ಬೆಂಗಳೂರು: ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಸಿಬಿಐ ತನಿಖೆಗೆ ಅನುಮತಿ ಪ್ರಶ್ನಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ತಡೆಯಾಜ್ಞೆಯನ್ನು ಏಪ್ರಿಲ್ 13ಕ್ಕೆ ಮುಂದೂಡಲಾಗಿದ್ದು, ಸದ್ಯ ಡಿಕೆ ಶಿವಕುಮಾರ್ ಅವರು ನಿರಾಳರಾಗಿದ್ದಾರೆ.
ಫೆ.24ರವರೆಗೂ ಸಿಬಿಐ ತನಿಖೆಗೆ ಮಧ್ಯಂತರ ತಡೆ ನೀಡಿ ಹೈಕೋರ್ಟ್ ಆದೇಶ ಹೊರಡಿಸಿತ್ತು. ತನಿಖಾಧಿಕಾರಿ ತನಿಖೆಯ ಪ್ರಗತಿ ವರದಿ ಹಾಜರುಪಡಿಸಲಿ. ಫೆಬ್ರವರಿ 24ರ ಒಳಗೆ ತನಿಖೆ ವರದಿ ಸಲ್ಲಿಸಲಿ. ಅಲ್ಲಿಯವರೆಗೆ ತನಿಖೆ ಮುಂದುವರಿಸದಂತೆ ಹೈಕೋರ್ಟ್ ಸೂಚನೆ ನೀಡಿತ್ತು. ಬಳಿಕ ನಡೆದ ವಿಚಾರಣೆ ವೇಳೆ ಕೋರ್ಟ್, ತಡೆಯಾಜ್ಞೆಯನ್ನು ಮತ್ತೊಮ್ಮೆ ವಿಸ್ತರಿಸಿತ್ತು.
ಇದನ್ನೂ ಓದಿ : ಅಕ್ರಮ ಹಣ ವರ್ಗಾವಣೆ: ಡಿಕೆ ಶಿವಕುಮಾರ್ ವಿರುದ್ಧ ಇಡಿಯಿಂದ ದೋಷಾರೋಪ ಪಟ್ಟಿ ಸಲ್ಲಿಕೆ
ನ್ಯಾಯಮೂರ್ತಿ ಕೆ ನಟರಾಜನ್ ಅವರ ನೇತೃತ್ವದ ಏಕಸದಸ್ಯ ಪೀಠಕ್ಕೆ ಬೇರೊಂದು ಪೀಠದಲ್ಲಿದ್ದ ಅರ್ಜಿಯನ್ನು ವರ್ಗಾಯಿಸುವಂತೆ ಅರ್ಜಿದಾರರ ಪರ ವಕೀಲರು ಮನವಿ ಮಾಡಿದರು. ಈ ಬಗ್ಗೆ ನಡೆದ ವಾದ ಪ್ರತಿವಾದದ ನಂತರ ಅರ್ಜಿದಾರರ ಪರ ವಕೀಲರು ಮಧ್ಯಂತರ ತಡೆಯಾಜ್ಞೆ ಮುಂದುವರಿಸಬೇಕು ಎಂದು ಮನವಿ ಮಾಡಿದರು. ಇವರ ಕೋರಿಕೆಯಂತೆ ಪೀಠವು, ಮಾರ್ಚ್ 31ಕ್ಕೆ ಅರ್ಜಿ ವಿಚಾರನೆ ಮುಂದೂಡಿ ಆದೇಶಿಸಿತ್ತು.
ಮಾರ್ಚ್ 31ರಂದು ನಡೆದ ವಿಚಾರಣೆ ವೇಳೆ ಸಿಬಿಐ ತನಿಖೆಗೆ ಅನುಮತಿ ನೀಡಿದ ಆದೇಶವನ್ನು ಪ್ರಶ್ನಿಸಿರುವ ಶಿವಕುಮಾರ್ ಅವರ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಸಿಬಿಐ ಪರ ವಕೀಲರು ಮನವಿ ಮಾಡಿದ್ದರು. ಆರಂಭದಲ್ಲಿ ಅಸಮಾಧಾನ ಹೊರಹಾಕಿದ್ದ ಕೋರ್ಟ್, ನಂತರ ಏಪ್ರಿಲ್ 6ರ ವರೆಗೆ ಆಕ್ಷೇಪಣೆ ಸಲ್ಲಿಸಲು ಕಾಲವಕಾಶ ನೀಡಿ ಆದೇಶಿಸಿತ್ತು. ಅದರಂತೆ ಇಂದು ನಡೆದ ವಿಚಾರಣೆ ವೇಳೆ ಮತ್ತೊಮ್ಮೆ ತಡೆಯಾಜ್ಞೆ ವಿಸ್ತರಣೆ ಮಾಡಲಾಗಿದೆ.