ಗ್ರಾಮ ಪಂಚಾಯತಿಗೆ ಅಂಗನವಾಡಿ ಉಸ್ತುವಾರಿ ವಿರೋಧಿಸಿ ರಾಜ್ಯವ್ಯಾಪಿ ಪ್ರತಿಭಟನೆ

ಬೆಂಗಳೂರು : ಅಂಗನವಾಡಿ ಕೇಂದ್ರಗಳನ್ನು ಗ್ರಾಮ ಪಂಚಾಯಿತಿಗಳ ಉಸ್ತುವಾರಿಗೆ ವಹಿಸುವುದನ್ನು ವಿ‌ರೋಧಿಸಿ, ಸೇವಾ ಭತ್ಯೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯವ್ಯಾಪಿ ಅಂಗನವಾಡಿ ನೌಕರರು ಪ್ರತಿಭಟನೆ ನಡೆಸಿದರು.

ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ (ಸಿಐಟಿಯು) ನೇತೃತ್ವದಲ್ಲಿ ನಡೆದ ಪ್ರತಿಭಟನೆಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ದೇಶದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯು ಸಮಗ್ರ ಶಿಶು ಅಭಿವೃದ್ಧಿ ಯೋಜನೆಗೆ ಪೂರಕವಾಗಿಲ್ಲ. ಸರಕಾರಗಳು ಅಂಗನವಾಡಿಗಳ ಉಳಿವಿನತ್ತ ಗಮನ ಹರಿಸಬೇಕು ಮೂರು ವರ್ಷದೊಳಗಿನ ಮಕ್ಕಳಿಗೆ ಶಿಶುಪಾಲನಾ ಕೇಂದ್ರ, 3ರಿಂದ 6 ವರ್ಷದ ಮಕ್ಕಳಿಗೆ ಅಂಗನವಾಡಿ ಕೇಂದ್ರ, 6ನೇ ವರ್ಷಕ್ಕೆ ಮಕ್ಕಳು 1ನೇ ತರಗತಿಗೆ ಸೇರಬೇಕು. 6 ವರ್ಷದೊಳಗಿನ ಮಕ್ಕಳಿಗೆ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಉಚಿತ ಮತ್ತು ಕಡ್ಡಾಯಗೊಳಿಸಲು ಪ್ರತ್ಯೇಕ ಕಾಯ್ದೆ ರೂಪಿಸಬೇಕು ಅಂಗನವಾಡಿ ಕೇಂದ್ರಗಳನ್ನು ಪಂಚಾಯಿತಿ ಹಿಡಿತಕ್ಕೆ ವಹಿಸುವ ಆದೇಶವನ್ನು ಸರಕಾರ ಕೂಡಲೇ ವಾಪಸ್ಸು ಪಡೆಯಬೇಕು ಎಂಬುದು ಪ್ರತಿಭಟನೆಕಾರರ ಆಗ್ರಹವಾಗಿದೆ.

ನೂತನ ಶಿಕ್ಷಣ ನೀತಿ ಜಾರಿಗೆ ಬಂದರೆ ಅಂಗನವಾಡಿಗೆ ಮಕ್ಕಳು ಸೇರುವ ಸಂಖ್ಯೆ ಸಂಪೂರ್ಣ ಕಡಿಮೆಯಾಗುತ್ತದೆ. ಬಾಲವಟಿಕಾ ಎಂಬ ಶಿಶುಪಾಲನಾ ಕೇಂದ್ರದಿಂದ ಅಂಗನವಾಡಿ ನೌಕರರಿಗೆ ಸಂಕಷ್ಟ ಎದುರಾಗುತ್ತದೆ. ಅವರು ಬೀದಿಗೆ ಬೀಳಬೇಕಾಗುತ್ತದೆ ಹಾಲಿ ಇರುವ ಅಂಗನವಾಡಿ ಕೇಂದ್ರಗಳಲ್ಲೇ ಎಲ್‌ಕೆಜಿ, ಯುಕೆಜಿ ಶಿಕ್ಷಣ ನೀಡಬೇಕು. ಅಂಗನವಾಡಿ ನೌಕರರನ್ನು ಐ.ಸಿ.ಡಿ.ಎಸ್‌ನ ಐದು ಉದ್ದೇಶಗಳಿಗೆ ಮಾತ್ರ ನಿಯೋಜಿಸಬೇಕು. ನೌಕರರಿಗೆ ಸೇವಾ ಭದ್ರತೆ ಒದಗಿಸಬೇಕು ಎಂದು ಪ್ರತಿಭಟನೆಕಾರರು ಒತ್ತಾಯಿಸಿದರು.

ಅಂಗನವಾಡಿ ಕೇಂದ್ರಗಳಿಗೆ ಎಲ್ಲಾ ರೀತಿಯ ಗುಣಾತ್ಮಕ ಮೂಲಭೂತ ಸೌಲಭ್ಯಗಳನ್ನೊದಗಿಸಬೇಕು, ಕೋಳಿ ಮೊಟ್ಟೆಯನ್ನು ಆಹಾರ ಪದಾರ್ಥಗಳ ಜೊತೆಯಲ್ಲಿ ಸರಬರಾಜು ಮಾಡಬೇಕು, ಕೊರೊನಾ ವಾರಿಯರ್ ಆಗಿ ಕೆಲಸ ಮಾಡಿ ಸೊಂಕಿತರಾಗಿ ನಿಧನರಾದ ಅಂಗನವಾಡಿ ನೌಕರರಿಗೆ ಕೂಡಲೇ ೨೦ ಲಕ್ಷ ಪರಿಹಾರ ಬಿಡುಗಡೆ ಮಾಡಬೇಕು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಮತ್ತು ಐಎಲ್‌ಸಿ ಶಿಫಾರಸ್ಸಿನಂತೆ ಕನಿಷ್ಠ ವೇತನ ಜಾರಿ ಮಾಡಬೇಕು ಅಂಗನವಾಡಿ ನೌಕರರನ್ನು ಖಾಯಂ ಮಾಡಬೇಕು ಮಿನಿ ಅಂಗನವಾಡಿ ಕೇಂದ್ರಗಳಿಗೆ ಸಹಾಯಕಿಯರನ್ನು ನೇಮಕ ಮಾಡಬೇಕು ಎಂದು ಒತ್ತಾಯಿಸಿದರು.

ನೌಕರರ ವರ್ಗಾವಣೆ, ಪೌಷ್ಠಿಕ ಆಹಾರವನ್ನು ಸರಬರಾಜು ಮಾಡುವ ಎಮ್.ಎಸ್.ಪಿ.ಟಿ.ಸಿ. ಗಳಲ್ಲಿ ರಾಜಕೀಯ ಮಧ್ಯ ಪ್ರವೇಶವನ್ನು ತಡೆಯಬೇಕು ಮುಂಬಡ್ತಿ ನೀಡುವಾಗ ಅದೇ ಕೇಂದ್ರದಲ್ಲಿ ಅರ್ಹ ಅಂಗನವಾಡಿ ಸಹಾಯಕಿ ಇದ್ದರೆ ಅವರಿಗೆ ಮೊದಲ ಆದ್ಯತೆ ನೀಡಬೇಕು ಮತ್ತು ಜಿಲ್ಲೆಯಿಂದ ಜಿಲ್ಲೆಗೆ, ತಾಲ್ಲೂಕಿನಿಂದ ತಾಲ್ಲೂಕಿಗೆ ಸ್ಥಾನ ಪಲ್ಲಟಕ್ಕೆ ಆದ್ಯತೆ ನೀಡಬೇಕು ಖಾಲಿ ಇರುವ ಸಹಾಯಕಿ ಕಾರ್ಯಕರ್ತೆಯರ ಹುದ್ದೆಗಳನ್ನು ಮತ್ತು ಇಲಾಖೆಯ ಸಿಬ್ಬಂದಿಗಳ ಹುದ್ದೆಗಳನ್ನು ಭರ್ತಿ ಮಾಡಬೇಕು.ಬಜೆಟ್‌ನಲ್ಲಿ ಕಡಿತವಾಗಿರುವ ೮೪೫೨.೩೮ ಕೋಟಿ ಹಣ ವಾಪಸ್ ನೀಡಬೇಕು ಐಸಿಡಿಎಸ್ ಯೋಜನೆಗೆ ಅನುದಾನವನ್ನು ಹೆಚ್ಚಳ ಮಾಡಿ ದೇಶದ ಮಕ್ಕಳ ಮತ್ತು ಮಹಿಳೆಯರನ್ನು ರಕ್ಷಿಸಬೇಕು. ಬಿಎಲ್‌ಒ ಕೆಲಸದಿಂದ ಅಂಗನವಾಡಿ ಕಾರ್ಯಕರ್ತೆಯರನ್ನು ಕೈ ಬಿಡಬೇಕು.ಅಂಗನವಾಡಿ ಕೇಂದ್ರಗಳ ಬಾಡಿಗೆಗೆ ಇರುವ ಮಾನದಂಡ ತೆಗೆಯಬೇಕು ಎಂದು ಪ್ರತಿಭಟನೆಕಾರರು ಆಗ್ರಹಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *