ತುಮಕೂರು : ರೈತರ ಮೇಲೆ ಅರಣ್ಯ ಇಲಾಖೆ ನಡೆಸುತ್ತಿರುವ ದೌರ್ಜನ್ಯ, ದಬ್ಬಾಳಿಕೆ, ಕಿರುಕುಳ ಖಂಡಿಸಿ ಹಾಗೂ ಬಗರ್ ಹುಕಂ ಸಾಗುವಳಿದಾರರ ಹಕ್ಕು ರಕ್ಷಣೆಗಾಗಿ ಆಗ್ರಹಿಸಿ ತುಮಕೂರು ಜಿಲ್ಲಾಧಿಕಾರಿ ಕಛೇರಿ ಎದುರು ರೈತರ ಬೃಹತ್ ಅನಿರ್ದಿಷ್ಟ ಧರಣಿ ಆರಂಭಿಸಿದ್ದಾರೆ.
ಕರ್ನಾಟಕ ಪ್ರಾಂತ ರೈತ ಸಂಘ, ಬಗರ್ ಹುಕುಂ ಸಾಗುವಳಿದಾರರ ಹೋರಾಟ ಸಮಿತಿ, ಕರ್ನಾಟಕ ರಾಜ್ಯ ರೈತ ಸಂಘ ಸೇರಿದಂತೆ ಜನಪರ ಸಂಘಟನೆಗಳ ನೇತೃತ್ವದಲ್ಲಿ ನಡೆಯುತ್ತಿರುವ ಈ ಧರಣಿಯನ್ನು ಉದ್ದೇಶಿಸಿ, ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷ ಜಿ.ಸಿ ಬಯ್ಯಾರೆಡ್ಡಿ ಮಾತನಾಡಿ, ಕೋವಿಡ್ ಸಂದರ್ಭವನ್ನು ದುರುಪಯೋಗ ಪಡಿಸಿಕೊಂಡು ಅರಣ್ಯ ಇಲಾಖೆಯವರು ಗುಬ್ಬಿ ತಾಲ್ಲೂಕು ಚೇಳೂರು ಹೋಬಳಿ ಗಂಗಯ್ಯನ ಪಾಳ್ಯ ,ಅಮ್ಮನಘಟ್ಟ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲೂ ಹಲವಾರು ಕಡೆ ರೈತರನ್ನು ಬಲವಂತವಾಗಿ ಒಕ್ಕಲೆಬ್ಬಿಸಿದ್ದಾರೆ. ಹತ್ತಾರು ವರ್ಷಗಳಿಂದ ಕಷ್ಟ ಪಟ್ಟು ಬೆಳೆಸಿದ ನೂರಾರು ತೆಂಗು, ಮಾವು ಮುಂತಾದ ಲಕ್ಷಾಂತರ ರೂ ಬೆಲೆ ಬಾಳುವ ಮರಗಳು ಹಾಗೂ ಬೆಳೆಗಳನ್ನು ನಾಶ ಪಡಿಸಿದ್ದಾರೆ ಆಕ್ರೋಶ ವ್ಯಕ್ತಪಡಿಸಿದರು.
ದೇಶದ ಬೆನ್ನೆಲಬು ರೈತ ಎಂದು ಭಾಷಣಗಳಲ್ಲಿ ಹೇಳುವ ಸರ್ಕಾರದ ಮಂತ್ರಿಗಳು ,ಶಾಸಕರು ಭೂಮಿ ಕಿತ್ತುಕೊಳ್ಳುವ ಅರಣ್ಯ ಇಲಾಖೆಯನ್ನು ಹದ್ದುಬಸ್ತಿನಲ್ಲಿಡುತ್ತಿಲ್ಲ. ಈ ಕೂಡಲೇ ಜಿಲ್ಲಾಡಳಿತ ಹಾಗೂ ಸರ್ಕಾರದ ಮೇಲೆ ಒತ್ತಡ ತಂದು ಬಗರ್ ಹುಕಂ ಸಾಗುವಳಿದಾರರ ಸಮಸ್ಯೆಗಳನ್ನು ಬಗೆಹರಿಸಬೇಕು. ಜಿಲ್ಲಾಧಿಕಾರಿ ರೈತರ ಸಮಸ್ಯೆಗಳ ಪರಿಹಾರಕ್ಕಾಗಿ ಕ್ರಮ ವಹಿಸದೇ ಇದ್ದರೆ ಧರಣಿ ನಿಲ್ಲುವುದಿಲ್ಲ ಎಂದು ಬಯ್ಯಾರೆಡ್ಡಿ ಎಚ್ಚರಿಕೆ ನೀಡಿದರು.
ಮತ್ತೋರ್ವ ರೈತ ಮುಖಂಡ ಟಿ.ಯಶವಂತ ಮಾತನಾಡಿ, ಜೆಸಿಬಿ ಯಂತ್ರವನ್ನು ಬಳಸಿ ರೈತರ ಬೆಳೆ ನಾಶ ಮಾಡುವ ಸಂದರ್ಭದಲ್ಲಿ ರೈತ ಕುಟುಂಬದ ಆಕ್ರಂದನ ,ನೋವುಗಳು ಮಾಧ್ಯಮದಲ್ಲಿ ಬಂದಾಗ ಮೊಸಳೆ ಕಣ್ಣೀರು ಸುರಿಸುವ ಸರ್ಕಾರಗಳು ಸ್ವಲ್ಪ ದಿನದ ನಂತರ ಮತ್ತೊಬ್ಬ ರೈತರನ್ನು ಒಕ್ಕಲೆಬ್ಬಿಸಲು ಮುಂದಾಗುತ್ತಿದ್ದಾರೆ. ಸರಕಾರ ಹಾಗೂ ಜನಪ್ರತಿನಿಧಿಗಳು ಬಡ ರೈತರ ಜೊತೆ ಚಲ್ಲಾಟ ವಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ದ ಜಿಲ್ಲಾ ಅಧ್ಯಕ್ಷ ಗೋವಿಂದರಾಜು ಮಾತನಾಡಿ, ಜಿಲ್ಲೆಯ ಸಾವಿರಾರು ರೈತರು, ಕೃಷಿ ಕೂಲಿಕಾರರು, ದಲಿತರು 40-50 ವರ್ಷಗಳಿಂದ ಬಗರ್ ಹುಕಂ ಸಾಗುವಳಿ ಮಾಡುತ್ತಾ ಜೀವನ ನಡೆಸುತ್ತಿದ್ದಾರೆ. ಸಾಗುವಳಿ ಸಕ್ರಮ ಚೀಟಿಗಳು ಇರುವ ರೈತರನ್ನು ಸಹ ಒಕ್ಕಲೆಬ್ಬಿಸುವ ಆಕ್ರಮಣಗಳಿಗೆ ಗುರಿ ಮಾಡಲಾಗಿದೆ. ಪಾರಂ 50,53,57 ರಲ್ಲಿ ಸಕ್ರಮ ಕೋರಿ ಅರ್ಜಿ ಸಲ್ಲಿಸಿರುವ ರೈತರನ್ನು ಕಾನೂನು ಬಾಹಿರ ವಾಗಿ ಒಕ್ಕಲೆಬ್ಬಿಸಲಾಗಿದೆ. ತಮ್ಮ ಹತ್ತಿರ ಇರುವ ಕಂದಾಯ ದಾಖಲಾತಿಗಳನ್ನು ತೋರಿದರೂ ಅರಣ್ಯ ಇಲಾಖೆಯ ದೌರ್ಜನ್ಯ ದ ಅಹಂಕಾರ ನಿಲ್ಲುತ್ತಿಲ್ಲ ಎಂದು ಅಪಾದಿಸಿದರು.
ಪ್ರತಿಭಟನೆ ನೇತೃತ್ವವನ್ನು ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾದ್ಯಕ್ಷ ಸಿ.ಅಜ್ಜಪ್ಪ ,ಮುಖಂಡರಾದ ದೊಡ್ಡನಂಜಯ್ಯ ,ನರಸಿಂಹಮೂರ್ತಿ, ಕರಿಬಸವಯ್ಯ, ಚನ್ನಬಸವಣ್ಣ ,ಮಂಜುನಾಥ್ ಶಿವಣ್ಣ , ಲೋಕೇಶ್ ,ವಿಶ್ವನಾಥ್, ಯಾದವಮೂರ್ತಿ ,ರಾಚಪ್ಪ ,ಮೂಡ್ಲಪ್ಪ ,ಮಾರುತಿ ,ಯೋಗೇಶ್ , ಗೌರಮ್ಮ,ನಾಗರಾಜು ಮುಂತಾದವರು ವಹಿಸಿದ್ದರು.