ಬೆಂಗಳೂರು : ಅಂಗನವಾಡಿ ಮಕ್ಕಳಿಗೆ ಪೂರೈಸಬೇಕಿದ್ದ ಹಾಲಿನ ಪೌಡರ್ನ ಅಕ್ರಮ ಸಾಗಾಟ ಮತ್ತು ಖರೀದಿ ಪ್ರಕರಣದಲ್ಲಿ ಬಿಜೆಪಿ ಮುಖಂಡ ಮಣಿಕಂಠ ರಾಥೋಡ್ ಸೇರಿ ಮೂವರಿಗೆ ಯಾದಗಿರಿ ಜಿಲ್ಲಾ ನ್ಯಾಯಾಲಯ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ. ನಂದಿನಿ ಹಾಲಿನ ಪೌಡರ್ 500 ಗ್ರಾಂ.ನ ಒಟ್ಟು 340 ಪ್ಯಾಕೆಟ್ ಅಕ್ರಮ ಸಾಗಾಟದ ಆರೋಪದಡಿ 2015 ರಲ್ಲಿ ಯಾದಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದಲ್ಲಿ ಪೊಲೀಸರು ಆರೋಪಿಗಳ ವಿರುದ್ಧ ಸಾಕ್ಷಿಸಮೇತ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ತನಿಖೆಯಲ್ಲಿ ಆರೋಪ ಸಾಬಿತಾಗಿದ್ದು ಚಿತ್ತಾಪುರ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್, ಬಾಬುಗೌಡ ಪಾಟೀಲ್, ರಾಜೂಗೌಡ ಸೇರಿದಂತೆ ಮೂವರಿಗೆ ತಲಾ ಒಂದು ವರ್ಷ ಸಾದಾ ಜೈಲು ಶಿಕ್ಷೆ ಮತ್ತು ಹತ್ತು ಸಾವಿರ ರೂ ದಂಡ ವಿಧಿಸಿ ಯಾದಗಿರಿ ಸಿಜೆಎಂ ನ್ಯಾಯಾಲಯದ ನ್ಯಾಯಾಧೀಶ ರವೀಂದ್ರ ಹೊನ್ನಾಳಿ ತೀರ್ಪು ಪ್ರಕಟಿಸಿದ್ದಾರೆ.
ಮಾರಾಟ ಮಾಡುವ ಉದ್ದೇಶದಿಂದ ಹಾಲಿನ ಪ್ಯಾಕೆಟ್ಗಳನ್ನು ಸಂಗ್ರಹಿಸುತ್ತಿದ್ದರು ಎಂದು ತನಿಖೆ ವೇಳೆ ಸಾಬೀತಾಗಿದ ಎಂದು ಅಭಿಪ್ರಾಯಪಟ್ಟ ಸಿಜೆಎಂ ನ್ಯಾಯಾಧೀಶ ರವೀಂದ್ರ ಎಲ್. ಅವರು ಅಪರಾಧಿಗಳಿಗೆ ಒಂದು ವರ್ಷ ಜೈಲು, ತಲಾ ₹ 10 ಸಾವಿರ ದಂಡ, ದಂಡ ಪಾವತಿಸಲು ವಿಫಲವಾದಲ್ಲಿ ಹೆಚ್ಚುವರಿ ಎರಡು ತಿಂಗಳ ಸೆರೆ ವಾಸ ವಿಧಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಿದ್ದಾರೆ.