ಬಿರ್ಭೂಮ್: ಪಶ್ಚಿಮ ಬಂಗಾಳದ ಬಿರ್ಭೂಮ್ ಜಿಲ್ಲೆಯ ಬೊಗ್ಟುಯಿ ಗ್ರಾಮದಲ್ಲಿ ಮೂವರು ಮಹಿಳೆಯರು ಮತ್ತು ಇಬ್ಬರು ಮಕ್ಕಳು ಸೇರಿದಂತೆ ಎಂಟು ಜನರನ್ನು ಮಂಗಳವಾರ ಸಜೀವ ದಹನ ಮಾಡಲಾಗಿತ್ತು. ಮರಣೋತ್ತರ ಪರೀಕ್ಷೆಯ ವರದಿಗಳ ಪ್ರಕಾರ ಸಜೀವ ದಹನಕ್ಕೂ ಮುನ್ನ ಥಳಿಸಲಾಗಿತ್ತು ಎಂದು ಅಂಶ ತಿಳಿದು ಬಂದಿದೆ.
ಅಪರಿಚಿತರಿಂದ ಬೆಂಕಿ ಹಚ್ಚಲಾಗಿದೆ ಎನ್ನಲಾದ ಮನೆಗಳಲ್ಲಿ ಸುಟ್ಟು ಕರಕಲಾದ ಶವಗಳ ಪರೀಕ್ಷೆಯನ್ನು ನಡೆಸಿದ ವಿಧಿವಿಜ್ಞಾನ ತಜ್ಞರ ಪ್ರಾಥಮಿಕ ಸಂಶೋಧನೆಗಳ ಪ್ರಕಾರ, ಸಂತ್ರಸ್ತರನ್ನು ಮೊದಲು ತೀವ್ರವಾಗಿ ಥಳಿಸಿ ನಂತರ ಜೀವಂತವಾಗಿ ಸುಡಲಾಯಿತು ಎಂದು ಅಧಿಕಾರಿಯೊಬ್ಬರು ರಾಮ್‌ಪುರಹತ್ ಆಸ್ಪತ್ರೆಯಿಂದ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಸೋಮವಾರ ಸಂಜೆ ಸ್ಥಳೀಯ ತೃಣಮೂಲ ನಾಯಕನ ಹತ್ಯೆಯ ಪ್ರತೀಕಾರ ಇದಾಗಿರಬಹುದು ಎಂದು ಶಂಕಿಸಲಾಗಿದೆ ಮತ್ತು ಹಲವಾರು ಪೊಲೀಸ್ ಸಿಬ್ಬಂದಿ ಮತ್ತು ನಾಗರಿಕ ಸ್ವಯಂಸೇವಕರನ್ನು ನಿರ್ಲಕ್ಷ್ಯದ ಆಧಾರದ ಮೇಲೆ ತೆಗೆದುಹಾಕಲಾಗಿದೆ.
ರಾಷ್ಟ್ರೀಯ ಹೆದ್ದಾರಿಯ ಅಂಗಡಿಯೊಂದರಲ್ಲಿ ನಿಂತಿದ್ದ ಉಪಾಧ್ಯಕ್ಷ ಭಡು ಶೇಖ್ ಅವರನ್ನು, ಬೈಕ್ನಲ್ಲಿ ಬಂದ ನಾಲ್ವರು ಮುಸುಕುಧಾರಿಗಳು ಕಚ್ಚಾ ಬಾಂಬ್ ದಾಳಿ ನಡೆಸಿ ಹತ್ಯೆ ಮಾಡಿದ್ದರು. ಆದರೆ ಭಡು ಶೇಖ್ ಬೆಂಬಲಿಗರು ಮಾತ್ರ ತಾಳ್ಮೆ ಕಳೆದುಕೊಂಡು 12 ಕ್ಕೂ ಹೆಚ್ಚು ಮನೆಗಳಿಗೆ ಬೆಂಕಿ ಇಟ್ಟಿದ್ದಾರೆ. ಇಲ್ಲಿಯವರೆಗೆ ಘಟನೆಗೆ ಸಂಬಂಧಪಟ್ಟಂತೆ ಸುಮಾರು 20 ಜನರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಸೋಮವಾರದಂದು, ಬರೋಸಾಲ್ ಗ್ರಾಮ ಪಂಚಾಯಿತಿ ಉಪಾಧ್ಯಕ್ಷನ ಹತ್ಯೆಯಿಂದ ರೊಚ್ಚಿಗೆದ್ದ ಅವರ ಬೆಂಬಲಿಗರು ರಾಮ್ಪುರಹತ್ನಲ್ಲಿ ಹಿಂಸಾಚಾರ ಸೃಷ್ಟಿಸಿದ್ದು ಅಲ್ಲದೆ, ಭಗ್ಟುಯಿ ಮತ್ತು ನನೂರ್ ಗ್ರಾಮಗಳಲ್ಲಿ ಹಲವು ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ.
ಮಂಗಳವಾರ ರಾತ್ರಿ ರಾಮ್‌ಪುರಹತ್ ಪಟ್ಟಣದ ಹೊರವಲಯದಲ್ಲಿರುವ ಬೊಗ್ಟುಯಿ ಗ್ರಾಮದಲ್ಲಿ ಗುಂಪೊಂದು ಹಲವಾರು ಮನೆಗಳಿಗೆ ಬೆಂಕಿ ಹಚ್ಚಿದೆ. ಈ ಘಟನೆಯಲ್ಲಿ ಹಲವು ಮಂದಿ ಸಜೀವ ದಹನವಾಗಿದ್ದು ಅವರಲ್ಲಿ ಇಬ್ಬರು ಮಕ್ಕಳು. ಮತ್ತೊಬ್ಬ ವ್ಯಕ್ತಿ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಸಾವನ್ನಪ್ಪಿದ್ದಾರೆ. ಹಾನಿಗೀಡಾದ ಮನೆಯಿಂದ ಸುಟ್ಟು ಕರಕಲಾದ ಮೃತದೇಹಗಳನ್ನು ಹೊರತೆಗೆಯುತ್ತಿರುವ ದೃಶ್ಯಗಳು ಆಕ್ರೋಶಕ್ಕೆ ಕಾರಣವಾಗಿವೆ.
ಲಿಲಿ ಖಾಟೂನ್ ಮತ್ತು ಖಾಜಿ ಸಜಿದೂರ್ ಮೃತರಾಗಿದ್ದು, ಇವರು ಜನವರಿಯಲ್ಲಿ ವಿವಾಹವಾಗಿದ್ದರು. ಭಗ್ಟುಯಿ ಗ್ರಾಮದಲ್ಲಿರುವ ಲಿಲಿ ಖಾಟೂನ್ರ ತಾಯಿಯ ಮನೆಗೆ ಭೇಟಿ ಕೊಟ್ಟಿದ್ದರು. ಮಂಗಳವಾರ ಮಧ್ಯರಾತ್ರಿ ಹೊತ್ತಿಗೆ ಗಲಾಟೆ ಶುರುವಾಗಿ ಇವರಿದ್ದ ಮನೆಯನ್ನು ಯಾರೋ ಹೊರಗಿನಿಂದ ಲಾಕ್ ಮಾಡಿದರು. ಕೂಡಲೇ ಸಜಿದುರ್ ತನ್ನ ಸ್ನೇಹಿತ ಮಜಿಮ್ ಎಂಬುವನಿಗೆ ಕರೆ ಮಾಡಿ, ಯಾರೋ ನಮ್ಮ ಮನೆಯನ್ನು ಲಾಕ್ ಮಾಡಿದ್ದಾರೆ. ಈಗಾಗಲೇ ಬೆಂಕಿಯನ್ನೂ ಹಚ್ಚಿದ್ದಾರೆ. ಕೂಡಲೇ ಪೊಲೀಸರಿಗೆ ಕರೆ ಮಾಡು ಎಂದು ಹೇಳಿದ್ದಾರೆ. ಮಜೀಮ್ ಕೂಡಲೇ ಸಜಿದುರ್ ತಂದೆಗೆ ಕರೆಮಾಡಿ ವಿಷಯ ತಿಳಿಸಿದ್ದಾನೆ. ಅವರು ಮತ್ತೆ ವಾಪಸ್ ಸಜಿದುರ್ಗೆ ಫೋನ್ ಮಾಡಿದರೆ ಕನೆಕ್ಟ್ ಆಗಲಿಲ್ಲ. ಆದರೆ ಬಳಿಕ ಮುಂಜಾನೆಯೇ ಆ ಸ್ಥಳಕ್ಕೆ ಬಂದರೆ ಸಜಿದುರ್ ಮತ್ತು ಅವರ ಪತ್ನಿಯ ದೇಹ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಹಿರಿಯ ಪೊಲೀಸ್ ಅಧಿಕಾರಿಗಳು ಹತ್ಯಾಕಾಂಡದ ನಂತರ ಗ್ರಾಮದಿಂದ ಕಾಲ್ಕಿತ್ತಿದ್ದ ಜನರನ್ನು ಭೇಟಿ ಮಾಡಿದ್ದು, ಭದ್ರತೆಯ ಭರವಸೆಯನ್ನು ನೀಡಿದ್ದಾರೆ. ಘಟನೆ ಬಳಿಕ 69ಕ್ಕೂ ಹೆಚ್ಚು ಮಂದಿ ಗ್ರಾಮ ತೊರೆದಿದ್ದರು. ಭದ್ರತೆ ಭರವಸೆ ಬಳಿಕ ಹಲವರು ಹಿಂತಿರುಗುತ್ತಿದ್ದಾರೆ. ಇವರಲ್ಲಿ ಕೆಲವರನ್ನು ಮುಖ್ಯಮಂತ್ರಿಗಳು ಭೇಟಿ ಮಾಡಲಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಪ್ರಕರಣವನ್ನು ಕೋಲ್ಕತ್ತ ಹೈಕೋರ್ಟ್ ಸ್ವಯಂಪ್ರೇರಿತ ವಿಚಾರಣೆ ನಡೆಸಿತು. ಸೂಕ್ತ ವಿಚಾರಣೆ ನಡೆದು, ತೀರ್ಪು ಹೊರಬರಬೇಕು ಎಂದರೆ ಸಾಕ್ಷಿಗಳನ್ನು ಸಂರಕ್ಷಿಸಬೇಕು. ಹೀಗಾಗಿ ಕ್ರೈಂ-ಹಿಂಸಾಚಾರ ನಡೆದ ಸ್ಥಳಗಳನ್ನು ಎಲ್ಲ ಆಯಾಮಗಳಿಂದಲೂ ತೋರಿಸುವ ರೀತಿಯಲ್ಲಿ ಆ ಜಾಗದಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಬೇಕು. ಸಾಕ್ಷಿ ನಾಶಕ್ಕೆ ಅವಕಾಶ ಕೊಡಬಾರದು ಮತ್ತು ಈ ಕೆಲಸವನ್ನು ಜಿಲ್ಲಾ ನ್ಯಾಯಾಧೀಶರಾದ ಪುರ್ಬಾ ಭುರ್ದಾವನ್ ಸಮ್ಮುಖದಲ್ಲಿಯೇ ನಡೆಸಬೇಕು ಎಂದು ಪಶ್ಚಿಮ ಬಂಗಾಳ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ.
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಯಾವುದೇ ಅಹಿತಕರ ಘಟನೆ ನಡೆಯದಂತೆ ರಾಮ್ಪುರಹತ್ನಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಮುಖ್ಯಮಂತ್ರಿಯವರ ಹೆಲಿಕಾಪ್ಟರ್ ಇಳಿಯುವ ಹೆಲಿಪ್ಯಾಡ್ ಸುತ್ತ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಮತಾ ಬ್ಯಾನರ್ಜಿ ಅವರು ಬೊಗ್ಟುಯ್‌ಗೆ ಭೇಟಿ ನೀಡುವ ಮೊದಲು ಪೊಲೀಸ್ ಮಹಾನಿರ್ದೇಶಕ ಮನೋಜ್ ಮಾಳವೀಯ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ. ನಂತರ, ಅವರು ಗಾಯಾಳುಗಳನ್ನು ಭೇಟಿ ಮಾಡಲು ರಾಮ್‌ಪುರಹತ್ ಆಸ್ಪತ್ರೆಗೆ ಭೇಟಿ ನೀಡಬಹುದು ಎಂದು ಇನ್ನೊಬ್ಬ ಅಧಿಕಾರಿ ತಿಳಿಸಿದ್ದಾರೆ.
ಟಿಎಂಸಿ ಪಕ್ಷದೊಳಗಿನ ಆಂತರಿಕ ಪೈಪೋಟಿಯಿಂದಾಗಿ ಈ ಹಿಂಸಾಚಾರ ನಡೆದಿದೆ ಎಂದು ಸಿಪಿಐ(ಎಂ) ನಾಯಕ ಸುಜನ್ ಚಕ್ರವರ್ತಿ ಆರೋಪಿಸಿದ್ದಾರೆ.
ಬಿರ್ಭೂಮ್ ಹಿಂಸಾಚಾರದ ಬಗ್ಗೆ ಮಾತನಾಡಿದ ಪ್ರಧಾನಿ ನರೇಂದ್ರಮೋದಿ “ಅಪರಾಧಿಗಳನ್ನು ಬಂಧಿಸಲು” ರಾಜ್ಯ ಸರ್ಕಾರಕ್ಕೆ ಎಲ್ಲಾ ಸಹಾಯದ ಭರವಸೆ ನೀಡಿದ್ದಾರೆ. “ರಾಜ್ಯ ಸರ್ಕಾರವು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತದೆ ಎಂದು ನಾನು ಭಾವಿಸುತ್ತೇನೆ. ಅಂತಹ ಅಪರಾಧಿಗಳನ್ನು ಪ್ರೋತ್ಸಾಹಿಸುವವರನ್ನು ಕ್ಷಮಿಸಬಾರದು” ಎಂದು ಹೇಳಿದ್ದಾರೆ.
ಬೊಗ್ಟುಯಿ ಗ್ರಾಮ ಪ್ರವೇಶಿಸದಂತೆ ಕಾಂಗ್ರೆಸ್ ಹಿರಿಯ ನಾಯಕ ಅಧೀರ್ ರಂಜನ್ ಚೌಧುರಿ ಅವರನ್ನು ಗುರುವಾರ ತಡೆಹಿಡಿದ ಘಟನೆ ನಡೆದಿದೆ. ಘಟನೆ ಸಂಭವಿಸಿದ ಗ್ರಾಮಕ್ಕೆ ಇಂದು ಲೋಕಸಭೆಯ ಕಾಂಗ್ರೆಸ್ ನಾಯಕರು ಹಾಗೂ ಇತರೆ ಪಕ್ಷಗಳ ಸದಸ್ಯರು ಭೇಟಿ ನೀಡಲು ಮುಂದಾಗಿದ್ದು, ಇದರಂತೆ ಗ್ರಾಮದ ಬಳಿಯಿರುವ ಶ್ರೀನಿಕೇತನ್ ಬಳಿ ಎಲ್ಲರನ್ನೂ ತಡೆಹಿಡಿಯಲಾಗಿದೆ. ಇದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ನಾಯಕರು ರಸ್ತೆಗಳಲ್ಲಿ ಕುರಿತು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
ಕೇಂದ್ರ ಗೃಹ ಸಚಿವಾಲಯವು ಹತ್ಯೆಗಳ ಕುರಿತು ವರದಿಯನ್ನು ಕೇಳಿದೆ. ಇದು ರಾಜಕೀಯ ಹಿಂಸಾಚಾರದ ಪ್ರಕರಣವಾಗಿ ತೋರುತ್ತಿಲ್ಲ ಎಂದು ರಾಜ್ಯ ಪೊಲೀಸರು ಮಂಗಳವಾರ ಹೇಳಿದ್ದಾರೆ.
ಘಟನಾ ಸ್ಥಳಕ್ಕೆ ಸಿಪಿಐ(ಎಂ) ಮುಖಂಡರ ತಂಡ ಭೇಟಿ ನೀಡಿದ್ದು, ನೆನ್ನೆ(ಮಾ.23) ಬೆಳಗ್ಗೆ ಭಾರತೀಯ ಜನತಾ ಪರಿವಾರದ ಶಾಸಕರ ತಂಡ ತೆರಳಿದೆ.