‘ಪ್ರೆಸಿಡೆಂಟ್‌ ಆಫ್‌ ಭಾರತ್!’ | ‘ಇಂಡಿಯಾ’ ಹೆಸರನ್ನೆ ಬದಲಾಯಿಸಲು ಹೊರಟ ಬಿಜೆಪಿ ಸರ್ಕಾರ?

ಹೊಸದಿಲ್ಲಿ: ಜಿ20 ಶೃಂಗಸಭೆಯಲ್ಲಿ ಭಾಗವಹಿಸುವ ವಿಶ್ವ ನಾಯಕರಿಗೆ ಸೆಪ್ಟೆಂಬರ್ 9 ರಂದು ರಾಷ್ಟ್ರಪತಿ ಭವನದಲ್ಲಿ ಔತಣಕೂಟವನ್ನು ಆಯೋಜಿಸಲಾಗಿದೆ. ಆದರೆ ಔತಣಕೂಟದ ಆಹ್ವಾನ ಪತ್ರಿಕೆಯನ್ನು ‘ಪ್ರೆಸಿಡೆಂಟ್ ಆಫ್‌ ಇಂಡಿಯಾ’ ಬದಲಿಗೆ ‘ಪ್ರೆಸಿಡೆಂಟ್ ಆಫ್ ಭಾರತ್’ ಎಂಬ ಹೆಸರಿನಲ್ಲಿ ಕಳುಹಿಸಲಾಗಿದೆ ಎಂದು ಮೂಲಗಳು ಖಚಿತಪಡಿಸಿವೆ ಎಂದು ಮಂಗಳವಾರ ಇಂಡಿಯನ್ ಎಕ್ಸ್‌ಪ್ರೆಸ್‌ ವರದಿ ಮಾಡಿದೆ. ಅಲ್ಲದೆ, ಸೆಪ್ಟೆಂಬರ್ 18ರಿಂದ 22ರ ವರೆಗೆ ನಿಗದಿಪಡಿಸಲಾದ ವಿಶೇ‍ಷ ಅಧಿವೇಶನದಲ್ಲಿ ಸಂವಿಧಾನದಿಂದ ‘ಇಂಡಿಯಾ’ ಪದವನ್ನು ತೆಗೆದುಹಾಕುವ ಪ್ರಸ್ತಾಪವನ್ನು ಸಿದ್ಧಪಡಿಸಲಾಗುತ್ತಿದೆ ಎನ್ನಲಾಗಿದೆ,

ರಾಷ್ಟ್ರಪತಿ ಅವರ ಈ ಆಹ್ವಾನ ಪತ್ರಿಕೆಯನ್ನು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಟೀಕಿಸಿದ್ದು, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಇಂಡಿಯವನ್ನು “ರಿಪಬ್ಲಿಕ್ ಆಫ್‌ ಭಾರತ್‌” ಎಂದು ಸಮರ್ಥಿಸಿಕೊಂಡಿದ್ದಾರೆ. ಈ ಬಗ್ಗೆ ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿರುವ ಜೈರಾಮ್ ರಮೇಶ್‌, “…ಸುದ್ದಿ ನಿಜವಾಗಿದೆ. ರಾಷ್ಟ್ರಪತಿ ಭವನವು ಸೆಪ್ಟೆಂಬರ್ 9 ರಂದು ಸಾಮಾನ್ಯವಾಗಿ ಬಳಸುವ ‘ಪ್ರೆಸಿಡೆಂಟ್‌ ಆಫ್‌ ಇಂಡಿಯ’ ಬದಲಿಗೆ ‘ಪ್ರೆಸಿಡೆಂಟ್‌ ಆಫ್‌ ಭಾರತ್‌’ ಎಂದು ರಾಷ್ಟ್ರಪತಿ ಹೆಸರಿನಲ್ಲಿ G20 ಔತಣಕೂಟಕ್ಕೆ ಆಹ್ವಾನವನ್ನು ಕಳುಹಿಸಿದೆ” ಎಂದು ಹೇಳಿದ್ದಾರೆ.

“ಈಗ, ಸಂವಿಧಾನದ 1 ನೇ ವಿಧಿಯು ಹೀಗೆ ಹೇಳುತ್ತದೆ,: ‘ಭಾರತ, ಅದು ಇಂಡಿಯಾವಾಗಿದ್ದು, ಅದು ರಾಜ್ಯಗಳ ಒಕ್ಕೂಟವಾಗಿರುತ್ತದೆ.’ ಆದರೆ ಈಗ ಈ ‘ರಾಜ್ಯಗಳ ಒಕ್ಕೂಟ’ ಕೂಡ ಆಕ್ರಮಣಕ್ಕೆ ಒಳಗಾಗಿದೆ” ಎಂದು ಜೈರಾಮ್‌ ರಮೇಶ್‌ ಆತಂಕ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಗೌರಿ ಲಂಕೇಶ್‌ ಹತ್ಯೆಗೆ 6 ವರ್ಷ | ಆರೋಪಿಗಳು ಎಲ್ಲಿದ್ದಾರೆ? ಹತ್ಯೆಯ ಹಿಂದೆ ಯಾವ ಸಂಘಟನೆಯಿದೆ?

ಜೈರಾಮ್‌ ರಮೇಶ್ ಅವರು ಟ್ವೀಟ್ ಮಾಡುತ್ತಿದ್ದಂತೆ ಅಸ್ಸಾಂ ಮುಖ್ಯಮಂತ್ರಿ ಹಿಮಾಂತ ಬಿಸ್ವಾ ಶರ್ಮಾ ಅವರು, ಇಂಡಿಯವನ್ನು “ರಿಪಬ್ಲಿಕ್ ಆಫ್‌ ಭಾರತ್‌” ಎಂದು ಹೇಳಿದ್ದಾರೆ. “ರಿಪಬ್ಲಿಕ್ ಆಫ್‌ ಭಾರತ್ – ನಮ್ಮ ನಾಗರಿಕತೆಯು ಅಮೃತ್ ಕಾಲದ ಕಡೆಗೆ ಧೈರ್ಯದಿಂದ ಮುನ್ನಡೆಯುತ್ತಿರುವುದಕ್ಕೆ ಸಂತೋಷ ಮತ್ತು ಹೆಮ್ಮೆಯನಿಸುತ್ತಿದೆ” ಎಂದು ಅವರು ಹೇಳಿದ್ದಾರೆ.

ಈ ನಡುವೆ ಸೆಪ್ಟೆಂಬರ್ 18-22 ಕ್ಕೆ ಸಂಸತ್ತಿನ ವಿಶೇಷ ಅಧಿವೇಶನ ನಿಗದಿಪಡಿಸಲಾಗಿದ್ದು, ಇದರಲ್ಲಿ ಸಂವಿಧಾನದಿಂದ ‘ಇಂಡಿಯಾ’ ಪದವನ್ನು ತೆಗೆದುಹಾಕುವ ಪ್ರಸ್ತಾಪವನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಊಹಿಸಲಾಗಿದೆ. ಸಂವಿಧಾನದ 1 ನೇ ವಿಧಿಯಿಂದ “ಇಂಡಿಯ, ಅದು ಭಾರತ” ಎಂಬ ಪದವನ್ನು ತೆಗೆದುಹಾಕಬೇಕು ಮತ್ತು ‘ಭಾರತ್’ ಎಂಬ ಪದವನ್ನು ಮಾತ್ರ ಬಳಸಬೇಕು ಎಂದು ಆಡಳಿತರೂಢ ಪಕ್ಷದವಾದ ಬಿಜೆಪಿ ಹಾಗೂ ಅವರ ಬೆಂಬಲಿಗರ ಕಡೆಯಿಂದ ಹೇಳಿಕೆಗಳು ಬಂದಿವೆ.

ಎರಡು ದಿನಗಳ ಹಿಂದೆಯಷ್ಟೇ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಗುವಾಹಟಿಯಲ್ಲಿ ಸಕಲ್ ಜೈನ ಸಮಾಜ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದಾಗ ‘ಇಂಡಿಯ’ವನ್ನು ‘ಭಾರತ್’ ಎಂದು ಕರೆದಿದ್ದರು. ಜನರು ಇಂಡಿಯಾವನ್ನು ಭಾರತ ಎಂದು ಕರೆಯುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು ಎಂದು ಒತ್ತಾಯಿಸಿದ್ದ ಭಾಗವತ್, ಭಾರತ ಎಂಬ ಹೆಸರು ಪ್ರಾಚೀನ ಕಾಲದಿಂದಲೂ ಬಳಸಲಾಗುತ್ತಿದೆ, ಅದನ್ನು ಮುಂದಕ್ಕೆ ಕೊಂಡೊಯ್ಯಬೇಕು ಎಂದು ಹೇಳಿದ್ದರು.

“ನಾವೆಲ್ಲರೂ ‘ಇಂಡಿಯ’ ಎಂಬ ಪದವನ್ನು ಬಳಸುವುದನ್ನು ನಿಲ್ಲಿಸಬೇಕು ಮತ್ತು ‘ಭಾರತ’ ಎಂಬ ಪದವನ್ನು ಬಳಸಲು ಪ್ರಾರಂಭಿಸಬೇಕು. ನಮ್ಮ ದೇಶದ ಹೆಸರು ಯುಗಯುಗಾಂತರಗಳಿಂದ ‘ಭಾರತ’ವಾಗಿದೆ. ಭಾಷೆ ಯಾವುದೇ ಆಗಿರಲಿ, ಹೆಸರು ಹಾಗೆಯೇ ಉಳಿಯುತ್ತದೆ,” ಎಂದು ಮೋಹನ್ ಭಾಗವತ್ ಹೇಳಿದ್ದರು.

G20 ನಾಯಕರ ಶೃಂಗಸಭೆ 2023ರ ಸೆಪ್ಟೆಂಬರ್ 9-10 ರವರೆಗೆ ಪ್ರಗತಿ ಮೈದಾನದಲ್ಲಿರುವ ಅಂತಾರಾಷ್ಟ್ರೀಯ ಸಮಾವೇಶ ಮತ್ತು ಪ್ರದರ್ಶನ ಕೇಂದ್ರದ ಭಾರತ್ ಮಂಟಪದಲ್ಲಿ ನಡೆಯಲಿದೆ.

ವಿಡಿಯೊ ನೋಡಿ: ಗೌರಿ ಕೊಂದವರು ಯಾರು? ಕೇಸ್ ಎಲ್ಲಿಗೆ ಬಂತು? – ವಿಶ್ಲೇಷಣೆ : ಕೆ.ನೀಲಾ Janashakthi Media

Donate Janashakthi Media

Leave a Reply

Your email address will not be published. Required fields are marked *