ಬಿಸಿಯೂಟದಲ್ಲಿ ಹಲ್ಲಿ: 80ಕ್ಕೂ ಹೆಚ್ಚು ಶಾಲಾ ಮಕ್ಕಳು ಅಸ್ವಸ್ಥ-ಆಸ್ಪತ್ರೆಗೆ ದಾಖಲು

ಹಾವೇರಿ: ಮಧ್ಯಾಹ್ನದ ಬಿಸಿಯೂಟದಲ್ಲಿ ಸತ್ತ ಹಲ್ಲಿಯೊಂದು ಪತ್ತೆಯಾಗಿದ್ದು, ಇದರಿಂದ ಆತಂಕಗೊಂಡ 80ಕ್ಕೂ ಹೆಚ್ಚು ಶಾಲಾ ಮಕ್ಕಳು ಅಸ್ವಸ್ಥಗೊಂಡಿರುವ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ.

ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲ್ಲೂಕಿನ ವೆಂಕಟಾಪುರ ತಾಂಡಾದ ಸರ್ಕಾರಿ ಶಾಲೆಯೊಂದರಲ್ಲಿ ಈ ಘಟನೆ ನಡೆದಿದೆ. ಶಾಲಾ ಬಾಲಕನೊಬ್ಬನ ತಟ್ಟೆಗೆ ಬಡಿಸಿದ ಊಟದಲ್ಲಿ ಹಲ್ಲಿ ಕಾಣಿಸಿಕೊಂಡಿತ್ತು. ಬಳಿಕ, ಬಾಲಕ ವಾಂತಿ ಮಾಡಿಕೊಂಡಿದ್ದಾರೆ. ಉಳಿದ ಮಕ್ಕಳೂ ಸಹ ಅಸ್ವಸ್ಥಗೊಂಡಿದ್ದಾರೆ.

ಮಕ್ಕಳಿಗೆ ಹೊಟ್ಟೆನೋವು ಕಾಣಿಸಿಕೊಂಡಿತು. ಐದು ಮಕ್ಕಳನ್ನು ಹೊರತುಪಡಿಸಿ ಎಪ್ಪತ್ತಾರು ಮಕ್ಕಳ ಆರೋಗ್ಯ ಸುಧಾರಿಸಿಕೊಂಡಿದೆ ಎಂದು ತಿಳಿದು ಬಂದಿದೆ. ತಕ್ಷಣವೇ ಅವರನ್ನು ರಾಣೆಬೆನ್ನೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಸದ್ಯಕ್ಕೆ ಮಕ್ಕಳು ಚೇತರಿಸಿಕೊಂಡಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಘಟನಾ ಸುದ್ದಿ ತಿಳಿಯುತ್ತಿದ್ದಂತೆ ಶಾಲೆಗೆ ಶಿಕ್ಷಣ ಇಲಾಖೆ ಅಧಿಕಾರಿಗಳು, ಪೋಷಕರು ಧಾವಿಸಿದ್ದರು. ಆಹಾರದಲ್ಲಿ ಹಲ್ಲಿ ಹೇಗೆ ಬಿದ್ದಿತು ಎಂಬುದು ಶಿಕ್ಷಕರಿಗೂ ಸಹ ಗೊತ್ತಾಗಿಲ್ಲ. ಆದರೆ ಶಿಕ್ಷಕರ ನಿರ್ಲಕ್ಷ್ಯಕ್ಕೆ ಅಧಿಕಾರಿಗಳು, ಪೋಷಕರು ಕಿಡಿಕಾರಿದ್ದಾರೆ.

ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳುವುದಾಗಿ ಶಿಕ್ಷಣ ಅಧಿಕಾರಿಗಳು ತಿಳಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *