ತಿರುವನಂತಪುರಂ: ಮುಂದಿನ ಐದು ವರ್ಷಗಳಲ್ಲಿ ರಾಜ್ಯದಲ್ಲಿರುವ ಭೂರಹಿತ, ದನಿ ಇಲ್ಲದ ಜನರಿಗೆ ಭೂಮಿ ಹಾಗೂ ವಸತಿಯನ್ನು ಒದಗಿಸುವ ನಿಟ್ಟಿನಲ್ಲಿ ವಿಶೇಷವಾದ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.
ಸುಮಾರು 13,500 ಕುಟುಂಬಗಳಿಗೆ ಭೂಮಿ ಹಂಚಿಕೆಗಾಗಿ ‘ಪಟ್ಟಾಯಮ್’ ಎಂಬ ಯೋಜನೆಯು ರಾಜ್ಯದ 14 ಜಿಲ್ಲಾ ಕೇಂದ್ರಗಳಲ್ಲಿ ಹಾಗೂ 77 ತಾಲ್ಲೂಕು ಕೇಂದ್ರಗಳಲ್ಲಿ ಹಮ್ಮಿಕೊಳ್ಳಲಾಗಿದೆ. ಐದು ವರ್ಷಗಳ ಒಳಗೆ ಅರ್ಹ ಫಲಾನುಭವಿಗಳಿಗೆಲ್ಲರಿಗೂ ಭೂಮಿಯನ್ನು ಒದಗಿಸುವುದು, ಎಲ್ಲ ಪರಿಶಿಷ್ಟ ಜಾತಿಯ ಕುಟುಂಬಗಳಿಗೆ ಮನೆಗಳನ್ನು ಕಟ್ಟಿಕೊಡುವುದು ಎಡರಂಗ ಸರ್ಕಾರದ ಗುರಿಯಾಗಿದೆ ಎಂದು ಅವರು ಹೇಳಿದ್ದಾರೆ.
ಮನೆ ಇಲ್ಲದವರಿಗೆ 10 ಲಕ್ಷ ರೂ. ಹಾಗೂ ನಿವೇಶನ ಇಲ್ಲದವರಿಗೆ ಭೂಮಿಯನ್ನೂ ನೀಡಲಾಗುವುದು. ಎಲ್ಲಾ ಬುಡಕಟ್ಟು ಕುಟುಂಬಗಳಿಗೆ ಒಂದು ಎಕರೆ ಕೃಷಿ ಭೂಮಿಯನ್ನು ಒದಗಿಸಲು ಕ್ರಮಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.
ಇದನ್ನು ಓದಿ: ಜನರ ವಿಶ್ವಾಸದಿಂದ ಮತ್ತೆ ಎಲ್‌ಡಿಎಫ್ ಅಧಿಕಾರಕ್ಕೆ : ಡಾ. ವಿ.ಸಿವದಾಸನ್
ಬುಡಕಟ್ಟು ಜನರಿಗೆ ಭೂಮಿಯನ್ನು ಒದಗಿಸಲು ಬರಡು ಭೂಮಿ, ಹೆಚ್ಚುವರಿ ಭೂಮಿ ಹಾಗೂ ಗುತ್ತಿಗೆ ತೋಟಗಳನ್ನು ಬಳಸಿಕೊಳ್ಳಲಾಗುವುದು. ಶೋಷಿತ ವರ್ಗಗಳನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನವನ್ನು ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
12,000 ಕುಟುಂಬಗಳಿಗೆ ಭೂಮಿ ನೀಡುವ ಯೋಜನೆ ರೂಪಿಸಲಾಗಿತ್ತು. ತಾಂತ್ರಿಕ ತೊಡಕುಗಳನ್ನು ಸರಳೀಕರಣಗೊಳಿಸಿರುವುದರಿಂದ 13,500 ಮಂದಿಗೆ ಭೂಮಿ ನೀಡಲು ಸಾಧ್ಯವಾಗುತ್ತಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ಅನನ್ಯ ತಾಂಡಪೆರೆ ಯೋಜನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡುವುದರಿಂದ, ಭೂರಹಿತರಿಗೆ ಹಂಚಿಕೆಗಾಗಿ ಹೆಚ್ಚುವರಿ ಭೂಮಿಯನ್ನು ಹುಡುಕಲು ಸಾಧ್ಯವಾಗುತ್ತದೆ. ಆ ಮೂಲಕ ಹೆಚ್ಚುವರಿ ಮತ್ತು ಅಕ್ರಮವಾಗಿ ಹೊಂದಿರುವ ಭೂಮಿಯನ್ನು ಪತ್ತೆ ಮಾಡಲು ಸಹ ಕ್ರಮಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಹೇಳಿದ್ದಾರೆ.
ಹಿಂದಿನ ಎಡರಂಗ ಸರ್ಕಾರ ತಾಂತ್ರಿಕ ಮತ್ತು ಕಾನೂನಿನ ಅಡೆತಡೆಗಳಿಂದಾಗಿ ಭೂಮಿಯ ಮಾಲೀಕತ್ವದಿಂದ ವಂಚಿತರಾಗಿದ್ದ ಬಹುಪಾಲು ಜನರಿಗೆ ಭೂಮಿ ಮಂಜೂರು ಮಾಡಿದೆ. 2016 ರಿಂದ 2021 ರ ನಡುವೆ ಸುಮಾರು 1.75 ಲಕ್ಷ ಪಟ್ಟಾಯಂಗಳನ್ನು ನೀಡಲಾಗಿದ್ದು ಇದು ಕೇರಳಕ್ಕೆ ಸಾರ್ವಕಾಲಿಕ ದಾಖಲೆಯಾಗಿದೆ ಎಂದು ಅವರು ಹೇಳಿದರು.
ದನಿ ಇಲ್ಲದ ಹಾಗೂ ಭೂ ರಹಿತರಿಗೆ ಭೂಮಿಯನ್ನು ವರ್ಗಾಹಿಸಲು ವಿಶೇಷ ಭೂ ಬ್ಯಾಂಕ್ ಸ್ಥಾಪಿಸಿ ಡಿಜಿಟಲ್ ಸಮೀಕ್ಷೆಯ ಮೂಲಕ ಫಲಾನುಭವಿಗಳನ್ನು ಗುರುತಿಸಲಾಗುವುದು. ಮೊದಲ ಹಂತದ ಸಮೀಕ್ಷೆ ನಡೆಸುವುದಕ್ಕಾಗಿ 339 ಕೋಟಿ ರೂ.ಗಳನ್ನು ನೀಡಲಾಗುತ್ತಿದೆ. ‘ಕೇರಳ ಮರುನಿರ್ಮಾಣ’ ಹೆಸರಲ್ಲಿ ನಾಲ್ಕು ವರ್ಷಗಳೊಳಗೆ ಸಮೀಕ್ಷೆ ನಡೆಸಲಾಗುವುದು ಎಂದು ಪಿಣರಾಯಿ ವಿಜಯನ್ ತಿಳಿಸಿದ್ದಾರೆ.