ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ವ್ಯಾಪ್ತಿಯಲ್ಲಿ ಆಟೋ ರಿಕ್ಷಾ ಪ್ರಯಾಣ ದರವನ್ನು ಏರಿಸಲಾಗಿದೆ. ಪರಿಷ್ಕೃತ ದರವು ಡಿಸೆಂಬರ್ 1ರಿಂದಲೇ ಜಾರಿಗೆ ಬರಲಿದೆ. ಬೆಂಗಳೂರು ನಗರ ಜಿಲ್ಲೆ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಈ ಕುರಿತು ಅಧಿಕೃತ ಆದೇಶ ಹೊರಡಿಸಿದೆ.
ಕಳೆದ ಮೂರು ತಿಂಗಳಿನಿಂದ ಪ್ರಯಾಣ ದರ ಏರಿಕೆ ಮಾಡಬೇಕು ಎಂದು ಆಟೋ ಚಾಲಕರು ಹೋರಾಟ ನಡೆಸುತ್ತಿದ್ದರು. ಆಟೋ ದರಗಳನ್ನು ಪರಿಷ್ಕರಣೆ ಮಾಡಬೇಕು ಎಂದು ಪ್ರಬಲವಾಗಿ ಬೇಡಿಕೆ ಇಡಲಾಗಿತ್ತು. ಆಟೋ ಚಾಲಕರ ಸಂಘ ಈ ಕುರಿತು ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಈ ಹಿನ್ನಲೆಯಲ್ಲಿ ದರ ಪರಿಷ್ಕರಣೆ ಮಾಡಲಾಗಿದೆ.
ಇದನ್ನು ಓದಿ: ಆಟೋ ಚಾಲಕರ ಸಂಕಷ್ಟಗಳಿಗೆ ಸ್ಪಂದಿಸದ ಸರ್ಕಾರ: ಎಆರ್‌ಡಿಯು ಆಕ್ರೋಶ
ಆಟೋ ರಿಕ್ಷಾದಲ್ಲಿ ಪ್ರಯಾಣ ಮಾಡಲು (ಮೂವರು ಪ್ರಯಾಣಿಕರು ಮಾತ್ರ) 25 ರೂಪಾಯಿ ನಿಗದಿತ ದರವಿತ್ತು. ಇದೀಗ ಐದು ರೂಪಾಯಿ ಹೆಚ್ಚಳ ಮಾಡಲಾಗಿದೆ. ಕನಿಷ್ಠ ದರ ಮೊದಲ 2 ಕಿಲೋ ಮೀಟರ್‌ಗೆ 30 ರೂಪಾಯಿಗೆ ಆಗಿದೆ. ನಂತರದ ಪ್ರತಿ ಕಿಲೋ ಮೀಟರ್‌ಗೆ 15 ರೂಪಾಯಿ ದರ ನಿಗದಿಪಡಿಸಲಾಗಿದೆ.
ಕಾಯುವಿಕೆ ದರವನ್ನು ಸಹ ಪರಿಷ್ಕರಿಸಲಾಗಿದೆ. ಮೊದಲ ಐದು ನಿಮಿಷ ಉಚಿತವಾಗಿದ್ದು ಐದು ನಿಮಿಷನದ ನಂತರ ಪ್ರತಿ ಹದಿನೈದು ನಿಮಿಷಕ್ಕೆ 5 ರೂಪಾಯಿ ದರ ನಿಗದಿ ಪಡಿಸಲಾಗಿದೆ. ಪ್ರಯಾಣಿಕರ ಲಗೇಜು 20 ಕೆಜಿ ಇದ್ದರೆ 5 ರೂಪಾಯಿ ನಿಗದಿ ಮಾಡಲಾಗಿದೆ. ಇನ್ನು ರಾತ್ರಿ 10 ರಿಂದ ಬೆಳಗ್ಗೆ 5 ಗಂಟೆಯ ವರೆಗೆ ಸಾಮಾನ್ಯ ದರಕ್ಕಿಂದ ಅರ್ಧಪಟ್ಟು ಹೆಚ್ಚಳ ಮಾಡಲು ಅವಕಾಶ ಕೊಡಲಾಗಿದೆ.
ಇದನ್ನು ಓದಿ: ಆಟೋರಿಕ್ಷಾ ರಹದಾರಿ ವಿತರಣೆಯಲ್ಲಿ ಭ್ರಷ್ಟಾಚಾರ-ದಲ್ಲಾಳಿಗಳ ಹಾವಳಿ: ಎಆರ್‌ಡಿಯು ಪ್ರತಿಭಟನೆ
ಪರಿಷ್ಕೃತ ದರಗಳು ಮೀಟರ್‌ನಲ್ಲಿ ಪ್ರದರ್ಶಿತವಾಗುವಂತೆ 2022ರ ಫೆಬ್ರವರಿ 28ರ ಒಳಗಾಗಿ ಸತ್ಯಾಪನೆ ಮಾಡಿ ಮುದ್ರೆ ಹಾಕಿಸಿಕೊಳ್ಳಬೇಕು ಎಂದು ಆಟೋ ಚಾಲಕರಿಗೆ ಸೂಚನೆ ನೀಡಲಾಗಿದೆ. ಸಾರಿಗೆ ಪ್ರಾಧಿಕಾರದಿಂದ ಅನುಮೋದಿಸ್ಪಟ್ಟ ನಿಗದಿತ ಪರಿಸ್ಕೃತ ದರ ಪಟ್ಟಿಯನ್ನು ಪ್ರತಿಯೊಂದು ಆಟೋದಲ್ಲಿಯೂ ಪ್ರದರ್ಶಿಸಬೇಕು ಎಂದು ಸೂಚನೆ ನೀಡಲಾಗಿದೆ.
ಜೀವನಾವಶ್ಯಕ ವಸ್ತುಗಳ ದರಗಳು ಏರಿಕೆಯಾಗುತ್ತಿದೆ. ಅಲ್ಲದೆ, ಗ್ಯಾಸ್ ದರ ಹೆಚ್ಚಳದಿಂದಾಗಿ ಬದುಕು ನಡೆಸುವುದೇ ಕಷ್ಟಕರವಾಗಿದೆ ಎಂದು ಅಳಲು ತೋಡಿಕೊಂಡಿರುವ ಆಟೋ ರಿಕ್ಷಾ ಚಾಲಕರು ಪ್ರಯಾಣ ದರವನ್ನು ಹೆಚ್ಚಳ ಮಾಡಬೇಕು ಎಂದು ಬೇಡಿಕೆಯನ್ನು ಇಟ್ಟುಕೊಂಡು ಹೋರಾಟವನ್ನು ಸಹ ನಡೆಸಿದರು. ಸತತ ಬೇಡಿಕೆಗಳಿಂದಾಗಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ದರ ಪರಿಷ್ಕರಣೆ ಮಾಡಿದೆ.