ಲೈಸೆನ್ಸ್ ಇಲ್ಲದ ತಂಬಾಕು ಬೆಳೆಗಾರರಿಗೂ ಮಾರಾಟಕ್ಕೆ ಅವಕಾಶ ನೀಡಿ: ಕೆಪಿಆರ್‌ಎಸ್‌ ಆಗ್ರಹ

ತಂಬಾಕು ಮಂಡಳಿ ಪ್ರಾದೇಶಿಕ ವ್ಯವಸ್ಥಾಪಕರ ಕಚೇರಿ ಎದುರು ರೈತರ ಪ್ರತಿಭಟನೆ; ಲೈಸೆನ್ಸ್‌ದಾರ ರೈತರಿಗೆ ನೀಡುವ ಎಲ್ಲ ಸೌಲಭ್ಯಗಳನ್ನು ಕಾರ್ಡ್‌ದಾರರಿಗೂ ಒದಗಿಸಲು ಒತ್ತಾಯ
ಮೈಸೂರು: ಲೈಸೆನ್ಸ್ ಇಲ್ಲದೆ ತಂಬಾಕು ಬೆಳೆದಿರುವ ರೈತರಿಗೆ ತಾವು ಬೆಳೆದ ತಂಬಾಕನ್ನು ಮಾರಾಟ ಮಾಡಲು ಅವಕಾಶ ಕಲ್ಪಿಸಬೇಕು ಹಾಗೂ ತಂಬಾಕು ಬೆಳೆಗಾರರಿಗೆ ಲೈಸೆನ್ಸ್ ನೀಡಬೇಕು ಎಂದು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದ (ಕೆಪಿಆರ್‌ಎಸ್‌) ಮೈಸೂರು ಜಿಲ್ಲಾ ಸಮಿತಿ ವತಿಯಿಂದ ನಗರದ ತಂಬಾಕು ಮಂಡಳಿಯ ಪ್ರಾದೇಶಿಕ ವ್ಯವಸ್ಥಾಪಕರ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಹುಣಸೂರು, ಎಚ್‌.ಡಿ.ಕೋಟೆ, ಸರಗೂರು, ಪಿರಿಯಾಪಟ್ಟಣ, ಕೆ.ಆರ್‌.ನಗರ ಮತ್ತು ಸಾಲಿಗ್ರಾಮ ತಾಲೂಕುಗಳಲ್ಲಿ ಲೈಸೆನ್ಸ್ ಇಲ್ಲದೆ ತಂಬಾಕು ಬೆಳೆಯುತ್ತಿದ್ದ ರೈತರಿಗೆ ತಂಬಾಕು ಮಂಡಳಿ ಕಾರ್ಡ್‌ಗಳನ್ನು ನೀಡಿದ್ದು, ಅವರು ಬೆಳೆದ ತಂಬಾಕನ್ನು ಮಂಡಳಿಯ ಮೂಲಕ ಮಾರಾಟ ಮಾಡಲು ವ್ಯವಸ್ಥೆ ಮಾಡಲಾಗಿತ್ತು. ಆದರೆ, ಲೈಸೆನ್ಸ್ ಹೊಂದಿರುವ ತಂಬಾಕು ಬೆಳೆಗಾರರಿಗೆ ವರ್ಷಕ್ಕೆ 1,017 ಕೆ.ಜಿ. ತಂಬಾಕು ಬೆಳೆದು ಮಾರಾಟ ಮಾಡಲು ಅನುಮತಿ ನೀಡಲಾಗಿದೆ. ಕಾರ್ಡ್‌ ಹೊಂದಿರುವ ರೈತರು ಬೆಳೆದ ತಂಬಾಕನ್ನು ಮಾರಾಟ ಮಾಡಲು ಅವಕಾಶ ಕಲ್ಪಿಸುವ ಕುರಿತು ಮಂಡಳಿ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಇದರಿಂದ ಹುಣಸೂರು ವಿಭಾಗದ ಕಾರ್ಡ್‌ದಾರ ತಂಬಾಕು ಬೆಳೆಗಾರರಿಗೆ ಅನ್ಯಾಯವಾಗುತ್ತಿದೆ. ರೈತರು ಕಷ್ಟಪಟ್ಟು ಬೆಳೆದ ಬೆಳೆಯನ್ನು ಮಾರಾಟ ಮಾಡಲು ಅವಕಾಶವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ಕಾರ್ಡ್‌ದಾರ ರೈತರು ಬೆಳೆದ ತಂಬಾಕನ್ನು ಮಾರಾಟ ಮಾಡಲು ಅವಕಾಶ ಕಲ್ಪಿಸಬೇಕು ಎಂದು ಕೆಪಿಆರ್‌ಎಸ್‌ ಒತ್ತಾಯಿಸಿತು. ಲೈಸೆನ್ಸ್ 

ಇದನ್ನೂ ಓದಿ : ಹನೂರು‌ ಎನ್‌ಕೌಂಟರ್ ನಗ್ನ ಕಗ್ಗೊಲೆ : ಸಿ.ಹೆಚ್.ಹನುಮಂತರಾಯ ಅಭಿಮತ

ರೈತರ ಪ್ರಮುಖ ಬೇಡಿಕೆಗಳೇನು?

ತಂಬಾಕು ಬೆಳೆಗಾರರಿಗೆ ಲೈಸೆನ್ಸ್ ನೀಡಬೇಕು. ಲೈಸೆನ್ಸ್ ಹೊಂದಿರುವ ಬೆಳೆಗಾರರಿಗೆ ತಂಬಾಕು ಮಂಡಳಿ ಒದಗಿಸುತ್ತಿರುವ ಎಲ್ಲ ಸೌಲಭ್ಯಗಳನ್ನು ಕಾರ್ಡ್‌ದಾರ ರೈತರಿಗೂ ನೀಡಬೇಕು. ಸ್ವಾಮಿನಾಥನ್ ಆಯೋಗದ ಶಿಫಾರಸಿನಂತೆ ತಂಬಾಕು ಬೆಳೆಗೆ ಲಾಭದಾಯಕ ಬೆಲೆ ದೊರೆಯುವಂತೆ ಮಂಡಳಿ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಆಂಧ್ರಪ್ರದೇಶದ ರೈತರು ಬೆಳೆದ ತಂಬಾಕು ಮತ್ತು ಕರ್ನಾಟಕದ ರೈತರು ಬೆಳೆದ ತಂಬಾಕಿಗೆ ಬೆಲೆಯಲ್ಲಿ ಯಾವುದೇ ತಾರತಮ್ಯ ಇರಬಾರದು. ರೈತರಿಂದ ಲೈಸೆನ್ಸ್‌ಗಳನ್ನು ಖರೀದಿಸಿ ಸ್ವತಃ ತಂಬಾಕು ಬೆಳೆಯದೆ ವ್ಯಾಪಾರ ನಡೆಸುತ್ತಿರುವ ವ್ಯಾಪಾರಸ್ಥರ ಲೈಸೆನ್ಸ್‌ಗಳನ್ನು ರದ್ದುಗೊಳಿಸಬೇಕು ಎಂಬ ಬೇಡಿಕೆಗಳನ್ನೂ ಮುಂದಿಡಲಾಯಿತು.

ತಂಬಾಕು ಬೆಳೆಯುವ ರೈತರ ಹಿತಾಸಕ್ತಿಯನ್ನು ಕಾಪಾಡಲು ತಂಬಾಕು ಮಂಡಳಿ ಹಾಗೂ ಕೇಂದ್ರ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು. ಕಾರ್ಡ್‌ದಾರ ರೈತರಿಗೆ ಮಾರಾಟದ ಅವಕಾಶ ನಿರಾಕರಿಸುವುದರಿಂದ ಅವರ ಆರ್ಥಿಕ ಸಂಕಷ್ಟ ಹೆಚ್ಚಾಗುತ್ತಿದ್ದು, ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಮೈಸೂರು ಜಿಲ್ಲಾ ಅಧ್ಯಕ್ಷ ಗೌರಿಪುರ ಚಿಕ್ಕಣ್ಣೇಗೌಡ, ಜಿಲ್ಲಾ ಕಾರ್ಯದರ್ಶಿ ಜಗದೀಶ್ ಸೂರ್ಯ, ಉಪಾಧ್ಯಕ್ಷ ಕೆ. ಬಸವರಾಜ್, ಹುಣಸೂರು ತಾಲೂಕು ಅಧ್ಯಕ್ಷ ಮರಳಯ್ಯನಕೊಪ್ಪಲು ಚಂದ್ರಶೇಖರ, ಕಾರ್ಯದರ್ಶಿ ಬೀರೇಶ್ವರ್, ಮುಖಂಡರಾದ ತಮ್ಮಡಳ್ಳಿ ಗೋವಿಂದಯ್ಯ, ಕಿರಿಜಾಜಿ ಶಂಕರಪ್ಪ, ಚಂದ್ರೇಗೌಡ ಮೂಡಲಕೊಪ್ಪಲು, ಉದ್ದೂರು ನಟರಾಜ್, ಕಲ್ಲಳ್ಳಿ ಗೋವಿಂದಚಾರ್, ಕಲ್ಲಳ್ಳಿ ಚಂದ್ರಶೇಖರ್, ಉದ್ದೂರು ಮಂಜುನಾಥ್, ಗೌರಿಪುರ ಸಿದ್ದಯ್ಯ, ಮುಳ್ಳೂರು ಮಹದೇವ, ಜಿ. ಜಯರಾಂ, ರಾಜೇಂದ್ರ, ಸುಬ್ರಹ್ಮಣ್ಯ ಸೇರಿದಂತೆ ಹಲವು ರೈತ ಮುಖಂಡರು ಭಾಗವಹಿಸಿದ್ದರು. ಲೈಸೆನ್ಸ್ 

ಇದನ್ನೂ ನೋಡಿ : SIR ಅಕ್ರಮ: ಕುಂಬಳಕಾಯಿ ಕಳ್ಳ ಅಂದ್ರೆ ಬಿಜೆಪಿ ಹೆಗಲು ಮುಟ್ಕೊಳೋದ್ಯಾಕೆ? Janashakthi Media

Donate Janashakthi Media

Leave a Reply

Your email address will not be published. Required fields are marked *