ಭಾಗ – 13 ʻವೀರʼ ಸಾವರ್ಕರ್‌ – ಏಳು ಮಿಥ್ಯೆಗಳು

ಡಾ.ಶಮ್ಸುಲ್ ಇಸ್ಲಾಂ
ಅನು: ಟಿ.ಸುರೇಂದ್ರ ರಾವ್

ಮಿಥ್ಯೆಗಳನ್ನು ಸತ್ಯಸಂಗತಿಗಳಿಂದ ಬೇರ್ಪಡಿಸುವ ಒಂದು ಪ್ರಾಮಾಣಿಕ ಆಕಾಂಕ್ಷೆಯಿಂದ ರಚಿಸಿರುವ ಡಾ.ಶಮ್ಸುಲ್ ಇಸ್ಲಾಮ್ ರವರ ʻಸಾವರ್ಕರ್ ಅನ್‌ಮಾಸ್ಕ್ಡ್‌ʼ ಸಾವರ್ಕರ್‌ ರವರನ್ನು ಕುರಿತ ಏಳು ಮಿಥ್ಯೆಗಳನ್ನು ದಾಖಲೆಗಳ ಬೆಳಕಿನಲ್ಲಿ ಪರಿಶೀಲಿಸುತ್ತದೆ.

ಮೊದಲ ಮಿಥ್ಯೆ ʻಸಾವರ್ಕರ್ ಒಬ್ಬ ದಂತಕತೆಯಾದ ಸ್ವಾತಂತ್ರ್ಯ ಹೋರಾಟಗಾರʼ! ಎಂಬುದು. ಇದುವರೆಗೆ ಈ ಮಿಥ್ಯೆ ಎಂತಹ ಅರೆ ಸತ್ಯಗಳು ಮತ್ತು ಸುಳ್ಳುಗಳಿಂದ ಕೂಡಿದೆ ಎಂಬುದನ್ನು ಓದಿದ್ದೀರಿ. ಇದರಲ್ಲಿ, ಭಾರತವು ಹಿಂದೂ ಮತ್ತು ಮುಸ್ಲಿಮರ ನಡುವಿನ ಘರ್ಷಣೆಯ ಕಣವಾಗಿತ್ತು ಎಂಬ ವಾದವನ್ನಾಗಲೀ ಅಥವಾ ಹಿಂದೂಗಳು ಮಾತ್ರ ಭಾರತದ ಸಹಜ ದೇಶಪ್ರೇಮಿಗಳು ಎಂಬ ನಂಬಿಕೆಯನ್ನಾಗಲೀ ಹೊಂದಿರದಿದ್ದ, ಕೋಮು ಸಾಮರಸ್ಯದ  ಸ್ವತಂತ್ರ ಭಾರತದ ಆದರ್ಶಕ್ಕಾಗಿ ತುಡಿಯುತ್ತಿದ್ದ ಕ್ರಾಂತಿಕಾರಿಯಾಗಿದ್ದ ಸಾವರ್ಕರ್‌ ರವರ ರಾಜಕೀಯ ಜೀವನದ ಮೊದಲ ಘಟ್ಟವನ್ನು ಮತ್ತು ಸೆಲ್ಯುಲರ್ ಜೈಲಿನಲ್ಲಿನ ಕಾರಾಗೃಹವಾಸ ಮತ್ತು ಅಲ್ಲಿನ ಘೋರ ಯಾತನೆಯಿಂದ ಸಂಪೂರ್ಣವಾಗಿ ಕುಗ್ಗಿ, ಸ್ವಾತಂತ್ರ್ಯ ಚಳುವಳಿಯ ಸಂದರ್ಭದಲ್ಲಿನ ಹಿಂದೂ-ಮುಸ್ಲಿಂ ಐಕ್ಯತೆಯಿಂದ ಆತಂಕಿತರಾಗಿದ್ದ ಬ್ರಿಟಿಷ್ ದೊರೆಗಳಿಗೆ ಕ್ಷಮಾಯಾಚನೆಯ ಅರ್ಜಿ ಸಲ್ಲಿಸುವುದರೊಂದಿಗೆ ಆರಂಭಿಸಿದ ರಾಜಕೀಯ ಬದುಕಿನ ಎರಡನೇ ಘಟ್ಟವನ್ನು ಸ್ಪಷ್ಟವಾಗಿ ಗುರುತಿಸುವ ಲೇಖಕರು,  ಹೇಗೆ ಸಾವರ್ಕರ್ ಬ್ರಿಟಿಷ್ ದೊರೆಗಳ ಆವಶ್ಯಕತೆಯನ್ನು ಈಡೇರಿಸಿದರು ಎಂಬುದನ್ನು ಓದಿದ್ದೀರಿ. ಬ್ರಿಟಿಷರ ಒಡೆದು ಆಳುವ ಯೋಜನೆಯಲ್ಲಿ ಅವರು ಎಷ್ಟು ಮುಖ್ಯವಾಗಿದ್ದರು, ಅಲ್ಪಸಂಖ್ಯಾತರದ್ದು ʻದೇಶಾತೀತ ಸ್ವಾಮಿನಿಷ್ಠೆʼ ಎಂದು ದೂಷಿಸಿದ್ದ ಅವರೇ ವಾಸ್ತವವಾಗಿ ಹೇಗೆ ಧರ್ಮದ ಹೆಸರಿನಲ್ಲಿ ದೇಶಾತೀತ ಸ್ವಾಮಿನಿಷ್ಠೆಯನ್ನು ಪ್ರದರ್ಶಿಸಿದ್ದರು, ಒಂದೆಡೆಯಲ್ಲಿ ರಾಷ್ಟ್ರೀಯ ಆಂದೋಲನ ಅಂಗೀಕರಿಸಿದ್ದ ತ್ರಿವರ್ಣ ಬಾವುಟದ ಕಡು ವಿರೋಧಿಯಾಗಿದ್ದರೆ, ಇನ್ನೊಂದೆಡೆಯಲ್ಲಿ ಹೇಗೆ ಬ್ರಿಟಿಷರ ಬಂಟರಾಗಿದ್ದ ಹಿಂದೂ ರಾಜರುಗಳ ಮಹಾಸಮರ್ಥಕರಾಗಿದ್ದರು ಎಂಬುದನ್ನು ಓದಿದ್ದೀರಿ.

ಇದನ್ನು ಓದಿ: ಭಾಗ -1 ‘ವೀರ’ ಸಾವರ್ಕರ್-ಏಳು ಮಿಥ್ಯೆಗಳು

ಸಾವರ್ಕರ್ ತಮ್ಮ ಬದುಕಿನ ಬಹುಭಾಗವನ್ನು ಅಂಡಮಾನಿನ ಸೆಲ್ಯುಲರ್ ಜೈಲಿನಲ್ಲಿ ಕಳೆದರು ಎಂದು ಹಿಂದುತ್ವ ಪ್ರಚಾರಕರು ಹರಡಿರುವ ಎರಡನೇ ಮಿಥ್ಯೆಯ ಪರಿಶೀಲನೆ ಈ ಸಂಚಿಕೆಯಿಂದ ಆರಂಭವಾಗುತ್ತಿದೆ…..

50 ವರ್ಷಗಳ ಶಿಕ್ಷೆಯಲ್ಲಿ ಬ್ರಿಟಿಷ್ ದೊರೆಗಳ ಕೃಪೆಯಿಂದ 37 ವರ್ಷಗಳ ಮಾಫಿ!

ಸಾವರ್ಕರ್ ಅವರು ಬ್ರಿಟಿಷ್ ಆಳ್ವಿಕೆಯಲ್ಲಿ ಎರಡು ಜೀವಾವಧಿ ಶಿಕ್ಷೆ (50 ವರ್ಷಗಳು) ಅನುಭವಿಸಿದರು ಎಂದು ಉದ್ದೇಶಪೂರ್ವಕವಾದ   ತಪ್ಪು ಮಾಹಿತಿಯನ್ನು ನೀಡುವ ವ್ಯವಸ್ಥಿತ ಪ್ರಯತ್ನ ನಡೆಯುತ್ತಿದೆ. ಅವರು ʻತಮ್ಮ ಬದುಕಿನ ಅತ್ಯುತ್ತಮ ಸಮಯವನ್ನು– ಕಾಲು ಶತಮಾನಗಳ ಕಾಲ ಬ್ರಿಟಿಷರ ಜೈಲಿನಲ್ಲಿ ಕಳೆದಿದ್ದಾರೆʼ ಎಂದೂ ಕೆಲವರು ಹೇಳುವುದುಂಟು.

ಇದನ್ನು ಓದಿ: ಭಾಗ – 2 `ವೀರ’ ಸಾವರ್ಕರ್- ಏಳು ಮಿಥ್ಯೆಗಳು

ವಾಸ್ತವಾಂಶಗಳು

ಸಾವರ್ಕರ್ ಅವರಿಗೆ ಎರಡು ಬಾರಿ ಜೀವಾವಧಿ ಶಿಕ್ಷೆ ವಿಧಿಸಿದ್ದಾರಾದರೂ, ಅವರು ಅಂಡಮಾನಿನ ಕರಿ ನೀರಿನ ಭಯಾನಕ ಜೈಲಿನಲ್ಲಿ ಕಳೆದಿದ್ದು ಕೇವಲ 10 ವರ್ಷಗಳು ಮಾತ್ರ ಮತ್ತು ಬ್ರಿಟಿಷರ ಬಂಧನದಲ್ಲಿ ಒಟ್ಟು 13 ವರ್ಷಗಳಿಗಿಂತಲೂ ಕಡಿಮೆ ಶಿಕ್ಷೆ ಅನುಭವಿಸಿದ್ದಾರೆ ಅಷ್ಟೆ. ಆದರೆ ಹಿಂದುತ್ವ ಪಡೆಯು ಸತ್ಯವನ್ನು ತಿರುಚಿ ತಮ್ಮ ಮನಸ್ಸಿಗೆ ಬಂದ ಹಾಗೆ ಸುಳ್ಳುಗಳನ್ನು ಹೇಳುವುದರ ಮೂಲಕ ದೊಡ್ಡ ವಂಚನೆ ಮಾಡುತ್ತಿದೆ. ಆದ್ದರಿಂದ ನಾವು ಈಗ ಸತ್ಯ ಏನು ಎನ್ನುವುದನ್ನು ಚರಿತ್ರೆಯ ಪುಟಗಳಿಂದ ತಿಳಿದುಕೊಳ್ಳೋಣ.

ಅಪರಾಧಿಯಾಗಿ ಸಾವರ್ಕರ್

ಮಾರ್ಚ್ 13, 1910 ರಂದು ಲಂಡನ್ ನಲ್ಲಿ ಬಂಧಿಸಲ್ಪಟ್ಟ ಸಾವರ್ಕರ್ ಅವರನ್ನು ಜುಲೈ 1, 1910 ರಂದು ವಿಚಾರಣೆಗಾಗಿ ಭಾರತ ಸರ್ಕಾರಕ್ಕೆ ಒಪ್ಪಿಸಲಾಯಿತು. ಎರಡು ವಿಶೇಷ ಟ್ರಿಬುನಲ್‌ಗಳು ಅನುಕ್ರಮವಾಗಿ ಡಿಸೆಂಬರ್ 23, 1910 ಮತ್ತು ಜನವರಿ 30, 1911 ರಂದು ತೀರ್ಪು ನೀಡಿ ಎರಡು ಜೀವಾವಧಿ ಗಡಿಪಾರು ಶಿಕ್ಷೆಯನ್ನು ನೀಡಿದವು. ಒಟ್ಟು 50 ವರ್ಷಗಳ ಎರಡು ಶಿಕ್ಷೆಗಾಗಿ ಅವರನ್ನು ಅಂಡಮಾನ್ ಜೈಲಿಗೆ ಜುಲೈ 4, 1911 ರಂದು ಕಳಿಸಲಾಯಿತು. ಆದರೆ ಕೇವಲ 10 ವರ್ಷಗಳ ಒಳಗಡೆಯೇ ಅವರನ್ನು ಅವರ ಸೋದರ ಬಾಬಾರಾವ್‌ ರೊಂದಿಗೆ ಪಶ್ಚಿಮ ಭಾರತದ ರತ್ನಗಿರಿ ಮತ್ತು ಯೆರವಾಡಾ ಜೈಲಿಗೆ ಸ್ಥಳಾಂತರಿಸಲಾಯಿತು. ಜನವರಿ 6, 1924 ರಂದು ಕೆಲವು ಷರತ್ತುಗಳೊಂದಿಗೆ ಅವರನ್ನು ಬಿಡುಗಡೆ ಮಾಡಲಾಯಿತು. ಆದರೆ, ರತ್ನಗಿರಿಯ ಹಿಂದೂ ಮಹಾಸಭಾದ ಜಗಳಗಂಟ ವಾಮನ್ ರಾವ್ ಚವಾಣ್ ಎನ್ನುವವರು ಬ್ರಿಟಿಷ್ ಮಿಲಿಟರಿ ಅಧಿಕಾರಿ ಸ್ವೀಟ್ ಲ್ಯಾಂಡ್ ಎಂಬವರ ಮೇಲೆ ಗುಂಡಿನಿಂದ ಹೊಡೆದ ಪ್ರಕರಣದಲ್ಲಿ ಸಾವರ್ಕರ್ ಅವರನ್ನು 1934 ರ ಮೇ ತಿಂಗಳಲ್ಲಿ ಎರಡು ವಾರಗಳ ಕಾಲ ಬಂಧನದಲ್ಲಿ ಇರಿಸಲಾಯಿತು. ಅವನಿಗೂ ತನಗೂ ಯಾವುದೇ ಸಂಬಂಧವಿಲ್ಲವೆಂದು ಹೇಳಿಕೆ ನೀಡಿ, ಇನ್ನು ಮುಂದೆ ಯಾವುದೇ ರಾಜಕೀಯ ಚಳವಳಿಯಿಂದ ದೂರವಿರುವುದಾಗಿ ಮುಚ್ಚಳಿಕೆ ಬರೆದುಕೊಟ್ಟು ಅಲ್ಲಿಂದ ಬಿಡುಗಡೆ ಪಡೆದರು.

ಇದನ್ನು ಓದಿ: ಭಾಗ – 3 ‘ವೀರ’ ಸಾವರ್ಕರ್ – ಏಳು ಮಿಥ್ಯೆಗಳು

ಮೇ 10, 1937 ರಂದು ಅವರ ಬಿಡುಗಡೆಗೆ ಇದ್ದ ಎಲ್ಲಾ ಷರತ್ತುಗಳನ್ನು ಕೂಡ ಹಿಂದಕ್ಕೆ ಪಡೆಯಲಾಯಿತು. ಹೀಗೆ ಒಟ್ಟಿನಲ್ಲಿ 50 ವರ್ಷಗಳ ಜೈಲು ಶಿಕ್ಷೆಯಲ್ಲಿ ಅವರು 13 ವರ್ಷಗಳು ಮಾತ್ರ ಜೈಲಿನಲ್ಲಿದ್ದರು. ಅಂದರೆ ಬ್ರಿಟಿಷ್ ದೊರೆಗಳೊಂದಿಗೆ ಸನ್ನಡತೆಯ ಆಧಾರದಲ್ಲಿ ಬಿಡುಗಡೆ ಪಡೆಯುವಲ್ಲಿ 37 ವರ್ಷಗಳ ಅವಧಿಯ ಜೈಲು ವಾಸದಿಂದ ಮಾಫಿ ಪಡೆಯಲು ಸಾವರ್ಕರ್‌ ಗೆ ಸಾಧ್ಯವಾಯಿತು. 1924 ರಲ್ಲಿ ಬಿಡುಗಡೆಯಾದ ನಂತರ ಸಾಮ್ರಾಜ್ಯಶಾಹಿ-ವಿರೋಧಿ ಹೋರಾಟದಿಂದ ಅವರು ದೂರ ಉಳಿದರು.

ಮಾನಿನಿ ಚಟರ್ಜಿ ಅವರ ಪ್ರಕಾರ ʻಬಹಳ ಶೋಚನೀಯ ಸಂಗತಿಯೆಂದರೆʼ ಅಂಡಮಾನಿನ ಸೆಲ್ಯುಲರ್ ಜೈಲಿನಲ್ಲಿ ನಿಜವಾದ ಹೋರಾಟಗಾರರು ಮತ್ತು ಹುತಾತ್ಮರಿಗೆ ಇತಿಹಾಸದ ಪುಟಗಳಲ್ಲಿ ಅವರ ಸ್ಥಾನ ನೀಡದೆ ವಂಚಿಸಲಾಗಿದೆ. ರಾಮ ನಾಯ್ಕ್ ಹಾಗೂ ಒಟ್ಟಾರೆ ಸಂಘ ಪರಿವಾರದವರಿಗೆ, ಸೆಲ್ಯುಲರ್ ಜೈಲಿನಲ್ಲಿ ಮಡಿದ ಹಾಗೂ ಬಿಡುಗಡೆಯಾದ ಸಾವಿರಾರು ಹೋರಾಟಗಾರರ ನಡುವೆ ವಿನಾಯಕ್ ದಾಮೋದರ್ ಸಾವರ್ಕರ್ ಒಬ್ಬ ಮಾತ್ರ ಸ್ಮರಣಾರ್ಹ ನಾಯಕ ಎನ್ನುವುದು ತೀರಾ ದುಃಖಕರ ವಿಷಯ. ಜೈಲಿನಲ್ಲಿನ ಅಮಾನವೀಯ ಪರಿಸ್ಥಿತಿಯಿಂದಾಗಿ ಗಧರ್ ಕ್ರಾಂತಿಕಾರಿಗಳು ಅಥವಾ ಬಂಗಾಳದ ʻಭಯೋತ್ಪಾದಕರುʼ ಬ್ರಿಟಿಷರಿಂದ ದಯಾ ಭಿಕ್ಷೆ ಬೇಡಿದ್ದರು. ಆದರೆ ಅವರಲ್ಲಿ ಯಾರೂ ಕೂಡ ತಮ್ಮ ಬಿಡುಗಡೆಗೆ ವಿನಿಮಯವಾಗಿ ಭಾರತದ ವಿಮೋಚನೆಗಾಗಿನ ಅವರ ಹೋರಾಟವನ್ನು ನಿಲ್ಲಿಸಲು ಒಪ್ಪಲಿಲ್ಲ.4 ಕೇವಲ 9 ವರ್ಷ 10 ತಿಂಗಳು ಮಾತ್ರ ಜೈಲಿನಲ್ಲಿದ್ದು ದಯಾ ಭಿಕ್ಷೆ ಬೇಡಿ ಹೊರಬಂದು ಸ್ವಾತಂತ್ರ್ಯ ಚಳುವಳಿಗೆ ದ್ರೋಹ ಬಗೆದ ಸಾವರ್ಕರ್ ಮಾತ್ರ ಸಂಘ ಪರಿವಾರದವರಿಗೆ ಮಹಾನ್ ಸ್ವಾತಂತ್ರ್ಯ ಹೋರಾಟಗಾರ! ಎಂದು ಮಾನಿನಿ ಚಟರ್ಜಿ ವ್ಯಥೆಪಟ್ಟರು.

ಇದನ್ನು ಓದಿ: ಭಾಗ – 4 ʻವೀರʼ ಸಾವರ್ಕರ್ – ಏಳು ಮಿಥ್ಯೆಗಳು

ವಸಾಹತುಶಾಹಿ ದೊರೆಗಳನ್ನು ಧಿಕ್ಕರಿಸಿದ ಕ್ರಾಂತಿಕಾರಿಗಳು

1857 ಆರಂಭದಲ್ಲಿ ಹಲವಾರು ತಲೆ ಬಗ್ಗಿಸದ ಮಹಾಸಾಹಸಿಗಳು ಹಾಗೂ ಮಹಾನ್ ಕ್ರಾಂತಿಕಾರಿಗಳು ಮತ್ತು ವಹಾಬಿ ಖೈದಿಗಳು ಸೆಲ್ಯುಲರ್ ಜೈಲಿನಲ್ಲಿ ಹುತಾತ್ಮರಾದರು. ಅಂತಹ ಕ್ರಾಂತಿಕಾರಿಗಳ ಸಾಹಸಗಾಥೆಗಳ ಬಗ್ಗೆ ಹೆಚ್ಚು ಮಾಹಿತಿ ಲಭ್ಯವಿಲ್ಲ. ಆದರೆ ಸಾವರ್ಕರ್ ಅವರ ಸಮಕಾಲೀನರಲ್ಲಿ ಬಿಡುಗಡೆ ಪಡೆಯುವಲ್ಲಿ ಹತಭಾಗ್ಯರಾದ ಕ್ರಾಂತಿಕಾರಿಗಳ ದೊಡ್ಡ ಪಟ್ಟಿಯೇ ಸಿಗುತ್ತದೆ. ನೂರಾರು ಯುವಜನರು ಸೆಲ್ಯುಲರ್ ಜೈಲಿನಲ್ಲಿ ಅಕಾಲಿಕ ವೃದ್ಧರಾದವರು, ಜೈಲಿನಲ್ಲಿ ಉಪವಾಸ ಮುಷ್ಕರ ಮಾಡಿದವರು, ಜೈಲಿನಲ್ಲಿ ಉತ್ತಮ ಸೌಲಭ್ಯಗಳಿಗಾಗಿ ಕಟುವಾಗಿ ಹೋರಾಡಿದವರು, ಜೈಲಿನಲ್ಲಿ ತಮ್ಮದೇ ವಾಚನಾಲಯ ಮತ್ತು ಅಸಾಮಾನ್ಯ ಪರಿಸ್ಥಿತಿಯ ಎದುರು ʻಒಂದು ವಿಶ್ವವಿದ್ಯಾಲಯʼವನ್ನೇ ಆರಂಭಿಸಿದವರ ಬಹು ದೊಡ್ಡ ಪಟ್ಟಿ ಇದೆ.5 ಇನ್ನೂ ಕೆಲವರು ಸೆಲ್ಯುಲರ್ ಜೈಲಿನಲ್ಲಿ ಅಮಾನವೀಯ ವರ್ತನೆ ಇದ್ದಾಗ್ಯೂ ತಮ್ಮ ಸಿದ್ಧಾಂತವನ್ನು ಬಿಟ್ಟುಕೊಡಲಿಲ್ಲ ಹಾಗೂ ಕ್ಷಮಾ ಭಿಕ್ಷೆ ಬೇಡಲಿಲ್ಲ. ಅಂಥವರ ಒಬ್ಬರ ಹೆಸರೂ ಸಾವರ್ಕರ್ ಭಕ್ತರಿಗೆ ಗೊತ್ತಿರಲು ಸಾಧ್ಯವಿಲ್ಲ. ಅಂಥಹ ಕೆಲವು ಸಾಹಸಿಗಳನ್ನು ನೆನಪು ಮಾಡಿಕೊಳ್ಳುವುದು ಯೋಗ್ಯ.

ಇದನ್ನು ಓದಿ: ಭಾಗ – 5 ʻವೀರʼ ಸಾವರ್ಕರ್ – ಏಳು ಮಿಥ್ಯೆಗಳು

ಇದನ್ನು ಓದಿ: ಭಾಗ – 6 ʻವೀರʼ ಸಾವರ್ಕರ್ – ಏಳು ಮಿಥ್ಯೆಗಳು

ಇದನ್ನು ಓದಿ: ಭಾಗ – 7 ʻವೀರʼ ಸಾವರ್ಕರ್ – ಏಳು ಮಿಥ್ಯೆಗಳು

ಇದನ್ನು ಓದಿ: ಭಾಗ – 8 ʻವೀರʼ ಸಾವರ್ಕರ್ – ಏಳು ಮಿಥ್ಯೆಗಳು

ಇದನ್ನು ಓದಿ: ಭಾಗ – 9 ʻವೀರʼ ಸಾವರ್ಕರ್‌ – ಏಳು ಮಿಥ್ಯೆಗಳು

ಇದನ್ನು ಓದಿ: ಭಾಗ – 10 ʻವೀರʼ ಸಾವರ್ಕರ್ – ಏಳು ಮಿಥ್ಯೆಗಳು

ಇದನ್ನು ಓದಿ: ಭಾಗ – 11 ʻವೀರʼ ಸಾವರ್ಕರ್ – ಏಳು ಮಿಥ್ಯೆಗಳು

Donate Janashakthi Media

Leave a Reply

Your email address will not be published. Required fields are marked *