದ್ ರವರಿಗೆ ತಿರುಗು ಬಾಣ ವಾಗಲಿದೆ.
ಟೆಲಿಫೋನ್ ಟ್ಯಾಪಿಂಗ್ ಆರೋಪದ ಸಮ್ಮುಖದಲ್ಲಿ ಶಾಸಕ ಬೆಲ್ಲದ್ ನೀಡಿದ್ದ ಫೋನ್ ನಂಬರ್ ಹುಡುಕಿ ಹೊರಟಿದ್ದ ಪೊಲೀಸರಿಗೆ ಶಾಕ್ ಆಗಿದೆ. ಬೆಲ್ಲದ್ ನೀಡಿದ್ದ ಪೋನ್ ನಂಬರ್ ತಡಕಾಡಿದಾಗ ಒರ್ವ ಅರ್ಚಕನಿಂದ ಕಾನ್ಫರೆನ್ಸ್ ಕಾಲ್ ಮಾಡಲಾಗಿತ್ತು ಎಂಬುದು ಪ್ರಾಥಮಿಕವಾಗಿ ಈ ಹಿಂದೆಯೇ ತಿಳಿದುಬಂದಿತ್ತು. ಅಷ್ಟಕ್ಕೂ ಫೋನ್ ಮಾಡಿದ್ದ ಮೂಲದ ವ್ಯಕ್ತಿ ಯಾರು, ಎಲ್ಲಿಯವನು ಎಂದು ತಿಳಿಯಲು ಫೋನ್ ನಂಬರ್ ಬೆನ್ನುಹತ್ತಿಹೋದ ಪೊಲೀಸರು ನಿಂತಿದ್ದು ಹೈದ್ರಾಬಾದ್ ನಲ್ಲಿ. ಅದೂ ಹೈದ್ರಾಬಾದ್ ನ ಒರ್ವ ಆರ್‌ಎಸ್‌ಎಸ್ ಲೀಡರ್ ನಿವಾಸದಲ್ಲಿ! ಆತನ ಹೆಸರೆ ಜಿತೇಂದ್ರ ಪ್ರಖ್ಯಾತ್
ಯಾರು ಈ ಜೀತೇಂದ್ರ ಪ್ರಖ್ಯಾತ್ : ಈ ಜಿತೇಂದ್ರ ಯಾರ ಎಂಬ ವಿಷಯವೇ ಕೌತುಕವಾಗಿದೆ. ಇತ ಸಂಘದಲ್ಲಿ ಸಕ್ರಯರಾಗಿರುವ ಪ್ರಮುಖ ವ್ಯಕ್ತಿ
ಹೈದ್ರಾಬಾದ್ ನ ಮುಶೀರಾಬಾದ್ ನಲ್ಲಿ ಜಿತೇಂದ್ರ ನಿವಾಸವಿದೆ. ಹಲವು ರಾಜಕೀಯ ನಾಯಕರಿಗೆ ಪೂಜೆ, ಹೋಮ ಹವನ ಸಹ ಮಾಡಿ ಕೊಟ್ಟಿರುವ ಪ್ರಖ್ಯಾತಿ ಈ ಜಿತೇಂದ್ರದು!, ಇನ್ನು ಜಿತೇಂದ್ರ ಪ್ರಖ್ಯಾತ್ ಕಾಲ್ ಡೀಟೆಲ್ಸ್ ತಡಕಾಡಿದಾಗ ಇನ್ನೂ ಹಲವು ಪ್ರಮುಖರು ಸಂಪರ್ಕದಲ್ಲಿರುವುದು ಪೊಲೀಸರಿಗೆ ಗೊತ್ತಾಗಿದೆ. ರಾಷ್ಟ್ರಮಟ್ಟದ ಹಲವು ಆರ್‌ಎಸ್‌ಎಸ್ ಮುಖಂಡರು ಮತ್ತು ಬಿಜೆಪಿ ಮುಖಂಡರ ಜೊತೆ ಪ್ರಖ್ಯಾತ್ ನಿರಂತರ ಸಂಪರ್ಕ ಹೊಂದಿರುವುದು ಬೆಳಕಿಗೆ ಬಂದಿದೆ.
ಪೊಲೀಸ್‌ರನ್ನು ವಾಪಸ್ಸ ಕರೆಸಿದ ಬೆಲ್ಲದ : ಮುಶೀರಾಬಾದ್ನಲ್ಲಿ ಜಿತೇಂದ್ರ ಪ್ರಖ್ಯಾತ್ ಮನೆಗೆ ತೆರಳಿದ್ದ ಬೆಂಗಳೂರು ಪೊಲೀಸರು ಇನ್ನೇನು ಆತನನ್ನು ಪ್ರಶ್ನೆ ಮಾಡಬೇಕು ಆ ವೇಳೆಗೆ.. ಅರವಿಂದ ಬೆಲ್ಲದ್ ರಿಂದ ಪೊಲೀಸರಿಗೆ ಪೋನ್ ಕಾಲ್ ಹೋಗಿದೆ. ಎರಡು ಬಾರಿ ಫೋನ್ ಮಾಡಿ ವಾಪಸ್ಸು ಬರುವಂತೆ ಪೊಲೀಸರಿಗೆ ಬೆಲ್ಲದ್ ಸೂಚಿಸಿದ್ದಾರೆ. ಬೆಲ್ಲದ್ ಕರೆ ಬಳಿಕ ಮಾಜಿ ಸಚಿವ ರಾಮದಾಸ್ ಸಹ ಕರೆ ಮಾಡಿ, ಜಿತೇಂದ್ರ ಪ್ರಖ್ಯಾತ್ ನಿವಾಸದಿಂದ ಹೊರ ಬರುವಂತೆ ಪೊಲೀಸರಿಗೆ ಹೇಳಿದ್ದಾರೆ. ರಾಮದಾಸ್ ಕರೆ ಬಳಿಕ ಕೇಂದ್ರ ಸಚಿವ ಸದಾನಂದ ಗೌಡ ಸಹ ಕರೆ ಮಾಡಿದ್ದಾರೆ. ಈ ಮಧ್ಯೆ, ಜಿತೇಂದ್ರ ನಿವಾಸದಲ್ಲಿ ಇದ್ದವರು ಬೆಂಗಳೂರಿನಿಂದ ಹೋಗಿದ್ದ ಪೊಲೀಸರ ಜೊತೆ ಗಲಾಟೆ ಮಾಡಿದ್ದಾರೆ. ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ಕರೆ ಮಾಡುವುದಾಗಿ ಕೂಗಾಡಿದ್ದಾರೆ. ಈ ವೇಳೆ, ನಮ್ಮ ಬಳಿಗೆ ಪೊಲೀಸರನ್ನು ಯಡಿಯೂರಪ್ಪ ಕಳಿಸಿದ್ದಾರೆ. ಅವರನ್ನ ಹಾಗೆಯೇ ಬಿಡ್ತೀವಾ.. ಯಾವ ಕಾರಣಕ್ಕೂ ಸಿಎಂ ಆಗಿ ಇರೋದಿಕ್ಕೆ ಅವರನ್ನ ಬಿಡೋದಿಲ್ಲಾ.. ಎಂದೂ ಜಿತೇಂದ್ರ ಪ್ರಖ್ಯಾತ್ ನಿವಾಸದಲ್ಲಿದ್ದವರು ಪೊಲೀಸರ ಎದುರು ಕೂಗಾಡಿದ್ದರಂತೆ!
ತನಿಖಾಧಿಕಾರಿ ಬದಲಾವಣೆ : ಈ ಅನಿರೀಕ್ಷಿತ ಬೆಳವಣಿಗೆಗಳ ಮಧ್ಯೆ, ಪ್ರಕರಣದ ತನಿಖಾಧಿಕಾರಿ ಎಸಿಪಿ ಯತಿರಾಜ್ ಅವರನ್ನು ಬದಲಾಯಿಸಿ ಎಸಿಪಿ ಪೃಥ್ವಿಗೆ ತನಿಖೆ ಜವಾಬ್ದಾರಿ ವಹಿಸಲಾಗಿದೆ. ಅಲ್ಲಿದ್ದವರ ಹೇಳಿಕೆ ದಾಖಲು ಮಾಡಿಕೊಂಡು ಬರುವಂತೆ ಆಗಿನ ತನಿಖಾಧಿಕಾರಿ ಎಸಿಪಿ ಯತಿರಾಜ್ ಅವರಿಗೆ ಸೂಚಿಸಲಾಗಿದೆ. ನಂತರ ಕಮಿಷನರ್ ಕಮಲ್ ಪಂತ್ ಅವರಿಂದಲೂ ವಾಪಸ್ಸು ಬರುವಂತೆ ಎಸಿಪಿ ಯತಿರಾಜ್ ಅವರಿಗೆ ಮೌಖಿಕ ಸೂಚನೆ ಹೋಗಿದೆ. ಕೊನೆಗೆ ಹೇಳಿಕೆಯನ್ನೂ ದಾಖಲು ಮಾಡದೆ ಪೊಲೀಸರು ಬರಿಗೈಯಲ್ಲಿ ವಾಪಸ್ಸು ಬಂದಿದ್ದಾರೆ.
ಮೈತ್ರಿ ಸರ್ಕಾರದ ಅವಧಿಯಲ್ಲಿ ಕೇಳಿ ಬಂದಿದ್ದ ಫೋನ್ ಕದ್ದಾಲಿಕೆ ಪ್ರಕರಣದಲ್ಲಿ ಕಬ್ಬನ್ ಪಾರ್ಕ್ ಎಸಿಪಿ ಬಿ.ಆರ್.ಯತಿರಾಜ್ ಹೆಸರು ಕೇಳಿ ಬಂದಿತ್ತು. ಆಗ ಸಿಸಿಬಿಯಲ್ಲಿ ಯತಿರಾಜು ಇನ್ಸ್‌ಪೆಕ್ಟರ್ ಆಗಿದ್ದರು. ಈ ಹಳೆ ವಿವಾದದ ಹಿನ್ನೆಲೆಯಲ್ಲಿ ಪ್ರಸುತ್ತ ಶಾಸಕರ ಫೋನ್ ಕದ್ದಾಲಿಕೆ ಪ್ರಕರಣದ ತನಿಖಾಧಿಕಾರಿಯಾಗಿ ಯತಿರಾಜು ಅವರನ್ನು ಮುಂದುವರಿಸುವುದು ನೈತಿಕವಾಗಿ ಸರಿಯಲ್ಲವೆಂಬ ಕಾರಣಕ್ಕೆ ಅವರನ್ನು ಬದಲಾಯಿಸಲಾಗಿದೆ ಎಂದು ತಿಳಿದು ಬಂದಿದೆ.
ಸದ್ಯ ಬೆಲ್ಲದ್ ಟೆಲಿಫೋನ್ ಟ್ಯಾಪಿಂಗ್ ಪ್ರಕರಣಕ್ಕೆ ಹೈಲೆವೆಲ್ ಟಚ್ ಬಂದ ಕಾರಣ ತನಿಖೆ ಮಂದಗತಿಯಲ್ಲಿ ಸಾಗುತ್ತಿದೆ. ಅರವಿಂದ ಬೆಲ್ಲದ್ ಗೆ ಮತ್ತೊಂದು ನೋಟಿಸ್ ನೀಡಲು ಸಹ ಬೆಂಗಳೂರು ಪೊಲೀಸರು ಸಿದ್ದತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಮೊದಲ ಬಾರಿ ವಿಚಾರಣೆ ನಡೆಸಿ ಹೇಳಿಕೆ ದಾಖಲು ಮಾಡಿದ್ದ ಪೊಲೀಸರು ತನಿಖಾ ಅಧಿಕಾರಿ ಬದಲಾದ ಬಳಿಕ ವಿಚಾರಣೆ ನಡೆಸಿಲ್ಲ. ಹಲವು ಮಾಹಿತಿಯನ್ನು ಹೆಚ್ಚುವರಿಯಾಗಿ ಪಡೆಯಬೇಕಿರೊ ಕಾರಣಕ್ಕೆ ಮತ್ತೆ ನೋಟಿಸ್ ನೀಡುವ ಸಾಧ್ಯತೆಯಿದೆ.