ಅನುಭವಗಳ ಕಣಜ ಬರಗೂರರ `ಕಾಗೆ ಕಾರುಣ್ಯದ ಕಣ್ಣು’

ಕಾಗೆ ಕಾರುಣ್ಯದ ಕಣ್ಣು

ಇತ್ತೀಚೆಗೆ ಪ್ರಕಟಗೊಂಡ ನಾಡೋಜ ಪ್ರೊ.ಬರಗೂರು ರಾಮಚಂದ್ರಪ್ಪನವರ `ಕಾಗೆ ಕಾರುಣ್ಯದ ಕಣ್ಣು’ ಪುಸ್ತಕ ಒಂದರ್ಥದಲ್ಲಿ ಅವರ ಜೀವನದ ಕಥನವೇ ಆಗಿದೆ.ಬರಗೂರ ಕಾರ್ಯಕ್ಷೇತ್ರ ಸಾಹಿತ್ಯ, ಸಿನಿಮಾ, ಸಾಂಸ್ಕೃತಿಕ ಚಿಂತನೆ, ಉತ್ತಮ ಸಂಘಟಕ, ಆಡಳಿತಗಾರ, ಸ್ನೇಹಜೀವಿ ಹೀಗೆ ಹಲವು ಬಹುಮುಖಿ ಆಯಾಮ ಬರಗೂರರ ಕಾರ್ಯಕ್ಷೇತ, ವ್ಯಕ್ತಿತ್ವವಾಗಿದೆ.ಅವರ ಈ ಕೃತಿಯನ್ನು ಪರಿಚಯ ಮತ್ತು ಬರಗೂರರ ವ್ಯಕ್ತಿತ್ವವನ್ನು ಅನಾವರಣಗೊಳಿಸಿದ್ದಾರೆ ಹಿರಿಯ ಬಂಡಾಯ ಸಾಹಿತಿ ಡಾ.ರಾಜಪ್ಪ ದಳವಾಯಿರವರು

ಪ್ರೊ.ಬರಗೂರು ರಾಮಚಂದ್ರಪ್ಪನವರ ಆಯ್ದ ಅನುಭವಗಳ ಕಥನ ಇದಾಗಿದ್ದು, ಕಾಗೆ ಕಣ್ಣು (ದೃಷ್ಟಿ, ಮನೋಧರ್ಮ) ಬುದ್ಧನ ಕಾರುಣ್ಯದಂತೆ ಎಂಬರ್ಥವನ್ನು ಸ್ಫುರಿಸುವ ಚಿಂತನೆ ಈ ಶೀರ್ಷಿಕೆಯಲ್ಲಿದೆ.12 ಭಾಗಗಳಲ್ಲಿ ವಿಸ್ತಾರವಾಗಿ ವಿವರಿಸಿರುವ ಇಲ್ಲಿನ ಅನುಭವಗಳು ಒಂದರೊಳಗೊಂದು ಮಿಶ್ರಗೊಂಡು ಒಟ್ಟು ಒಂದು ಜೀವನವನ್ನು ವಿಸ್ತಾರವಾಗಿ ಕಂಡುಂಡು ಪಕ್ವಗೊಂಡ ಜೀವನ ಕ್ರಮವೊಂದರ ದರ್ಶನ ಇಲ್ಲಿದೆ.ಕನ್ನಡ ಅಧ್ಯಾಪಕರೊಬ್ಬರ ಅಧ್ಯಯನಶೀಲತೆ ಮತ್ತು ಬಹುಶಿಸ್ತೀಯ ನೆಲೆಗಳು ಹಾಗೂ ಅವರು ಏರಿದ ಎತ್ತರಗಳನ್ನು ತಿಳಿಸುತ್ತದೆ.ಬಂದ ಕಷ್ಟಗಳಿಗೆ ಸಹನೆಯಿಂದ, ಮುಖಾಮುಖಿಯಾಗಿ, ಬೆನ್ನು ಮಾಡದೆ ದಿಟ್ಟವಾಗಿ ಹೆದರಿಸಿದ ನೂರಾರು ಉದಾಹರಣೆಗಳು ಇಲ್ಲಿವೆ. ಬರಗೂರರ ವಿಶಿಷ್ಟ ವ್ಯಕ್ತಿತ್ವ ನಿರ್ಮಾಣದ ಹಿಂದೆ ಇರುವ ನೈತಿಕ ಪ್ರಜ್ಞೆ, ಶ್ರದ್ಧೆಯ ಓದು, ಬದ್ಧತೆಯ ಬದುಕು ಇಲ್ಲಿ ಅವತರಿಸಿದೆ ಎಂದರೆ ತಪ್ಪಾಗದು. ಹಳ್ಳಿಯಿಂದ ಬೆಂಗಳೂರಿಗೆ ಅವರ ಚಲನೆ ಬಹು ಸ್ವಾರಸ್ಯಕರವಾದುದು. ಬಂದ ಸಂಕಷ್ಟಗಳನ್ನು ಎದುರಿಸಿ ವಿದ್ಯೆಗಳಿಸಿದ್ದು, ಗಳಿಸಿದ ವಿದ್ಯೆಯನ್ನು ಸಾರ್ಥಕ ಮಾಡಿಕೊಂಡು ಏನೆಲ್ಲ ಸಾಧಿಸಿದರೆಂಬ ಸಾಕ್ಷಿಯಂತಿದೆ ಈ ಕೃತಿ.

1) ಓದಿನಿಂದ ಉದ್ಯೋಗದವರೆಗೆ, 2) ಸಾಹಿತ್ಯ, ಸಿನಿಮಾ, ಅಭಿವ್ಯಕ್ತಿ, 3) ಬಂಡಾಯ ಸಾಹಿತ್ಯ ಸಂಘಟನೆ, 4) ರಾಜಕಾರಣಿಗಳ ಪ್ರಸಂಗಗಳು, 5) ಜವಾಬ್ದಾರಿ ಸ್ಥಾನಗಳ ಬಗ್ಗೆ 6) ಮನದಲ್ಲಿ ಉಳಿದ ಕೆಲವು ನೆನಪುಗಳು, 7) ನನ್ನೂರಿನ ಸಂವೇದನೆಗಳು, 8) ದೇವರ ಗುಟ್ಟು, 9) ಟ್ಯಾಗೋರರ ನನ್ನ ಬಾಲ್ಯ ಮತ್ತು ನಾನು, ನನ್ನ ಕುಟುಂಬ ಮತ್ತು ಡಾ. ರಾಜಕುಮಾರ್, 10) ತಾಯಿಯ ಆರೈಕೆ ಮಾಡಿದ ತಾಯ್ತನವನ್ನು ನೆನೆದು, 11) ಏಕಾಂತ ಮತ್ತು ಏಕಾಕಿತನ: ಒಂದು ಸಂಕಟ ಕಥನ ಇವಿಷ್ಟು ಭಾಗಗಳು.

ಎಲ್ಲರವರಂಥಲ್ಲ ಬರಗೂರು, ಅವರೇ ಭಿನ್ನ, ವಿಶಿಷ್ಟ.ಮಾತು ಮತ್ತು ಕೃತಿಗೆ ಅಂತರವಿಲ್ಲದ ಬದುಕು.ಸಾಹಿತ್ಯ-ಸಿನಿಮಾ ಅವರ ಪ್ರಮುಖ ಅಭಿವ್ಯಕ್ತಿಗಳು.ಅವರು ಆರಂಭಕ್ಕೆ ನಾಟಕಗಳನ್ನು ಬರೆದರು.`ಮುಳ್ಳು ಹಾದಿ’.ಅದೊಂದು ಅವರ ಬಾಳಿಗೆ ರೂಪಕ.ಉತ್ತಮ ವಾಕ್ಪಟು.ಅಧ್ಯಾಪನದಲ್ಲಿ ಯಶಸ್ಸು ಕಂಡವರು.ಉತ್ತಮ ಆಡಳಿತಗಾರರು, ಸಾಹಿತ್ಯ ಅಕಾಡೆಮಿ, ತುಮಕೂರು ಪಿ.ಜಿ. ಸೆಂಟರ್, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಗಡಿನಾಡು ಅಧ್ಯಯನ ವರದಿ ಮುಂತಾಗಿ, ಅಧ್ಯಾಪಕರಾಗಿ ಪಠ್ಯಗಳನ್ನು ನೋಡುವ ಹೊಸ ದೃಷ್ಟಿಯನ್ನು ವಿದ್ಯಾರ್ಥಿಗಳಿಗೆ ಕಲಿಸಿದವರು.ಅಧ್ಯಾಪನದ ಜತೆ ಬಂಡಾಯ ಸಾಹಿತ್ಯ ಸಂಘಟನೆಯನ್ನು ಆರಂಭಿಸಿ ಇವತ್ತಿಗೂ ಅದನ್ನು ಮುನ್ನಡೆಸುತ್ತಿದ್ದಾರೆ.ಅವರು ತಮ್ಮ ಬಗ್ಗೆ ಹೇಳಿಕೊಳ್ಳುವುದು ಕಡಿಮೆ.ವಿಷಯಾಧಾರಿತ ಚರ್ಚೆ ಅವರಿಗೆ ಪ್ರಿಯ.ಅನೇಕ ಸ್ನೇಹಿತರ ಒತ್ತಾಸೆಯಿಂದ ಈ ಕೃತಿ ಬರೆದುದಾಗಿ ಹೇಳಿಕೊಂಡಿದ್ದಾರೆ.ಕುಟುಂಬ, ಊರು, ಪರಿಸರ, ಗೆಳೆಯರು, ಹಿತೈಷಿಗಳು, ಕಾಲದ ಕ್ರಮದಲ್ಲಿ ಕಾಲು ತೊಡರು ಕೊಳ್ಳುವವರ ಬಗೆಗೂ ಬರೆದಿದ್ದಾರೆ.ಆದರೆ ಅದು ಎಂದೂ ಸ್ವಪ್ರಶಂಸೆ, ಪರನಿಂದೆ ಆಗದಂತೆ ಎಚ್ಚರ ವಹಿಸಿದ್ದಾರೆ.

ಇದನ್ನೂ ಓದಿ:ಇದು ಬರಿ ಕಥನವೂ ಅಲ್ಲ ಒಂದು ಜೀವನ ದರ್ಶನ

ಇಡಿ ಕೃತಿ ಓದಿದಾಗ ಒಂದು ಪ್ರಾಂಜಲ ಮನಸ್ಸು ಆರೋಗ್ಯಕರವಾದ ಸಮಾಜಕ್ಕೆ, ಸಮಾನತೆಗೆ ತುಡಿಯುವುದನ್ನು ಮನಗಾಣಬಹುದಾಗಿದೆ.ಅವರು ಮೂಲತಃ ಪ್ರಜಾಪ್ರಭುತ್ವವಾದಿ.ಸಮಾನತೆಯ ಆಶಯಗಳನ್ನು ಜೀವಂತ ಬದುಕುವ ಬಗೆಗೆ ಹೆಚ್ಚು ಚಿಂತಿಸುವವರಾಗಿದ್ದಾರೆ.ಬರಗೂರು ಆರಂಭದಲ್ಲಿ ಗಾಂಧಿವಾದಿ ನಂತರ ಮಾರ್ಕ್ಸ್‌ವಾದಿ.ಗಾಂಧಿ-ಮಾರ್ಕ್ಸ್ ಇಬ್ಬರನ್ನೂ ಆರ್ಜಿಸಿಕೊಂಡವರು.ಹಾಗೆಂದು ಯಾವ ವಾದಕ್ಕೂ ಶುಷ್ಕವಾಗಿರುವವರಲ್ಲ. ಸೃಜನಾತ್ಮಕವಾಗಿಯೇ ಇರುವವರು.ಜಗತ್ತಿನ ಆಗು ಹೋಗು, ದೇಶ ಮತ್ತು ರಾಜ್ಯದ ಆಗು ಹೋಗುಗಳ ಬಗ್ಗೆ ಹೆಚ್ಚು ಹೆಚ್ಚು ತಿಳಿಯುತ್ತಾ ಹೋಗುವ ಗುಣ ಸಾಹಿತ್ಯದಲ್ಲಿ ಭಿನ್ನ ಪರಂಪರೆಗೆ ಬರಹಗಾರರಾಗಿ ಕಾರಣರಾದ ಬರಗೂರರು ಬೇರೆಯವರಿಗೂ ಸ್ಫೂರ್ತಿಯಾದವರು. ಬಂಡಾಯ ಸಾಹಿತ್ಯ ಸಂಘಟನೆಯ ಮೂಲಕ ಹೊಸ ಲೇಖಕರ ಪಡೆಯನ್ನೇ ಕಟ್ಟಿದವರು.ಅವರು ಬರೆದಷ್ಟು ಮುನ್ನುಡಿಗಳನ್ನು ಬಹುಶಃ ಕನ್ನಡದಲ್ಲಿ ಮತ್ತೊಬ್ಬ ಲೇಖಕರು ಬರೆದಿರಲಾರರು.ಬಹಳಷ್ಟು ಪುಸ್ತಕಗಳ ಮೊದಲ ಓದುಗರು ಅವರಾಗಿದ್ದಾರೆ.ಅರ್ಧಶತಮಾನ ಕಾಲ ಸಂಘಟನೆಯನ್ನು ಮುನ್ನಡೆಸಿದ ಕೀರ್ತಿ ಅವರದು.ಕವಿತೆ, ಕತೆ, ಕಾದಂಬರಿ, ಸಾಹಿತ್ಯ ವಿಮರ್ಶೆ, ಅವರ ಪ್ರಮುಖ ಮಾಧ್ಯಮ.ಜತೆಗೆ ಅವರು ಸಿನಿಮಾ ನಿರ್ದೇಶಕರು, ಚಿತ್ರಕತೆ, ಸಂಭಾಷಣೆ, ನಿರ್ದೇಶನ, ಹಾಡುಗಳ ರಚನೆ ಅವರ ಪ್ರಮುಖ ಅಭಿವ್ಯಕ್ತಿಯಾಗಿದೆ. ಅದರಲ್ಲೂ ರ‍್ಯಾಯ ಸಿನಿಮಾ ನಿರ್ಮಾಣ ಮತ್ತು ಸಮುದಾಯದತ್ತ ಸಿನಿಮಾ ಕೊಂಡೊಯ್ಯುವ ಅಪೂರ್ವ ಕೆಲಸವನ್ನು ಅವರು ಮಾಡಿದ್ದಾರೆ.ಸೂರ್ಯ’ ಮಾಸ್ಕೊಗೆ, ಕರಡಿಪುರ ಲೀಡ್ಸ್‌ಗೆ, ಶಾಂತಿ ಗಿನ್ನಿಸ್‌ಗೆ ಎಲ್ಲಾ ಫಿಲಂ ಫೆಸ್ಟಿವಲ್‌ಗಳಲ್ಲಿ ಭಾಗವಹಿಸುವ ಅವರ ಚಿತ್ರಗಳಿಗೆ ಒಂದಿಲ್ಲೊಂದು ಪ್ರಶಸ್ತಿ ಬಂದೇ ಬಂದಿರುತ್ತವೆ. 23 ಪ್ರಮುಖ ಸಿನಿಮಾಗಳಲ್ಲಿ ಅವರ ಕಷ್ಟ, ಶ್ರಮ, ವಂಚನೆ ಎಲ್ಲವನ್ನೂ ಹೇಳಿಕೊಂಡಿದ್ದಾರೆ.ಬರಗೂರರು ನನ್ನಿಯ ಬಗ್ಗೆ (ಸ್ನೇಹ) ಹೆಚ್ಚು ಮಹತ್ವ ನೀಡುತ್ತಾರೆ.ಅವರಿಗೆ ಎಲ್ಲಾ ಕ್ಷೇತ್ರದ ಸ್ನೇಹಿತರಿದ್ದಾರೆ.ಈ ಕೃತಿಯಲ್ಲಿ ರಾಜಕಾರಣಿಗಳ ಸಹವಾಸದ ಅನೇಕ ಪ್ರಸಂಗಗಳನ್ನು ನಿರೂಪಿಸಿದ್ದಾರೆ.ಈ ಕೃತಿಯಲ್ಲಿ ಬರಗೂರರ ಜೀವನವೊಂದೇ ಇಲ್ಲ. ಅಸಂಖ್ಯಾತ ಜನರ ಜೀವನಧಾರೆ ಇಲ್ಲಿದೆ.ಸಾಹಿತ್ಯ, ಸಿನಿಮಾ, ಜೀವನ ಎಲ್ಲವನ್ನೂ ದೊಡ್ಡದಾಗಿ ಕಂಡವರು ಮತ್ತು ಸುತ್ತಲ ಜನರನ್ನು ಹಸನಾಗಿಡಲು ಅವರು ಶ್ರಮಿಸಿದವರು. ಕಾಗೆ ಕಾರುಣ್ಯದ ಕಣ್ಣು

ಬರಗೂರರಿಂದ ಅನೇಕ ಜನ ವಿವಿಧ ಸಹಾಯ ಪಡೆದವರಿದ್ದಾರೆ.ನೌಕರಿಗಳನ್ನು ಪಡೆದವರಿದ್ದಾರೆ.ಬೇರೆಯವರ ಕಷ್ಟಕ್ಕೆ ಸ್ಪಂದಿಸಿ, ತಾವೇ ಹಲವು ತೊಂದರೆಗೆ ಸಿಲುಕಿರುವ ಪ್ರಸಂಗಗಳೂ ಇಲ್ಲಿವೆ. ಬರಗೂರರ ಜೀವನದ ಬದ್ಧತೆಯ ಅನೇಕ ಪ್ರಸಂಗಗಳು ಇಲ್ಲಿ ಮನಮಿಡಿವಂತಿದೆ.ಸಾಹಿತ್ಯ, ಸಂಘಟನೆ, ಸಿನಿಮಾದ ನಂತರ ಕನ್ನಡಕ್ಕಾಗಿ ಅಪಾರ ಕೆಲಸ ಮಾಡಿದವರಲ್ಲಿ ಅವರೂ ಒಬ್ಬರು.ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಶೇ.5 ರಷ್ಟು ಒಳ ಮೀಸಲಾತಿ ಕಲ್ಪಿಸಿದ್ದೂ ಅವರ ಮಹತ್ ಸಾಧನೆಯಾಗಿದೆ.ಇನ್ನೂ ಗಡಿನಾಡ ಅಧ್ಯಯನ ಎಂಬ ಅವರ ವರದಿಯು ಮುಂದೆ ಗಡಿನಾಡ ಪ್ರಾಧಿಕಾರಕ್ಕೆ ಕಾರಣವಾದುದನ್ನು ಈ ಸಂದರ್ಭದಲ್ಲಿ ನೆನೆಯಲೇಬೇಕಾಗುತ್ತದೆ.

ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಚಿಕ್ಕವಯಸ್ಸಿಗೆ ದೊಡ್ಡ ಕೆಲಸಗಳನ್ನು ಮಾಡಿದವರು.`ಉಪಸಂಸ್ಕೃತಿ’ ಎಂಬ ಅವರ ಪರಿಕಲ್ಪನೆ, ಅಧ್ಯಯನ ಕರ್ನಾಟಕದ ಅಲಕ್ಷಿತ ಅಧ್ಯಯನಗಳ (subaltern marginalisation) ಹೊಸ ಶಕ್ತಿಯನ್ನೆ ತೆರೆಯಿತು.ಪರ-ವಿರೋಧ ಅಥವಾ ಭಿನ್ನ ಅಭಿಪ್ರಾಯಗಳ ನಡುವೆಯೇ ಆ ಕೆಲಸವನ್ನು ಇಂದಿಗೂ ತುರ್ತು ಮಾಡಿಕೊಳ್ಳಲು ಕಾರಣ ಆ ಅಧ್ಯಯನವು ಇಂದಿಗೂ ಚರ್ಚೆಗೆ ಮತ್ತು ಹೊಸ ಅಧ್ಯಯನಕ್ಕೆ ಕಾರಣವಾಗಿದೆ.ಬರಗೂರರನ್ನು `ಉಪಸಂಸ್ಕೃತಿ ಚಿಂತಕ’ ಎಂದು ಕರೆಯುವಷ್ಟು ಪ್ರಸಿದ್ಧವಾಗಿದೆ.ಸಾಹಿತ್ಯ ಅಕಾಡೆಮಿಯಲ್ಲಿ ೨೫೦ ಕ್ಕೂ ಹೆಚ್ಚು ಮಹತ್ವದ ಪುಸ್ತಕ ಪ್ರಕಟಿಸಿದ ಕೀರ್ತಿ ಅವರದು.ಕೆಲಸವೆ ಇಲ್ಲದ ಕಡೆಯೂ ಅವರು ಕೆಲಸ ಸೃಜಿಸಬಲ್ಲದು.ಅವರ ಚಿಂತನೆ ಜನಪರವಾದುದು.ಜನ ಪ್ರಾತಿನಿಧ್ಯದ ದೃಷ್ಟಿಯಿಂದ ಅವರ ವ್ಯಕ್ತಿತ್ವ ಭಿನ್ನ ಬಗೆಯದು. ಈ ಕೃತಿಯಲ್ಲಿ ಪಠ್ಯ ಪುಸ್ತಕಗಳ ಬಗೆಗೆ ಅವರು ಬರೆದಿರುವುದು ಪಠ್ಯಗಳೂ ಹೇಗಿರಬೇಕು?ಎಂದು, ಅವು ಪಠ್ಯ ಪುಸ್ತಕಗಳಲ್ಲ ಎಂದು.

ಅನೇಕ ಆಡಳಿತಗಾರರನ್ನು, ರಾಜಕಾರಣಿಗಳನ್ನು ಬಲ್ಲ, ಒಡನಾಟವಿದ್ದ ದೇವರಾಜ ಅರಸು ಅವರಿಂದಿಡಿದು ಜಿ. ಪರಮೇಶ್ವರ್ ವರೆಗೆ ಅನೇಕರ ಬಗೆಗೆ ಬರೆದಿದ್ದಾರೆ.ಅದರಲ್ಲೂ ಡಾ.ರಾಜಕುಮಾರ್ ಅವರೊಂದಿಗೆ ಬಾಂದವ್ಯ ಅದ್ಭುತವಾದುದು.ಅದೊಂದು ಬೇರೆ ಜಗತ್ತೆಂಬಂತೆ ಚಿತ್ರಿಸಿದ್ದಾರೆ.ತುಮಕೂರಿನ ಸೋಮಣ್ಣ ಇರಬಹುದು.ತಮ್ಮ ಜೊತೆ ಸಿನಿಮಾಗಳಲ್ಲಿ ಕೆಲಸ ಮಾಡಿದ ಗೆಳೆಯರಿರಬಹುದು. ಪುಸ್ತಕ ಪ್ರಕಟಣೆಗೆ ಸಹಾಯ ಮಾಡಿದ ಗೆಳೆಯರಿರಬಹುದು-`ಘಟನಾವಳಿಗಳ ಸ್ಮೃತಿ ಮತ್ತು ಕಾರಣರಾದ ವ್ಯಕ್ತಿಗಳಿಗೆ ಬಹುಶಃ ಬರಗೂರರು ಕೊಟ್ಟಷ್ಟು ಪ್ರಾಶಸ್ತ್ಯವನ್ನು ಬೇರೆಯರ‍್ಯಾರೂ ಕೊಡಲಾರರು.ಎಲ್ಲರ ಶಕ್ತಿಯನ್ನು ಪ್ರೋತ್ಸಾಹಿಸುವ ಅವರ ಗುಣವೇ ವಿಶೇಷವಾದದು.ಅವರವರ ಸಾಮರ್ಥ್ಯಕ್ಕನುಗುಣವಾಗಿ ಕೆಲಸ ಹಂಚುವ, ಬೇರೆಯವರಿಂದ ಕೆಲಸ ಮಾಡಿಸುವ ಅವರ ಗುಣ ಕೂಡ ವಿಶೇಷವಾದುದಾಗಿದೆ.ಅವರೊಬ್ಬ ಒಳ್ಳೆಯ ಆಡಳಿತಗಾರರೆಂಬುದನ್ನು, ಸಂಘಟಕರೂ ಎಂಬುದನ್ನೂ ನಾನು 1993 ರಿಂದಲೂ ಕಂಡಿದ್ದೇನೆ. ಕಾಲಬದ್ಧ ಯೋಜನೆಗಳನ್ನು ನಿರ್ವಹಿಸುವುದರಲ್ಲಿ ಅವರು ಬಹಳ ಶ್ರಮವಹಿಸುತ್ತಾರೆ.ಗೋಕಾಕ ಚಳವಳಿ ಇರಲಿ, ಅವರ ಬಾಲ್ಯದ ನೆನಪುಗಳೇ ಇರಲಿ ಅವರು ಸಾಮಾನ್ಯ ನೆಲೆಯಿಂದ ಅಸಮಾನ್ಯ ನೆಲೆಗೆ ಏರಿದ ಕಾರಣ ಅವರ ಶಿಸ್ತುಬದ್ಧ ಕೆಲಸಗಳು, ಗೊಂದಲಗಳಿಲ್ಲದ ಚಿಂತನೆಗಳು, ಅದಕ್ಕೆ ತಕ್ಕ ನೈತಿಕತೆ.ಅಧಿಕಾರದಲ್ಲಿದ್ದೂ ಸದ್ಯ ಪತ್ರದ ಜಪಬಿಂದುವಿನಂತಿರುವ ಗುಣ ಮೆಚ್ಚಲೇಬೇಕು.

ಸಾಮಾಜಿಕ ನ್ಯಾಯ, ಸಮಾನತೆಯ ಬದುಕಿಗಾಗಿ ಅವರ ಹಂಬಲ, ಜಾತಿರಹಿತವಾದ ಅವರ ಬಾಂಧವ್ಯ ಎಂಥವರನ್ನೂ ಆಕರ್ಷಿಸದೆ ಇರವು.`ಮೇಡಂ ರಾಜಲಕ್ಷ್ಮಿಯವರು ಗತಿಸಿದ ಮೇಲೆ ಅವರು ಅನುಭವಿಸಿದ ನೋವು, ಒಂಟಿತನ, ನೆನೆದು ದುಃಖಿಸುವ ಅವರು ಮೃದು’ ಅವರ ಪತ್ನಿ ಕೆಲವು ನಿರ್ಧಾರಗಳಲ್ಲಿ ಕಠಿಣ.ಸಾರ್ವಜನಿಕ ಜೀವನದಲ್ಲಿ, ಜವಾಬ್ದಾರಿ ಹುದ್ದೆಗಳಲ್ಲಿದ್ದಾಗ ಸಾಹಿತಿಯೊಬ್ಬರು ಇರಬೇಕಾದ ರೀತಿನೀತಿ, ಸ್ವಯಂಸಂಹಿತೆಗಳು ಇವೆಲ್ಲವಕ್ಕೂ ಬರಗೂರರೇ ಮಾದರಿಯಾಗಿದ್ದಾರೆ.ಅವರ ಅಂತರಂಗವನ್ನು ತಿಳಿಯಲು, ಅಪರೂಪದ ಪ್ರಸಂಗಗಳಲ್ಲಿ ಅವರು ತೆಗೆದುಕೊಂಡ ನಿರ್ಧಾರಗಳ ಬಗ್ಗೆ ಒಂದು ಸಂಕಟದ, ಸುಂದರವಾದ ಪ್ರಯಾಣವನ್ನು ಈ ಕೃತಿಯ ಓದಿನೊಂದಿಗೆ ನಾವು ಮಾಡಬಹುದಾಗಿದೆ.ನೆನಪಿನ ಕಣಜದಲ್ಲಿ ಶಾಶ್ವತವಾಗಿ ಉಳಿಯುವ ಸಾವಿರಾರು ಪ್ರಸಂಗಗಳು ಅವರ ಈ ಕೃತಿಯಲ್ಲಿವೆ.

ಇಡಿ ಕೃತಿ ಓದಿದಾಗ ಒಂದು ಪ್ರಾಂಜಲ ಮನಸ್ಸು ಆರೋಗ್ಯಕರವಾದ ಸಮಾಜಕ್ಕೆ, ಸಮಾನತೆಗೆ ತುಡಿಯುವುದನ್ನು ಮನಗಾಣಬಹುದಾಗಿದೆ.ಅವರು ಮೂಲತಃ ಪ್ರಜಾಪ್ರಭುತ್ವವಾದಿ.ಸಮಾನತೆಯ ಆಶಯಗಳನ್ನು ಜೀವಂತ ಬದುಕುವ ಬಗೆಗೆ ಹೆಚ್ಚು ಚಿಂತಿಸುವವರಾಗಿದ್ದಾರೆ. ಬರಗೂರು ಮೂಲತ: ಗಾಂಧಿವಾದಿ. ನಂತರ ಮಾರ್ಕ್ಸ್ವಾದಿ.ಗಾಂಧಿ-ಮಾರ್ಕ್ಸ್ ಇಬ್ಬರನ್ನೂ ಆರ್ಜಿಸಿಕೊಂಡವರು.ಹಾಗೆಂದು ಯಾವ ವಾದಕ್ಕೂ ಶುಷ್ಕವಾಗಿರುವವರಲ್ಲ. ಸೃಜನಾತ್ಮಕವಾಗಿಯೇ ಇರುವವರು. ಕಾಗೆ ಕಾರುಣ್ಯದ ಕಣ್ಣು

Donate Janashakthi Media

Leave a Reply

Your email address will not be published. Required fields are marked *