ನವದೆಹಲಿ : ಸಾರ್ವಜನಿಕ ಬ್ಯಾಂಕ್‌ಗಳ ಖಾಸಗೀಕರಣವನ್ನು ವಿರೋಧಿಸಿ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ ಡಿಸೆಂಬರ್ 16 ಹಾಗೂ 17ರಂದು ರಾಷ್ಟ್ರಮಟ್ಟದ ಬ್ಯಾಂಕ್ ಮುಷ್ಕರವನ್ನು ನಡೆಸುತ್ತಿದೆ.
ಪ್ರಸ್ತುತ ನಡೆಯುತ್ತಿರೋ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಕೇಂದ್ರ ಸರ್ಕಾರ ಬ್ಯಾಂಕಿಂಗ್ ಕಾನೂನುಗಳ (ತಿದ್ದುಪಡಿ) ಮಸೂದೆ(Bill) -2021 ಮಂಡಿಸುವ ನಿರೀಕ್ಷೆಯಿದೆ. ಸಾರ್ವಜನಿಕ ವಲಯದ ಎರಡು ಬ್ಯಾಂಕುಗಳನ್ನುಖಾಸಗೀಕರಣಗೊಳಿಸೋದು ಈ ಮಸೂದೆಯ ಮುಖ್ಯ ಉದ್ದೇಶವಾಗಿದೆ. ಸರ್ಕಾರದ ಈ ಖಾಸಗೀಕರಣ ನೀತಿಯನ್ನು ವಿರೋಧಿಸಿ ಚಳವಳಿ ನಡೆಸಲು ಬ್ಯಾಂಕ್ ನೌಕರರು ನಿರ್ಧರಿಸಿದ್ದಾರೆ ಎಂದು ಭಾರತೀಯ ಬ್ಯಾಂಕ್ ಉದ್ಯೋಗಿಗಳ ಒಕ್ಕೂಟದ (ಬಿಇಎಫ್‌ಐ) ದೆಬಾಶಿಷ್ ಬ್ಯಾನರ್ಜಿ ತಿಳಿಸಿದ್ದಾರೆ.
ಈ ವರ್ಷ ಫೆಬ್ರವರಿಯಲ್ಲಿ 2021-22ನೇ ಸಾಲಿನ ಬಜೆಟ್ ಅಧಿವೇಶನದ ಸಂದರ್ಭದಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸಾರ್ವಜನಿಕ ವಲಯದ ಎರಡು ಬ್ಯಾಂಕ್ ಗಳ ಖಾಸಗೀಕರಣದ ಬಗ್ಗೆ ಪ್ರಸ್ತಾಪಿಸಿದ್ದರು. 1.75ಲಕ್ಷ ಕೋಟಿ ರೂಪಾಯಿ ಆದಾಯ ಗಳಿಸೋ ಉದ್ದೇಶದಿಂದ ಸಾರ್ವಜನಿಕ ವಲಯದ ಬ್ಯಾಂಕ್ ಗಳ ಖಾಸಗೀಕರಣವನ್ನು ಘೋಷಿಸಿದ್ದರು. ಸರ್ಕಾರದ ಈ ಖಾಸಗೀಕರಣ ನೀತಿಯನ್ನು ವಿರೋಧಿಸಿ ಚಳವಳಿ ನಡೆಸಲು ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯುನಿಯನ್ಸ್ (UFBU) ನಿರ್ಧರಿಸಿದೆ. ‘ಸರ್ಕಾರವು ಪ್ರಸಕ್ತ ನಡೆಯುತ್ತಿರೋ ಅಧಿವೇಶನದಲ್ಲಿ ಬ್ಯಾಂಕಿಂಗ್ ಸುಧಾರಣಾ ಮಸೂದೆಯನ್ನು ಮಂಡಿಸಲು ಬಯಸಿದೆ. ಈ ಮೂಲಕ ಬ್ಯಾಂಕ್ ಗಳ ಖಾಸಗೀಕರಣಕ್ಕೆ ನಾಂದಿ ಹಾಡಲಿದೆ. ಯುನೈಟೆಡ್ ಫೋರಂ ಈ ಮಸೂದೆ ವಿರುದ್ಧ ಡಿಸೆಂಬರ್ 3 ದಿಂದಲೇ ಹೋರಾಟ ಪ್ರಾರಂಭಿಸಲಿದ್ದೇವೆ.ಇದರ ಭಾಗವಾಗಿಯೇ ಡಿಸೆಂಬರ್ 16 ಹಾಗೂ 17ರಂದು ಎರಡು ದಿನಗಳ ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ನಡೆಯಲಿದೆ’ ಎಂದು ಬ್ಯಾನರ್ಜಿ ತಿಳಿಸಿದ್ದಾರೆ.
“ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರದಲ್ಲಿ, ಬ್ಯಾಂಕುಗಳ ಬೃಹತ್ ಸಾರ್ವಜನಿಕ ಉಳಿತಾಯದ ವಹಿವಾಟು ಮಾಡುತ್ತದೆ. ದೇಶದ ವಿಶಾಲವಾದ ಆರ್ಥಿಕ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳುವ ಕಾರ್ಯವನ್ನು ಬ್ಯಾಂಕುಗಳು ಮಾಡುತ್ತದೆ. ಸಾಮಾಜಿಕ ದೃಷ್ಟಿಕೋನದಿಂದ ನಾವು ನೋಡುವುದಾದರೆ ನಮಗೆ ಸಾರ್ವಜನಿಕ ವಲಯದ ಬ್ಯಾಂಕಿಂಗ್ ವ್ಯವಸ್ಥೆಯು ಅತ್ಯಂತ ಸೂಕ್ತವಾದು, ಹಾಗೆಯೇ ಅನಿವಾರ್ಯ ಅಗತ್ಯವೂ ಕೂಡಾ ಹೌದು,” ದೇಶದ ಒಟ್ಟು ಠೇವಣಿಗಳಲ್ಲಿ ಶೇಕಡ 70 ರಷ್ಟು ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿದ್ದು, ಅವುಗಳನ್ನು ಖಾಸಗಿ ಬಂಡವಾಳಕ್ಕೆ ಹಸ್ತಾಂತರಿಸುವುದರಿಂದ ಈ ಬ್ಯಾಂಕ್‌ಗಳಲ್ಲಿ ಠೇವಣಿ ಇಟ್ಟಿರುವ ಸಾಮಾನ್ಯ ಜನರ ಹಣ ಅಪಾಯಕ್ಕೆ ಸಿಲುಕಿಸುತ್ತದೆ ಎಂದು ಭಾರತ ಬ್ಯಾಂಕ್ ನೌಕರರ ಸಂಘದ (ಎಐಬಿಇಎ) ಪ್ರಧಾನ ಕಾರ್ಯದರ್ಶಿ ಸಿ ಎಚ್ ವೆಂಕಟಾಚಲಂ ತಿಳಿಸಿದ್ದಾರೆ.
“ನಾವು ಕಳೆದ 25 ವರ್ಷಗಳಿಂದ ಬ್ಯಾಂಕುಗಳ ಖಾಸಗೀಕರಣವನ್ನು ವಿರೋಧ ಮಾಡುತ್ತಾ ಬಂದಿದ್ದೇವೆ. ಬ್ಯಾಂಕಿಂಗ್ ವಲಯವನ್ನು ಕುಗ್ಗಿಸುವ ಸುಧಾರಣೆಗಳನ್ನು ನಾವು ನಿರಂತರವಾಗಿ ವಿರೋಧ ಮಾಡುತ್ತಾ ಬಂದಿದ್ದೇವೆ,” ಎಲ್ಲಾ ಬ್ಯಾಂಕುಗಳನ್ನು ಖಾಸಗೀಕರಣ ಮಾಡುವ ಸರ್ಕಾರದ ನಡೆಯನ್ನು ವಿರೋಧ ಮಾಡುತ್ತೇವೆ ಎಂದು ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟದ ನಾಯಕ ಸಂಜಯ್ ದಾಸ್ ತಿಳಿಸಿದ್ದಾರೆ.
ಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಸಂಘಟನೆ (AIBEA), ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ (AIBOC), ಭಾರತೀಯ ಬ್ಯಾಂಕ್ ಉದ್ಯೋಗಿಗಳ ಒಕ್ಕೂಟ (BEFI) ಸೇರಿದಂತೆ ಬ್ಯಾಂಕಿಂಗ್ ವಲಯಕ್ಕೆ ಸಂಬಂಧಿಸಿದ ಅನೇಕ ಸಂಘಟನೆಗಳು UFBU ಸದಸ್ಯರಾಗಿವೆ.