ಬೆಂಗಳೂರು: ರಾಜ್ಯದ ಎಲ್ಲಾ ಕಡೆಯಲ್ಲಿ ಹೆಚ್ಚು ಮಳೆಯಾಗಿದ್ದು, ಇದರಂದಾಗಿ ನದಿ ಕೆರೆಗಳು ತುಂಬಿ ಹರಿಯುತ್ತಿವೆ. ಅದೇ ರೀತಿ ಬೆಂಗಳೂರು ನಗರದಲ್ಲೂ ಚರಂಡಿಗಳು ತುಂಬಿ ಹರಿಯುತ್ತಿವೆ. ಈ ನಡುವೆ ನಗರದಲ್ಲಿ ಮತ್ತೊಂದು ಗಂಭೀರ ಪ್ರಕರಣ ವರದಿಯಾಗಿದ್ದು, ಚರಂಡಿಯಲ್ಲಿ ಯುವತಿಯೊಬ್ಬಳು ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ.
ಸ್ಕೂಟರ್ ನಲ್ಲಿ ಆಗಮಿಸುತ್ತಿದ್ದ ಯುವತಿಯೊಬ್ಬಳು ಆಯತಪ್ಪಿ ಚರಂಡಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ಹೆಚ್ಬಿಆರ್ ಲೇಔಟ್ನ ಅಶ್ವತ್ಥ್ ನಗರದಲ್ಲಿ ನಡೆದಿದೆ. ತಾರಾ ಬಡಾಯಿಕ್(23) ಮೃತ ಯುವತಿ. ನೆನ್ನೆ ತಡರಾತ್ರಿ ಸ್ಕೂಟರ್ನಲ್ಲಿ ತೆರಳುತ್ತಿದ್ದಾಗ ದುರ್ಘಟನೆ ನಡೆದಿದೆ. ಚರಂಡಿ ತೆರೆದಿದ್ದ ಕಾರಣ ನೇರವಾಗಿ ಅದರೊಳಗೆ ಬಿದ್ದಿದ್ದಾರೆ. ಬಳಿಕ ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾರೆ. ತಾರಾ ಜೊತೆ ತೆರಳುತ್ತಿದ್ದ ಮತ್ತೊಬ್ಬರಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ನೀರಿಗೆ ಬಿದ್ದ ಮಹಿಳೆ ಸಾವು
ಸುರಿಯುತ್ತಿರುವ ಭಾರೀ ಮಳೆಗೆ ಬೆಳಗಾವಿಯಲ್ಲಿ ಮತ್ತೊಂದು ಬಲಿಯಾಗಿದೆ. ಸವದತ್ತಿ ತಾಲೂಕಿನ ಹೂಲಿಕಟ್ಟಿ ಗ್ರಾಮದಲ್ಲಿ ಮನೆ ಗೋಡೆ ಕುಸಿದು ಮಹಿಳೆ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಹೂಲಿಕಟ್ಟಿ ಗ್ರಾಮದ ಗಂಗವ್ವ ರಾಮಣ್ಣ ಮೂಲಿಮನಿ(55) ಮೃತ ಮಹಿಳೆ. ಬೆಳಗ್ಗೆ 4 ಗಂಟೆಗೆ ಮನೆ ಗೋಡೆ ಕುಸಿದು ಮಹಿಳೆಗೆ ಗಂಭೀರ ಗಾಯವಾಗಿತ್ತು. ಸ್ಥಳೀಯರು ತಕ್ಷಣವೇ ಗಂಗವ್ವರನ್ನು ಆಸ್ಪತ್ರೆ ದಾಖಲು ಮಾಡಿದ್ದರು. ಚಿಕಿತ್ಸೆ ಫಲಿಸದೇ ಗಂಗವ್ವ ರಾಮಣ್ಣ ಮೂಲಿಮನಿ ಸಾವನ್ನಪ್ಪಿದ್ದಾರೆ. ಗ್ರಾಮಕ್ಕೆ ಹಿರಿಯ ಅಧಿಕಾರಿಗಳ ಭೇಟಿ ನೀಡಿದ್ದು, ಸವದತ್ತಿ ಪೊಲೀಸ್ ಠಾಣೆ ವ್ಯಾಪ್ತಿ ಘಟನೆ ನಡೆದಿದೆ.
ಸ್ನಾನಕ್ಕೆ ತೆರಳಿದ ಮಹಿಳೆ ನಾಪತ್ತೆ
ಸೌಪರ್ಣಿಕ ನದಿಯಲ್ಲಿ ಸ್ನಾನಕ್ಕೆಂದು ತೆರಳಿದ್ದ ಮಹಿಳೆ ನಾಪತ್ತೆಯಾಗಿದ್ದು, ಬೈಂದೂರು ತಾಲೂಕಿನ ಕೊಲ್ಲೂರನಲ್ಲಿ ನಡೆದಿದೆ. ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಕೇರಳದ ಮೂಲದ ಮಹಿಳೆ ಆಗಮಿಸಿದ್ದರು. ಚಾಂದಿ ಶೇಖರ (41) ನಾಪತ್ತೆಯಾದ ಮಹಿಳೆ. ಸ್ನಾನಕ್ಕೆ ಸೌಪರ್ಣಿಕಾ ನದಿಗೆ ಮಹಿಳೆ ತೆರಳಿದ್ದಾಳೆ. ಮಹಿಳೆಯ ಶೋಧ ಕಾರ್ಯ ಆರಂಭವಾಗಿದ್ದು, ಸ್ಥಳೀಯ ಅಗ್ನಿಶಾಮಕ ದಳ ಮತ್ತು ಪೋಲಿಸರಿಂದ ಕಾರ್ಯಚರಣೆ ನಡೆಯುತ್ತಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಕೊಲ್ಲೂರು ಪೊಲೀಸರು, ಓಣಂ ಹಬ್ಬದ ರಜೆಯಲ್ಲಿ ದೇವಳಕ್ಕೆ ಮಹಿಳೆ ಕುಟುಂಬ ಆಗಮಿಸಿದ್ದಾರೆ. ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.