“ಬಯಲೊಳಗೆ ಬಯಲಾಗಿ” – ದೇಶದ ವಾಸ್ತವತೆಗೆ ತೀರ ಹತ್ತಿರವಾಗಿರುವ ಗಜ಼ಲ್ ಸಂಕಲನ

ಸೌಹಾರ್ದ ನಾಡು ಕಟ್ಟುವ ಕನಸನ್ನು ನನಸಾಗಿಸೋಣ

ನಮ್ಮೂರು ಅಂದರೆ ಸೌಹಾರ್ದತೆ ಸಾರಿದ ಶರೀಫರ ಜನ್ಮಸ್ಥಳ ಶಿಶುವಿನಹಾಳ, ಕನಕದಾಸರ ಜನ್ಮ ಸ್ಥಳ ಬಾಡ ಇರುವ ಶಿಗ್ಗಾಂವಿ ಮೂಲದ ಲಕ್ಷ್ಮಕಾಂತ ಮಿರಜಕರ ರವರು ಸದ್ಯ ಚಿತ್ರದುರ್ಗ ಜಿಲ್ಲೆಯ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ಪ್ರಭಾರಿ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸೂಕ್ಷ್ಮ ಮನಸಿನ ಕವಿ, ಬರಹಗಾರರೊಬ್ಬರು ನನ್ನೂರಿನವರು ಎಂಬುದು ಹೆಮ್ಮೆ. ಹೊಸ ವರ್ಷದ ಆರಂಭಕ್ಕೆ ಅವರ ಚೊಚ್ಚಲ ಕೃತಿ “ಬಯಲೊಳಗೆ ಬಯಲಾಗಿ ಕಾಂತನ ಗಜ಼ಲ್‌ಗಳು” ಇದೀಗ ಕೈ ಸೇರಿ ಓದುಗರ ಮನತಣಿಸುತ್ತಿರುವುದು ಮತ್ತೊಂದು ಖುಷಿಯ ಸಂಗತಿ. ಮೊದಲೆಲ್ಲ ನಾನು ನನ್ನೂರಿನಲ್ಲಿ‌ ನಡೆದ ಕೆಲ ಅಹಿತಕರ ಘಟನೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತಿದ್ದಾಗ ಲಕ್ಷ್ಮಕಾಂತ ಸರ್ ಆ ಕುರಿತು ಬಹಳ ಬೇಸರ ವ್ಯಕ್ತಪಡಿಸಿ ಮಾತನಾಡುತ್ತಿದ್ದರು. ದಿನ ಕಳೆದಂತೆ ಅವರೊಂದಿಗೆ ಸ್ವಲ್ಪ ಮಟ್ಟಿಗೆ ಒಡನಾಟ ಶುರುವಾಗಿ, ಅವರು ನಮ್ಮೂರಿನವರೆ ಎಂದಾಗ ಬಹಳ ಖುಷಿ ಪಟ್ಟೆ.ಅಂದಿನಿಂದ ಅವರು ಬರೆಯುವ.ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದ ಅವರ ಕವಿತೆಗಳನ್ನು ಓದುವ ಹವ್ಯಾಸ ಆರಂಭಗೊಂಡಿತು.

ನಾನು ಗಜ಼ಲ್‌‌ಗಳನ್ನು ಓದಿದ್ದು ಬಹಳ ಕಡಿಮೆ.ಆದರೆ ಬಯಲೊಳಗೆ ಬಯಲಾಗಿ ಗಜ಼ಲ್ ಕೃತಿ ನನ್ನನ್ನು ಗಜ಼ಲ್ ಕುರಿತಾಗಿ ಮತ್ತಷ್ಟು ಓದಿಗೆ ಹಚ್ಚಿದೆ. ಲಕ್ಷ್ಮಿಕಾಂತ ಸರ್ ತಮ್ಮ ಗಜ಼ಲ್‌ಗಳಲ್ಲಿ ಪ್ರಸ್ತುತ ದೇಶದ ಸ್ಥಿತಿಗತಿಯನ್ನು ಹಾಗೂ ವ್ಯವಸ್ಥೆಯ ಕುರಿತಾಗಿ ಬಹಳ ಸೂಕ್ಷ್ಮವಾಗಿ ಗಮನಿಸಿ ಅರ್ಥಗರ್ಭಿತವಾಗಿ ಬರೆದಿದ್ದಾರೆ.
ಪ್ರೇಮಿಗಳಿಗಾಗಿ ಪ್ರೇಯಸಿಯ ಪ್ರೀತಿ, ಪ್ರೇಯಸಿಯ ನೆನಪುಗಳು, ಮಧು ಶಾಲೆಯ ಮದಿರೆ ಕುರಿತು ಕೆಲವು ಗಜಲ್ ಗಳು ಇದ್ದರೆ ಪ್ರಮುಖವಾಗಿ ದೇಶದ ಪ್ರಸ್ತುತ ಸ್ಥಿತಿಗತಿ ಕುರಿತಾಗಿರುವ,ಕೋಮುದಳ್ಳುರಿಯಲ್ಲಿ ಬೇಯುತ್ತಿರುವ ದೇಶಕ್ಕೆ ಶಾಂತಿ- ಸೌಹಾರ್ದತೆ ಮಾತುಗಳು, ಮೌಢ್ಯತೆ, ದಲಿತ ಸಮುದಾಯದ ಕೂಗು, ವ್ಯವಸ್ಥೆಯ ಕುರಿತಾದ‌ ಆಕ್ರೋಶ, ಹುಸಿ ಭ್ರಮೆಯಲ್ಲಿ ತೇಲುತ್ತಿರುವ ಭಕ್ತರನ್ನು ಕೂಡ ಬಿಡದೆ ಛೇಡಿಸಿರುವುದು ಹೀಗೆ ಹಲವಾರು ವಿಷಯಗಳ ಮೇಲೆ ಬರೆದಿರುವ ಗಜಲ್ ಗಳು ಸೇರಿರುವ ಎಲ್ಲರೂ ಓದಲೆಬೇಕಾದ ಬಹುಮುಖ್ಯ ಕೃತಿಯಿದು.

“ಸರಕು ಮುಗಿದ ಮೇಲೆ ಸಂತೆಗೆ ಹೊರಡಲೇಬೇಕಿದೆ ಒಂದಲ್ಲ ಒಂದು ದಿನ
ಋಣ ತೀರಿದ ಮೇಲೆ ಮಸಣದ ಹಾದಿ ಹಿಡಿಯಲೇಬೇಕಿದೆ ಒಂದಲ್ಲ ಒಂದು ದಿನ”

ಹೀಗೆ ಅರ್ಥಗರ್ಭಿತವಾಗಿರುವ ಸಾಲುಗಳಿವೆ.

ದೇಶದ ಆಸ್ತಿ ಕೃಷಿ-ಕಾರ್ಮಿಕರು .ಅವರ ರಕ್ತ ಬಸಿದು ಮಹಲುಗಳನ್ನು ಕಟ್ಟಿಸಿಕೊಂಡವರು ಅದೆಷ್ಟೊ ಜನ ಇತಿಹಾಸದಲ್ಲಿ ಹೇಳಹೆಸರಿಲ್ಲದಂತೆ ಹೋಗಿದ್ದಾರೆ.. ಸ್ವಾತಂತ್ರ್ಯ ಬಂದರೂ ಶೋಷಣೆಗೆ ಒಳಗಾಗಿ ಗುಡಿಸಲುಗಳಲ್ಲೆ ತಮ್ಮ ಜೀವನ ಕಳೆಯುತ್ತಿರುವ ಬಡವನ ಬದುಕು ಹೇಗಿದೆ ಎಂಬಂತಹ ಕೂಗು ಗಜ಼ಲ್‌ನಲ್ಲಿ ಮೊಳಗಿದೆ. ಸಾವು ಬಂದಾಗ ಬಡವನ-ಶ್ರೀಮಂತ ಇಬ್ಬರೂ ಮಸಣ ಸೇರಲೆಬೇಕು, ಬೂದಿಯಾಗಲೆಬೇಕು ಎಂಬ ಜೀವನದ ಸತ್ಯ ತಿಳಿಸುವ ಸಾಲುಗಳಿವೆ.

“ಗರೀಬರ ರಕ್ತ ಬಸಿದು, ಉಳ್ಳವರು ಮಹಲು ಕಟ್ಟುವರು
ಸತ್ತಾಗ ಗೋರಿ ಹೂಳುವ ಮಸಣದ ಎದುರು ಎಲ್ಲರೂ ಒಂದೇ”

ಜಾತಿ-ಧರ್ಮದ ಕಲಹ ಇಂದು ನಿನ್ನೆಯದಲ್ಲ, ಇದು ಭಾರತಕ್ಕೆ ಅಷ್ಟೆ ಸೀಮಿತವಾಗಿಲ್ಲ. ಜಗತ್ತಿನಾದ್ಯಂತ ಬೇರೆ ರೂಪಗಳಲ್ಲಿ ಕಾಣುತ್ತೇವೆ. ಆ ಕುರಿತು

“ನಮ್ಮ ನಮ್ಮಲ್ಲೇ ಬೇಧ ಭಾವ ಮಾಡುವುದು ಸರಿಯಲ್ಲ ಕಾಂತ
ಸೇವಿಸುವ ಗಾಳಿ, ಉಣ್ಣುವ ಅನ್ನದ ಎದುರು ಎಲ್ಲರೂ ಒಂದೇ”

ಎಂದು ತಿಳಿಸುವ ಮಾರ್ಮಿಕ ಸಾಲುಗಳಿವೆ.

ಇದನ್ನೂ ಓದಿ : ಸಫ್ದರ್ ಹಾಶ್ಮಿಯ ಸಾವು – ಬದುಕಿನ ಹಲ್ಲಾಬೋಲ್ ಪುಸ್ತಕ ಕನ್ನಡಕ್ಕೆ

“ಬದುಕಿನ ಸಂತೆಯ ನೋವು ಸಂಕಟ ಮರೆಯಲು ಏಕಾಂಗಿಯಾಗಿ ಹೊರಡು
ನೀನೆಂಬ ನಿನ್ನನು ಅರ್ಥ ಮಾಡಿಕೊಳ್ಳಲು ಏಕಾಂಗಿಯಾಗಿ ಹೊರಡು”

ಕೊರೊನಾ ಕಾಲದಲ್ಲಿ ಹಸಿವಿನಿಂದ ಸತ್ತವರ ನೆನಪಾಗಲೆಬೇಕು ಈ ಗಜ಼ಲ್ ಓದಿದ ಮೇಲೆ. ಕೂಲಿಯರಸಿ ಮಹಾನಗರಗಳತ್ತ ಹೋದ ಹಸಿದ ಜನ ಮರಳಿ ಮನೆಗೆ ಹೆಣವಾಗಿ ಬಂದವರೆಷ್ಟೊ, ಹಸಿವಿನಿಂದ ತತ್ತರಿಸಿದವರೆಷ್ಟೊ, ರೈಲುಹಳಿಗಳ ನಡುವೆ ಸಿಲುಕಿ ಪ್ರಾಣ ತೆತ್ತವರೆಷ್ಟೊ ಒಂದು ಕ್ಷಣ ನೆನಪಾದರೆ ಮನಸ್ಸು ಭಾರವಾಗುತ್ತದೆ.

ನಮ್ಮ ದೇಶದ ಅಸಮಾನತೆಯ ಭೀಕರತೆ ಕುರಿತು

“ಹಸಿದವರು ಹಸಿದೇ ಸಾಯುತ್ತಾರೆ ನನ್ನ ನೆಲದಲ್ಲಿ
ಉಂಡವರು ಉಂಡೇ ಗತಿಸುತ್ತಾರೆ, ನನ್ನ ನೆಲದಲ್ಲಿ”

ಎಂದು ಕವಿ ಬರೆದಿರುವುದು ನೂರಕ್ಕೆ ನೂರು ಸತ್ಯ.

ಪ್ರಸ್ತುತ ದೇಶದ ಸ್ಥಿತಿ ಯಾವ ರೀತಿ ಇದೆ ಎಂಬುದನ್ನು ಮಾರ್ಮಿಕವಾಗಿ

“ದೇಶಕ್ಕೆ ಮತಾಂಧದ ಗ್ರಹಣ ಹಿಡಿಸಿದ್ದೇವೆ ಅಷ್ಟೇ, ಇಲ್ಲಿ ಎಲ್ಲವೂ ಚೆನ್ನಾಗಿದೆ,
ಭಕ್ತರನ್ನು ಸುಳ್ಳಿನ ಹಾಸಿಗೆಯಲ್ಲಿ ಮಲಗಿಸಿದ್ದೇವೆ ಅಷ್ಟೇ, ಇಲ್ಲಿ ಎಲ್ಲವೂ ಚೆನ್ನಾಗಿದೆ.”
ಎಂದು ಬರೆಯುವ ಮೂಲಕ ಕುಟುಕಿದ್ದಾರೆ.

ಆರದ ಬೆಂಕಿಯಂತೆ ಇರುವ ಕಾಶ್ಮೀರವನ್ನು ಗಜ಼ಲ್ ರೂಪದಲ್ಲಿ ಹಿಡಿದಿಟ್ಟಿರುವ ಸಾಲುಗಳು ಈ ಕೆಳಗಿನಂತಿವೆ

“ಪ್ರಕ್ಷುಬ್ಧ ಕಾಶ್ಮೀರ ಪ್ರೇಮ ಕಾಶ್ಮೀರವಾಗಿ ಬದಲಾಗಲಿ ಇನ್ನಾದರೂ..
ಕಲ್ಲು ತೂರುವ ಕೈಗಳಲ್ಲಿ ಶಾಂತಿಯ ಹೂವುಗಳು ಅರಳಲಿ ಇನ್ನಾದರೂ “

ಎಂದು ಬಯಸುವ ಗಜಲ್ ಕಾರರ ಗಜಲಿನಲ್ಲಿ ಇಡೀ ದೇಶದ ಜನರ ಮನದಾಳದ ಮಾತುಗಳನ್ನು ಪ್ರತಿಧ್ವನಿಸುತ್ತವೆ.

ಬಂದೂಕಿನ ನಳಿಕೆಯಲ್ಲಿ ಗುಬ್ಬಿ ಗೂಡು ಕಟ್ಟಬೇಕು, ಕಲ್ಲು ತೂರುವ ಕೈಗಳಲ್ಲಿ ಹೂವು ಅರಳಬೇಕು. ಕಾಶ್ಮೀರವನ್ನ ಶಾಂತವಾಗಿ ಅಲ್ಲಿಯ ರಕ್ತಸಿಕ್ತ ಅಧ್ಯಾಯಕ್ಕೆ ಪೂರ್ಣವಿರಾಮ ನೀಡುವ ಬಯಕೆ “ಬಯಲೊಳಗೆ ಬಯಲಾಗಿ “ಗಜ಼ಲ್‌ ಸಂಕಲನದಲ್ಲಿ ವ್ಯಕ್ತವಾಗಿದೆ,ಲ.

ಇದನ್ನೂ ಓದಿ : “ದಲಿತ-ಎಡ ಚಳುವಳಿಗಳ ಐಕ್ಯತೆಗೆ ‘ಮಹಾಡ್’ ಪಾಠಗಳು” : ಸಂವಾದ

ಮನುಷ್ಯತ್ವವನ್ನೆ ಮಾರಿಕೊಂಡು, ಮನಸುಗಳನ್ನೆ ಒಡೆಯುತ್ತಿರುವ ಭಕ್ತರ ಕುರಿತು..

“ಮನಸುಗಳ‌ ಮಾರಿಕೊಂಡು ಉಘೇ ಎನ್ನುತ್ತಿರುವ ಭಕ್ತರಿರುವಾಗ ನಾನೇಕೆ ಹೆದರಲಿ
ತಪ್ಪು ಮಾಡಿದರೂ ಜೈ ಎನ್ನಲು ಭಕ್ತರಿರುವಾಗ ನಾನೇಕೆ ಹೆದರಲಿ ”
ಎಂದು ಹೇಳುತ್ತಾ ಪೆದ್ದುಕುರಿಗಳಂತೆ ಧ್ವನಿ ಗೂಡಿಸುವ ಭಕ್ತರನ್ನ ಛೇಡಿಸಿದ್ದಾರೆ. ಇದನ್ನ ಅರ್ಥೈಸಿಕೊಂಡ ಭಕ್ತರು ಇನ್ನಾದರೂ ತಮ್ಮನ್ನ ತಾವು ಸ್ವವಿಮರ್ಶಿಸಿಕೊಳ್ಳಬೇಕಿದೆ.
ದೇವರ ಮುಂದೆ ಹಿಂದೂ,ನಾವೆಲ್ಲ ಒಂದೆ ಎನ್ನುವ ಮತಿಯವಾದಿಗಳು ಇದನ್ನು ಓದಬೇಕು.

“ನಾವೆಲ್ಲ ಹಿಂದೂ ನಾವೆಲ್ಲ ಒಂದು ಘೋಷವಾಕ್ಯ ಮಾತಿಗಷ್ಟೇ, ಆಚರಣೆಗಲ್ಲ
ಪ್ರತಿಭಟಿಸುವ ಮುಂಚೆ ನಿಮ್ಮ ಜಾತಿ ನೋಡುತ್ತೇವೆ ಸುಮ್ಮನಿರು ದಲಿತ”

ಇದನ್ನ ಓದಿದಾಗ ಹಲವು ದುರಂತ ಸಂಗತಿಗಳು ನೆನಪಾಗುತ್ತವೆ.ಧರ್ಮದ ಹೆಸರಲಿ ನಡೆದ ಕಲಹಗಳಲ್ಲಿ ಬಲಿಯಾದವರ ದೊಡ್ಡ ಸಂಖ್ಯೆ ಕಣ್ಣೆದರು ಬರುತ್ತೆ, ಅವರ ಕುಟುಂಬದ ಆಕ್ರಂದನ ಕಣ್ಣೆದರು ನಿಲ್ಲುತ್ತದೆ.

ಲಕ್ಷ್ಮೀಕಾತ್ ಸರ್ ಬರೆದ ಗಜ಼ಲ್‌ಗಳಲ್ಲಿ ನನಗೆ ಬಹಳ ಇಷ್ಟವಾದ ಗಜ಼ಲ್‌ ಒಂದನ್ನು ಇಲ್ಲಿ ಹಾಕುತ್ತಿದ್ದೇನೆ. ಪೂರ್ಣ ಓದುವವರು ಪುಸ್ತಕ ಖರೀದಿಸಿ ಓದಿ.ಖಂಡಿತ ನಿಮಗೆ ಇಷ್ಟವಾಗುತ್ತೆ ಸಂಕಲನ.

ಗಜ಼ಲ್

ಅವಳ ನೆನಪುಗಲಳಿಂದ ನೋವು ಕೊಡುತ್ತಿರುವ ದಿನಗಳ ಹೇಗೆ ಕಳೆಯಲಿ
ಬರಡು ಮನಸಿಗೆ ಹನಿ ಪ್ರೀತಿ ಕೊಡದಿರುವ ದಿನಗಳ ಹೇಗೆ ಕಳೆಯಲಿ

ಅವಳು ಎದುರಾದಾಗಲೆಲ್ಲ ನನ್ನ ಕಂಗಳಲ್ಲಿ ಲಕ್ಷದೀಪೋತ್ಸವ
ಈಗ ಬೆಳಕಿಲ್ಲ ಬರಿ ಕತ್ತಲೆ ತುಂಬಿರುವ ದಿನಗಳ ಹೇಗೆ ಕಳೆಯಲಿ

ಅವಳ ಮುಖದಲ್ಲಿ ಮಿನುಗುತ್ತಿತ್ತು ನಿದ್ದೆಯಲ್ಲಿ ನಕ್ಕ ಮಗುವಿನ ನಗೆ
ಚಂದದ ನಗುಮುಖ ಕಣ್ಮುಂದೆ ಕಾಣದಿರುವ ದಿನಗಳ ಹೇಗೆ ಕಳೆಯಲಿ

ನನ್ನ ಬದುಕಿನ ಸಮಸ್ತ ನೋವು ನಲಿವಿನ ಮೂಲ ಕೇಂದ್ರ ಬಿಂದು ಅವಳು
ಗುರಿ ಕಾಣದ ನಾವೆಯಂತೆ ಸಾಗುತ್ತಿರುವ ದಿನಗಳ ಹೇಗೆ ಕಳೆಯಲಿ

ಎದೆಯಲಿ ಅಚ್ಚಾಗಿದ್ದ ಅವಳ ಪ್ರೀತಿ ಗುರುತುಗಳು ಅಳಿಸಿವೆ ‘ಕಾಂತ’
ಚೇತನ ಕಳೆದುಕೊಂಡು ಪರಿತಪಿಸುತ್ತಿರುವ ದಿನಗಳ ಹೇಗೆ ಕಳೆಯಲಿ.

“ಬಯಲೊಳಗೆ ಬಯಲಾಗಿ”ಗಜಲ್ ಸಂಕಲನ ಎಲ್ಲರೂ ಓದಲೇಬೇಕಾದ ಸಂಕಲನವೆಂದು ಹೇಳಬಲ್ಲೆ.

  • ಸುಭಾಸ ಮಾದರ, ಶಿಗ್ಗಾಂವಿ
Donate Janashakthi Media

Leave a Reply

Your email address will not be published. Required fields are marked *