ಇಬ್ಬರು ಮಕ್ಕಳ ಬಾಳು ಬೆಳಗಿದ ಕಂದಮ್ಮ

ನವದೆಹಲಿ: ದೆಹಲಿಯ ಏಮ್ಸ್​​​ನಲ್ಲಿ ಬ್ರೈನ್​ ಡೆಡ್​​ ಎಂದು ಘೋಷಿಸಲ್ಪಟ್ಟ 16 ತಿಂಗಳ ಮೃತ ಮಗುವಿನ ಕುಟುಂಬ ಇತರರ ಜೀವ ಉಳಿಸಲು ಸಹಾಯ ಮಾಡುವ ಉದ್ದೇಶದಿಂದ ಮಗುವಿನ ಅಂಗಾಂಗ ದಾನ ಮಾಡಿದ್ದಾರೆ. ಈ ಮೂಲಕ ಅನೇಕ ಮಕ್ಕಳ ಬಾಳಿಗೆ ಮಗು ಬೆಳಕಾಗಿದೆ.

ಕೆಲ ಮಕ್ಕಳು ವಿವಿಧ ಅಂಗಾಂಗಗಳ ಸಮಸ್ಯೆಯಿಂದ ಬಳಲುತ್ತಿದ್ದು, ಅಂತಹವರಿಗೆ ಈ ಮಗುವಿನ ಅಂಗ ಕಸಿ ಮಾಡುವ ಕೆಲಸ ನಡೆಯಲಿದೆ. ಈಗಾಗಲೇ ಕೆಲ ಮಕ್ಕಳನ್ನು ಗುರುತಿಸಲಾಗಿದ್ದು, ಶೀಘ್ರದಲ್ಲೇ ಕಸಿ ನಡೆಸಲಾಗುವುದು ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

ಘಟನೆ ಹಿನ್ನೆಲೆ: ದೆಹಲಿಯ ಖಾಸಗಿ ಗುತ್ತಿಗೆದಾರ ಉಪಿಂದರ್ ಎಂಬವರ ಮಗು ರಿಶಾಂತ್‌ಗೆ ಆಗಸ್ಟ್ 17ರಂದು ಬಿದ್ದು ತಲೆಗೆ ಮಾರಣಾಂತಿಕ ಏಟಾಗಿತ್ತು. ಮಗುವನ್ನು ಜಮುನಾ ಪಾರ್ಕ್ ಪ್ರದೇಶದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿಂದ ಅದೇ ದಿನ ಏಮ್ಸ್‌ನ ಜಯಪ್ರಕಾಶ್ ನಾರಾಯಣ್ ಟ್ರಾಮಾ ಸೆಂಟರ್‌ಗೆ ಕಳುಹಿಸಲಾಗಿತ್ತು.

‘ಆ ಮಗು ದಾನ ಮಾಡುವುದಕ್ಕಾಗಿಯೇ ಹುಟ್ಟಿತ್ತೇನೋ. ಎಂಟು ದಿನಗಳ ಕಾಲ ಜೀವನ್ಮರಣ ಸ್ಥಿತಿಯಲ್ಲಿ ಹೋರಾಡಿದ. ತಲೆಗೆ ವಿಪರೀತ ಏಟಾಗಿತ್ತು. ಇಡೀ ಮಿದುಳಿಗೆ ಸರಿಪಡಿಸಲಾರದಷ್ಟು ಹಾನಿಯಾಗಿರುವುದು ಸಿಟಿ ಸ್ಕ್ಯಾನ್‌ನಿಂದ ತಿಳಿದುಬಂದಿತ್ತು’ ಎಂದು ಏಮ್ಸ್‌ನ ನ್ಯೂರೋಸರ್ಜರಿ ವಿಭಾಗದ ಪ್ರಾಧ್ಯಾಪಕ ದೀಪಕ್ ಗುಪ್ತ ತಿಳಿಸಿದ್ದಾರೆ. ಆಗಸ್ಟ್ 24ರಂದು ಮಗುವಿನ ಮಿದುಳು ನಿಷ್ಕ್ರಿಯಗೊಂಡಿದೆ ಎಂದು ಘೋಷಿಸಲಾಗಿತ್ತು.

ಮಗುವಿನ ಅಗಲುವಿಕೆಯ ದುಃಖದಲ್ಲಿದ್ದ ಕುಟುಂಬದವರಿಗೆ ವೈದ್ಯರು ಮತ್ತು ಅಂಗಾಂಗ ಸಂರಕ್ಷಣಾ ಬ್ಯಾಂಕಿಂಗ್ ಸಂಘಟನೆ ಅಂಗಾಗ ದಾನದ ಸಲಹೆ ನೀಡಿತು. ಬಳಿಕ ಕುಟುಂಬದವರು ಒಪ್ಪಿಗೆ ಸೂಚಿಸಿದರು ಎಂದು ವೈದ್ಯರು ತಿಳಿಸಿದ್ದಾರೆ. ಅಂಗಾಂಗವನ್ನು ನಿಗದಿತ ಸಮಯದಲ್ಲಿ ಬೇಕಾದವರಿಗೆ ಜೋಡಿಸುವುದು ಸವಾಲಾಗಿತ್ತು. ಏಮ್ಸ್‌ನ ಹಲವು ಇಲಾಖೆಗಳು ಸಹಯೋಗದೊಂದಿಗೆ ಕೆಲಸ ಮಾಡಿದ್ದರಿಂದ ಇಂದು ಇಬ್ಬರು ಮಕ್ಕಳು ಹೊಸ ಜೀವ ಪಡೆದುಕೊಂಡಿದ್ದಾರೆ ಎಂದು ತಿಳಿಸಿದರು.

Donate Janashakthi Media

Leave a Reply

Your email address will not be published. Required fields are marked *