ಕೋಲಾರ : ಕಲ್ಲು ಗಣಿಗಾರಿಕೆಯಲ್ಲಿ ಬ್ಲಾಸ್ಟಿಂಗ್ ಮಾಡುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸಂಸದ ಎಸ್.ಮುನಿಸ್ವಾಮಿ ಮತ್ತು ಶಾಸಕ ನಂಜೇಗೌಡರ ಜಗಳ ಹಾವು ಮುಂಗಸಿಯಂತೆ ಮುಂದುವರೆದಿದೆ.
ಮುನಿಸ್ವಾಮಿ ಮತ್ತು ನಂಜೇಗೌಡರ ರಾಜಕೀಯ ಗುದ್ದಾಟ ಹೊಸದೇನಲ್ಲ. ಮುನಿಸ್ವಾಮಿ ಕೋಲಾರದಲ್ಲಿ ಸಂಸದರಾಗಿ ಆಯ್ಕೆ ಆಗಿ ಬಂದ ದಿನದಿಂದಲೂ ಇಬ್ಬರ ನಡುವೆ ಆರೋಪ ಪ್ರತ್ಯಾರೋಪಗಳು ಕೇಳಿ ಬರುತ್ತೀವೆ..
ಬಿಜೆಪಿ ಸಂಸದ ಮುನಿಸ್ವಾಮಿ ಏನೇ ಮಾತನಾಡಿದರೂ ಅದಕ್ಕೆ ಅಂಜದೆ ತಾನೇನೂ ಕಡಿಮೆ ಇಲ್ಲದಂತೆ ಮಾಲೂರಿನ ಕಾಂಗ್ರೆಸ್ ಶಾಸಕ ನಂಜೇಗೌಡ ಅದಕ್ಕೆ ತಿರುಗೇಟು ನೀಡುತ್ತಾ ಬಂದಿದ್ದಾರೆ. ಸದ್ಯ ಇಬ್ಬರ ನಡುವಿನ ಈ ಸಮರಕ್ಕೆ ಕಾರಣ ಗಣಿಗಾರಿಕೆ ವಿಚಾರದಲ್ಲಿ ತಗುಲಿಕೊಂಡಿರುವುದು.
ಮುನಿಸ್ವಾಮಿ ಬಿಜೆಪಿ ಸಂಸದರಾಗಿದ್ದು, ನಂಜೇಗೌಡ ಮಾಲೂರಿನ ಕಾಂಗ್ರೆಸ್ ಶಾಸಕರು, ಸಂಸದ ಮುನಿಸ್ವಾಮಿ ಏನೇ ಮಾತನಾಡಿದರೂ ಅದಕ್ಕೆ ಅಂಜದೆ ಅಳುಕದೆ ತಾನೇನೂ ಕಡಿಮೆ ಇಲ್ಲದಂತೆ ಅದಕ್ಕೆ ತಿರುಗೇಟು ನೀಡುತ್ತಿದ್ದಾರೆ.
ಬ್ಲಾಸ್ಟಿಂಗ್ ಹೆಸರಿನಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಕಲ್ಲುಗಣಿಗಾರಿಕೆ ಮಾಲಿಕರಿಗೆ ಇಲ್ಲದ ಕಿರುಕುಳ ನೀಡುತ್ತಿದ್ದಾರೆ. ಕರ್ನಾಟದಲ್ಲಿ ಶಿವಮೊಗ್ಗ ಮತ್ತು ಚಿಕ್ಕಬಳ್ಳಾಪುರದಲ್ಲಿ ನಡೆದ ಘಟನೆ ಹಿನ್ನೆಲೆಯಲ್ಲಿ ಜಲ್ಲಿ ಕ್ರಷರ್ ಮಾಲಿಕರಿಗೆ ಇನ್ನಿಲ್ಲದ ತೊಂದರೆ ನೀಡಲಾಗುತ್ತಿದೆ. ಕ್ರಷರ್ ಮಾಲಿಕರ ಮೇಲೆ ಕೇಸುಗಳನ್ನು ಹಾಕಲಾಗುತ್ತಿದೆ. ಕ್ರಷರ್ ಮಾಲಿಕರು ಬ್ಲಾಸ್ಟಿಂಗ್ ನಿಲ್ಲಿಸಿದ್ದರೂ ಒಂದೋ ಎರಡೋ ಜಿಲಿಟಿನ್‌ಗಳನ್ನು ಇಟ್ಟು ಕೊಂಡಿದ್ದವರ ಮೇಲೆ ಕೇಸುಗಳನ್ನು ಹಾಕಲಾಗುತ್ತಿದೆ ಇದು ಸರಿಯಿಲ್ಲ ಎಂದು ಶಾಸಕ ನಂಜೇಗೌಡ ಶನಿವಾರ ಮಾಲೂರಿನಲ್ಲಿ ಕಿಡಿಕಾರಿದ್ದಾರೆ.
ಇದಕ್ಕೆ ಪ್ರತಿಯಾಗಿ ಭಾನುವಾರ ಕೋಲಾರ ತಾಲೂಕಿನ ನರಸಾಪುರ ಗ್ರಾಮದಲ್ಲಿ ಪ್ರಕ್ರಿಯಿಸಿರುವ ಸಂಸದ ಎಸ್.ಮುನಿಸ್ವಾಮಿ, ಶಾಸಕ ನಂಜೇಗೌಡರು ಏನೇನೋ ಮಾತನಾಡುತ್ತಾರೆ. ಕಲ್ಲು ಬ್ಲಾಸ್ಟಿಂಗ್ ಮಾಡುವವರು ಸರ್ಕಾರದಿಂದ ಅನುಮತಿ ಪಡೆಯಬೇಕು. ಅದನ್ನು ತಪ್ಪಿದರೆ ಸರ್ಕಾರದ ಕಾನೂನಿಗೆ ಒಳಗಾಗಬೇಕಾಗುತ್ತದೆ ಎಂದು ಸಂಸದ ಎಸ್.ಮುನಿಸ್ವಾಮಿ ಗುಡುಗಿದ್ದಾರೆ.
ಶಿವಮೊಗ್ಗ ಮತ್ತು ಚಿಕ್ಕಬಳ್ಳಾಪುರದಲ್ಲಿ ನಡೆದ ಬ್ಲಾಸ್ಟಿಂಗ್‌ಗಳಲ್ಲಿ ಸಾಕಷ್ಟುಮಂದಿ ಮೃತಪಟ್ಟಿದ್ದಾರೆ. ಈ ನಂತರ ಸರ್ಕಾರ ಹೊಸ ನೀತಿಯನ್ನು ಹೊರಡಿಸಿದ್ದು ಜಲ್ಲಿ ಕ್ರಷರ್ ನಡೆಸುವವರೇ ಪರವಾನಗಿ ಪಡೆಯಬೇಕೆಂದು ಆದೇಶ ಹೊರಡಿಸಿದೆ. ಈ ಆದೇಶವನ್ನು ಎಲ್ಲರೂ ಪಾಲನೆ ಮಾಡಬೇಕಾಗಿದೆ. ಸರ್ಕಾರದ ನಿಯಮ ಮೀರಿದರೆ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಎಸ್.ಮುನಿಸ್ವಾಮಿ ಮತ್ತು ಶಾಸಕ ನಂಜೇಗೌಡರ ಈ ಮುಸುಕಿನ ಗುದ್ದಾಟದ ನಡುವೆ ಮಾಲೂರು ಕ್ಷೇತ್ರದಲ್ಲಿ ನಂಜೇಗೌಡರನ್ನು ಮುಗಿಸಲು ಮುನಿಸ್ವಾಮಿ ಷಡ್ಯಂತರ ನಡೆಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಒಂದೇ ತಾಲೂಕಿನವರಾದ ಈ ಇಬ್ಬರ ರಾಜಕೀಯ ಜಗಳ ಎಲ್ಲಿಗೆ ಬಂದು ನಿಲ್ಲುತ್ತದೋ ಕಾದು ನೋಡಬೇಕು.