ಭಾಗ – 10 ʻವೀರʼ ಸಾವರ್ಕರ್ – ಏಳು ಮಿಥ್ಯೆಗಳು

ಡಾ.ಶಮ್ಸುಲ್‌ಇಸ್ಲಾಂ
ಅನು: ಟಿ.ಸುರೇಂದ್ರರಾವ್

ಮಿಥ್ಯೆಗಳನ್ನು ಸತ್ಯಸಂಗತಿಗಳಿಂದ ಬೇರ್ಪಡಿಸುವ ಒಂದು ಪ್ರಾಮಾಣಿಕ ಆಕಾಂಕ್ಷೆಯಿಂದ ರಚಿಸಿರುವ ಡಾ.ಶಮ್ಸುಲ್ ಇಸ್ಲಾಮ್‌ ರವರ ʻಸಾವರ್ಕರ್ ಅನ್‌ಮಾಸ್ಕ್ಡ್‌ʼ ಸಾವರ್ಕರ್ ರವರನ್ನು ಕುರಿತ ಏಳು ಮಿಥ್ಯೆಗಳನ್ನು ದಾಖಲೆಗಳ ಬೆಳಕಿನಲ್ಲಿ ಪರಿಶೀಲಿಸುತ್ತದೆ.

ಮಿಥ್ಯೆ  1 – ʻಸಾವರ್ಕರ್ ಒಬ್ಬ ದಂತಕತೆಯಾದ ಸ್ವಾತಂತ್ರ್ಯ ಹೋರಾಟಗಾರʼ!

ಇದುವರೆಗೆ…

ಸಾವರ್ಕರ್ ಒಬ್ಬ ದಂತಕತೆಯಾದ ಸ್ವಾತಂತ್ರ್ಯ ಹೋರಾಟಗಾರ. ಸಾವರ್ಕರ್ ಅಸಾಧಾರಣ ಧೈರ್ಯ ಪ್ರದರ್ಶಿಸಿದರು. ಬ್ರಿಟಿಷ್ ಆಳರಸರೊಂದಿಗೆ ಅವರು ಎಂದೂ ಶಾಮೀಲಾಗಲಿಲ್ಲ ಎನ್ನುವ ಹಿಂದುತ್ವ ಪ್ರಚಾರಕರ ಮಿಥ್ಯೆಯನ್ನು ಪರಿಶೀಲಿಸುತ್ತ, ಕಾಲಾಪಾನಿ ಅಥವಾ ಕರಿನೀರು ಎಂದು ಕರೆಯಲ್ಪಡುವ ಅಂಡಮಾನಿನ ಭಯಂಕರ ಸೆಲ್ಯುಲರ್ ಜೈಲಿನಲ್ಲಿ, ಗೂಡಿನಂತಿರುವ ಸಣ್ಣ ಕೋಣೆಯಲ್ಲಿ, ಭೀಕರ ಕ್ರೌರ್ಯಗಳಿಗೆ ಒಳಗಾದವರು ಸಾವರ್ಕರ್ ಒಬ್ಬರೇ ಎಂದು ಬಿಂಬಿಸುವ ಪ್ರಯತ್ನ ನಡೆಯುತ್ತಿದೆ ಎನ್ನುವ ಲೇಖಕರು, ಸೆಲ್ಯುಲರ್ ಜೈಲು ಅಂದರೆ ಕೇವಲ ಸಾವರ್ಕರ್ ಕತೆ ಅಲ್ಲ ಎನ್ನುತ್ತಾರೆ. ಸ್ವತಃ ಸಾವರ್ಕರ್ ತಮ್ಮ ರಾಜಕೀಯ ಜೀವನದ ಮೊದಲ ಘಟ್ಟದಲ್ಲಿ, ಭಾರತವು ಹಿಂದೂ ಮತ್ತು ಮುಸ್ಲಿಮರ ನಡುವಿನ ಘರ್ಷಣೆಯ ಕಣವಾಗಿತ್ತು ಎಂಬ ವಾದವನ್ನಾಗಲೀ ಅಥವಾ ಹಿಂದೂಗಳು ಮಾತ್ರ ಭಾರತದ ಸಹಜ ದೇಶಪ್ರೇಮಿಗಳು ಎಂಬ ನಂಬಿಕೆಯನ್ನಾಗಲೀ ಹೊಂದಿರಲಿಲ್ಲ. ಆದರೆ ಸೆಲ್ಯುಲರ್ ಜೈಲಿನಲ್ಲಿನ ಕಾರಾಗೃಹವಾಸ ಮತ್ತು ಅವರು ಅಲ್ಲಿ ಪಡಬೇಕಾದ ಘೋರಯಾತನೆಯಿಂದ ಸಂಪೂರ್ಣವಾಗಿ ಕುಗ್ಗಿದ ಅವರು, ಕೋಮು ಸಾಮರಸ್ಯದ  ಸ್ವತಂತ್ರ  ಭಾರತದ ಆದರ್ಶಕ್ಕಾಗಿ ತುಡಿಯುತ್ತಿದ್ದ ಕ್ರಾಂತಿಕಾರಿಯಾಗಿ ಈಗ ಉಳಿಯಲಿಲ್ಲ. ಸ್ವಾತಂತ್ರ್ಯ ಚಳುವಳಿಯ ಸಂದರ್ಭದಲ್ಲಿನ ಹಿಂದೂ-ಮುಸ್ಲಿಂ ಐಕ್ಯತೆಯಿಂದ ಆತಂಕಿತರಾಗಿದ್ದ ಬ್ರಿಟಿಷ್ ದೊರೆಗಳಿಗೆ ಕ್ಷಮಾಯಾಚನೆಯ ಅರ್ಜಿಯೊಂದಿಗೆ ತಮ್ಮ ರಾಜಕೀಯ ಬದುಕಿನ ಎರಡನೇ ಘಟ್ಟ ಆರಂಭಿಸಿದ ಸಾವರ್ಕರ್ ರಂತವರ ಸಹಾಯ ಬೇಕಿತ್ತು, ಅದಕ್ಕಾಗಿ ಅವರನ್ನು ಬಿಡುಗಡೆ ಮಾಡಿದರು ಎನ್ನುವುದನ್ನು ಯಾರೂ ಅರ್ಥಮಾಡಿಕೊಳ್ಳಬಲ್ಲರು. ಸಾವರ್ಕರ್ ಬ್ರಿಟೀಷರ ಆವಶ್ಯಕತೆಯನ್ನು ಈಡೇರಿಸಿದರು. ಸುಭಾಶ್‌ ಚಂದ್ರ ಬೋಸ್‌ರಂತಹ ನಾಯಕರುಗಳು ಸಶಸ್ತ್ರ ಹೋರಾಟಗಳ ಮೂಲಕ ಭಾರತದಿಂದ ಬ್ರಿಟಿಷ್ ಆಳ್ವಿಕೆಯನ್ನು ಕಿತ್ತೊಗೆಯಬೇಕೆಂಬ ತಂತ್ರಗಳನ್ನು ಹೂಡುತ್ತಿದ್ದಾಗ, ಅವರು ರಚಿಸಿದ್ದ ಆಝಾದ್ ಹಿಂದ್ ಫೌಜ್ (ಐಎನ್‌ಎ)ನ ಸಾವಿರಾರು ಧೀರೋದಾತ್ತ ಸೈನಿಕರನ್ನು ಕೊಂದು ಹಾಕುತ್ತಿದ್ದ ಬ್ರಿಟಿಷ್ ಸರ್ಕಾರವು ತಮ್ಮ ಅಧಿಕೃತ ಯುದ್ಧ ಸಮಿತಿಗಳಲ್ಲಿ ಹಿಂದೂ ಮಹಾಸಭಾದ ಮುಖಂಡರುಗಳನ್ನು ಸೇರಿಸಿಕೊಂಡಿತ್ತು. ಸಾವರ್ಕರ್ ಮತ್ತು ಹಿಂದೂ ಮಹಾಸಭಾ ಎಷ್ಟು ಪ್ರಬಲವಾಗಿ ಬ್ರಿಟಿಷರ ಬಾಲಬಡುಕರಾಗಿದ್ದರು ಎನ್ನುವುದನ್ನು ಹಿಂದೂ ಮಹಾಸಭಾವು ಸ್ವಾತಂತ್ರ್ಯ ಪೂರ್ವದಲ್ಲಿ ಹೊರತಂದ ಪುಸ್ತಕವನ್ನು ಇಣುಕಿ ನೋಡಿದರೆ ತಿಳಿಯುತ್ತದೆ.

ಮುಂದೆ ಓದಿ…

ಒಡೆದು ಆಳುವ ಯೋಜನೆಯಲ್ಲಿ ಸಹಕರಿಸಿದ್ದಕ್ಕೆ ಮಾಸಾಶನ!

ಎರಡನೇ ಮಹಾಯುದ್ಧದ ಅವಧಿಯು, ಕ್ರಾಂತಿಕಾರಿಗಳ ವಿವಿಧ ಗುಂಪುಗಳು ಮತ್ತು ಸುಭಾಶ್ ಚಂದ್ರ ಬೋಸ್ ಅವರು ಯುಎಸ್‌ಎಸ್‌ಆರ್ (ಯೂನಿಯನ್ ಆಫ್ ಸೋವಿಯೆತ್ ಸೋಶಿಯಲಿಸ್ಟ್ ರಿಪಬ್ಲಿಕ್) ನಂತಹ ದೇಶಗಳಿಂದ ಸಹಾಯ ಬಯಸಿ ಪ್ರಯತ್ನ ಮಾಡುತ್ತಿದ್ದಾಗಿನ ಕಾಲವಾಗಿತ್ತು. ಆದರೆ ಅಂತಹ ಅಪಾಯಗಳ ಬಗ್ಗೆ ಎಚ್ಚರವಹಿಸಬೇಕೆಂದು ಸಾವರ್ಕರ್ ಅವರು ಬ್ರಿಟಿಷರಿಗೆ ದೊರೆಗಳಿಗೆ ಸಲಹೆ ನೀಡುತ್ತಿದ್ದರು ಎನ್ನುವುದನ್ನು ನಾವು ಕಾಣುತ್ತೇವೆ. ಇಂತಹ ಸಾಹಸದಲ್ಲಿ ಸಾವರ್ಕರ್ ಯಾವುದೇ ಮುಜುಗರವಿಲ್ಲದೇ ಬ್ರಿಟಿಷರಿಗೆ ಸಂಪೂರ್ಣ ಬೆಂಬಲ ನೀಡಿದ್ದನ್ನು ಕೂಡ ನಾವು ನೋಡುತ್ತೇವೆ. ಬ್ರಿಟಿಷರ ಆಳ್ವಿಕೆಯನ್ನು ಕಿತ್ತೊಗೆಯುವ ಬದಲು ಮುಸ್ಲಿಮರನ್ನು ಹೊರಗಟ್ಟುವುದೇ ಅವರ ಮುಖ್ಯ ಉದ್ದೇಶವಾಗಿದ್ದಂತೆ ತೋರುತ್ತಿತ್ತು. ಅವರ ಮುಸ್ಲಿಂ-ವಿರೋಧಿ ಭಾಷೆಯು ಹೇಗೆ ವಾಸ್ತವಾಂಶಗಳನ್ನು ತಿರುಚುತ್ತದೆ ಎನ್ನುವುದನ್ನು ಅವರ ಈ ಮಾತುಗಳಲ್ಲಿ ಸ್ಪಷ್ಟವಾಗಿ ನೋಡಬಹುದು:

ಇದನ್ನು ಓದಿ: ಭಾಗ -1 ‘ವೀರ’ ಸಾವರ್ಕರ್-ಏಳು ಮಿಥ್ಯೆಗಳು

ಈ ಯುದ್ಧದಲ್ಲಿ ಇಂಗ್ಲೆಂಡ್ ವಿರುದ್ಧ ರಷ್ಯಾದ ಸಂಭಾವ್ಯ ಪ್ರವೇಶವು ಆಫ್ಘಾನಿಸ್ತಾನದ ಮೂಲಕ ದಂಡೆತ್ತಿ ಬರಬಹುದಾದ ಎಲ್ಲಾ ಗಂಭೀರ ಅಪಾಯಗಳು ಭಾರತಕ್ಕೆ ಬೆದರಿಕೆ ಒಡ್ಡಬಹುದು(!). 1914ರ ಮಹಾ ಯುದ್ಧದ ಸಮಯದಲ್ಲಿ ಭಾರತದಲ್ಲಿ ನಡೆದ ಖಿಲಾಫತ್ ಚಳುವಳಿಯ ಸಂದರ್ಭದಲ್ಲಿ ಬಹು ದೊಡ್ಡ ಸಂಖ್ಯೆಯ ಮುಸ್ಲಿಮರ ನಂಬಿಕೆ ದ್ರೋಹದ ನಡವಳಿಕೆಯು ಭವಿಷ್ಯದಲ್ಲಿ ಯಾವುದೇ ಪರರಾಷ್ಟ್ರದ ಪ್ರಾಬಲ್ಯವು ವಾಯುವ್ಯ ಗಡಿಯಲ್ಲಿ ಭಾರತದ ಮೇಲೆ ದಾಳಿ ಮಾಡಬಹುದಾದ ಸಂಭವವಿದೆ ಎಂಬ ಎಂದಿಗೂ ಮರೆಯಲಾಗದ ಪಾಠವನ್ನು ನಮಗೆ ಕಲಿಸಿದೆ. ಈಗ ಅದು ಖಂಡಿತವಾಗಿ ಮರುಕಳಿಸಬಹುದು. ಪಂಜಾಬ್, ಸಿಂಧ್ ಮುಂತಾದ ಪ್ರದೇಶಗಳುದ್ದಕ್ಕೂ ಬುಡಕಟ್ಟು ಜನರು ಮತ್ತು ಮುಸ್ಲಿಮರು ಹಿಂದೂಗಳಿಗೆ ವಿಶ್ವಾಸದ್ರೋಹ ಬಗೆಯುವ ಸಾಧ್ಯತೆ ಇದೆ –ಬಲೂಚಿಸ್ತಾನದಿಂದ – ಕಾಶ್ಮೀರ – ದೆಹಲಿಯನ್ನೂ ಒಳಗೊಂಡಂತೆ ಒಂದು ಸ್ವತಂತ್ರ ಮುಸ್ಲಿಂ ರಾಜ್ಯ ಅಥವಾ ಒಕ್ಕೂಟವನ್ನು ರಚಿಸುವ ಅಖಿಲ ಮುಸ್ಲಿಂ ಜನಾಂಗದ ಸಂಚಿನ ಆಶಯಕ್ಕೆ ಅನುಗುಣವಾಗಿ ಒಂದು ಸಮುದಾಯವಾಗಿ ಎದ್ದು ಬರಬಹುದು. ಭಾರತದ ಹಲವಾರು ಜವಾಬ್ದಾರಿಯುತ ಮುಸ್ಲಿಂ ಸಂಘಟನೆಗಳು ತಮ್ಮ ಬಹಿರಂಗ ಅಧಿವೇಶನಗಳಲ್ಲಿ ಅಂಗೀಕರಿಸಿದ ನಿರ್ಣಯಗಳು ಹೊರಗೆಡಹಿದಂತೆ, ವಾಸವಾಗಿರುವ ಭೂಪ್ರದೇಶದ ಆಚೆಗೆ ಅವರಿಗಿರುವ ಸಹಾನುಭೂತಿಯ ಧೋರಣೆಯಿಂದಾಗಿ ಹಿಂದೂಗಳು ಎದುರಿಸುತ್ತಿರುವ ಈ ಗಂಭೀರ ಅಪಾಯವನ್ನು ಹಗುರವಾಗಿ ಪರಿಗಣಿಸುವುದು ಆತ್ಮಹತ್ಯೆಯಲ್ಲದೇ ಮತ್ತೇನೂ ಆಲ್ಲ ಮತ್ತು ಮಂಕುಬುದ್ಧಿಯ ನಡೆಯಾಗುತ್ತದೆ. ಇಂತಹ ತುರ್ತುಪರಿಸ್ಥಿತಿಯ ಕಾಲದಲ್ಲಿ ಈ ರಾಷ್ಟ್ರೀಯ ಅನಾಹುತವನ್ನು ತಪ್ಪಿಸುವ ಸಲುವಾಗಿ ಸಮಾನ ಉದ್ದೇಶದಿಂದ ಬ್ರಿಟಿಷರೊಂದಿಗೆ ಮೈತ್ರಿ ಮಾಡಿಕೊಳ್ಳಲೇಬೇಕು.

ನಾನಾ ವಿಷಯಗಳ ಬಗ್ಗೆ ಹಿಂದೂ ಮಹಾಸಭಾದ ವಿಶ್ವಾಸಾರ್ಹವಾದ ಅಧಿಕೃತ ನಿಲುವನ್ನು ಒಳಗೊಂಡಿರುವ ಭಿಡೆಯವರ ಪುಸ್ತಕವು ಒಂದು ಅಂಶವನ್ನು (ಬ್ರಿಟಿಷ್ ಮಿಲಿಟರಿ ನೇಮಕಾತಿ ಸಂಸ್ಥೆಯು ಸಾವರ್ಕರ್ ಮತ್ತು ಹಿಂದೂ ಮಹಾಸಭಾದೊಂದಿಗೆ ನೇರ ಸಂಪರ್ಕ ಹೊಂದಿತ್ತು ಎಂಬ ಸತ್ಯವನ್ನು) ಪದೇ ಪದೇ ವಿಶದಪಡಿಸಿದೆ. ಈ ಸ್ವಾಗತಾರ್ಹ ಬೆಳವಣಿಗೆಯನ್ನು ಸಾವರ್ಕರ್ ಅವರು ಹಿಂದೂ ಮಹಾಸಭಾ ಕಾರ್ಯಕರ್ತರಿಗೆ ಹೀಗೆ ತಿಳಿಸಿದರು:

ನೇಮಕಾತಿ ಕಮಿಶನರುಗಳು ಮತ್ತು ಅಧಿಕಾರಿಗಳು ಉದಾಹರಣೆಗೆ ಬಾಂಬೇ ಪ್ರೆಸಿಡೆನ್ಸಿಯವರು ಹಿಂದೂ ಮಹಾಸಭಾ ಆರಂಭಿಸಿರುವ ಹಿಂದೂ ಮಿಲಿಟರೀಕರಣ ಮಂಡಳಿಯೊಂದಿಗೆ ವಾಸ್ತವವಾಗಿ ಸಂಪರ್ಕ ಸಾಧಿಸಿದ್ದಾರೆ ಮತ್ತು ಹಿಂದೂ ಅಭ್ಯರ್ಥಿಗಳು ನೌಕಾದಳವನ್ನು ಪ್ರವೇಶಿಸಲು, ಅಧಿಕಾರ ಪತ್ರಗಳನ್ನು ಪಡೆಯಲು ಮತ್ತು ವಾಯು, ನೌಕಾ ಹಾಗೂ ಭೂ ಸೇನೆಗಳಲ್ಲಿ ತರಬೇತಿ ಹೊಂದಲು ಸಾಧ್ಯವಾಗುವಂತೆ ಬಹುಮಟ್ಟಿಗೆ ಹೇಗಾದರೂ ಮಾಡಿ ಸಹಾಯ ಮಾಡಲು ಯತ್ನಿಸುತ್ತಿದ್ದಾರೆ. ಬೆವಿನ್ ಯೋಜನೆಯು ಸರಿಯಾಗಿ ಕೆಲಸ ಮಾಡುತ್ತಿದೆ ಮತ್ತು ಹಿಂದೂ ಮೆಕ್ಯಾನಿಕ್‌ಗಳು ಅದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಿಕೊಂಡಿದ್ದಾರೆ.

ಇದನ್ನು ಓದಿ: ಭಾಗ – 2 `ವೀರ’ ಸಾವರ್ಕರ್- ಏಳು ಮಿಥ್ಯೆಗಳು

ಸಿಂಧ್‌ ನ (ಈಗ ಪಾಕಿಸ್ತಾನದಲ್ಲಿದೆ) ಹಿಂದೂಗಳು ಬ್ರಿಟಿಷರ ಸಶಸ್ತ್ರ ಸೇನೆಗೆ ಸೇರಿಕೊಳ್ಳಬೇಕೆಂದು ಸಾವರ್ಕರ್ ಅವರ ನಿಖರವಾದ ಸಲಹೆಯಾಗಿತ್ತು. ಈ ವಿಷಯದಲ್ಲಿ ತಾನು ವೈಸ್‌ರಾಯರೊಂದಿಗೆ ಸಂಪರ್ಕದಲ್ಲಿದ್ದೇನೆಂಬ ಮಾಹಿತಿಯನ್ನೂ ಅವರೊಂದಿಗೆ ಹಂಚಿಕೊಂಡಿದ್ದರು. ಈ ಎಲ್ಲಾ ವಿವರಗಳೊಂದಿಗೆ ಅವರೂ ಹೀಗೆ ಬರೆದರು:

ಸಿಂಧ್‌ ನಲ್ಲಿರುವ ಹಿಂದೂಗಳು ಪ್ರಾಯೋಗಿಕವಾಗಿ ಎಷ್ಟು ಸಾಧ್ಯವೋ ಅಷ್ಟು ಸಂಖ್ಯೆಯಲ್ಲಿ ಭೂಸೇನೆ, ನೌಕಾಸೇನೆ ಮತ್ತು ವಾಯುಸೇನೆಯನ್ನು ಪ್ರವೇಶಿಸಲಿ. ಈ ವಿಷಯಕ್ಕೆ ಸಂಬಂಧಿಸಿ ನಿಖರವಾದ ನಿಯಮಗಳು ಅಥವಾ ವಿಳಾಸಗಳ ಬಗ್ಗೆ ಯಾರಾದರೂ ಬಯಸಿದರೆ ಅವರು ಈ ಕೆಳಗಿನವರಿಗೆ ಬರೆಯಲಿ: ಡಾ. ಎನ್ ಡಿ ಸಾವರ್ಕರ್, ಹಿಂದೂ ಮಿಲಿಟರೀಕರಣ ಮಂಡಲಿ, ದಾದರ್ ಹಿಂದೂಸಭಾ ಕಛೇರಿ, ಲೇಡಿಜೇಮ್‌ಶೇಟ್ಜಿ ರಸ್ತೆ, ದಾದರ್, ಬಾಂಬೆ 14. ಅಥವಾ ಶ್ರೀಯುತ ಶಿವರಾಮ್ ಪಂತ್ ದಾಮ್ಲೆ, ಕಾರ್ಯದರ್ಶಿ ಮಹಾರಾಷ್ಟ್ರ ಮಂಡಲ್, ಪೂನಾ 2. ಈ ಎರಡೂ ಕೇಂದ್ರಗಳು ಈಗಾಗಲೇ ಹಲವಾರು ದೇಶಪ್ರೇಮಿ ಹಿಂದೂ ಯುವಜನರ ಪ್ರಕರಣಗಳಲ್ಲಿ ನೌಕಾಸೇನೆ, ವಾಯು ಸೇನೆ ಮತ್ತು ಭೂಸೇನೆಗಳಲ್ಲಿ ಪ್ರವೇಶ ಪಡೆಯುವಲ್ಲಿ ಯಶಸ್ವಿಯಾಗಿವೆ ಮತ್ತು ಸಮರ್ಥ ಹಾಗೂ ಪ್ರತಿಭಾವಂತ ಹಿಂದೂಗಳು ವೈಸ್‌ರೀಗಲ್ ಮತ್ತು ಕಿಂಗ್ಸ್ ಕಮಿಷನ್ ಗಳಲ್ಲಿ ಕೂಡ ಸ್ಥಾನ ಪಡೆದಿದ್ದಾರೆ.

ಸಾವರ್ಕರ್ ಅವರು ತಮ್ಮ 59 ನೇ ಜನ್ಮ ದಿನಾಚರಣೆಯನ್ನು ಕೂಡ ಬಳಸಿ ಹಿಂದೂ ಮಹಾಸಭಾದ ಕರೆಯ ಮೇರೆಗೆ ಬ್ರಿಟಿಷ್ ಮಿಲಿಟರಿ ಸೇನೆಗಳಿಗೆ ದೊಡ್ಡ ಸಂಖ್ಯೆಯಲ್ಲಿ ಹಿಂದೂಗಳು ನೇಮಕಾತಿ ಪಡೆಯಲು ಪ್ರೋತ್ಸಾಹಿಸಿದರು. ತಮ್ಮ ಜನ್ಮ ದಿನಾಚರಣೆ ಸಂದೇಶದಲ್ಲಿ ಅವರು ಪ್ರತಿಯೊಬ್ಬರಿಗೂ ಹೀಗೆ ಕರೆ ನೀಡಿದರು:

ಮಿಲಿಟರಿ ಸೇವೆಯಲ್ಲಿ ಸೇರುವ ಸಾಮರ್ಥ್ಯ ಇರುವ ಹಿಂದೂವು ಭೂಸೇನೆಗಳಲ್ಲಿ ಮತ್ತು ವಾಯು ಸೇನೆಗಳಲ್ಲಿ ಸೇರಬೇಕು ಅಥವಾ ಮದ್ದುಗುಂಡುಗಳ ಕಾರ್ಖಾನೆಗಳಿಗೆ ಮತ್ತು ಯುದ್ಧ ಕೌಶಲ್ಯಗಳಿಗೆ ಸಂಬಂಧಪಟ್ಟಂತಹ ಇತರ ಉತ್ಪಾದನಾ ಕಾರ್ಯಾಗಾರಗಳಲ್ಲಿ ಪ್ರವೇಶ ಪಡೆಯಬೇಕು.

ಹಿಂದೂ ಮಹಾಸಭಾದ ಹಿರಿಯ ಮುಖಂಡರಾದ ಸರ್‌ ಜ್ವಾಲಾ ಪ್ರಸಾದ್ ಶ್ರೀವಾಸ್ತವ್ ಅವರು ಸಾವರ್ಕರ್ ಅವರ ನಿರ್ದೇಶನದ ಮೇರೆಗೆ ಮೇ 1941 ರಲ್ಲಿ ಬ್ರಿಟಿಷ್ ಸಶಸ್ತ್ರ ಸೇನೆಯ ಸೇನಾಧಿಪತಿ (ಕಮ್ಯಾಂಡರ್ ಇನ್ ಚೀಫ್) ಯನ್ನು ಭೇಟಿ ಮಾಡಿದ್ದರೆಂದು ಕೂಡ ಭಿಡೆಯವರ ಪುಸ್ತಕವು ತಿಳಿಸುತ್ತದೆ. ಹಿಂದೂ ಮಹಾಸಭಾದ ಪತ್ರಾಗಾರದಲ್ಲಿ ಲಭ್ಯವಿರುವ ದಾಖಲೆಗಳ ಪ್ರಕಾರ, ಈ ಭೇಟಿಯ ನಂತರ ಪತ್ರಿಕೆಗಳಿಗೆ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯ ತಲೆ ಬರಹ ʻʻಘನತೆವೆತ್ತ ಸೇನಾಧಿಪತಿಗಳು ಮತ್ತು ಶ್ರೀ ಜ್ವಾಲಾ ಪ್ರಸಾದ್ʼʼ ಎಂದು ಇತ್ತು; ಅದರ ಒಕ್ಕಣೆ ಹೀಗಿತ್ತು:

ಈ ಹಿಂದೆ ಪ್ರಕಟಿಸಿದಂತೆ, ಸರ್ ಜ್ವಾಲಾ ಪ್ರಸಾದ್ ಶ್ರೀವಾಸ್ತವ್ ಮತ್ತು ಘನತೆವೆತ್ತ ಸೇನಾಧಿಪತಿಗಳ ನಡುವಿನ ಸಂದರ್ಶನವು ದೆಹಲಿಯಲ್ಲಿ ನಡೆಯಿತು. ಹಿಂದೂ ಮಹಾಸಭಾದ ಅಧ್ಯಕ್ಷ, ವೀರ ಸಾವರ್ಕರ್ ಅವರ ನಿರ್ದೇಶನದಂತೆ ಸರ್‌ಜ್ವಾಲಾ ಪ್ರಸಾದ್ ಅವರು ಸಾಮಾನ್ಯ ರಾಜಕೀಯ ಹಾಗೂ ಮಿಲಿಟರಿ ನೀತಿ ಮತ್ತು ಭೂಸೇನೆ, ನೌಕಾಸೇನೆ ಹಾಗೂ ವಾಯು ಸೇನೆಗಳಲ್ಲಿ ಹಿಂದೂಗಳು ಅನುಭವಿಸುತ್ತಿರುವ ವಿಶೇಷ ಕಷ್ಟಗಳಿಗೆ ಸಂಬಂಧಪಟ್ಟ ಹಿಂದೂ ಮಹಾಸಭಾದ ನಿಲುವನ್ನು ಅಲ್ಲಿ ವಿವರಿಸಿದರು. ಘನತೆವೆತ್ತ ಸೇನಾಧಿಪತಿಯವರು ಸಹಾನುಭೂತಿಯಿಂದ ಆಲಿಸಿದರು ಮತ್ತು ಮಿಲಿಟರಿ ಸೇವೆಗೆ ಸಂಬಂಧಪಟ್ಟಂತೆ ಹಿಂದೂಗಳ ಕುಂದುಕೊರತೆಗಳನ್ನು ನಿವಾರಿಸಲು ತಮ್ಮ ಕೈಲಾದ ಎಲ್ಲವನ್ನೂ ಮಾಡುವುದಾಗಿ ಭರವಸೆ ನೀಡಿದರು ಮತ್ತು ಶತ್ರುಗಳ ದಾಳಿಯಿಂದ ಭಾರತವನ್ನು ರಕ್ಷಿಸುವ ದೃಷ್ಟಿಯಿಂದ ತಾಯ್ನಾಡಿನ ಸೇನೆಗೆ ಹಿಂದೂಗಳು ಸೇರುವಂತೆ ಪ್ರೇರೇಪಿಸುವ ನಿಟ್ಟಿನಲ್ಲಿ ನ್ಯಾಯವಾದಿ ಸಾವರ್ಕರ್ ಅವರು ಮುಂದಾಳತ್ವ ವಹಿಸಿರುವುದನ್ನು ಬಹಳವಾಗಿ ಮೆಚ್ಚಿಕೊಂಡರು.

ಇದನ್ನು ಓದಿ: ಭಾಗ – 3 ‘ವೀರ’ ಸಾವರ್ಕರ್ – ಏಳು ಮಿಥ್ಯೆಗಳು

ಯುದ್ಧದ ಅತ್ಯುನ್ನತ ಸೇನಾಬಲಗಳ ಸಂಘಟನೆಗೆ ಸಂಬಂಧಪಟ್ಟಂತೆ ಬ್ರಿಟಿಷ್ ಸರ್ಕಾರವು ಸಾವರ್ಕರ್ ಜತೆ ನಿರಂತರ ಸಂಪರ್ಕದಲ್ಲಿತ್ತು. ಅದು ಸಾವರ್ಕರ್ ಅವರು ಪ್ರಸ್ತಾಪ ಮಾಡಿದ ವ್ಯಕ್ತಿಗಳ ಹೆಸರುಗಳನ್ನೂ ಒಳಗೊಂಡಿತ್ತು. ಸಾವರ್ಕರ್ ಅವರು ಬ್ರಿಟಿಷ್ ಸರ್ಕಾರಕ್ಕೆ ಕಳಿಸಿದ ಕೃತಜ್ಞತೆ ಸಲ್ಲಿಸುವ ಈ ಕೆಳಗಿನ ಟೆಲಿಗ್ರಾಂನಿಂದ ಅದು ಸ್ಪಷ್ಟವಾಗಿದೆ. ಭಿಡೆಯವರ ಸಂಪುಟ ಇದನ್ನು ನಮಗೆ ಹೇಳುತ್ತದೆ:

ಈ ಕೆಳಗಿನ ಟೆಲಿಗ್ರಾಂನ್ನು ಹಿಂದೂ ಮಹಾಸಭಾದ ಅಧ್ಯಕ್ಷ ನ್ಯಾಯವಾದಿ ವಿಡಿ ಸಾವರ್ಕರ್ ಅವರು (1) ಜನರಲ್ ವಾವೆಲ್, ಸೇನಾಧಿಪತಿ; ಮತ್ತು (2) ದಿ ವೈಸ್‌ರಾಯ್ ಆಫ್ ಇಂಡಿಯಾ ಅವರಿಗೆ ಜುಲೈ 18, 1941 ರಂದು ಕಳಿಸಲಾಗಿತ್ತು.

ಯುವರ್ ಎಕ್ಸಲೆನ್ಸೀಸ್ ಅನೌನ್ಸ್‌ ಮೆಂಟ್ ಡಿಫೆನ್ಸ್ ಕಮಿಟಿ ವಿತ್ ಇಟ್ಸ್ ಪರ್ಸೋನೆಲ್ ಇಸ್ ವೆಲ್ಕಂ. ಹಿಂದೂ ಮಹಾಸಭಾ ವ್ಯೂಸ್ ವಿತ್ ಸ್ಪೆಶಲ್ ಸ್ಯಾಟಿಸ್ ಫ್ಯಾಕ್ಷನ್ ಅಪಾಯಿಂಟ್‌ಮೆಂಟ್ ಆಫ್ ಮೆರ‍್ಸ್ ಕಾಲಿಕರ್ ಅಂಡ್ ಜಮ್ನಾದಾಸ್ ಮೆಹ್ತಾ.

(ಘನತೆವೆತ್ತ ತಾವುಗಳು ತಮ್ಮ ಸಿಬ್ಬಂದಿಗಳ ರಕ್ಷಣಾ ಸಮಿತಿ ಪ್ರಕಟಣೆ ಮಾಡಿದ್ದು ಸ್ವಾಗತಾರ್ಹ. ಶ್ರೀಯುತ ಕಾಲಿಕರ್ ಮತ್ತು ಜಮ್ನಾದಾಸ್ ಅವರ ನೇಮಕಾತಿಯನ್ನು ವಿಶೇಷ ತೃಪ್ತಿಯೊಂದಿಗೆ ಹಿಂದೂ ಮಹಾಸಭಾವು ನೋಡುತ್ತದೆ)

ಅತ್ಯಂತ ಆಘಾತಕಾರಿ ಸಂಗತಿಯೆಂದರೆ ಸಾವರ್ಕರ್ ಅವರ ಸಂಪೂರ್ಣ ನಿಯಂತ್ರಣದಲ್ಲಿದ್ದ ಹಿಂದೂ ಮಹಾಸಭಾವು ಬ್ರಿಟಿಷ್ ಸಾಮ್ರಾಜ್ಯಶಾಹಿಗಳ ಯುದ್ಧ ಕಾರ್ಯಾಚರಣೆಗಳಿಗೆ ಸಹಾಯ ಮಾಡುತ್ತಿದ್ದಾಗಲೇ, ಬ್ರಿಟಿಷರು ಭಾರತವನ್ನು ಯುದ್ಧಕ್ಕೆ ನೂಕುವ ಬಲವಂತದ ವಿರುದ್ಧ ಅತ್ತ ಕಾಂಗ್ರೆಸ್ ನಿರಂತರ ಹೋರಾಟವನ್ನು ಶುರುಮಾಡಿತ್ತು. ʻಯುದ್ಧಕ್ಕಾಗಿ ಒಬ್ಬ ಮನುಷ್ಯನನ್ನೂ ಕಳಿಸೊಲ್ಲ, ಒಂದು ಪೈಸೆಯನ್ನು ಕೊಡೋಲ್ಲʼ ಎಂಬ ಜನಪ್ರಿಯ ಘೋಷಣೆಯನ್ನು ಕಾಂಗ್ರೆಸ್ ನೀಡಿತ್ತು, ಮತ್ತು ಅದು ಮಿಲಿಯಾಂತರ ಜನರನ್ನು ಆಕರ್ಷಿಸಿತ್ತು. ಸಾವರ್ಕರ್ ಅವರ ಮಿತ್ರಕೂಟವಾದ ಬ್ರಿಟಿಷ್ ದೊರೆಗಳು ಈ ಘೋಷಣೆಯನ್ನು ಕೂಗಲು ಧೈರ್ಯತೋರಿದ ನೂರಾರು ದೇಶಪ್ರೇಮಿ ಭಾರತೀಯರನ್ನು ಕೊಂದಿತ್ತು ಮತ್ತು ಸಾವಿರಾರು ಜನರನ್ನು ಜೈಲಿಗೆ ಕಳಿಸಿತ್ತು. ನಾವು ಇಲ್ಲಿ ಗಮನಿಸಬೇಕಾದ ಬಹು ಮುಖ್ಯ ಅಂಶವೇನೆಂದರೆ ಬ್ರಿಟಿಷ್ ದೊರೆಗಳ ಹಿತಾಸಕ್ತಿಯ ಪರವಾಗಿ ಸೇವೆ ಸಲ್ಲಿಸುತ್ತಿದ್ದ ಮುಸ್ಲಿಂ ಲೀಗ್ ಕೂಡ ಯುದ್ಧ ಕಾರ್ಯಾಚರಣೆಗಳೊಂದಿಗೆ ಅಥವಾ ಸರ್ಕಾರ ರಚಿಸಿದ ರಕ್ಷಣಾ ಸಮಿತಿಯಲ್ಲಿ ಸೇರಿಕೊಳ್ಳಲು ನಿರಾಕರಿಸಿತ್ತು.

ಸಾವರ್ಕರ್ ಅವರು ಬ್ರಿಟಿಷ್ ಸರ್ಕಾರದೊಂದಿಗೆ ಗುಪ್ತ ಸಂಧಾನ ಸಭೆಗಳಲ್ಲಿ ಕೂಡತೊಡಗಿಕೊಂಡಿದ್ದರು ಎಂಬ ಅಂಶವನ್ನು ಭಿಡೆಯವರ ಪುಸ್ತಕ ಸ್ಪಷ್ಟಮಾಡಿತ್ತು. ಅದರಲ್ಲಿನ ವರದಿಗಳ ಪ್ರಕಾರ ಸಾವರ್ಕರ್ ಅವರು ಜುಲೈ 5, 1940 ರಂದು ವೈಸ್‌ರಾಯ್ ಅವರನ್ನು ಶಿಮ್ಲಾದಲ್ಲಿ ಭೇಟಿಯಾಗಿದ್ದರು:

(ವೈಸ್ ರೀಗಲ್ ಸಂದರ್ಶನ) ಹಿಂದೂ ಮಹಾಸಭಾದ ಅಧ್ಯಕ್ಷ, ವೀರ್ ಸಾವರ್ಕರ್ ಅವರು ಘನತೆವೆತ್ತ ವೈಸ್‌ರಾಯ್ ಅವರನ್ನು ಭೇಟಿ ಮಾಡಿ ಹೊರಬಂದ ನಂತರ ಸಂದರ್ಶನದ ವಿವರ ತಿಳಿಯಲು ಪತ್ರಿಕಾ ವರದಿಗಾರರು ಅವರನ್ನು ಸುತ್ತುವರೆದಿದ್ದರು. ಈ ಸಂದರ್ಶನದ ಮಾತುಗಳನ್ನು ಖಂಡಿತವಾಗಿ ರಹಸ್ಯವಾಗಿಡಲಾಗುವುದು ಎಂದು ತಾನು ಘನತೆವತ್ತ ವೈಸ್‌ರಾಯ್ ಅವರೊಡನೆ ಒಪ್ಪಿಕೊಂಡಿದ್ದೇನೆ ಎಂದು ವೀರ್ ಸಾವರ್ಕರ್ ತಿಳಿಸಿದರು.

ಸಭೆಯಲ್ಲಿ ನಡೆದಿರುವ ಏನನ್ನೂ ಯಾರೊಂದಿಗೂ, ಅವರ ಅನುಯಾಯಿಗಳೊಂದಿಗೆ ಸಹ ಅದರ ಮಾಹಿತಿಯನ್ನು ಹಂಚಿಕೊಳ್ಳಲು ಸಾವರ್ಕರ್ ಅವರು ಇಷ್ಟಪಡಲಿಲ್ಲ. ಇದನ್ನು ಕೂಡ ಆ ಪುಸ್ತಕದಲ್ಲಿ ಹೀಗೆ ವಿವರಿಸಲಾಗಿದೆ:

ಘನತೆವೆತ್ತ ವೈಸ್‌ರಾಯ್ ಅವರನ್ನು ಶುಕ್ರವಾರ ಜುಲೈ 5, 1940 ರಂದು ಸಂದರ್ಶನ ಮಾಡಿದ ನಂತರ ಹಿಂದೂ ಮಹಾಸಭಾದ ಅಧ್ಯಕ್ಷ, ನ್ಯಾಯವಾದಿ ವಿ ಡಿ ಸಾವರ್ಕರ್ ಅವರನ್ನು ಶಿಮ್ಲಾ ಸಾರ್ವಜನಿಕ ಸ್ವಾಗತ ಕಾರ್ಯಕ್ರಮದಲ್ಲಿ ಕೋರಿಕೊಂಡರು. ಆದರೆ ಪ್ರಮುಖವಾದ ರಾಜಕೀಯ ಸಂದರ್ಶನಗಳಿಂದಾಗಿ ಅವರಿಗೆ ಸಮಯ ಸಿಗಲಿಲ್ಲ. ಅವರು ನಿಲ್ದಾಣಕ್ಕೆ ಹೋಗುವ ದಾರಿಯಲ್ಲಿ ಕೇವಲ ಐದು ನಿಮಿಷಗಳ ‘ದರ್ಶನ’ವನ್ನಷ್ಟೇ ಏರ್ಪಡಿಸಲಾಗಿತ್ತು.(ಮೂಲ ಪಠ್ಯದ ಪ್ರಕಾರ)

ಬ್ರಿಟಿಷ್ ದೊರೆಗಳ ಒಡೆದು ಆಳುವ ಯೋಜನೆಯಲ್ಲಿ ಸಾವರ್ಕರ್ ಅವರು ಎಷ್ಟು ಮುಖ್ಯವಾಗಿದ್ದರು ಎಂಬುದು 1929 ರಲ್ಲಿ ವಿದೇಶಿ ದೊರೆಗಳಿಂದ ಸಾವರ್ಕರ್ ಅವರಿಗೆ ನಿವೃತ್ತಿ ವೇತನ ಮಂಜೂರು ಮಾಡುವುದರಿಂದ ಸ್ಪಷ್ಟವಾಗುತ್ತದೆ. ಕೇಂದ್ರ ಮಂಡಳಿ ಸದಸ್ಯರೊಬ್ಬರು ಸರ್ಕಾರದಲ್ಲಿ ವಿಚಾರಿಸಿದಾಗ ಸಾವರ್ಕರ್ ಅವರ ಅಧಿಕೃತ ಜೀವನಚರಿತ್ರೆಕಾರ ಕೀರ್ ಅವರು ಆ ಅಂಶವನ್ನು ಹೀಗೆ ಪುಷ್ಟೀಕರಿಸಿದರು:

ಸಾವರ್ಕರ್ ಅವರಿಂದ ನಿರ್ವಹಣೆಗಾಗಿ ಯಾವುದಾದರೂ ಅರ್ಜಿಯನ್ನು ಸರ್ಕಾರ ಸ್ವೀಕರಿಸಿದೆಯೆ ಎಂದಾಗ, ಸಾವರ್ಕರ್ ಅವರು ನಮ್ಮ ಬಳಿ ಬಂದರೆ ಪರಿಗಣಿಸಲಾಗುವುದು ಎಂದು ಸರ್ಕಾರ ಹೇಳಿತು. ತದನಂತರ, ರತ್ನಗಿರಿಯ ಜಿಲ್ಲಾ ಮ್ಯಾಜಿಸ್ಟ್ರೇಟ್ ಮಾಸಿಕ ನಿರ್ವಹಣೆಗಾಗಿ ರೂ.50 ನ್ನು ನಿಗದಿಪಡಿಸಿದರು. ಆ ನಂತರ ಅದನ್ನು ರೂ.60 ಕ್ಕೆ ಏರಿಸಿದರು. 1920ರಲ್ಲಿ ಅದು ಸಣ್ಣ ಮೊತ್ತವೇನಲ್ಲ.

(ಮುಂದುವರೆಯುವುದು)

ಇದನ್ನು ಓದಿ: ಭಾಗ – 4 ʻವೀರʼ ಸಾವರ್ಕರ್ – ಏಳು ಮಿಥ್ಯೆಗಳು

ಇದನ್ನು ಓದಿ: ಭಾಗ – 5 ʻವೀರʼ ಸಾವರ್ಕರ್ – ಏಳು ಮಿಥ್ಯೆಗಳು

ಇದನ್ನು ಓದಿ: ಭಾಗ – 6 ʻವೀರʼ ಸಾವರ್ಕರ್ – ಏಳು ಮಿಥ್ಯೆಗಳು

ಇದನ್ನು ಓದಿ: ಭಾಗ – 7 ʻವೀರʼ ಸಾವರ್ಕರ್ – ಏಳು ಮಿಥ್ಯೆಗಳು

ಇದನ್ನು ಓದಿ: ಭಾಗ – 8 ʻವೀರʼ ಸಾವರ್ಕರ್ – ಏಳು ಮಿಥ್ಯೆಗಳು

Donate Janashakthi Media

Leave a Reply

Your email address will not be published. Required fields are marked *