ಗಂಗಾವತಿ: ಭವ್ಯ ಸೌಧಗಳನ್ನು,ಅಣೆಕಟ್ಟುಗಳನ್ನು, ಮೇಟ್ರೋ ರೈಲುಗಳನ್ನು ಕಟ್ಟಿ ಸಮಾಜವನ್ನು ಸದಾ ಸುಂದರವಾಗಿಡಲು ಶ್ರಮಿಸುವ ಲಕ್ಷಾಂತರ ಕಟ್ಟಡ ನಿರ್ಮಾಣ ಕಾರ್ಮಿಕರ ಬದುಕು ಮಾತ್ರ ಸದಾ ಅತಂತ್ರವಾಗಿರುವುದು ದುರ್ದೈವದ ಸಂಗತಿಯಾಗಿದೆ ಎಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಫೆಡರೇಶನ್(ಸಿಐಟಿಯು) ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಮಹಾಂತೇಶ ವಿಷಾಧ ವ್ಯಕ್ತಪಡಿಸಿದರು.
ಅವರು ಗಂಗಾವತಿಯ ಕನ್ನಡ ಜಾಗೃತಿ ಸಮಿತಿ ಭವನದಲ್ಲಿ ಆಯೋಜಿಸಲಾಗಿದ್ದ ತಾಲೂಕು ಕಟ್ಟಡ ನಿರ್ಮಾಣ ವಲಯ ಕಾರ್ಮಿಕರ ಪ್ರಥಮ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು. ನಿರ್ಮಾಣ ವಲಯದ ಲಕ್ಷಾಂತರ ಕಾರ್ಮಿಕರು ಕೊವೀಡ್ ಎರಡೂ ಅಲೆಗಳಲ್ಲಿ ಸಂಕಷ್ಟದ ಬದುಕು ಎದುರಿಸಿದರವರು ಅವರಿಗೆ ಕಲ್ಯಾಣ ಮಂಡಳಿಯಿಂದ ಹಲವು ಸೌಲಭ್ಯಗಳನ್ನು ಪ್ರಕಟಿಸಿದರೂ ಸಕಾಲದಲ್ಲಿ ಅವು ಕಾರ್ಮಿಕರಿಗೆ ತಲುಪಲಿಲ್ಲ ಇದಕ್ಕೆ ಕಾರ್ಮಿಕರಲ್ಲಿರುವ ತಿಳುವಳಿಕೆ ಮತ್ತು ಸಂಘಟನೆ ಕೊರತೆಯೇ ಪ್ರಮುಖ ಕಾರಣ ಇದನ್ನು ಹೋಗಲಾಡಿಸಲು ಕಾರ್ಮಿಕರು ಸಿಐಟಿಯು ನೇತೃತ್ವದಲ್ಲಿ ವ್ಯವಸ್ಥಿತವಾಗಿ ಸಂಘಟಿತರಾಗುವುದು ಅವಶ್ಯವಿದೆ ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಕಾರ್ಮಿಕ ನಿರೀಕ್ಷರಾದ ಶ್ರೀ ಗೋಪಾಲ್ ಧೂಪದ್ ಮಾತನಾಡಿ ನಿರ್ಮಾಣ ವಲಯದ ಕಾರ್ಮಿಕರಿಗಾಗಿ ಜಾರಿಯಲ್ಲಿರುವ ಎಲ್ಲ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ಕಾರ್ಮಿಕರು ತಮ್ಮ ಬದುಕನ್ನು ಹಸನು ಮಾಡಿಕೊಳ್ಳಬೇಕೆಂದು ಕರೆ ನೀಡಿದರು.
ಸಿಐಟಿಯು ಜಿಲ್ಲಾ ಅಧ್ಯಕ್ಷರಾದ ನಿರುಪಾದಿ ಬೆಣಕಲ್ ಅಧ್ಯಕ್ಷತೆ ವಹಿಸಿಮಾತನಾಡುತ್ತಾ ಕೊಪ್ಪಳ ಜಿಲ್ಲೆಯಲ್ಲಿ ಕೃಷಿ ಕ್ಷೇತ್ರದಲ್ಲಿ ಉಂಟಾದ ಬಿಕ್ಕಟ್ಟಿನ ಪರಿಣಾಮದಿಂದ ಸಾವಿರಾರು ಜನರು ಕಟ್ಟಡ ನಿರ್ಮಾಣ ವಲಯದಲ್ಲಿ ತಮ್ಮ ಬದುಕು ಕಟ್ಟಿಕೊಂಡಿದ್ದಾರೆ ಅಂತಹವರಿಗೆ ಸಾಮಾಜಿಕ ಸುರಕ್ಷತೆ ಒದಗಿಸುವ ಕೆಲಸವನ್ನು ಸರ್ಕಾರ ಮಾಡಬೇಕಿದೆ ಎಂದು ಆಗ್ರಹಿಸಿದರು.
ಕಾರ್ಯಕ್ರಮದಲ್ಲಿ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಾಶಿಂ ಸರ್ಧಾರ್, ಸಿಐಟಿಯು ತಾಲೂಕು ಅಧ್ಯಕ್ಷೆ ಲಕ್ಷ್ಮೀ ದೇವಿ, ಮುಖಂಡರಾದ ಮುತ್ತಣ್ಣ,ಹನುಮಂತಪ್ಪಬೋವಿ,ಕಾಶಿಂ ಸಾಬ್ ವಡ್ಢರ್ ಹಟ್ಟಿ, ರಮೇಶ ಬೂದಗುಂಪ, ಮಹೇಶ,ಮೈನೂದ್ದೀನ್, ಟಿ.ರಘು ಉಪಸ್ಥಿತರಿದ್ದರು.
ಕಾರ್ಯಕ್ರಮದ ಸ್ವಾಗತವನ್ನು ಮಾದೇವ್ ಗೌಳಿ ಮಾಡಿದರೆ ವಂದನಾರ್ಪಣೆ ಮುತ್ತಣ್ಣ ನೆರವೇರಿಸಿದರು. ಸಿಐಟಿಯು ತಾಲೂಕು ಕಾರ್ಯದರ್ಶಿ ಮಂಜುನಾಥ ಡಗ್ಗಿ ನಿರ್ವಹಣೆ ಮಾಡಿದರು.
ನೂತನ ತಾಲೂಕು ಸಮಿತಿ ಆಯ್ಕೆ: ಸಮ್ಮೇಳನದಲ್ಲಿ ನೂತನ 22 ಜನರ ತಾಲೂಕು ಸಮಿತಿಯನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಮುತ್ತಣ ಕಾರ್ಯದರ್ಶಿಯಾಗಿ ಮಂಜುನಾಥ್ ಡಗ್ಗಿ, ಖಜಾಂಚಿಯಾಗಿ ಮಹಾದೇವ್ ಗೌಳಿ ಆಯ್ಕೆಯಾದರು.