ಶಾಸಕರ ನಿರ್ಲಕ್ಷ, ಅಂಗನವಾಡಿ ಕೇಂದ್ರಗಳ ಸ್ಥಿತಿ ಶೋಚನೀಯ

  • ಬಾಡಿಗೆ ಕಟ್ಟಡದಲ್ಲಿ ಕಮರುತ್ತಿರುವ ಬಾಲ್ಯ ಶಿಕ್ಷಣ
  • ಕ್ಷೇತ್ರ ಅಭಿವೃದ್ಧಿ ಮರೆತ ಸಚಿವ ಹಾಲಪ್ಪ ಆಚಾರ್

ಯಲಬುರ್ಗಾ : ಯಲಬುರ್ಗಾ ತಾಲ್ಲೂಕಿನಲ್ಲಿ ಅಂಗನವಾಡಿಗಳು ಮೂಲ ಸೌಲಭ್ಯ ಇಲ್ಲದೆ ನರಳುತ್ತಿವೆ.  ಸ್ವಂತ ಕಟ್ಟಡ ಇಲ್ಲದೆ ದೇವಸ್ಥಾನ, ಪಂಚಾಯತಿಯ ಆವರಣದಲ್ಲಿ ಮಕ್ಕಳು ಕಲಿಯಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಅಂದ ಹಾಗೇ ಇದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವರಾದ ಹಾಲಪ್ಪ ಆಚಾರ್‌ ಅವರ ತವರು ಕ್ಷೇತ್ರ.

ಸಚಿವರು ತಮ್ಮ ಕ್ಷೇತ್ರದದಲ್ಲಿಯೇ ಅಂಗನವಾಡಿಗಳನ್ನು ನಿರ್ಲಕ್ಷ್ಯ ಮಾಡುತ್ತಿರುವುದನ್ನು ನೋಡಿದರೆ ರಾಜ್ಯದಲ್ಲಿ ಅವರು ಈ ಇಲಾಖೆಯನ್ನು ಯಾವ ರೀತಿ ಪ್ರೋತ್ಸಾಹಿಸುತ್ತಿದ್ದಾರೆ ಎಂಬುದನ್ನು ತಿಳಿಯಬಹುದಾಗಿದೆ. ಕೆಲವು  ಕಟ್ಟಡ ಇದ್ದರು ಕೂಡ ಬೀಳುವ ಹಂತಕ್ಕೆ ತಲುಪಿವೆ. ಇನ್ನು ಕೆಲವು ಕಟ್ಟಡಗಳು  ಪೂರ್ಣ ಆದರೂ ಅದನ್ನು ಹಸ್ತಾಂತರ ಮಾಡಿಲ್ಲ.  ಮಕ್ಕಳು ಕುಣಿದು  ಕುಪ್ಪಳಿಸಲು ಅಂಗೈ ಅಗಲದ ಜಾಗ ಇಲ್ಲ. ಆಟ- ಓಟಕ್ಕಂತೂ ಅವಕಾಶ ಇಲ್ಲವೇ ಇಲ್ಲ. ಗುಡಿ- ಗೋಪುರ, ಸಮುದಾಯ ಭವನ, ಗುಬ್ಬಚ್ಚಿ ಗೂಡಿನಂತ ಅಂಗನವಾಡಿ ಕೊಠಡಿಗಳಲ್ಲಿ ಕಂದಮ್ಮಗಳ ಬಾಲ್ಯ ಕಮರಿ ಹೋಗುತ್ತಿದೆ.

ಪ್ರಾಥಮಿಕ ಶಿಕ್ಷಣಕ್ಕೆ ಪೂರಕವಾಗುವಾಗಲೆಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ ತಾಲ್ಲೂಕಿನಲ್ಲಿ 21 ಸಣ್ಣ ಅಂಗನವಾಡಿ ಕೇಂದ್ರ ಸೇರಿದಂತೆ ಒಟ್ಟು 377 ಅಂಗನವಾಡಿ ಕೇಂದ್ರಗಳನ್ನು ಆರಂಭಿಸಿದೆ. ಆದರೆ, ಇಲಾಖೆ ಕೇವಲ ಅಂಗನವಾಡಿ ಕೇಂದ್ರಗಳನ್ನ ಮಂಜೂರು ಮಾಡಿ ಕೈತೊಳೆದುಕೊಂಡಿದ್ದು, ಅಗತ್ಯ ಮೂಲ ಸೌಕರ್ಯ ಒದಗಿಸಿಲ್ಲ. 377ಅಂಗನವಾಡಿ ಕೇಂದ್ರಗಳ ಪೈಕಿ, 260 ಕೇಂದ್ರಗಳಿಗೆ ಮಾತ್ರ ಸ್ವಂತ ಕಟ್ಟಡ ನಿರ್ಮಿಸಲಾಗಿದೆ. ಉಳಿದ  ಕೇಂದ್ರಗಳು ಬಾಡಿಗೆ ಕಟ್ಟಡಗಳಾಗಿವೆ. ದೇವಸ್ಥಾನ, ಸಮುದಾಯ ಭವನದ ಪ್ರಾಂಗಣಗಳು ತಾತ್ಕಾಲಿಕ ಆಶ್ರಯ ತಾಣಗಳಾಗಿವೆ.  ಈ ಪೈಕಿ 10 ಕೇಂದ್ರಗಳು ದೇಗುಲದ ಬಯಲು ಜಾಗದಲ್ಲಿಯೇ ಕಲಿಕೆ  ನಡೆಯುತ್ತಿದೆ. 30ಕೇಂದ್ರಗಳನ್ನ ಸಮುದಾಯ ಭವನದಲ್ಲಿ ತೆರೆಯಲಾಗಿದೆ. ಬಾಡಿಗೆ ಕಟ್ಟಡದಲ್ಲಿ 61 ಕೇಂದ್ರಗಳು, ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಾಥಮಿಕ ಶಾಲೆಗಳ ಹೆಚ್ಚುವರಿ ಕೊಠಡಿಗಳಲ್ಲಿ 16ಕೇಂದ್ರ ಹಾಗೂ ಗ್ರಾಮ ಪಂಚಾಯ್ತಿ ಅಧೀನದ ಕಟ್ಟಡಗಳಲ್ಲಿ 2 ಕೇಂದ್ರ ಹಾಗೂ ಗ್ರಾಮಸ್ಥರೇ ಪರ್ಯಾಯವಾಗಿ ಕಲ್ಪಿಸಿರುವ ಕಟ್ಟಡದಲ್ಲಿ 2 ಕೇಂದ್ರ ಕಾರ್ಯನಿರ್ವಹಿಸುತ್ತಿವೆ.

ಕಲಿಕಾಪೂರ್ವ ಹಂತದಲ್ಲಿಯೇ ಚಿಣ್ಣರ ಮನೋವಿಕಾಸ ಅರಳಿಸಲು ಅಗತ್ಯವಾದ ಆಟದ ಮೈದಾನ, ಆಟಿಕೆ ಸಾಮಾಗ್ರಿ, ಉತ್ತಮ ಪರಿಸರ, ಆಟೋಟಕ್ಕೆ ಮೂಲಸೌಕರ್ಯ ಅಗತ್ಯವಾಗಿ ಬೇಕಾಗಿದೆ. ಆದರೆ ಸ್ವಂತ ಕಟ್ಟಡಗಳಲ್ಲದ ಕಡೆ ನಡೆಯುತ್ತಿರುವ ಅಂಗನವಾಡಿ ಕೇಂದ್ರಗಳಲ್ಲಿ ಇಂತಹ ವಾತಾವರಣ ದೊರಕುವುದು ಅಸಾಧ್ಯದ ಮಾತು. ಹೀಗಾಗಿ ಕಲಿಕಾಪೂರ್ವ ಹಂತ ಎಂಬುದು, ಚಿಣ್ಣರ ಪಾಲಿಗೆ ಶಿಕ್ಷೆಯಾಗುತ್ತಿದೆ. ಸಚಿವರ ಈ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.  ಸಚಿವರು, ಸಭೆ ಸಮಾರಂಭ, ಮದುವೆ, ನಾಮಕರಣದಂರಹ ಕಾರ್ಯಕ್ರಮಗಳಿಗೆ ಸೀಮಿತರಾಗಿದ್ದಾರೆ. ಅವರಿಗೆ ಅಭಿವೃದ್ಧಿ ಕಾರ್ಯ ಬೇಕಿಲ್ಲ. ಜನಪರ ಸಂಘಟನೆಗಳು ಈ ಬಾರಿಯ ಚುನಾವಣೆಯಲ್ಲಿ ಅವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಜನಪರ ಸಂಘಟನೆಯ ನಾಯಕ ಎಂ. ಸಿದ್ದಪ್ಪ ತಿಳಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *