ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ತಪ್ಪಾಗಿದ್ರೆ ತಿದ್ದಿಕೊಳ್ಳುತ್ತೇವೆ: ಸಚಿವ ನಾಗೇಶ್

ಧಾರವಾಡ: ಪಠ್ಯಪುಸ್ತಕ ಪರಿಷ್ಕರಣೆ ವೇಳೆ ತಪ್ಪು ಆಗಿರುವುದನ್ನು ಗಮನಿಸಿ ಅದರ ಮರು ಪರಿಷ್ಕರಣೆಗೆ ಮುಂದಾಗಿದ್ದೇವೆ ಎಂದು ಶಿಕ್ಷಣ ಸಚಿವ ಬಿಸಿ ನಾಗೇಶ್ ಹೇಳಿದರು. ಧಾರವಾಡದಲ್ಲಿ ಮಾತನಾಡಿದ ಅವರು, ಪಠ್ಯಪುಸ್ತಕ ವಿವಾದ ಹಿನ್ನೆಲೆ ಸಾಕಷ್ಟು ಪರ ವಿರೋಧವಾದ ಹೇಳಿಕೆಗಳು ಬಂದವು. ಆದರೆ, ಪಠ್ಯಪುಸ್ತಕ ಪರಿಷ್ಕರಣೆ ಮಾಡುವಾಗ ದೊಡ್ಡ ತಪ್ಪು ಮಾಡಬಾರದು. ಇಂತದ್ದೊಂದು ಜವಾಬ್ದಾರಿ ಸಿಕ್ಕಾಗ ಜಾಗರೂಕರಾಗಿರಬೇಕು ಎಂದು ಹೇಳಿದರು.

ಪಠ್ಯ ಪರಿಷ್ಕರಣೆಯಲ್ಲಿ ಲೋಪ-ದೋಷಗಳನ್ನ ಯಾರೇ ಕಂಡು ಹಿಡಿದರು ಅದನ್ನು ಸರಿ ಮಾಡುತ್ತೇವೆ. ಯಾವುದೇ ತಪ್ಪನ್ನು ಮುಚ್ಚಿಡುತ್ತಿಲ್ಲ. ಇದರಿಂದ ಮಕ್ಕಳ ಮೇಲೆ ಪರಿಣಾಮ ಬೀರಬಾರದು. ಹೀಗಾಗಿ ಅದನ್ನು ಸರಿ ಮಾಡುವ ಪ್ರಯತ್ನ ಮಾಡುತ್ತಿದ್ದೇವೆ ಎಂದರು. ಹಿಂದಿನ ಪಠ್ಯ ಪುಸ್ತಕದಲ್ಲಿ ಮಹಾರಾಜರನ್ನು ತೆಗೆದು ಟಿಪ್ಪು ಸುಲ್ತಾನ್ ಅವರನ್ನು ತರಲಾಗಿತ್ತು. ಸಿಂಧೂ ಸಂಸ್ಕೃತಿ ಕಿತ್ತುಹಾಕಿ ನೆಹರೂ ಪಾಠ ತರಲಾಗಿತ್ತು. ಇಸ್ಲಾಂ ಮತ್ತು ಕ್ರೈಸ್ತರನ್ನು ಮಾತ್ರ ಪುಸ್ತಕದಲ್ಲಿ ತರಲಾಗಿತ್ತು ಎಂದು ಪರಿಷ್ಕರಣೆಗೆ ನಡೆದ ಪ್ರಯತ್ನವನ್ನು ಸಮರ್ಥಿಸಿಕೊಂಡಿದ್ದಾರೆ.

ರೋಹಿತ್‌ ಚಕ್ರತೀರ್ಥ ಸಮಿತಿಯಿಂದ ಆಗಿರುವ ತಪ್ಪುಗಳನ್ನು ನಾವು ಒಪ್ಪಿಕೊಳ್ಳುತ್ತೇವೆ. ಆಗಿರುವ ಲೋಪದೋಷಗಳನ್ನು ಆದಷ್ಟು ಬೇಗನೇ ಸರಿಪಡಿಸಲಾಗುವುದು ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು.

ಇದನ್ನು ಓದಿ: ಪಿಯುಸಿ ಪಠ್ಯ ಪರಿಷ್ಕರಣಾ ಸಮಿತಿಯಿಂದ ‘ರೋಹಿತ್ ಚಕ್ರತೀರ್ಥಗೆ ಗೇಟ್‌ ಪಾಸ್‌!

ಈಗಾಗಲೇ ಶೇ. 84 ರಷ್ಟು ಪರಿಷ್ಕೃತ ಪಠ್ಯ ಪುಸ್ತಕಗಳು ಬಿಇಓ ಕಚೇರಿ ಸೇರಿವೆ. ಬಸವಣ್ಣನ ಪಠ್ಯದಲ್ಲಿ ಹಲವಾರು ಹೊಸ ವಿಚಾರಗಳನ್ನು ಅಳವಡಿಸಲಾಗಿದೆ. ಸಾರ್ವಜನಿಕ ಅವಗಣನೆಗೆ, ಸಲಹೆ ಪಡೆದು ಸಿದ್ಧಪಡಿಸುತ್ತೇವೆ ಎಂದ ಅವರು, ಪಠ್ಯಪುಸ್ತಕದ ಮುದ್ರಣಕ್ಕೆ ಕಾಗದ ಕೊರತೆ ಕಂಡುಬಂದಿತ್ತು. ಈಗ ಎಲ್ಲ ಸರಿದೂಗಿಸಿದ್ದೇವೆ. ಈ ಸಲ ಶಿಕ್ಷಣ ಗುಣಮಟ್ಟಕ್ಕೆ ಪೂರ್ಣ ಆದ್ಯತೆ ನೀಡುತ್ತವೆ. ಕಲಿತಾ ಚೇತರಿಕೆ ಕಾರ್ಯಕ್ರಮಕ್ಕೆ ಒಳ್ಳೆಯ ಸ್ಪಂದನೆ ದೊರೆತಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಶಾಸಕ ಅಮೃತ ದೇಸಾಯಿ, ಮೇಯರ್ ಈರೇಶ ಅಂಚಟಗೇರಿ, ಮಾಜಿ ಶಾಸಕಿ ಸೀಮಾ ಮಸೂತಿ, ಸವಿತಾ ಅಮರಶೆಟ್ಟಿ ಇದ್ದರು.

Donate Janashakthi Media

Leave a Reply

Your email address will not be published. Required fields are marked *