ಬೆಂಗಳೂರು: ಗುತ್ತಿಗೆ ಕಾಮಗಾರಿಗಳಲ್ಲಿ ಶೇಕಡಾ 40ರಷ್ಟು ಪಾಲು ನೀಡುವ ಕುರಿತು ಕೇಳಿ ಬಂದಿರುವ ಭ್ರಷ್ಟಾಚಾರದ ಆರೋಪದ ಬಗ್ಗೆ ವಿಧಾನ ಮಂಡಲದ ಸದನ ಸಮಿತಿಯಿಂದಲೇ ತನಿಖೆ ಕೈಗೊಳ್ಳಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒತ್ತಾಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಅವಧಿ ಸೇರಿದಂತೆ ಹಿಂದಿನ ಹತ್ತು ವರ್ಷಗಳ ಗುತ್ತಿಗೆ ಕಾಮಗಾರಿಗಳ ಬಿಲ್ ಪಾವತಿಯನ್ನು ತನಿಖೆ ನಡೆಸಲಿ. ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಸೇರಿದಂತೆ ಎಲ್ಲ ಪಕ್ಷಗಳ ಅಧಿಕಾರ ಅವಧಿಯದೂ ತನಿಖೆಯಾಗಲಿ. ಸಾರ್ವಜನಿಕರ ಹಣವನ್ನು ಯಾರೇ ದುರುಪಯೋಗಪಡಿಸಿಕೊಂಡಿದ್ದರೂ ಶಿಕ್ಷೆಯಾಗಬೇಕು ಎಂದು ಹೇಳಿದರು.
ಭ್ರಷ್ಟಾಚಾರದ ಆರೋಪದ ಬಗ್ಗೆ ಜಲಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಕೇಶ್ ಸಿಂಗ್ ಅವರಿಂದ ತನಿಖೆ ನಡೆಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದ್ದಾರೆ. ಅಧಿಕಾರಿಯ ತನಿಖೆಯಿಂದ ಯಾವುದೇ ಪ್ರಯೋಜನವಿಲ್ಲ. ನ್ಯಾಯಾಂಗ ತನಿಖೆಯಾಗಬೇಕು. ಬಹುಶಃ ಈ ಸರ್ಕಾರ ನ್ಯಾಯಾಧೀಶರಿಂದ ತನಿಖೆ ನಡೆಸಲು ಇವರಿಗೆ ಇಷ್ಟವಿಲ್ಲ ಎನ್ನಿಸುತ್ತಿದೆ. ಅದಕ್ಕಾಗಿ ಸದನ ಸಮಿತಿಯ ತನಿಖೆಗೆ ಒಪ್ಪಿಸಲು ಕಾಂಗ್ರೆಸ್ ಒತ್ತಾಯಿಸುತ್ತದೆ ಎಂದರು.
ಸಮಿತಿಗೆ ಬಿಜೆಪಿಯವರೇ ಅಧ್ಯಕ್ಷರಾಗಲಿ, ಅವರ ಸದಸ್ಯರುಗಳೇ ಸಮಿತಿಯಲ್ಲಿ ಹೆಚ್ಚಾಗಿರಲಿ. ಅದಕ್ಕೆ ನಮ್ಮ ಅಭ್ಯಂತರವಿಲ್ಲ. ತನಿಖೆ ನಿಷ್ಪಕ್ಷಪಾತವಾಗಿ ನಡೆಯಲಿ ಎಂದು ಹೇಳಿದರು.
ಇದರ ಬಗ್ಗೆ ಕಾಂಗ್ರೆಸ್ ಪಕ್ಷವು ಈಗಾಗಲೇ ರಾಜ್ಯಪಾಲರಿಗೆ ದೂರು ನೀಡಿ ಸರ್ಕಾರವನ್ನು ವಜಾಗೊಳಿಸಬೇಕೆಂದು ಮನವಿ ಮಾಡಿದೆ. ನೊಂದಾಯಿತ ಗುತ್ತಿಗೆದಾರರ ಸಂಘದಲ್ಲಿ ವಿವಿಧ ಇಲಾಖೆಗಳಲ್ಲಿ ಕೆಲಸ ಮಾಡುವ ಒಂದು ಲಕ್ಷ ಮಂದಿ ಸದಸ್ಯರಿದ್ದಾರೆ. ಅವರು ಪ್ರಧಾನಿಯವರಿಗೆ ಪತ್ರ ಬರೆದು ರಾಜ್ಯದಲ್ಲಿ ಶೇಕಡಾ 40ರಷ್ಟು ಕಮೀಷನ್ ಪಡೆಯಲಾಗುತ್ತಿದೆ ಎಂದು ದೂರಿದ್ದಾರೆ. ಸುಮ್ಮನೆ ದೂರು ನೀಡಲು ಗುತ್ತಿಗೆದಾರರೇನೂ ದಡ್ಡರೇನಲ್ಲ. ಜವಾಬ್ದಾರಿಯುತ ಪ್ರತಿಪಕ್ಷ ಕಾಂಗ್ರೆಸ್ ರಾಜ್ಯಪಾಲರಿಗೆ ದೂರು ನೀಡಿದೆ ಎಂದರೆ ವಿಷಯದಲ್ಲಿ ಗಂಭೀರತೆ ಇದೆ ಎಂದೇ ಅರ್ಥವಲ್ಲವೇ ಎಂದು ಹೇಳಿದರು.
ಭ್ರಷ್ಟಾಚಾರ ಆರೋಪದ ಬಗ್ಗೆ ವಿಧಾನಮಂಡಲದಲ್ಲಿ ನಾವು ಪ್ರಸ್ತಾಪ ಮಾಡುತ್ತೇವೆ . ಕೋವಿಡ್ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಒಂದು ದರಕ್ಕೆ, ರಾಜ್ಯ ಸರ್ಕಾರ ಮತ್ತೊಂದು ದರಕ್ಕೆ ಸಲಕರಣೆಗಳನ್ನು ಖರೀದಿಸಿವೆ. ಗುತ್ತಿಗೆ ಸಾಕಷ್ಟು ಅವ್ಯವಹಾರಗಳಾಗಿವೆ ಎಂದು ಅವರು ಆರೋಪಿಸಿದರು.