ಮುಕ್ತ ವ್ಯಾಪಾರ ಒಪ್ಪಂದ (FTA), ಎಸ್ಐಆರ್, ಕಾರ್ಮಿಕ ಸಂಹಿತೆಗಳ ವಿರುದ್ಧ ಹೋರಾಟ ತೀವ್ರಗೊಳಿಸಲು ನಿರ್ಧಾರ – ಎಂಎಸ್ಪಿ ಕಾನೂನು, ಸಾಲಮನ್ನಾ, ನರೇಗಾ ಮರುಸ್ಥಾಪನೆಗೆ ಆಗ್ರಹ
ನಲ್ಗೊಂಡ : ದೇಶದ ರೈತರು, ಕೃಷಿ ಕಾರ್ಮಿಕರು ಹಾಗೂ ದುಡಿಯುವ ಜನರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ನವೆಂಬರ್ 26ರಂದು ರಾಷ್ಟ್ರವ್ಯಾಪಿ ಪ್ರತಿಭಟನೆಗಳನ್ನು ನಡೆಸಲು ಅಖಿಲ ಭಾರತ ಕಿಸಾನ್ ಸಭಾ (AIKS) ಕರೆ ನೀಡಿದೆ. ತೆಲಂಗಾಣದ ನಲ್ಗೊಂಡದಲ್ಲಿ ನಡೆದ ಸಂಘಟನೆಯ 36ನೇ ರಾಷ್ಟ್ರೀಯ ಸಮ್ಮೇಳನದಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದ್ದು, ರೈತರ ಐತಿಹಾಸಿಕ ಹೋರಾಟದ ಆರನೇ ವಾರ್ಷಿಕೋತ್ಸವ ಹಾಗೂ ಸಂವಿಧಾನ ದಿನದಂದು ದೇಶಾದ್ಯಂತ ಪ್ರತಿಭಟನೆಗಳನ್ನು ಸಂಘಟಿಸಲು ತೀರ್ಮಾನಿಸಲಾಗಿದೆ. ನವೆಂಬರ್
2020ರಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಮೂರು ಕೃಷಿ ಕಾಯ್ದೆಗಳ ವಿರುದ್ಧ ಲಕ್ಷಾಂತರ ರೈತರು 385 ದಿನಗಳ ಕಾಲ ನಡೆಸಿದ ಹೋರಾಟವನ್ನು ಸಮ್ಮೇಳನ ಸ್ಮರಿಸಿದೆ. ಈ ಹೋರಾಟದಲ್ಲಿ 736 ರೈತರು ಹುತಾತ್ಮರಾಗಿದ್ದು, ರೈತರ ಒತ್ತಡಕ್ಕೆ ಮಣಿದ ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕಾಯಿತು. ಹೋರಾಟದ ಸಂದರ್ಭದಲ್ಲಿ ರೈತರ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ್ದ ಕೇಂದ್ರ ಸರ್ಕಾರ, ಇದೀಗ ಆ ಭರವಸೆಗಳನ್ನು ಈಡೇರಿಸದೆ ರೈತರು, ಕೃಷಿ ಕಾರ್ಮಿಕರು ಹಾಗೂ ಕಾರ್ಮಿಕ ವರ್ಗದ ಮೇಲೆ ಮತ್ತಷ್ಟು ದಾಳಿ ನಡೆಸುತ್ತಿದೆ ಎಂದು ಎಐಕೆಎಸ್ ಆರೋಪಿಸಿದೆ.
ವಿದೇಶಿ ಮುಕ್ತ ವ್ಯಾಪಾರ ಒಪ್ಪಂದಗಳ (FTA) ಮೂಲಕ ಕೃಷಿ ಕ್ಷೇತ್ರವನ್ನು ಬಹುರಾಷ್ಟ್ರೀಯ ಕಂಪನಿಗಳಿಗೆ ಮುಕ್ತಗೊಳಿಸುವುದು, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ದುರ್ಬಲಗೊಳಿಸುವುದು ಹಾಗೂ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಏಕಪಕ್ಷೀಯವಾಗಿ ಜಾರಿಗೊಳಿಸುವ ಮೂಲಕ ಜನರ ಜೀವನೋಪಾಯದ ಮೇಲೆ ಕೇಂದ್ರ ಸರ್ಕಾರ ದಾಳಿ ನಡೆಸುತ್ತಿದೆ ಎಂದು ಸಮ್ಮೇಳನದ ನಿರ್ಣಯದಲ್ಲಿ ಟೀಕಿಸಲಾಗಿದೆ.
ಸಂವಿಧಾನಬದ್ಧ ಮತದಾನದ ಹಕ್ಕನ್ನು ಕಸಿದುಕೊಳ್ಳುವ ರೀತಿಯಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ನಡೆಸಲಾಗುತ್ತಿದೆ. ದೇಶಾದ್ಯಂತ ಸುಮಾರು 13 ಕೋಟಿ ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗಿದೆ ಎಂಬ ಆರೋಪವನ್ನು ಮುಂದಿಟ್ಟುಕೊಂಡು, ಎಸ್ಐಆರ್ ಪ್ರಕ್ರಿಯೆಯನ್ನು ಹಿಂಪಡೆಯಬೇಕು ಎಂದು ಸಂಘಟನೆ ಆಗ್ರಹಿಸಿದೆ. ಪ್ರಜಾಪ್ರಭುತ್ವ, ಪ್ರತಿಭಟನೆಯ ಹಕ್ಕು ಮತ್ತು ಜನರ ಜೀವನೋಪಾಯವನ್ನು ರಕ್ಷಿಸುವ ಉದ್ದೇಶದಿಂದ ನವೆಂಬರ್ 26ರಂದು ಜನಾಧಿಕಾರ ದಿನ ಆಚರಿಸಲು ‘ಪೀಪಲ್ ಅಗೇನ್ಸ್ಟ್ ಎಸ್ಐಆರ್’ ವೇದಿಕೆಯೂ ಕರೆ ನೀಡಿದೆ. ನವೆಂಬರ್
ಇದನ್ನೂ ಓದಿ : ಮೋದಿ ವಿರುದ್ಧದ ತನಿಖೆ ನಿಲ್ಲಿಸಿದ್ದು ನಮ್ಮವರೇ! ಈಗ ಕಾಂಗ್ರೆಸ್ ಬೆಲೆ ತೆರುತ್ತಿದೆ: ವೀರಪ್ಪ ಮೊಯ್ಲಿ ಸ್ಫೋಟಕ ಹೇಳಿ
ಪ್ರಮುಖ ಬೇಡಿಕೆಗಳು
ನವೆಂಬರ್ 26ರ ಪ್ರತಿಭಟನೆಗಳಲ್ಲಿ ರೈತ ಸಂಘಟನೆಗಳು ಮುಂದಿಟ್ಟಿರುವ ಪ್ರಮುಖ ಬೇಡಿಕೆಗಳು:
-
ಎಲ್ಲಾ ಕೃಷಿ ಉತ್ಪನ್ನಗಳಿಗೆ ಸಿ2+50% ಸೂತ್ರದಡಿ ಕನಿಷ್ಠ ಬೆಂಬಲ ಬೆಲೆ (MSP) ಖಾತರಿಪಡಿಸುವ ಕಾನೂನು ಜಾರಿ.
-
ರೈತರ ಸಂಪೂರ್ಣ ಸಾಲಮನ್ನಾ.
-
ರೈತರ ಆತ್ಮಹತ್ಯೆಯಿಂದ ಮೃತಪಟ್ಟ ಕುಟುಂಬಗಳಿಗೆ ₹25 ಲಕ್ಷ ಪರಿಹಾರ.
-
ಕೃಷಿ ವಿರೋಧಿ ಮುಕ್ತ ವ್ಯಾಪಾರ ಒಪ್ಪಂದಗಳನ್ನು (FTA) ರದ್ದುಪಡಿಸುವುದು.
-
ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಹಿಂಪಡೆಯುವುದು.
-
ನರೇಗಾ ಯೋಜನೆಯನ್ನು ಮರುಸ್ಥಾಪಿಸುವುದು.
-
ನಾಲ್ಕು ಕಾರ್ಮಿಕ ಸಂಹಿತೆಗಳನ್ನು ರದ್ದುಪಡಿಸುವುದು.
ರೈತರು, ಕಾರ್ಮಿಕರು, ಕೃಷಿ ಕಾರ್ಮಿಕರು, ಆದಿವಾಸಿಗಳು, ದಲಿತರು, ಅಲ್ಪಸಂಖ್ಯಾತರು, ವಿದ್ಯಾರ್ಥಿಗಳು, ಯುವಜನರು ಮತ್ತು ಮಹಿಳೆಯರು ಸೇರಿದಂತೆ ವಿವಿಧ ಜನವಿಭಾಗಗಳ ಸಂಘಟನೆಗಳೊಂದಿಗೆ ಸ್ವತಂತ್ರವಾಗಿ ಹಾಗೂ ಜಂಟಿಯಾಗಿ ಪ್ರತಿಭಟನೆಗಳನ್ನು ನಡೆಸಲು ಎಐಕೆಎಸ್ ತನ್ನ ಘಟಕಗಳಿಗೆ ಸೂಚಿಸಿದೆ.
ಪ್ರತಿಭಟನೆಯ ಸಂದೇಶವನ್ನು ಗ್ರಾಮೀಣ ಪ್ರದೇಶಗಳಿಗೆ ಕೊಂಡೊಯ್ದು ಲಕ್ಷಾಂತರ ರೈತರನ್ನು ಸಂಘಟಿಸುವಂತೆ ರಾಷ್ಟ್ರೀಯ ಸಮ್ಮೇಳನ ಕರೆ ನೀಡಿದೆ. ರೈತರ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಿ ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಒಗ್ಗಟ್ಟಿನ ಹೋರಾಟ ರೂಪಿಸುವುದಾಗಿ ಸಂಘಟನೆ ಎಚ್ಚರಿಸಿದೆ. ನವೆಂಬರ್
ಇದನ್ನೂ ನೋಡಿ : ಎಸ್ಐಆರ್ ಅಕ್ರಮಗಳ ವಿರುದ್ಧ ಜನಾಂದೋಲನ: ನವೆಂಬರ್ 26ರಿಂದ ಬೃಹತ್ ಹೋರಾಟJanashakthi Media
