ಗುವಾಹಟಿ: ನಾಗಲ್ಯಾಂಡ್ ನ ಮೊನ್ ಜಿಲ್ಲೆಯಲ್ಲಿ ನಾಗರಿಕರ ಹತ್ಯೆ ನಡೆದಿದೆ. ಹತ್ಯೆಯಲ್ಲಿ 14 ನಾಗರಿಕರು ಹತ್ಯೆಗೀಡಾದ ಹಿನ್ನೆಲೆ ಉದ್ರಿಕ್ತ ವಾತಾವರಣ ನಿರ್ಮಾಣವಾಗಿದೆ. ಘಟನೆ ನಡೆದ ಮೊನ್ ಜಿಲ್ಲೆಯಲ್ಲಿ ಕರ್ಫ್ಯೂ ಹೇರಲಾಗಿದ್ದು, ಮೊಬೈಲ್ ಸೇವೆ, ಇಂಟರ್‌ನೆಟ್ ಹಾಗೂ ಬಲ್ಕ್ ಎಸ್‌ಎಂಎಸ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.
ಎನ್‌ಎಸ್‌ಸಿಎನ್ ನಿಷೇಧಿತ ಸಂಘಟನೆಯ ಯಾಂಗ್ ಅಂಗ್ ಬಣದ ಉಗ್ರರ ವಿರುದ್ಧದ ಅಸ್ಸಾಂ ರೈಪಲ್ಸ್ ಪಡೆಯ ಕಾರ್ಯಾಚರಣೆಯ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ. ನಾಗಲ್ಯಾಂಡ್‌ನ ಮೊನ್ ಜಿಲ್ಲೆಯ ಒಟಿಂಗ್ ಹಾಗೂ ತಿರು ಗ್ರಾಮದ ನಡುವೆ ಈ ದುರಂತ ಸಂಭವಿಸಿತ್ತು. ಪ್ಯಾರಾ ಕಮಾಂಡೋಗಳೆಂದು ಹೇಳಲಾದ ಭದ್ರತಾ ಸಿಬ್ಬಂದಿ, ಸಂತ್ರಸ್ತರನ್ನು ಉಗ್ರಗಾಮಿಗಳೆಂದು ತಪ್ಪಾಗಿ ಗ್ರಹಿಸಿ ದಾಳಿ ನಡೆಸಿದ್ದರು.
ಮೃತರೆಲ್ಲರೂ ದಿನಗೂಲಿ ಕಾರ್ಮಿಕರಾಗಿದ್ದು, ವಾಹನದಲ್ಲಿ ಕಲ್ಲಿದ್ದಲು ಗಣಿಯಿಂದ ಮನೆಗೆ ಹಿಂದಿರುಗುತ್ತಿದ್ದಾಗ ಈ ಅವಘಡ ಸಂಭವಿಸಿತ್ತು. ಅವರು ಕಲ್ಲಿದ್ದಲು ಗಣಿಯಲ್ಲಿ ಕೆಲಸ ಮಾಡುತ್ತಿದ್ದರು. ಶನಿವಾರ ಸಂಜೆ ನಡೆದ ದುರಂತದಲ್ಲಿ ಆರು ಮಂದಿ ಪ್ರಾಣ ಕಳೆದುಕೊಂಡಿದ್ದರೆ, ಘಟನೆಯಲ್ಲಿ ತೀವ್ರ ಗಾಯಗೊಂಡಿದ್ದ ಮತ್ತೆ ಏಳು ಮಂದಿ ನಿಧನರಾಗಿದ್ದಾರೆ.
ಭದ್ರತಾ ಪಡೆ ಹೊಂಚು ಹಾಕಿ ನಡೆಸಿದ ದಾಳಿಯಲ್ಲಿ ನಾಗರಿಕರು ಮೃತಪಟ್ಟಿದ್ದಾರೆ ಎಂದು ಹಲವು ನಾಗಾ ಸಂಘಟನೆಗಳು ತಿಳಿಸಿವೆ. ಇತರ 11 ಮಂದಿ ನಾಗರಿಕರು ಗಾಯಗೊಂಡಿದ್ದು ಮತ್ತಿಬ್ಬರು ನಾಪತ್ತೆಯಾಗಿದ್ದಾರೆ.
ಹತರಾದ ನಾಗರಿಕರ ಸಾಮೂಹಿಕ ಅಂತ್ಯ ಸಂಸ್ಕಾರವನ್ನು ಮೊನ್ ಜಿಲ್ಲೆಯಲ್ಲಿ ಇಂದು ಬೆಳಿಗ್ಗೆ ನಡೆಸಲು ನಾಗಾಲ್ಯಾಂಡ್ ಸರ್ಕಾರ ತೀರ್ಮಾನಿಸಿತ್ತು. ಈ ವೇಳೆ ನಾಗಾಲ್ಯಾಂಡ್ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಹಾಜರಿರುವುದಾಗಿ ವರದಿಗಳು ತಿಳಿಸಿದ್ದವು. ಆದರೆ, ಅಂತ್ಯಸಂಸ್ಕಾರದ ಸ್ಥಳದಲ್ಲಿ ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದರಿಂದ ನಾಳೆಗೆ ಮುಂದೂಡಲಾಗಿದೆ.
ಘಟನೆ ನಡೆದ ನಂತರ ಭಾನುವಾರ ಮಧ್ಯಾಹ್ನ ಗಲಭೆ ಎಲ್ಲೆಡೆ ಹರಡಿದ್ದು, ಕೋಪಗೊಂಡ ಜನರು ಕೊನ್ಯಾಕ್ ಯೂನಿಯನ್‌ಗೆ ಸೇರಿದ ಕಚೇರಿಗಳನ್ನು ಮತ್ತು ಆ ಪ್ರದೇಶದಲ್ಲಿದ್ದ ಅಸ್ಸಾಂ ರೈಫಲ್ಸ್ ಶಿಬಿರವನ್ನು ಧ್ವಂಸಗೊಳಿಸಿದ್ದಾರೆ. ಭದ್ರತಾ ಪಡೆಯ ವಿರುದ್ಧ ನಾಗಾಲ್ಯಾಂಡ್‌ನಲ್ಲಿ ಜನ ಪ್ರತಿಭಟನೆ ನಡೆಸುತ್ತಿದ್ದಾರೆ. ಅಂಗಡಿ–ಮುಂಗಟ್ಟು, ಕಚೇರಿಗಳನ್ನು ಮುಚ್ಚಿ ಬಹುತೇಕ ಕಡೆ ಬಂದ್ ಆಚರಿಸಿದ್ದಾರೆ. ಸ್ವಯಂಪ್ರೇರಿತವಾಗಿ ಬಂದ್ ಆಚರಿಸಿ, ಭದ್ರತಾ ಪಡೆಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಸಂಜೆ 6 ಗಂಟೆಯವರೆಗೆ ವಿವಿಧ ಸಂಘಟನೆಗಳು ಬಂದ್‌ಗೆ ಕರೆ ನೀಡಿವೆ.
ಘಟನೆಯ ಹೊಣೆ ಹೊತ್ತಿರುವ ಭಾರತೀಯ ಸೇನೆಯು ದಂಗೆಕೋರರ ಚಲನವಲನದ ಖಚಿತ ಮಾಹಿತಿ ಗುಪ್ತಚರ ಇಲಾಖೆಯಿಂದ ಪಡೆದುಕೊಂಡಿದೆ. ಈ ಘಟನೆ ನಡೆದುದಕ್ಕೆ ವಿಷಾದವಿದೆ. ನಾಗರಿಕರ ಸಾವಿಗೆ ಕಾರಣ ಪತ್ತೆಹಚ್ಚಲು ಉನ್ನತ ಮಟ್ಟದಲ್ಲಿ ತನಿಖೆ ನಡೆಸಲಾಗುತ್ತಿದ್ದು, ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ನಾಗಲ್ಯಾಂಡ್ ನ ಡಿಮಪುರ್ ಮೂಲದ 3 ಕಾರ್ಪ್ಸ್ ಹೇಳಿಕೆಯಲ್ಲಿ ತಿಳಿಸಿದೆ.
ಮುಖ್ಯಮಂತ್ರಿ ನಿಫಿಯು ರಿಯೊ ಟ್ವೀಟ್ ಮಾಡಿ, ನಾಗಲ್ಯಾಂಡ್ ನ ಮೊನ್ ನ ಒಟಿಂಗ್ ನಲ್ಲಿ ಇಂದು ನಡೆದ ನಾಗರಿಕರ ಹತ್ಯೆಗೆ ಕಾರಣವಾದ ದುರದೃಷ್ಟಕರ ಘಟನೆಯು ಅತ್ಯಂತ ಖಂಡನೀಯವಾಗಿದೆ. ದುಃಖಿತ ಕುಟುಂಬಗಳಿಗೆ ಸಂತಾಪ ಸೂಚಿಸುತ್ತೇನೆ, ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಚೇತರಿಸಿಕೊಳ್ಳುತ್ತಿದ್ದಾರೆ. ಉನ್ನತ ಮಟ್ಟದ ಎಸ್‌ಐಟಿ ತನಿಖೆ ನಡೆಸಿ ನ್ಯಾಯ ಸಲ್ಲಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ.
ಈ ನಡುವೆ ನಾಗಲ್ಯಾಂಡ್ ಗವರ್ನರ್ ಜಗದೀಶ್ ಮುಖಿ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು, ವಿಶೇಷ ತನಿಖಾ ತಂಡ(ಎಸ್‌ಐಟಿ)ದ ಮೂಲಕ ಎಲ್ಲಾ ಆಯಾಮಗಳಿಂದ ಈ ಪ್ರಕರಣದ ತನಿಖೆ ನಡೆಸಲಿದೆ ಎಂದು ಅವರು ಹೇಳಿದ್ದಾರೆ.