ಬೆಂಗಳೂರು: ಸಾರಿಗೆ ನೌಕರರ ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಲಾಗುತ್ತಿದ್ದರೂ ಸಹ ಬೇಡಿಕೆ ಈಡೇರಿಸಲು ಸರ್ಕಾರ ವಿಫಲವಾಗಿದ್ದು, ಈ ಧೋರಣೆ ಖಂಡಿಸಿ ನಾಳೆ(ಜನವರಿ 24) ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ನೇತೃತ್ವದಲ್ಲಿ ಪ್ರತಿಭಟನಾ ಧರಣಿ ನಡೆಸಲು ಮುಂದಾಗಿದ್ದಾರೆ.
ಪ್ರತಿಭಟನೆ ನಡೆದು 6 ವರ್ಷ ಕಳೆದರೂ ಸಾರಿಗೆ ನೌಕರರ ಬೇಡಿಕೆಯನ್ನು ಸರ್ಕಾರ ಈಡೇರಿಸಲಿಲ್ಲ. ಅಲ್ಲದೆ, 2021ರ ಏಪ್ರಿಲ್ ನಲ್ಲಿಯೂ 15 ದಿನಗಳ ಕಾಲ ಮುಷ್ಕರ ನಡೆಸಲಾಗಿದೆ. ಆದರೂ ಸಹ ಬೇಡಿಕೆಗಳನ್ನು ಈಡೇರಿಸಲಿಲ್ಲ. ಇದರಿಂದ ಮತ್ತೆ ನೌಕರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪ್ರತಿಭಟನೆಯ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಒಂದು ದಿನ ಬಸ್ ಸಂಚಾರ ವ್ಯತ್ಯಯ ಸಾಧ್ಯತೆಯಿದೆ.
ಇದನ್ನು ಓದಿ: ಸಾರಿಗೆ ನಿಗಮ ಪುನ:ಶ್ಚೇತನ: ʻಒಂದು ಬಸ್ಸಿಗೆ ಚಾಲಕ ಮಾತ್ರ ಸಾಕುʼ – 130 ಪುಟಗಳ ವರದಿ ಸಲ್ಲಿಕೆ
ಪ್ರತಿ ನಾಲ್ಕು ವರ್ಷಕ್ಕೊಮ್ಮೆ ವೇತನ ಪರಿಷ್ಕರಣೆ ಮಾಡುತ್ತಿದ್ದ ಸಾರಿಗೆ ನಿಗಮಗಳು 6 ವರ್ಷ ಕಳೆದರೂ ವೇತನ ಪರಿಷ್ಕರಣೆ ಮಾಡಲು ಮುಂದಾಗಿಲ್ಲ. ನಿಯಮಬದ್ಧವಾಗಿ 2020 ಮಾರ್ಚ್‌ನಲ್ಲಿ ವೇತನ ಪರಿಷ್ಕರಣೆಯಾಗಬೇಕಿತ್ತು. ಹೀಗಾಗಿ ನಿಗಮಗಳ ನಿರ್ಧಾರಕ್ಕೆ ಕೆಎಸ್ಆರ್‌ಟಿಸಿ, ಬಿಎಂಟಿಸಿ, ವಾಯುವ್ಯ ಹಾಗೂ ಕಲ್ಯಾಣ ಸಾರಿಗೆ ನಿಗಮಗಳ 1,20,000 ನೌಕರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 2016ರಲ್ಲಿ ಶೇ 12.5ರಷ್ಟು ವೇತನ ಪರಿಷ್ಕರಣೆ ಆಗಿತ್ತು.
ವೇತನ ಹೆಚ್ಚಳ ಸೇರಿದಂತೆ, ವಜಾಗೊಂಡ ನೌಕರರನ್ನು ಮರುಸೇರ್ಪಡೆ ಮಾಡಿಕೊಳ್ಳಬೇಕು ಮತ್ತು ಕೆಲಸದ ಪರಿಸ್ಥಿತಿಗಳನ್ನು ಸುಧಾರಿಸಲು ರಾಜ್ಯ ಸರ್ಕಾರ ಕ್ರಮಗಳನ್ನು ಕೈಗೊಳ್ಳಬೇಕೆಂಬುದು ಪ್ರಮುಖ ಬೇಡಿಕೆಗಳಾಗಿವೆ. ಒಟ್ಟಾರೆ 14 ಪ್ರಮುಖ ಬೇಡಿಕೆಗಳನ್ನು ಸಾರಿಗೆ ನೌಕರರು ಸರ್ಕಾರದ ಮುಂದೆ ಇಟ್ಟಿವೆ.
ಇದನ್ನು ಓದಿ: ಕೋಡಿಹಳ್ಳಿ ಚಂದ್ರಶೇಖರ್ 35 ಕೋಟಿ ರೂ ವಸೂಲಿ ಆರೋಪ : ತನಿಖೆಗೆ ಸಾರಿಗೆ ನೌಕರರ ಆಗ್ರಹ
ನೌಕರರ ಬೇಡಿಕೆ ಈಡೇರಿಸುವಂತೆ ಸರ್ಕಾರಕ್ಕೆ ಪದೇ ಪದೇ ಮನವಿ ಮಾಡುತ್ತಲೇ ಬಂದಿದ್ದೇವೆ. ಆದರೆ, ಸಾರಿಗೆ ಸಚಿವ ಬಿ.ಶ್ರೀರಾಮುಲು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದಾರೆ ವಿನಃ ಇಲ್ಲಿಯವರೆಗೂ ಯಾವ ಕ್ರಮವನ್ನು ಕೈಗೊಂಡಿಲ್ಲ. ಇದರಿಂದ ತೊಂದರೆ ಅನುಭವಿಸುವಂತಾಗಿದೆ ಎಂದು ಸಾರಿಗೆ ಕಾರ್ಮಿಕ ಅಳಲಾಗಿದೆ.
ಪ್ರತಿಭಟನೆಗೆ ಕೆ.ಎಸ್.ಆರ್.ಟಿ.ಸಿ ಸ್ಟಾಪ್ ಹಾಗೂ ವರ್ಕರ್ಸ್ ಫೆಡರೇಷನ್, ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾ ಮಂಡಳಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಫೆಡರೇಷನ್, ಕೆ.ಎಸ್.ಆರ್.ಟಿ.ಸಿ ಹಾಗೂ ಬಿ.ಎಂ.ಟಿ.ಸಿ ಯುನೈಟೆಡ್ ಎಂಪ್ಲಾಯೀಸ್ ಯೂನಿಯನ್, ಕೆ.ಎಸ್.ಆರ್.ಟಿ.ಸಿ ಹಾಗೂ ಎಸ್‌ಟಿ ಎಂಪ್ಲಾಯೀಸ್ ಯೂನಿಯನ್, ಕ.ರಾ.ರ.ಸಾ ಸಂಸ್ಥೆ ಪ.ಜಾ/ ಪ.ಪಂಗಳ ಅಧಿಕಾರಿಗಳು ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘಗಳು ಬೆಂಬಲವನ್ನು ನೀಡಿವೆ. ಸಾರಿಗೆ ಇಲಾಖೆಯ ನಾಲ್ಕು ನಿಗಮಗಳಾದ ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಕೆಕೆಎಸ್‌ಆರ್‌ಟಿಸಿ ಮತ್ತು ಎನ್‌ಡಬ್ಲ್ಯುಕೆಎಸ್‌ಆರ್‌ಟಿಸಿ ನೌಕರರು ಸಹ ಪ್ರತಿಭಟನಾ ಧರಣಿಯಲ್ಲಿ ಭಾಗಿಯಾಗಲಿದ್ದಾರೆ.
ನಾಲ್ಕು ನಿಗಮದ ವಿಭಾಗೀಯ ಕಚೇರಿ ಮುಂದೆ ಹಾಗೂ ಬಿಎಂಟಿಸಿ ನೌಕರರು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಧರಣಿ ಸತ್ಯಾಗ್ರಹ ನಡೆಸಲು ನಿರ್ಧರಿಸಿದ್ದಾರೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ