ಭಾರತ್‌ ಬಂದ್‌ ರಾಜ್ಯದ ಹಲವೆಡೆ ಪ್ರತಿಭಟನೆಯ ಬಿಸಿ: ಕೇಂದ್ರದ ವಿರುದ್ಧ ಮೊಳಗಿದ ರಣಕಹಳೆ

ಬೆಂಗಳೂರು: ಕೃಷಿ ಕಾಯ್ದೆಗಳು, ಕಾರ್ಮಿಕ ಸಹಿತೆಗಳ ರದ್ದತಿ ಸೇರಿದಂತೆ, ಜನತೆಯ ಪ್ರಶ್ನೆಗಳ ಪರಿಹಾರಕ್ಕಾಗಿ ದೇಶವ್ಯಾಪಿ ರೈತ-ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ‘ಭಾರತ ಬಂದ್’ ಗೆ ಬೆಂಗಳೂರು ನಗರ ಸೇರಿದಂತೆ ರಾಜ್ಯದ ಹಲವು ಭಾಗಗಳಲಿ ಪ್ರತಿಭಟನೆಯ ಕಾವು ಜೋರಾಗಿದ್ದವು.

ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಕರೆ ಕೊಟ್ಟಿರುವ ಭಾರತ ಬಂದ್‌ಗೆ ಹಲವು ಕಡೆ ವಿನೂತನ ಪ್ರತಿಭಟನೆಗಳು ನಡೆದಿವೆ. ಹಲವು ಕಡೆಗಳಲ್ಲಿ ರೈತ ಪರ ಸಂಘಟನೆಗಳು ಬೆಳಗ್ಗೆಯಿಂದಲೇ ಪ್ರತಿಭಟನೆ ನಡೆಸಿದ್ದಾರೆ. ಟೌನ್‌ಹಾಲ್‌, ಮೈಸೂರು ಬ್ಯಾಂಕ್‌ ವೃತ್ತ, ಮೌರ್ಯ ವೃತ್ತ, ಕೆ.ಆರ್.ಪುರಂ ಸೇರಿದಂತೆ ನಗರದ ಹಲವಡೆ ಪ್ರತಿಭಟನೆಗಳು ನಡೆದಿವೆ.

ಟೌನ್ ಹಾಲ್ ನಿಂದ ಮೈಸೂರ್‌ ಬ್ಯಾಂಕ್‌ವರೆಗೆ ಮೆರವಣಿ:

ನಗರದ ಟೌನ್‌ಹಾಲ್‌ನಲ್ಲಿ ಅಖಿಲ ಭಾರತ ಕಿಸಾನ್‌ ಸಭಾ ಕೇಂದ್ರ ಸಮಿತಿ(ಎಐಕೆಎಸ್‌ಸಿಸಿ), ಜಂಟಿ ಕಾರ್ಮಿಕ ಸಂಘಟನೆಗಳ ವೇದಿಕೆ(ಜೆಸಿಟಿಯು), ದಲಿತಪರ ಸಂಘಟನೆಗಳು ಸೇರಿದಂತೆ ವಿವಿಧ ಕನ್ನಡ ಪರ ಸಂಘಟನೆಗಳು ಸಾವಿರಾರು ಜನತೆ ಜಮಾಯಿಸಿದ್ದರು.

ಮೈಸೂರು ಬ್ಯಾಂಕಿನಲ್ಲಿ ಸೇರಿದ ಪ್ರತಿಭಟನಾಕಾರರನ್ನು ಉದ್ದೇಶಿಸಿ ವಿವಿಧ ಮುಖಂಡರು ಮಾತನಾಡಿ ಕೇಂದ್ರ ಸರ್ಕಾರ ರೈತ ವಿರೋಧಿ ಧೋರಣೆಗಳನ್ನು ಅನುಸರಿಸುತ್ತಿದೆ. ಈ ಬಗ್ಗೆ ದೆಹಲಿಯಲ್ಲಿ ನಿರಂತರವಾಗಿ ಪ್ರತಿಭಟನೆ ನಡೆಯುತ್ತಿದ್ದರೂ ಸಹ ಎಚ್ಚೆತ್ತುಕೊಳ್ಳುತ್ತಿಲ್ಲ. ಕಣ್ಣು, ಕಿವಿ ಇಲ್ಲದಂತೆ ವರ್ತಿಸುತ್ತಿದೆ. ರೈತ ವಿರೋಧಿಯಾದಂತಹ ಕಾನೂನುಗಳನ್ನು ಸರ್ಕಾರ ಕೂಡಲೇ ವಾಪಸ್ ಪಡೆಯಬೇಕು. ದೇಶದಲ್ಲಿ ಕಾರ್ಮಿಕರ ರಕ್ಷಣೆಗಾಗಿ ಇದ್ದಂತಹ 45ಕ್ಕೂ ಹೆಚ್ಚಿನ ಕಾರ್ಮಿಕ ಕಾನೂನುಗಳನ್ನು ಬದಲಿಸಿ ರಕ್ಷಣೆ ಇಲ್ಲದಂತಹ ಕೇವಲ ನಾಲ್ಕು ಸಂಹಿತೆಗಳಾನ್ನಾಗಿ ಮಾರ್ಪಡಿಸುತ್ತಿರುವು ಕೂಡಲೇ ವಾಪಸ್ಸು ಪಡೆಯಬೇಕು. ಅಲ್ಲದೆ, ಗಗನಕ್ಕೆ ಏರಿರುವ ಅಡುಗೆ ಎಣ್ಣೆ, ಪೆಟ್ರೋಲ್-ಡೀಸೆಲ್ ಬೆಲೆಗಳು, ಗ್ಯಾಸ್‌ ಸಿಲಿಂಡರ್‌ ಬೆಲೆಗಳು, ದಿನನಿತ್ಯದ ಆಹಾರ ಪದರ್ಥಗಳ ಬೆಲೆ ಏರಿಕೆಯಿಂದಾಗಿ ಜನ ಸಾಮಾನ್ಯರ ಸ್ಥಿತಿ ದುಸ್ಥಿತಿಗೆ  ಕಾರಣವಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಮೈಸೂರು ಬ್ಯಾಂಕ್‌ ವೃತ್ತದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ರೈತ ಮುಖಂಡರಾದ ಕೋಡಿಹಳ್ಳಿ ಚಂದ್ರಶೇಖರ್‌, ಜಿ.ಸಿ.ಬಯ್ಯಾರೆಡ್ಡಿ, ಬಡಗಲಪುರ ನಾಗೇಂದ್ರ, ಕಾರ್ಮಿಕ ಮುಖಂಡರಾದ ಎಸ್‌.ವರಲಕ್ಷ್ಮಿ, ಕೆ.ವಿ.ಭಟ್‌, ಎಸ್‌.ಎಸ್‌.ಪ್ರಕಾಶಂ, ಅಪ್ಪಣ್ಣ, ದಲಿತ ಸಂಘಟನೆಯ ಮುಖಂಡರಾದ ಮಾವಳ್ಳಿ ಶಂಕರ್‌, ಗುರುಪ್ರಸಾದ್‌ ಕೆರೆಗೂಡು ಮತ್ತಿತರ ಮುಖಂಡರು ಭಾಷಣ ಮಾಡಿದರು.

ಬಿಎಂಟಿಸಿ ಬಸ್‌ ನಿಲ್ದಾಣದಲ್ಲಿ ಬಸ್ ಸಂಚಾರ ತಡೆಯಲು ಯತ್ನಿಸಿದ ಕನ್ನಡ ಪರಸಂಘಟನೆಗಳ ಮುಂಖಡರಾದ ಸಾ.ರಾ. ಗೋವಿಂದು, ಶಿವರಾಮೇಗೌಡ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೌರ್ಯ ವೃತ್ತದ ಬಳಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಸಹಿತ ಹಲವು ಪ್ರತಿಭಟನೆಕಾರರನ್ನು ಪೊಲೀಸರು ಬಂಧಿಸಿದ್ದಾರೆ.

ಸಾ.ರಾ. ಗೋವಿಂದು, ಕರ್ನಾಟಕ ರಕ್ಷಣಾ ವೇದಿಕೆಯ ಶಿವರಾಮೇಗೌಡ ಸೇರಿದಂತೆ ಹಲವು ಕಾರ್ಯಕರ್ತರು ಮತ್ತು ರೈತ ಪ್ರತಿನಿಧಿಗಳು ಮೆಜೆಸ್ಟಿಕ್ ಬಳಿಯ ಭಾಗ್ಯ ವಿನಾಯಕ ದೇವಸ್ಥಾನದ ಬಳಿ ಪ್ರತಿಭಟನೆಗೆ ಮುಂದಾದರು.

ಕೆ.ಆರ್. ಪುರಂ ಬಿಬಿಎಂಪಿ ಕಚೇರಿ ಎದುರು ರೈತ ಸಂಘಟನೆಗಳು, ಮಹಿಳಾ ಸಂಘಟನೆಗಳ ಕಾರ್ಯಕರ್ತರು ಬಿಬಿಎಂಪಿ ಕಚೇರಿಯ ರಸ್ತೆಯಲ್ಲಿ ಕೂತು ಪ್ರತಿಭಟನೆ ನಡೆಸಿದರು. ಇದರಿಂದ ಹಳೇ ಮದ್ರಾಸು ರಸ್ತೆಯಲ್ಲಿ ಸಂಚರಿಸುವ ವಾಹನಗಳು ಸಾಲುಗಟ್ಟಿ ನಿಂತಿದ್ದವು.

ಮಾಗಡಿ ರಸ್ತೆಯ ಗೊಲ್ಲರಹಳ್ಳಿ ನೈಸ್ ರೋಡ್ ಜಂಕ್ಷನ್ ನಲ್ಲಿ ಪ್ರತಿಭಟನೆ ಮಾಡಲು ರೈತ ಮುಖಂಡರು ಮುಂದಾದರು. ಈ ಸಂದರ್ಭದಲ್ಲಿ ಹಲವು ರೈತ ಮುಖಂಡರು ಜಮಾಯಿಸಿದ್ದು, ಪೊಲೀಸರ ಸಹ ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು.

ಗೊರಗುಂಟೆಪಾಳ್ಯದಲ್ಲಿ ಪ್ರತಿಭಟನಾ ನಿರತರನ್ನು ನಿಯಂತ್ರಿಸುತ್ತಿದ್ದ ಉತ್ತರ ವಿಭಾಗದ ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ ಅವರ ಕಾಲಿನ ಮೇಲೆ ಖಾಸಗಿ ಕಾರು ಹತ್ತಿದ್ದು, ಕಾಲಿಗೆ ಸಣ್ಣ ಗಾಯವಾಗಿದೆ. ಟೌನ್ ಹಾಲ್ ಗೆ ತೆರಳಲು ಪ್ರತಿಭಟನೆ ನಡೆಸುತ್ತಿದ್ದ ಹೋರಾಟಗಾರರನ್ನು ನಿಯಂತ್ರಣ ಮಾಡಲಾಗುತ್ತಿತ್ತು. ಇದೇ ವೇಳೆ ವಾಹನ ಸಂಚಾರಕ್ಕೆ ಅಡ್ಡಿಯಾಗದಂತೆ ವ್ಯವಸ್ಥೆ ಮಾಡಲಾಗುತ್ತಿತ್ತು. ಈ ವೇಳೆ ಉತ್ತರ ವಿಭಾಗದ ಡಿಸಿಪಿ ಧಮೇಂದ್ರ ಅವರ ಕಾಲಿನ ಮೇಲೆ ಕಾರು ಹತ್ತಿದ್ದು ಸಣ್ಣ ಗಾಯವಾಗಿದೆ.

ಧಾರವಾಡದಲ್ಲಿ ಎಮ್ಮೆಗಳ ಮೆರವಣಿಗೆ: ಭಾರತ್‌ ಬಂದ್‌ಗೆ ಹುಬ್ಬಳ್ಳಿ – ಧಾರವಾಡ ಮಹಾನಗರದಲ್ಲಿ ಬಂದ್‌ ಭಾಗವಾಗಿ ಬೆಳಿಗ್ಗಿನಿಂದಲೇ ಬೀದಿಗಿಳಿದ ರೈತರು, ಖಾಸಗಿ ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಿದರು. ಈ ವೇಳೆ ರೈತರೊಬ್ಬರು ಆಟೋ ಚಾಲಕನನ್ನ ತಡೆದು, ಆತನ ಕಾಲಿಗೆ ಬಿದ್ದು ಪ್ರತಿಭಟನೆಗೆ ಬೆಂಬಲ ನೀಡುವಂತೆ ಮನವಿ ಮಾಡಿದ ಘಟನೆಯೂ ನಡೆಯಿತು. ಜಯ ಕರ್ನಾಟಕ ಸಂಘಟನೆ ವಿಭಿನ್ನವಾಗಿ ಪ್ರತಿಭಟನೆ ನಡೆಸಿ, ಸೈಕಲ್ ಸವಾರಿ ಮತ್ತು ಎಮ್ಮೆಯನ್ನು ಕರೆತಂದು ಪ್ರತಿಭಟನೆ ನಡೆಸಿದರು. ವಿವಿಧ ಕನ್ನಡಪರ ಸಂಘಟನೆ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಸಿಪಿಐಎಂ-ಬಿಜೆಪಿ ನಡುವೆ ಮಾತಿನ ಚಕಮಕಿ: ಕೋಲಾರ ನಗರದಲ್ಲಿ ಸಿಪಿಐ(ಎಂ) ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಬಸ್‌ ಗಳನ್ನು ತಡೆದು ಪ್ರತಿಭಟನೆ ಮಾಡಲು ಮುಂದಾದ ಸಿಪಿಐಎಂ ಹಾಗೂ ರೈತರ ಪ್ರತಿಭಟನೆ ಖಂಡಿಸಿ ಕೋಲಾರ ನಗರ ಘಟಕದ ಬಿಜೆಪಿ ಕಾರ್ಯಕರ್ತರು ಅದೇ ಸ್ಥಳಕ್ಕೆ ಬಂದು ಪ್ರತಿಭಟನೆ ಮಾಡಿದರು. ಎರಡು ಬಣಗಳ ನಡುವೆ ಮಾತಿನ ಚಕಮಕಿ ನಡೆಯಿತು. ಸ್ಥಳಕ್ಕೆ ಧಾವಿಸಿದ ಡಿವೈಎಸ್ಪಿ ರಮೇಶ್ ನೇತೃತ್ವದಲ್ಲಿ ಪೊಲೀಸರು ಎರಡು ಬಣ ಚದುರಿಸಿ ಪರಿಸ್ಥಿತಿ ಶಾಂತಗೊಳಿಸಿದರು.

ಚಿತ್ರದುರ್ಗದಲ್ಲಿ ಮೋದಿ ಭಾವಚಿತ್ರಕ್ಕೆ ಈರುಳ್ಳಿ ಹಾರ ಹಾಕಿ ಪ್ರತಿಭಟನೆ ನಡೆಸಿದ್ದಾರೆ. ಬಳ್ಳಾರಿಯಲ್ಲೂ ಪ್ರತಿಭಟನೆಗೆ ಉತ್ತಮ ಬೆಂಬಲ ವ್ಯಕ್ತವಾಗಿದೆ, ಹಗರಿಬೊಮ್ಮನಹಳ್ಳಿ, ಹೊಸಪೇಟೆ, ಬಳ್ಳಾರಿ, ಕೂಡ್ಲಗಿ, ಕಂಪ್ಲಿ ಸೇರಿದಂತೆ  ಜಿಲ್ಲೆಯ ಎಲ್ಲಾ ತಾಲ್ಲೂಕು ಕೇಂದ್ರದಲ್ಲಿ ಬಂದ್‌ ನ ಬಿಸಿ ತಟ್ಟಿತ್ತು.

ಹಾಸನದಲ್ಲೂ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ರೈತ ಸಂಘಟನೆ, ಕಾರ್ಮಿಕ ಸಂಘಟನೆ, ದಲಿತ ಸಂಘಟನೆ, ಕನ್ನಡಪರ ಸಂಘಟನೆಗಳು ಬಂದ್‌ ನಲ್ಲಿ ಭಾಗವಹಿಸಿದ್ದವು. ಕೇಂದ್ರ ರಾಜ್ಯ ಸರಕಾರಗಳ ವಿರುದ್ದ ಘೋಷಣೆಗಳನ್ನು ಮೊಳಗಿಸಿದರು.

ಧಾರವಾಡದಲ್ಲೂ ಪ್ರತಿಭಟನೆಗೆ ಉತ್ತಮ ಬೆಂಬಲ ವ್ಯಕ್ತವಾಗಿದೆ. ಹಾವೇರಿ, ರೋಣ, ಗದಗ್‌, ಹುಬ್ಬಳ್ಳಿ ಸೇರಿದಂತೆ ಅನೇಕ ಕಡೆಗಳಲ್ಲಿ ಬಂದ್‌ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಚಿಕ್ಕಬಳ್ಳಾಪುರ, ತುಮಕೂರು, ಮೈಸೂರು, ಮಂಡ್ಯ ಜಿಲ್ಲೆಯಲ್ಲೂ ಪ್ರತಿಭಟನೆಗೆ ಉತ್ತಮ ಬೆಂಬಲ ವ್ಯಕ್ತವಾಗಿದೆ. ಪ್ರತಿಭಟನೆಯಲ್ಲಿ ರೈತರು, ಕಾರ್ಮಿಕರು, ವಿದ್ಯಾರ್ಥಿ – ಯುವಜನರು, ದಲಿತ ಸಂಘಟನೆಗಳು, ಕನ್ನಡಪರ ಸಂಘಟನೆಗಳು ಬೆಂಬಲವನ್ನು ನೀಡಿದ್ದವು.

ಕೊಪ್ಪಳ, ರಾಯಚೂರಿನಲ್ಲೂ ಭಾರತ್‌ ಬಂದ್‌ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಿಂದನೂರು, ರಾಯಚೂರು, ಲಿಂಗಸಗೂರು, ಮಸ್ಕಿ, ಕೊಪ್ಪಳ, ಗಂಗಾವತಿ, ಯಲಬುರ್ಗಾ, ಕನಕಗಿರಿ, ಕುಷ್ಟಗಿ ತಾಲ್ಲೂಕುಗಳಲ್ಲಿ ಭಾರತ್‌ ಬಂದ್‌ ಗೆ ಉತ್ತಮ ಬೆಂಬಲ ವ್ಯಕ್ತವಾಗಿದೆ.

ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲೂ ಪ್ರತಿಭಟನೆಗೆ ಉತ್ತಮ ಬೆಂಬಲ ವ್ಯಕ್ತವಾಗಿದೆ. ಕಾರ್ಮಿಕರು, ರೈತರು, ಕೂಲಿಕಾರರು, ಬೀಡಿ ಕಾರ್ಮಿಕರು, ಹೆಂಚು ಕಾರ್ಮಿಕರು ಪ್ರತಿಭಟನೆಯಲ್ಲಿ ಭಾಗವಹಿಸಿ ಕೇಂದ್ರ ರಾಜ್ಯ ಸರಕಾರಗಳ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದರು.

ಕಲಬುರ್ಗಿ, ಬೀದರ್‌, ಯಾದಗಿರಿ, ಬಾಗಲಕೋಟೆ, ಬಿಜಾಪುರ, ಬೆಂಗಳೂರು ಗ್ರಮಾಂತರ ಜಿಲ್ಲೆಗಳಲ್ಲಿ ಪ್ರತಿಭಟನೆಗೆ ಉತ್ತಮ ಬೆಂಬಲ ವ್ಯಕ್ತವಾಗಿದೆ. ರೈತರು, ಕಾರ್ಮಿಕರು, ಮಹಿಳೆಯರು ಪ್ರತಿಭಟನೆಗೆ ಸಾತ್‌ ನೀಡುವ ಮೂಲಕ ಕೇಂದ್ರ ರಾಜ್ಯ ಸರಕಾರಗಳ ವಿರುದ್ಧ ಘೋಷಣೆ ಮೊಳಗಿಸಿದರು.

ಒಟ್ಟಾರೆ ಭಾರತ್‌ ಬಂದ್‌ ಗೆ ಉತ್ತಮ ಬೆಂಬಲ ವ್ಯಕ್ತವಾಗಿದೆ. ಈಗಾಗಲೆ ಕೇಂದ್ರ ಸರಕಾರಕ್ಕೆ ಹಲವಾರು ಬಾರಿ ಮನವಿ ಮಾಡಿದ್ದರೂ ಸರಕಾರ ಎಚ್ಚೆತ್ತು ಕೊಂಡಿಲ್ಲ. ಕಳೆದ ಎಪ್ರಿಲ್‌ ನಲ್ಲಿ ನಡೆದ ಚುನಾವಣೆಯಲ್ಲಿ ಈಗಾಗಲೆ ಬಿಜೆಪಿಯನ್ನು ಸೋಲಿಸಲಾಗಿದೆ.  ಮುಂದಿನ ಚುನಾವಣೆಯಲ್ಲಿ ಬಿಜೆಗೆ ತಕ್ಕ ಪಾಠವನ್ನು ಕಲಿಸಲಾಗುವುದು ಹಾಗೂ ಹೋರಾಟವನ್ನು ಇನ್ನಷ್ಟು ತೀವೃಗೊಳಿಸುವ ಕೆಲಸವನ್ನು ಮಾಡಲಾಗುವುದು ಎಂದು ರೈತ – ಕಾರ್ಮಿಕ- ದಲಿತ ಸಂಘಟನೆಗಳು ಕರೆ ನೀಡಿವೆ.

 

ರಾಜ್ಯದ ವಿವಿಧೆಡೆ ನಡೆದ ಪ್ರತಿಭಟನೆ ದೃಶ್ಯಗಳು

 

Donate Janashakthi Media

Leave a Reply

Your email address will not be published. Required fields are marked *