ಬೆಂಗಳೂರು: ನಗರದಲ್ಲಿ ಕಳೆದ ಕೆಲವು ದಿನಗಳಿಂದ ಪ್ರತಿದಿನ ಸುರಿಯುತ್ತಿರುವ ಮಳೆಯಿಂದಾಗಿ ನಗರದ ಹಲವು ಭಾಗಗಳು ಕೆರೆಯಂತಾಗಿವೆ. ಒಂದೆಡೆ ಜನ ಸಂಕಷ್ಟಗಳಿಂದ ಹೈರಾಣಾಗಿದ್ದಾರೆ, ಮತ್ತೊಂದೆಡೆ ಆಡಳಿತ ಯಂತ್ರ ಕುಸಿದಿದ್ದು, ಸಮಪರ್ಕವಾಗಿ ಕಾರ್ಯನಿರ್ವಹಿಸದಿರುವ ಬಗ್ಗೆ ಜನರು ಟೀಕಿಸುತ್ತಿದ್ದಾರೆ.
ಇದರ ನಡುವೆ ಇದೀಗ, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಾಕಲಾದ ವಿಡಿಯೋ ಒಂದು ಭಾರೀ ಟ್ರೋಲ್ ಆಗಿದ್ದು, ಜನರು ಸಂಸದರನ್ನು ತರಾಟೆಗೆ ತೆದುಕೊಂಡಿದ್ದಾರೆ.
ವಿಡಿಯೊದಲ್ಲಿ ತೇಜಸ್ವಿ ಸೂರ್ಯ, ‘ಪದ್ಮನಾಭ ನಗರದ ಸಾತ್ವಿ ಕಿಚನ್‌ಗೆ ಬಂದಿದ್ದೆ. ಇನ್‌ಸ್ಟಾಗ್ರಾಂನಲ್ಲಿ ದೋಸೆಯ ಫೋಟೊ ನೋಡಿ ಟೆಂಪ್ಟ್ ಆಗಿ ಇಲ್ಲಿಗೆ ಬಂದಿದ್ದು. ತುಂಬಾ ಚೆನ್ನಾಗಿದೆ ಬೆಣ್ಣೆ ಮಸಾಲೆ. ನೀವೂ ಬನ್ನಿ. ತಿಂದಾಗ್ಲೇನೆ ಆಸ್ವಾದನೆ ನಿಮಗೆ ಗೊತ್ತಾಗುವುದು. ಉಪ್ಪಿಟ್ಟು ಬಹಳ ಚೆನ್ನಾಗಿದೆ. ಬನ್ನಿ’ ಎಂದು ಜನರನ್ನು ಆಹ್ವಾನಿಸುತ್ತಿರುವುದು ಇದೆ.
ಸೋಮವಾರ ಇಡೀ ದಕ್ಷಿಣ ಬೆಂಗಳೂರು ಮಳೆ ನೀರಿನಲ್ಲಿ ಮುಳುಗುತ್ತಿದ್ದರೆ ಈ ಚೈಲ್ಡ್ ಚಪಾತಿ @Tejasvi_Surya ಅದ್ಯಾವುದೋ ಹೋಟೆಲ್ ನಲ್ಲಿ ಬೆಣ್ಣೆ ದೋಸೆ ತಿನ್ನೋಕೆ ಕರೆಯುತ್ತಿದ್ದಾನೆ. pic.twitter.com/mEOvVydVdJ
— ಪ್ರದೀಪ್ ಶೆಟ್ಟಿ (@pradeepshettyn) September 6, 2022
ಬೆಂಗಳೂರು ನಗರದಲ್ಲಿ 51 ವರ್ಷಗಳ ಇತಿಹಾಸದಲ್ಲೇ ದಾಖಲೆಯ ಮಳೆ ಸುರಿದೆ. ಇದರಿಂದಾಗಿ ನಗರದ ನಿವಾಸಿಗಳು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಭಾನುವಾರ ರಾತ್ರಿ ಸುರಿದ ಭಾರಿ ಮಳೆಯಿಂದ ಜನರು ಸಂಕಷ್ಟ ಪಡುತ್ತಿದ್ದಾಗ ಬೇಜವಾಬ್ದಾರಿ ಸಂಸದ ಹೋಟೆಲ್ ಒಂದನ್ನು ಪ್ರಚಾರ ಮಾಡುತ್ತಾ, ದೋಸೆಯ ರುಚಿಯನ್ನು ಸವಿಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ರೋಮ್‌ಗೆ ಬೆಂಕಿ ಬಿದ್ದಾಗ ದೊರೆ ನೀರೋ ಪಿಟೀಲು ಬಾರಿಸುತ್ತಿದ್ದ ಎಂಬುದು ಹಳೆಯ ಮಾತು. ಬೆಂಗಳೂರಲ್ಲಿ ಪ್ರವಾಹವಾದಾಗ ನಮ್ಮ ದಕ್ಷಿಣದ ಸಂಸದ ಸಂಭ್ರಮ ಪಡುತ್ತಿದ್ದರು ಎಂಬುದು ಈಗಿನ ಮಾತಾಗಿದೆ. ಈ ವಿಡಿಯೊ ಸೆಪ್ಟೆಂಬರ್ 5ರಂದು ಸೋಮವಾರ ತೆಗೆದದ್ದಾಗಿದೆ” ಎಂದು ನಿತ್ಯಾನಂದ ಶೆಟ್ಟಿ ಎಂಬವರು ಸಂದೇಶ ಬರೆದಿದ್ದಾರೆ.
“ಬೆಂಗಳೂರು ಮುಳುಗುತ್ತಿದ್ದಾಗ ತೇಜಸ್ವಿ ಸೂರ್ಯ ಒಳ್ಳೆಯ ಉಪಹಾರ ಸವಿಯುತ್ತಿದ್ದರು. ಅವರು ಒಂದಾದರೂ ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ್ದಾರೆಯೇ” ಎಂದು ಕಾಂಗ್ರೆಸ್ ವಕ್ತಾರೆ ಲಾವಣ್ಯ ಬಲ್ಲಾಳ್ ಪ್ರಶ್ನಿಸಿದ್ದಾರೆ.
ಇದನ್ನ ಹೊರೆತು ಪಡಿಸಿ ಸಾರ್ವಜನಿಕರು, ಪ್ರವಾಹ ಪರಿಸ್ಥಿತಿಯಲ್ಲಿ ಸಂಸದರು ಜವಾಬ್ದಾರಿಯಿಂದ ಜನರ ನೆರವಿಗೆ ಬರಬೇಕು ಎಂದು ಕಿವಿ ಮಾತನ್ನ ಹೇಳುವ ಜೊತೆಗೆ ಕೆಲವರು ಸಂಸದ ಸೂರ್ಯ ಅವರನ್ನ ಚೈಲ್ಡ್ ಚಪಾತಿ ಎಂದು ವ್ಯಂಗ್ಯ ಮಾಡಿದ್ದಾರೆ.