ಇರಾನ್: ಹಿಜಾಬ್ ವಿರೋಧಿ ಆಂದೋಲನ ತೀವ್ರ ಸ್ವರೂಪ ಪಡೆದುಕೊಂಡಿದೆ. 22 ವರ್ಷದ ಯುವತಿ ಮಹ್ಸಾ ಅಮೀನಿಯ ಸಾವಿನ ಬಳಿಕ ಪ್ರತಿಭಟನೆ ತೀವ್ರಗೊಂಡಿದೆ. ಪ್ರತಿಭಟನೆಯೂ 80 ನಗರಗಳಲ್ಲಿ ಹರಡಿಕೊಂಡಿದ್ದು, ಇದುವರೆಗೆ 326 ನಾಗರಿಕರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 14 ಸಾವಿರ ಜನರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.
ಸ್ಕಾರ್ಫ್ ಧರಿಸಿಲ್ಲ ಎಂದು ಆರೋಪಿಸಿ 22 ವರ್ಷದ ಯುವತಿ ಮಹ್ಸಾ ಅಮಿನಿ ‘ನೈತಿಕತೆ ಪೊಲೀಸ್ಗಿರಿ’ಯಿಂದ ಬಂಧಿಸಲ್ಪಟ್ಟು ಸೆಪ್ಟಂಬರ್ 16ರಂದು ಸಾವಿಗೀಡಾದ ನಂತರ ಇರಾನ್‌ನಲ್ಲಿ ಹಿಜಾಬ್ ವಿರುದ್ಧ ಪ್ರತಿಭಟನೆಗಳು ತೀವ್ರಗೊಂಡಿದೆ.
ಮಹ್ಸಾ ಅಮಿನಿಯ ಸಾವಿನ 40ನೇ ದಿನದ ನಿಮಿತ್ತ ಸಾವಿರಾರು ಜನರು ತಮ್ಮ ಸಾಂಪ್ರದಾಯಿಕ ಗೌರವ ಸಲ್ಲಿಸಲು ಸೇರಿದ್ದರು. ಆದರೆ, ಈ ಸಂದರ್ಭದಲ್ಲಿಯೂ ಹಿಂಸಾತ್ಮಕ ಘಟನೆ ಸಂಭವಿಸಿದೆ ಮತ್ತು ದುರ್ಘಟನೆಯಿಂದಾಗಿ ಹಲವರು ಮೃತಪಟ್ಟಿದ್ದಾರೆ, ಅನೇಕರು ಗಾಯಗೊಂಡಿದ್ದಾರೆ. ಈ ಘಟನೆಗೆ ಐಎಸ್ಐಎಸ್ ಕಾರಣವೆನ್ನಲಾಗಿದೆ. ಸಿರಿಯಾದಲ್ಲಿ ಐಎಸ್ಐಎಸ್ ವಿರುದ್ಧವೇ ಕುರ್ದಿಗಳು ಹೋರಾಡುತ್ತಿದ್ದಾರೆ.
ಸಾಕ್ವೆಜ್‌ನಲ್ಲಿ ಪ್ರತಿಭಟನಾನಿರತ ಯುವಜನರು ತಮ್ಮ ತಲೆಯ ಸ್ಕಾರ್ಫ್ಗಳನ್ನು ಹರಿದು ಸಾರ್ವಜನಿಕವಾಗಿ ಬೆಂಕಿ ಹಚ್ಚಿದ್ದಾರೆ. ದೇಶದ ನಿಯಮಗಳನ್ನು ಬಹಿರಂಗವಾಗಿ ಧಿಕ್ಕರಿಸಿದ ಮೊದಲ ಇರಾನ್ ನಗರ ಸಾಕ್ವೆಜ್ ಆಗಿದೆ. ಇಲ್ಲಿ ಪ್ರತಿಭಟನೆಗಳು ಹಿಂಸಾತ್ಮಕವಾಗಿ ಬೆಳೆದ ನಂತರ, ಅದು ನಿಯಂತ್ರಣವನ್ನೇ ಕಳೆದುಕೊಂಡಿದೆ. ಈ ದಂಗೆಯನ್ನು ನಿಯಂತ್ರಿಸಲು ಇರಾನ್ ಕೇಂದ್ರ ಸರ್ಕಾರವು ಸಾಕಷ್ಟು ಯತ್ನಿಸುತ್ತಿದೆ. ಇಲ್ಲಿ ಸಾವುಗಳ ಪ್ರಮಾಣ ಹೆಚ್ಚಾದ್ದರಿಂದ ಪ್ರತಿಭಟನೆಯ ಕಾವು ಹೆಚ್ಚಾಗಿದೆ.
ಪ್ರತ್ಯೇಕತಾವಾದದ ಇತಿಹಾಸ ಹೊಂದಿರುವ ಕುರ್ದಿಸ್ತಾನದ ಹೊರತಾಗಿ, ಇಫ್ಶಾಹಾನ್ ಮತ್ತು ಜಹೇದಾನ್‌ನಂತಹ ನಗರಗಳು ದೇಶದಾದ್ಯಂತ ಮಹಿಳೆಯರಿಗೆ ವಿಧಿಸಲಾದ ನಿಯಮಗಳ ಬಗ್ಗೆ ರಹಸ್ಯವಾಗಿ ಅಸಮಾಧಾನವನ್ನು ವ್ಯಕ್ತಪಡಿಸುತ್ತಿವೆ.
ಸೆಪ್ಟೆಂಬರ್‌ನಲ್ಲಿ ಮಹ್ಸಾ ಅಮಿನಿಯ ಸಾವಿನ ನಂತರದಿಂದಲೂ ಸರ್ಕಾರ ತೀವ್ರವಾಗಿ ಚಿಂತೆಗೀಡಾಗಿದೆ. ಪ್ರತಿಭಟನಾನಿರತ ಯುವಜನತೆಯ ಗಮನವನ್ನು ಬೇರೆಡೆಗೆ ತಿರುಗಿಸಲು ಹಲವು ತಂತ್ರಗಳನ್ನು ಹೂಡಿದರೂ ಫಲ ನೀಡಲಿಲ್ಲ. ಸರ್ಕಾರ ಬಳಸಿದ ಎಲ್ಲ ತಂತ್ರಗಳು ವಿಫಲವಾಗಿವೆ. ಇದರ ನಡುವೆ ಬ್ಯಾಂಕಾಕ್‌ನಲ್ಲಿ ನಡೆದ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಸ್ಪರ್ಧಿಸಿದ್ದ ಇರಾನ್ ವಾಟರ್ ಪೋಲೋ ಅಥ್ಲೀಟ್‌ಗಳು ರಾಷ್ಟ್ರಗೀತೆ ಹಾಡಲು ನಿರಾಕರಿಸಿದ್ದರು. ಇದು ಉದಾರವಾದಿಗಳು ಮತ್ತು ಇಸ್ಲಾಮಿಕ್ ಸಂಪ್ರದಾಯವಾದಿಗಳ ನಡುವೆ ದೊಡ್ಡ ವಿಭಜನೆಗೆ ಕಾರಣವಾಗಿದೆ. ಇರಾನಿನ ಉದಾರವಾದಿಗಳು ಈಗ ಜಹೆಯಂತಹ ನಗರಗಳಲ್ಲಿ ದಿಗ್ಭ್ರಮೆಗೊಂಡ ಅಲ್ಪಸಂಖ್ಯಾತರೊಂದಿಗೆ ಕೈಜೋಡಿಸುತ್ತಿದ್ದಾರೆ.