ಬೆಂಗಳೂರು :ಸವದತ್ತಿ ಯಲ್ಲಮ್ಮ ಮತಕ್ಷೇತ್ರದ ಶಾಸಕ, ವಿಧಾನಸಭೆ ಉಪಸಭಾಪತಿ ಆನಂದ ಮಾಮನಿ (56) ನಿಧನರಾಗಿದ್ದಾರೆ. ತೀವ್ರ ಅನಾರೋಗ್ಯದ ಕಾರಣ ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದ ಅವರು, ಶನಿವಾರ ಮಧ್ಯರಾತ್ರಿ 12ರ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.
ಕಳೆದ ಹಲವು ದಿನಗಳಿಂದ ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದು ಚೆನ್ನೈನ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಳಿಕ ಬೆಂಗಳೂರಿಗೆ ಸ್ಥಳಾಂತರಗೊಂಡಿದ್ದರು. ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಆನಂದ ಮಾಮನಿ ಅವರು ಪತ್ನಿ, ಪುತ್ರ ಹಾಗೂ ಪುತ್ರಿ ಸೇರಿದಂತೆ ಅಪಾರ ಬಂಧು ಬಳಗ ಅಗಲಿದ್ದಾರೆ.
ಒಬ್ಬರೇ ಸತತ ಎರಡು ಬಾರಿ ಈ ಕ್ಷೇತ್ರವನ್ನು ಪ್ರತಿನಿಧಿಸಿ ಜಯಗಳಿಸಿದವರಿಲ್ಲ. ಸತತ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗುವ ಮೂಲಕ ‘ಹ್ಯಾಟ್ರಿಕ್’ ಸಾಧನೆ ಮಾಡಿದ್ದರು. ಅಭಿಮಾನಿಗಳಿಂದ ಅಜಾತ ಶತ್ರುವೆಂದು ಕರೆಸಿಕೊಂಡಿದ್ದ ಅವರು ಮೃದು ಸ್ವಭಾವದಿಂದಾಗಿಯೇ ಜನಾನುರಾಗಿ ಆಗಿದ್ದರು.
ಶಾಸಕರಾಗಿ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ, ಯಲ್ಲಮ್ಮ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ, ಪ್ರಸಕ್ತ ವಿಧಾನಸಭೆ ಉಪಸಭಾಧ್ಯಕ್ಷರ ಹುದ್ದೆ ನಿಭಾಯಿಸುತ್ತಿದ್ದ ಮಾಮನಿ; ಸೋಲಿಲ್ಲದ ಸರದಾರ. ಸವದತ್ತಿ ಸಾಹುಕಾರ, ಜನಪರ ನಾಯಕ ಎಂಬ ಹಲವು ಅಂಕಿತಗಳೂ ಅವರ ಸ್ವಂತ. ಅವರ ಜನಪರ ನಿಲುವು, ಮುತ್ಸದ್ಧಿ ಗುಣಗಳು, ಕ್ಷೇತ್ರದಲ್ಲಿ ನಿತ್ಯ ಪರ್ಯಟನೆ ಮಾಡುವ ಕ್ರಿಯಾಶೀಲತೆಯಿಂದಲೇ ಆಪ್ತವಾಗುತ್ತಿದ್ದರು.
ಸಿಎಂ ಸಂತಾಪ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಂತಿಮ ದರ್ಶನ ಪಡೆದಿದು ಮಾಧ್ಯಮಗಳ ಜೊತೆ ಮಾತನಾಡುತ್ತಾ, ಇತ್ತೀಚೆಗಷ್ಟೇ ಉಮೇಶ್ ಕತ್ತಿ ಅವರನ್ನು ಕಳೆದುಕೊಂಡಿದ್ದೇವೆ. ಈಗ ಮತ್ತೆ ಬೆಳಗಾವಿ ಜಿಲ್ಲೆಯ ಮತ್ತೊಬ್ಬರನ್ನು ಕಳೆದುಕೊಂಡಿದ್ದೇವೆ ಎಂದರು.
ಆನಂದ ಮಾಮನಿ ಬಹಳ ಸಣ್ಣ ವಯಸ್ಸಿನಲ್ಲಿ ರಾಜಕಾರಣಕ್ಕೆ ಬಂದವರು. ಮಾದರಿ ಶಾಸಕರಾಗಿ ಕಾರ್ಯನಿರ್ವಹಿಸಿದ್ದರು. ನೀರಾವರಿ, ರಸ್ತೆ, ಶಾಲಾ ಕಟ್ಟಡಗಳು ಸೇರಿದಂತೆ ತಮ್ಮ ಕ್ಷೇತ್ರವನ್ನು ಅಭಿವೃದ್ಧಿಪಡಿಸಿದ್ದರು. ಕ್ಷೇತ್ರವನ್ನು ಪ್ರೀತಿಸುತ್ತಿದ್ದರು. ಕ್ಷೇತ್ರದ ಜನರು ಕೂಡ ಅವರನ್ನು ಅಷ್ಟೇ ಪ್ರೀತಿ ಮಾಡಿದ್ದರು. ಆನಂದ ಮಾಮನಿ ಮತ್ತು ನಮ್ಮ ನಡುವೆ ಉತ್ತಮ ಒಡನಾಟವಿತ್ತು. ಇಷ್ಟು ಬೇಗ ನಮ್ಮನ್ನು ಬಿಟ್ಟು ಹೋಗುತ್ತಾರೆ ಎಂದುಕೊಂಡಿರಲಿಲ್ಲ. ಸವದತ್ತಿಯಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಸಂಜೆ 4 ಗಂಟೆಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ.