ನವದೆಹಲಿ: ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಸರ್ಕಾರವು ಅಧಿಕಾರಕ್ಕೆ ಬಂದ ದಿನದಿಂದಲೂ ಜನಸಾಮಾನ್ಯರು ಬೆಲೆ ಏರಿಕೆಗಳಿಂದಾಗಿ ಹೈರಾಣಾಗಿದ್ದಾರೆ. ಅದರಲ್ಲೂ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಯಿಂದಾಗಿ ಜೀವನ ನಡೆಸುವುದೇ ದುಸ್ತರವಾಗಿದೆ. ಗೃಹ ಬಳಕೆಯ ಅನಿಲ ಸಿಲಿಂಡರ್ ಬೆಲೆಯಂತೂ ಗಗನಕ್ಕೆ ಮುಟ್ಟಿದೆ.
ಜನಸಾಮನ್ಯರು ಬೆಲೆ ಏರಿಕೆಯ ವಿರುದ್ಧ ದೊಡ್ಡ ಪ್ರಮಾಣದಲ್ಲೇ ಆಕ್ರೋಶವನ್ನೇ ವ್ಯಕ್ತಪಡಿಸುತ್ತಿದ್ದಾರೆ. ದಿನನಿತ್ಯದ ಅಗತ್ಯಗಳಲ್ಲಿ ಒಂದಾದ ಗ್ಯಾಸ್ ಸಿಲೆಂಡರ್ ಬೆಲೆ ಏರಿಕೆಯು ಜನರನ್ನು ಕಂಗಾಲಾಗಿಸಿದೆ. ಈ ನಡುವೆ ಕೇಂದ್ರದ ಬಿಜೆಪಿ ಸರ್ಕಾರವು ಗ್ಯಾಸ್ ಸಿಲಿಂಡರ್ ತೂಕ ಇಳಿಸುವ ಪ್ರಸ್ತಾಪವನ್ನು ಹೊಂದಿದೆ ಎನ್ನುವುದು ರಾಜ್ಯಸಭೆಯಲ್ಲಿ ಬಹಿರಂಗಗೊಂಡಿದೆ.
ಅಡುಗೆ ಅನಿಲ ಸಿಲಿಂಡರ್ ತೂಕವನ್ನು ಈಗಿರುವ 14.2 ಕೆಜಿ ತೂಕವನ್ನು 5 ಕೆ.ಜಿ.ಗೆ ಇಳಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ರಾಜ್ಯಸಭೆ ಕಲಾಪದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.
ʻʻಎಲ್ಪಿಜಿ ಸಿಲಿಂಡರ್‌ಗಳು ಭಾರವಾಗಿದ್ದು, ಅವುಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸ್ಥಳಾಂತರಿಸಲು ಕಷ್ಟವಾಗುತ್ತದೆ. ಮುಖ್ಯವಾಗಿ ಮಹಿಳೆಯರು ಗ್ಯಾಸ್ ಸಿಲಿಂಡರ್ ಅನ್ನು ಒಂದು ಕಡೆಯಿಂದ ಮತ್ತೊಂದು ಕಡೆ ತೆಗೆದುಕೊಂಡು ಹೋಗಲು ತೊಂದರೆಯಾಗುತ್ತದೆ. ಹೀಗಾಗಿ, ಅದಕ್ಕೆ ಪರಿಹಾರವಾಗಿ ಗ್ಯಾಸ್ ಸಿಲಿಂಡರ್‌ಗಳ ತೂಕವನ್ನೇ ಕಡಿಮೆ ಮಾಡಲು ನಿರ್ಧರಿಸಲಾಗಿದೆ. ಎಂದು ರಾಜ್ಯಸಭೆಯ ಚರ್ಚೆಯ ವೇಳೆಯಲ್ಲಿ ಸಚಿವರು ಉತ್ತರಿಸಿದ್ದಾರೆ.
ಎಲ್ಪಿಜಿ ಸಿಲಿಂಡರ್‌ಗಳು ಭಾರವಾಗಿರುವುದರಿಂದ ಮಹಿಳೆಯರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಕಲಾಪದಲ್ಲಿ ರಾಜ್ಯಸಭೆ ಸದಸ್ಯರೊಬ್ಬರು ಪ್ರಸ್ತಾಪಿಸಿದಾಗ ಅದಕ್ಕೆ ಉತ್ತರ ನೀಡಿದ ಸಚಿವ ಹರ್ದೀಪ್ ಸಿಂಗ್ ಪುರಿ ಮೇಲಿನಂತೆ ಹೇಳಿಕೆ ನೀಡಿದ್ದಾರೆ.
ʻಮಹಿಳೆಯರು ಮತ್ತು ಹೆಣ್ಣುಮಕ್ಕಳು ಸಿಲಿಂಡರ್‌ನ ಹೆಚ್ಚಿನ ತೂಕವನ್ನು ತಾವೇ ಹೊರುವುದು ನಮಗೆ ಇಷ್ಟವಿಲ್ಲ, ಹಾಗಾಗಿ ಅದರ ತೂಕವನ್ನು ಕಡಿಮೆ ಮಾಡುವ ಬಗ್ಗೆ ಚಿಂತಿಸಲಾಗುತ್ತಿದೆ’ ಎಂದು ಹೇಳಿದರು. 14.2 ಕೆ.ಜಿ ತೂಕವನ್ನು 5 ಕೆ.ಜಿ.ಗೆ ಇಳಿಸುವ ಬಗ್ಗೆ ಚಿಂತಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಜನರ ಅನುಕೂಲಕ್ಕಾಗಿ ಗ್ಯಾಸ್ ಸಿಲಿಂಡರ್ ಹಗುರವಾಗಿರುವುದು ಅವಶ್ಯಕ. ಗ್ಯಾಸ್ ಸಿಲಿಂಡರ್ ಅನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸ್ಥಳಾಂತರಿಸಬೇಕಾದರೆ ಕೆಲವೊಮ್ಮೆ ಸಮಸ್ಯೆಯಾಗುತ್ತದೆ. ಹೀಗಾಗಿ, ಅಡುಗೆ ಅನಿಲ ಸಿಲಿಂಡರ್‌ಗಳ ತೂಕ ಕಡಿಮೆಗೊಳಿಸಲು ಮುಂದಾಗಿದೆ ಎಂದು ಸಮರ್ಥನೆ ನೀಡುತ್ತಿದೆ.