ಬೆಂಗಳೂರು: ನಗರದಲ್ಲಿ ಮುಂದಿನ ಕೆಲವು ದಿನಗಳ ಕಾಲ ಭಾರೀ ಮಳೆ, ಗುಡುಗು-ಮಿಂಚು ಮತ್ತು ಬಿರುಗಾಳಿಯಂತಹ ಹವಾಮಾನ ಮುಂದುವರಿಯುವ ಸಾಧ್ಯತೆ ಇದ್ದು, ಭಾರತೀಯ ಹವಾಮಾನ ಇಲಾಖೆ (IMD) ಮೇ 24ರವರೆಗೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಮೇ 25ರವರೆಗೂ ಅಸ್ಥಿರ ಹವಾಮಾನ ಮುಂದುವರಿಯುವ ಸಾಧ್ಯತೆ ಇದೆ ಎಂದು ಇಲಾಖೆ ಎಚ್ಚರಿಕೆ ನೀಡಿದೆ.
ಗುರುವಾರ ಸಂಜೆ ಸುರಿದ ಮಳೆಯಿಂದ ಬೆಂಗಳೂರು ಬಹುತೇಕ ಅಸ್ತವ್ಯಸ್ತಗೊಂಡಿತ್ತು. ಹಲವು ಪ್ರದೇಶಗಳಲ್ಲಿ ರಸ್ತೆ ಜಲಾವೃತಗೊಂಡಿದ್ದು, ವಾಹನ ಸಂಚಾರ ಸಂಪೂರ್ಣ ನಿಧಾನಗೊಂಡಿತ್ತು. ಮೆಟ್ರೋ ಮಾರ್ಗಗಳ ಮೇಲೂ ಪರಿಣಾಮ ಬಿದ್ದು, ಕೆಲವು ನಿಲ್ದಾಣಗಳಲ್ಲಿ ರೈಲು ಸಂಚಾರ ವಿಳಂಬಗೊಂಡ ಘಟನೆಗಳು ವರದಿಯಾಗಿವೆ. ಹಲವೆಡೆ ಮರಗಳು ಮತ್ತು ವಿದ್ಯುತ್ ಕಂಬಗಳು ಉರುಳಿದ ಪರಿಣಾಮ ಸಂಚಾರ ದಟ್ಟಣೆ ಮತ್ತಷ್ಟು ಹೆಚ್ಚಾಗಿತ್ತು.
ಇದನ್ನೂ ನೋಡಿ : ಮಳೆ | ಬೌರಿಂಗ್ ಆಸ್ಪತ್ರೆ ದುರಂತ – ಎಚ್ಚೆತ್ತುಕೊಳ್ಳಬೇಕಿದೆ ಸರಕಾರ Janashakthi Media
ವಿಜಯನಗರ, ರಾಜಾಜಿನಗರ, ಮಲ್ಲೇಶ್ವರಂ, ಜಯನಗರ, ಲಾಲ್ಬಾಗ್, ಮೆಜೆಸ್ಟಿಕ್, ವಸಂತನಗರ, ಇಂದಿರಾನಗರ ಸೇರಿದಂತೆ ಹಲವು ಭಾಗಗಳಲ್ಲಿ ಭಾರೀ ಮಳೆಯಾಗಿದೆ. ಕೆ.ಆರ್. ಸರ್ಕಲ್ ಅಂಡರ್ಪಾಸ್, ವರ್ತೂರು ಕೋಡಿ, ಬ್ರಿಗೇಡ್ ರಸ್ತೆ ಸೇರಿದಂತೆ ತಗ್ಗು ಪ್ರದೇಶಗಳಲ್ಲಿ ನೀರು ನಿಂತ ಪರಿಣಾಮ ವಾಹನ ಸವಾರರು ಸಂಕಷ್ಟ ಅನುಭವಿಸಿದರು.
ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆಯ ಪ್ರಕಾರ, ಮುಂದಿನ ಎರಡು ದಿನಗಳಲ್ಲಿ ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಗಂಟೆಗೆ 40ರಿಂದ 50 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ. ಅಗತ್ಯವಿಲ್ಲದೆ ಹೊರಗೆ ತೆರಳದಂತೆ, ಮಳೆ ಮತ್ತು ಮಿಂಚಿನ ವೇಳೆ ಮರಗಳ ಕೆಳಗೆ ನಿಲ್ಲದಂತೆ ಸಾರ್ವಜನಿಕರಿಗೆ ಸೂಚಿಸಲಾಗಿದೆ.
ಇದನ್ನೂ ಓದಿ : ರೂಪಾಯಿ ಮೌಲ್ಯ ಕುಸಿತದ ನಡುವೆ ರಸಗೊಬ್ಬರ ದರ ಏರಿಕೆ
