ಚೆನ್ನೈ : ಕಾನೂನು ವಿದ್ಯಾರ್ಥಿ 21 ವರ್ಷದ ಅಬ್ದುಲ್ ರಹೀಂ ಮೇಲೆ ಪೊಲೀಸರು ದೌರ್ಜನ್ಯ ನಡೆಸಿ, ಹಲ್ಲೆ ಮಾಡಿರುವ ಘಟನೆ ಚೆನ್ನೈನ ಎಂಕೆಬಿ ನಗರದಲ್ಲಿ ನಡೆದಿದೆ.
ಎಂಕೆಬಿ ನಗರದ ಮಹಿಳಾ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ನಜೀಮಾ ಮತ್ತು ಎಂಟು ಪೊಲೀಸ್ ಸಿಬ್ಬಂದಿ ಕಳೆದ ಶುಕ್ರವಾರ ಕಾನೂನು ವಿದ್ಯಾರ್ಥಿಗೆ ಥಳಿಸಿದ್ದಾರೆ. ಕಳೆದ ಶುಕ್ರವಾರ ಕೊಡುಂಗೈಯೂರು ಬಳಿಯ ಎಂಆರ್ ನಗರದಲ್ಲಿ ಮಾಸ್ಕ್ ಧರಿಸದ ಐದನೇ ವರ್ಷದ ಕಾನೂನು ವಿದ್ಯಾರ್ಥಿ ರಹೀಂಗೆ ಪೊಲೀಸರು ದಂಡ ವಿಧಿಸಿ ಠಾಣೆಗೆ ಕರೆದುಕೊಂಡು ಹೋದರು. ನಂತರ ಠಾಣೆಯಲ್ಲೇ ಪೊಲೀಸರು ತನಗೆ ಥಳಿಸಿ, ಬೂಟಿನಿಂದ ಒದ್ದರು ಎಂದು ರಹೀಂ ಆರೋಪಿಸಿದ್ದರು. ಅಲ್ಲದೆ ಠಾಣೆಯೊಳಗೆ ಪೊಲೀಸರು ಹೇಗೆ ತನ್ನ ಮೇಲೆ ಹಲ್ಲೆ ನಡೆಸಿದರು ಎಂಬುದನ್ನು ವೀಡಿಯೊ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದ. ವಿಡಿಯೋ ವೈರಲ್ ಆಗುತ್ತಿದ್ದಂತೆ ಇಬ್ಬರು ಪೊಲೀಸರನ್ನು ಅಮಾನತುಗೊಳಿಸಲಾಗಿತ್ತು.
ಈ ಘಟನೆ ಖಂಡಿಸಿ ವಕೀಲರು ಪ್ರತಿಭಟನೆ ನಡೆಸಿದರು. ಪೊಲೀಸ್ ಇನ್ಸ್‌ಪೆಕ್ಟರ್ ನಜೀಮಾ ವಿರುದ್ಧ ಎಫ್‌ಐಆರ್ ದಾಖಲಿಸಬೇಕೆಂದು ಒತ್ತಾಯಿಸಿದರು. ಅಲ್ಲದೆ ರಹೀಂ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲಾಗಿದೆ ಎಂದು ದೂರಿದರು. ಪ್ರತಿಭಟನೆ ಪ್ರಭಲಗೊಂಡ ಕಾರಣ ಪೊಲೀಸ್ ಇನ್ಸ್ಪೆಕ್ಟರ್ ಸೇರಿದಂತೆ 9 ಪೊಲೀಸ್ ಸಿಬ್ಬಂದಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ಕೇವಲ ಮಾಸ್ಕ್ ಹಾಕಲಿಲ್ಲ ಎಂಬ ಕಾರಣಕ್ಕೆ ಈ ರೀತಿ ಹಿಂಸೆ ಮಾಡಿದ್ದು ಸರಿಯಾದ ಕ್ರಮ ಅಲ್ಲ. ಎಲ್ಲರಿಗೂ ದಂಡ ವಿಧಿಸುವಂತೆ ದಂಡ ವಿಧಿಸಿದ್ದರೆ ಸಾಕಿತ್ತು. ಪೊಲೀಸರ ಉದ್ದೇಶ ಬೇರೆ ಇದ್ದಂತೆ ಕಾಣುತ್ತಿದೆ ಸಮಗ್ರ ತನಿಖೆಯಾಗಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.