ಬಾಗೇಪಲ್ಲಿ : ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಸಿಪಿಐಎಂ ಅಭ್ಯರ್ಥಿ ಡಾ.ಅನಿಲ್ ಕುಮಾರ್ ಅವರನ್ನು ಬಿಜೆಪಿ ಗೂಂಡಾಗಳು ಹತ್ಯೆ ಮಾಡುವ ಪ್ರಯತ್ನ ನಡೆಸಿದ್ದಾರೆ.
ನಿನ್ನೆ ರಾತ್ರಿ ಡಾ. ಅನೀಲ್ ಮನೆಗೆ ನುಗ್ಗಿದ 19 ಜನ ಬಿಜೆಪಿ ಗೂಂಡಾಗಳನ್ನು ಪೊಲೀಸರು ವಶಕ್ಕೆ ಪಡೆದು ತಪಾಸಣೆ ಮಾಡುತ್ತಿದ್ದಾರೆ. ದಾಳಿ ಮಾಡಲು ಬಂದಿದ್ದವರು ಎರಡು ಕಾರುಗಳಲ್ಲಿ ಬಂದಿದ್ದರು ಎಂದು ವರದಿಯಾಗಿದೆ. ಅವರು ತಂದಿದ್ದ ಬ್ಯಾಗುಗಳಲ್ಲಿ ಚಾಕುಗಳು ಸಿಕ್ಕಿದ್ದು, ಮಾರಕಾಸ್ತ್ರಗಳನ್ನು ಹೊಂದಿದ್ದರು ಎಂದು ತಿಳಿದು ಬಂದಿದೆ.
ಬಂದಿತರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಿಪಿಐಎಂ ಕಾರ್ಯಕರ್ತರು ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ. ರಾಜಕೀಯ ದುರುದ್ದೇಶದಿಂದ ದಾಳಿ ನಡೆಸಲು ಮುಂದಾಗಿರುವ ಬಿಜೆಪಿಯ ಗೂಂಡಾಗಿರಿಯ ನಡೆಯನ್ನು ಪ್ರತಿಭಟನೆಕಾರರು ಖಂಡಿಸಿದ್ದಾರೆ.
ಅಭ್ಯರ್ಥಿ ಅನೀಲ್ ಕುಮಾರ್ ಪತ್ನಿ ಡಾ. ಮಂಜುಳಾ ಜನಶಕ್ತಿ ಮೀಡಿಯಾ ಜೊತೆ ಮಾತನಾಡಿ, ಚುನಾವಣಾ ಪ್ರಚಾರ ಮುಗಿಸಿ ಮನೆಗೆ ಬಂದಾಗ, 20 ಕ್ಕೂ ಹೆಚ್ಚು ಜನರು ಮನೆಯ ಮೆಟ್ಟುಲು ತುಂಬೆಲ್ಲ ಓಡಾಡುತ್ತಿದ್ದರು, ಅವರನ್ನು ತಡೆದು ವಿಚಾರಿಸಿದಾಗ ಬಿಜೆಪಿ ಅಭ್ಯರ್ಥಿ ಮುನಿರಾಜ್ ಕಡೆಯವರು, ಹಣ ಹಂಚಲು ಬಂದಿದ್ದೇವೆ ಎಂದರು, ಅವರ ಆಧಾರಕಾರ್ಡ್ ಗಳನ್ನು ಪರಿಶೀಲಿಸಿದಾಗ ಅವರು ಆನೇಕಲ್ ಹಾಗೂ ಬೆಂಗಳೂರಿನ ಸುತ್ತಮುತ್ತಲಿನ ಜನ ಎಂಬುದು ಖಚಿತವಾಯಿತು. ಅವರ ಬ್ಯಾಗಿನಲ್ಲಿ ವೆಪನ್ ಹಾಗೂ ಚಾಕು, ಚೂರಿಗಳಿದ್ದವು. ಡಾ. ಅನೀಲ್ ರವರನ್ನು ಕೊಲೆ ಮಾಡುವ ಉದ್ದೇಶದಿಂದ ಬಂದಿರಬಹುದು ಎಂದು ಆರೋಪಿಸಿದರು.
ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ, ಎಂ.ಪಿ. ಮುನಿವೆಂಕಟಪ್ಪ ಮಾತನಾಡಿ, ಸಿಪಿಐಎಂ ಗೆಲ್ಲುವ ವಾತಾವರಣ ಸೃಷ್ಟಿಯಾಗಿದೆ. ಇದನ್ನು ಸಹಿಸದೆ ಬಿಜೆಪಿ ದಾಳಿಯ ಸಂಚನ್ನು ರೂಪಿಸಿದೆ. ಇಂತಹ ತಂಡಗಳು ಬಹಳಷ್ಟು ಇದ್ದಂತೆ ಕಾಣುತ್ತಿವೆ. ಅವುಗಳನ್ನು ಪತ್ತೆ ಹಚ್ಚಬೇಕು ಹಾಗೂ ನಮ್ಮ ಪಕ್ಷದ ಅಭ್ಯರ್ಥಿ ಡಾ. ಅನೀಲ್ ಕುಮಾರ್ ಅವರಿಗೆ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.