ಶಕ್ತಿ ಯೋಜನೆ ವಿರೋಧಿಸಿ ಖಾಸಗಿ ಸಾರಿಗೆ ಒಕ್ಕೂಟದಿಂದ ಸೆ.11ಕ್ಕೆ ಬೆಂಗಳೂರು ಸಾರಿಗೆ ಬಂದ್

ಬೆಂಗಳೂರು: ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿ ಮಾತಿಗೆ ತಪ್ಪಿದ ಸರ್ಕಾರದ ನಡೆಯನ್ನು ಖಂಡಿಸಿ, ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸೆಪ್ಟೆಂಬರ್- 11ರಂದು ಬೆಂಗಳೂರು ಸಾರಿಗೆ ಬಂದ್ ಮಾಡಲು ಕರ್ನಾಟಕ ರಾಜ್ಯ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟ ಶುಕ್ರವಾರ ಸೆಪ್ಟೆಂಬರ್-1 ರಂದು ನಿರ್ಧರಿಸಿದೆ.

“ಬೇಡಿಕೆ ಈಡೇರಿಸಲು ಜುಲೈ 27ರಂದು ಬಂದ್ ನಡೆಸಲು ಕರೆ ನೀಡಲಾಗಿತ್ತು. ಶಕ್ತಿ ಯೋಜನೆಯನ್ನು ಖಾಸಗಿ ಬಸ್‌ಗಳಿಗೂ ವಿಸ್ತರಿಸಬೇಕು. ಇಲ್ಲವೇ ರಸ್ತೆ ತೆರಿಗೆಯನ್ನು ಸಂಪೂರ್ಣ ರದ್ದು ಮಾಡಬೇಕು ಎಂಬ ಬೇಡಿಕೆಯೂ ಸೇರಿದಂತೆ 30 ಬೇಡಿಕೆಗಳನ್ನು ಮುಂದಿಟ್ಟಿದ್ದೆವು. ಅದರಲ್ಲಿ 28 ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದು ಸಾರಿಗೆ ಸಚಿವರು ಭರವಸೆ ನೀಡಿದ್ದರು. ಹಾಗಾಗಿ ಬಂದ್ ಕರೆ ವಾಪಸ್ ಪಡೆಯಲಾಗಿತ್ತು. ಆದರೆ ಸಾರಿಗೆ ಸಚಿವರು ವಚನ ಭ್ರಷ್ಟರಾಗಿ ನಮಗೆ ದ್ರೋಹ ಬಗೆದಿದ್ದಾರೆ. ಯಾವುದೇ ಬೇಡಿಕೆಗಳನ್ನು ಈಡೇರಿಸಿಲ್ಲ. ಅದನ್ನು ಖಂಡಿಸಿ, ನಮ್ಮ ಬೇಡಿಕೆ ಈಡೇರಿಸಲು ಆಗ್ರಹಿಸಿ ಸೆ.11ರಂದು ಬೆಂಗಳೂರಿನಲ್ಲಿ ಸಾರಿಗೆ ಬಂದ್ ಮಾಡಲಾಗುವುದು” ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ಎಸ್. ನಟರಾಜ್ ಶರ್ಮ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಇದನ್ನೂ ಓದಿ:ಆಟೊ,ಕ್ಯಾಬ್‌ ಬಳಕೆದಾರರಿಗೆ ಸಾರಿಗೆ ಇಲಾಖೆ ಪ್ರತ್ಯೇಕ ಆ್ಯಪ್: ಸಚಿವ ರಾಮಲಿಂಗಾರೆಡ್ಡಿ

ಆಟೊ, ಟ್ಯಾಕ್ಸಿ, ಏರ್ಪೋರ್ಟ್ ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್, ಕಾರ್ಪೊರೇಟ್ ವಾಹನಗಳು, ಸ್ಕೂಲ್ ಬಸ್, ಫ್ಯಾಕ್ಸಿ ಬಸ್, ಸ್ಟೇಜ್ ಕ್ಯಾರೇಜ್ ಬಸ್ ಚಾಲಕರ ಸಂಘಗಳು ಸೇರಿದಂತೆ 32 ಸಂಘಟನೆಗಳು ಸೇರಿ ಮುಷ್ಕರ ಹಮ್ಮಿಕೊಳ್ಳಲಾಗಿದೆ. ಸೆ.10ರ ರಾತ್ರಿ 12ರಿಂದ ಸೆ.11ರ ರಾತ್ರಿ 12ರವರೆಗೆ ಮುಷ್ಕರ ಇರಲಿದೆ ಎಂದು ಮಾಹಿತಿ ನೀಡಿದರು.

ಪ್ರಮುಖ ಬೇಡಿಕೆಗಳು:

  • ಅಕ್ರಮವಾಗಿ ಚಲಿಸುತ್ತಿರುವ ರಾಪಿಡೊ ಬೈಕ್ ಟ್ಯಾಕ್ಸಿಗಳನ್ನು ನಿಷೇಧಿಸಬೇಕು. ಎಲೆಕ್ನಿಕ್ ಆಟೊರಿಕ್ಷಾಗಳಿಗೆ ರಹದಾರಿ ನೀಡಬೇಕು. ರಾಪಿಡೊ, ಓಲಾ, ಉಬರ್, ಇನ್ನಿತರ ಆನ್ಲೈನ್ ಕಂಪನಿಗಳಿಗೆ ಇ-ರಿಕ್ಷಾಗಳ ನೇರ ನೋಂದಣಿ ಮಾಡುವುದನ್ನು ನಿಷೇಧಿಸಬೇಕು. ಬಿಳಿ ಫಲಕ ಹೊಂದಿರುವ ವಾಹನಗಳಲ್ಲಿ ಬಾಡಿಗೆ ಮಾಡುವವರ ಮೇಲೆ ಕ್ರಮ ಕೈಗೊಳ್ಳಬೇಕು. ಓಲಾ, ಉಬರ್, ರೆಡ್ಸ್ ನಂತಹ ಆನ್ಲೈನ್ ಕಂಪನಿಗಳು ನಿಗದಿಯಾಗಿರುವ ಶೇ 5ಕ್ಕಿಂತ ಹೆಚ್ಚು ಕಮಿಷನ್ ಪಡೆಯದಂತೆ ನಿರ್ಬಂಧಿಸಬೇಕು.
  • ವಿಮಾನ ನಿಲ್ದಾಣಕ್ಕೆ ಏಕರೂಪ ದರ ನಿರ್ಧರಿಸಬೇಕು. ವಾಹನಗಳಿಗೆ ಜೀವಿತಾವಧಿ ತೆರಿಗೆ ವಿಧಿಸುವುದನ್ನು ಕೈಬಿಡಬೇಕು. ಚಾಲಕರಿಗೆ ವಸತಿ, ಕಾರು ಖರೀದಿಗೆ ಸಬ್ಸಿಡಿ ನೀಡಬೇಕು. ಚಾಲಕರಿಗೆ 1 10 ಸಾವಿರ ಮಾಸಿಕ ಪರಿಹಾರ ಧನಸಹಾಯ ನೀಡಬೇಕು. ಅಸಂಘಟಿತ ವಾಣಿಜ್ಯ ಚಾಲಕರ ಮತ್ತು ಸಾರಿಗೆ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು. ನೇರ ಸಾಲ ಸೌಲಭ್ಯ ಯೋಜನೆಯಡಿ 12 ಲಕ್ಷವರೆಗೆ ಸಾಲ ಒದಗಿಸಬೇಕು. ಚಾಲಕರ ಮಕ್ಕಳಿಗೆ ವಿದ್ಯಾರ್ಥಿವೇತನ ಒದಗಿಸಬೇಕು.
  • ಅಂತರ್ರಾಜ್ಯ ಪ್ರವಾಸಿ ವಾಹನಗಳ ಪರಸ್ಪರ ಒಪ್ಪಂದಕ್ಕೆ ಚಾಲನೆ ನೀಡಬೇಕು. ಸರ್ಕಾರಿ ವಾಹನಗಳಲ್ಲಿ ನಿಗದಿತ ಪ್ರಮಾಣಕ್ಕಿಂತ ಅಧಿಕ ಪ್ರಯಾಣಿಕರನ್ನು ಒಯ್ಯಬಾರದು. ಖಾಸಗಿ ವಾಹನಗಳನ್ನು ಕಿಲೋಮೀಟರ್್ರ ಆಧಾರದಲ್ಲಿ ಸರ್ಕಾರವೇ ಬಾಡಿಗೆ ಪಡೆಯಬೇಕು. ಟೂರಿಸ್ಟ್, ಕಾಂಟ್ರಾಕ್ಟ್ ಕ್ಯಾರೇಜ್ ಬಸ್ಗಳಿಗೆ ರಸ್ತೆ ತೆರಿಗೆ ಕಡಿತಗೊಳಿಸಬೇಕು ಎಂಬುದಾಗಿ ಖಾಸಗಿ ಸಾರಿಗೆ ಒಕ್ಕೂಟ ಬೇಡಿಕೆಗಳನ್ನು ಇಟ್ಟಿದೆ.
Donate Janashakthi Media

Leave a Reply

Your email address will not be published. Required fields are marked *