ಬೆಂಗಳೂರು: ಆರೋಗ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು, ನೌಕರರನ್ನು ವರ್ಗಾವಣೆಗೆ ಸಂಬಂಧಿಸಿದಂತೆ ಮುಂದಿನ ದಿನಗಳಲ್ಲಿ ಕಡ್ಡಾಯವಾಗಿ ಕೌನ್ಸಿಲಿಂಗ್ ಮೂಲಕ ನಡೆಸುವ ಬಗ್ಗೆ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಿಗೆ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಸೂಚನೆ ನೀಡಿದ್ದಾರೆ.
ಆರೋಗ್ಯ ಇಲಾಖೆಯ ವ್ಯಾಪ್ತಿಯ ವೈದ್ಯಾಧಿಕಾರಿಗಳು ಮತ್ತು ಇತರ ಸಿಬ್ಬಂದಿಯ ವರ್ಗಾವಣೆಯನ್ನು ‘ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ (ವೈದ್ಯಾಧಿಕಾರಿಗಳು ಮತ್ತು ಇತರೆ ಸಿಬ್ಬಂದಿಯ ವರ್ಗಾವಣೆ ನಿಯಂತ್ರಣ) ಕಾಯ್ದೆ–2011ರ ಅಡಿಯಲ್ಲಿ ಕೌನ್ಸಿಲಿಂಗ್ ಮೂಲಕವೇ ನಡೆಸಬೇಕೆಂದು ಸ್ಪಷ್ಟ ಆದೇಶವಿದೆ. ಅದರಲ್ಲಿನ ಕಾಯ್ದೆಯ ಕಲಂ 5ರ ಪ್ರಕಾರ ಆಡಳಿತಾತ್ಮಕ ಹುದ್ದೆಗಳ ವರ್ಗಾವಣೆಗೆ ಮಾತ್ರ ಕೌನ್ಸಿಲಿಂಗ್‌ನಿಂದ ವಿನಾಯಿತಿ ಇರುತ್ತದೆ.
‘ವರ್ಗಾವಣೆ ಕಾಯ್ದೆಯಲ್ಲಿರುವ ನಿಯಮಗಳಿಗೆ ಸಂಬಂಧಿಸಿದಂತೆ 2017ರಲ್ಲಿ ತಿದ್ದುಪಡಿ ತರಲಾಗಿತ್ತು. ಈ ನಿಯಮಗಳ ಪ್ರಕಾರವೇ ವರ್ಗಾವಣೆ ನಡೆಸಬೇಕು. ಕೌನ್ಸಿಲಿಂಗ್‌ನಿಂದ ವಿನಾಯಿತಿ ನೀಡಿರುವ ವರ್ಗಾವಣೆ ಪ್ರಸ್ತಾವಗಳನ್ನು ಮಾತ್ರ ಸಚಿವರಿಗೆ ಕಳುಹಿಸಬೇಕು. ನಿಯಮ ಉಲ್ಲಂಘಿಸಿ ವರ್ಗಾವಣೆ ಪ್ರಸ್ತಾವನೆ, ಶಿಫಾರಸು ತಂದರೆ ಸಂಬಂಧಪಟ್ಟ ಸಿಬ್ಬಂದಿಯ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು’ ಎಂದು ಸಚಿವರು ಎಚ್ಚರಿಕೆ ನೀಡಿದ್ದಾರೆ.
ಇದನ್ನು ಓದಿ: ಕೋವಿಡ್ ಸೋಂಕಿನಿಂದ ಗುಣಮುಖರಾದವರಿಗೆ ಕ್ಷಯ ರೋಗ ತಪಾಸಣೆ: ಸಚಿವ ಡಾ. ಸುಧಾಕರ್
‘ಇಲಾಖೆಯಲ್ಲಿ ದಕ್ಷತೆ ತಂದು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಪಾರದರ್ಶಕ ಹಾಗೂ ನಿಗದಿತ ಕಾಲಮಿತಿಯಲ್ಲಿ ಸಕ್ಷಮ ಪ್ರಾಧಿಕಾರಗಳ ಮೂಲಕವೇ ವರ್ಗಾವಣೆ ಮಾಡುವ ಕಾನೂನನ್ನು ಕಡ್ಡಾಯವಾಗಿ ಜಾರಿಗೊಳಿಸಲು ಉನ್ನತಾಧಿಕಾರಿಗಳ ಸಭೆಯಲ್ಲಿ ಸೂಚಿಸಲಾಗಿದೆ. ಈ ಸಂಬಂಧ ಈಗಾಗಲೇ ಆದೇಶ ಹೊರಡಿಸಲಾಗಿದ್ದು, ಆ ಮೂಲಕ ಶಿಫಾರಸು, ಲಾಬಿಗಳಿಗೆ ತಡೆ ಬೀಳಲಿದೆ ಎಂದು ಸಚಿವರು ತಿಳಿಸಿದ್ದಾರೆ.
ಗಂಭೀರ ಹಾಗೂ ಮಾರಣಾಂತಿಕ ರೋಗದಿಂದ ಬಳಲುತ್ತಿರುವವರು, ವಯೋ ನಿವೃತ್ತಿ ಅಂಚಿನಲ್ಲಿದ್ದು, ಇನ್ನು ಎರಡು ವರ್ಷ ಮಾತ್ರ ಸೇವೆ ಬಾಕಿ, ಶೇ 40 ಕ್ಕೂ ಹೆಚ್ಚು ಅಂಗವೈಕಲ್ಯ ಹೊಂದಿರುವವರು, ವಿಧವೆಯರು, ಪತಿ-ಪತ್ನಿ ಪ್ರಕರಣಕ್ಕೆ ಮಾತ್ರ ಕೌನ್ಸೆಲಿಂಗ್‌ನಿಂದ ವಿನಾಯಿತಿ ನೀಡಬೇಕು. ಇಂಥ ಪ್ರಸ್ತಾವಗಳನ್ನು ಸ್ಪಷ್ಟ ಶಿಫಾರಸಿನೊಂದಿಗೆ ಕಡತವನ್ನು ಎರಡು ತಿಂಗಳಿಗೊಮ್ಮೆ ಮಾತ್ರ ಅನುಮೋದನೆಗೆ ಸಲ್ಲಿಸಬೇಕು. ಈ ಕುರಿತು ಕಾಯ್ದೆಯಲ್ಲಿ ಅವಶ್ಯ ತಿದ್ದುಪಡಿ ತರಲು ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಸಚಿವರು ಸೂಚನೆ ನೀಡಿದ್ದಾರೆ.
ನಿಯಮದಲ್ಲಿರುವ ಪ್ರಮುಖ ಅಂಶಗಳು
- ಇಲಾಖೆಯ ಆಯುಕ್ತರು ಹಿರಿಯ ತಜ್ಞರು, ತಜ್ಞರು, ಉಪ ಮುಖ್ಯ ವೈದ್ಯಾಧಿಕಾರಿ, ಹಿರಿಯ ವೈದ್ಯಾಧಿಕಾರಿ, ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿ, ಮುಖ್ಯ ದಂತ ವೈದ್ಯಾಧಿಕಾರಿ, ಹಿರಿಯ ದಂತ ವೈದ್ಯಾಧಿಕಾರಿ, ದಂತ ವೈದ್ಯಾಧಿಕಾರಿಗಳ ವರ್ಗಾವಣೆ ಮಾಡಬಹುದು.
- ಇಲಾಖೆಯ ನಿರ್ದೇಶಕರು ಗ್ರೂಪ್ ಬಿ, ಸಿ, ಡಿ ನೌಕರರನ್ನು ವರ್ಗಾವಣೆ ಮಾಡಬಹುದು.
- ಆಯುಷ್ ಇಲಾಖೆಯಡಿಯ ಫಿಸಿಶಿಯನ್ ಗ್ರೇಡ್ 1, ಗೇಡ್ 2 ಗೆ ಆಯುಷ್ ಇಲಾಖೆಯ ನಿರ್ದೇಶಕರು, ಆಯುಷ್ ಇಲಾಖೆಯ ಗ್ರೂಪ್ ಬಿ, ಸಿ, ಡಿ, ನೌಕರರಿಗೆ ಇಲಾಖೆಯ ನಿರ್ದೇಶಕರು ವರ್ಗಾವಣೆ ಮಾಡಬಹುದು.
- ಗ್ರೂಪ್-ಎ ಗೆ ಮೂರು ವರ್ಷ, ಗ್ರೂಪ್-ಬಿ ಗೆ ನಾಲ್ಕು ವರ್ಷ, ಗ್ರೂಪ್-ಸಿ ಗೆ ಐದು ವರ್ಷ, ಗ್ರೂಪ್-ಡಿ ಗೆ ಏಳು ವರ್ಷ ಒಂದು ಕಡೆ ಕಡ್ಡಾಯವಾಗಿ ಸೇವೆ ಸಲ್ಲಿಸಲು ನಿಯಮದಲ್ಲಿ ತಿಳಿಸಲಾಗಿದೆ.